ಹಾಗೆ ನೋಡಿದರೆ ಬೃಹತ್ ಗಾತ್ರದ ಮಣ್ಣಿನ ಗಣಪನನ್ನು ಪ್ರತಿಷ್ಠಾಪಿಸಿ ಪೂಜಿಸುವುದು ವ್ಯಾಪಕವಾಗಿ ಪ್ರಾರಂಭವಾಗಿದ್ದು ಮಧ್ಯಕಾಲೀನ ಭಾರತದಲ್ಲಿ, ಅದರಲ್ಲೂ ಸ್ವಾತಂತ್ರ್ಯ ಹೋರಾಟಕ್ಕೆ ತಿಲಕರು ಗಣೇಶೋತ್ಸವವನ್ನು ಸಮರ್ಥವಾಗಿ ಬಳಸಿಕೊಳ್ಳಲು ಪ್ರಾರಂಭಿಸಿದ ಮೇಲೆ. ಎಲ್ಲಾ ಪ್ರದೇಶದಲ್ಲೂ, ಎಲ್ಲಾ ಸಮಯದಲ್ಲೂ ಗೋವಿನ ಸಗಣಿ ಸಿಗುವುದು ಕಷ್ಟವಾದ್ದರಿಂದ ಸಗಣಿ ಬದಲು ಅಷ್ಟೇ ಪವಿತ್ರ ಎಂದು ಭಾವಿಸಲಾಗಿರುವ ಮಣ್ಣು ಹಾಗೂ ಗರಿಕೆಯನ್ನಿಟ್ಟು ಗಣೇಶನನ್ನು ಪೂಜಿಸುವ ಪದ್ಧತಿಯೂ ರೂಡಿಯಲ್ಲಿತ್ತು. ಕ್ರಮೇಣ ಮಣ್ಣಿನಲ್ಲಿ ತರಹೆವಾರಿ ಗಣಪತಿಗಳನ್ನು ಮಾಡಲು ಪ್ರಾರಂಭಿಸಿದರು. ಕ್ರಿಕೆಟ್ ಆಡುತ್ತಿರುವ ಭಂಗಿ, ಆಧುನಿಕ ಶೈಲಿಯ ಗಣೇಶ, ಹೀಗೆ ತಮ್ಮ ತಮ್ಮ ಭಾವನೆಗಳಿಗೆ ತಕ್ಕಂತೆ ಗಣೇಶನನ್ನು ತಯಾರಿಸಲು ಪ್ರಾರಂಭಿಸಿದರು. ಗಣೇಶನ ವಿಗ್ರಹಗಳ ತಯಾರಿಕೆ ವಿಕಾಸಗೊಂಡಿದ್ದು ಸಾರ್ವಜನಿಕವಾಗಿ ಗಣೇಶೋತ್ಸವಗಳು ಪ್ರಾರಂಭವಾದಮೇಲೆಯೇ ಎಂದು ಹೇಳಬಹುದು. ಆಕಾರವೇ ಇಲ್ಲದ ಪಿಳ್ಳಾರಿ ಗಣಪತಿಯಿಂದ ಹಿಡಿದು, ಬೃಹದಾಕಾರವಾದ ಇತ್ತೀಚಿನ ಬಾಹುಬಲಿ ಮಾದರಿಯ ಗಣಪತಿ ವರೆಗೂ ಗಣೇಶನ ವಿಗ್ರಹಗಳು ವಿಕಾಸಗೊಂಡಿದೆ. ವಿಕಾಸಗೊಂಡಷ್ಟೂ ಗಣೇಶ ಹಬ್ಬದ ಚತುರ್ಥಿಯ ಮೆರುಗು, ಸಂಭ್ರಮ ಹೆಚ್ಚುತ್ತಿದೆ. ಹಾಗೆಯೇ ಪರಿಸರ ಕಾಳಜಿಯೂ ಜಾಗೃತಗೊಂಡಿದ್ದು ಎಂದಿಗಿಂತ ಈ ಬಾರಿ ಪರಿಸರ ಸ್ನೇಹಿ ಗಣೇಶನ ವಿಗ್ರಹಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ.