ದಣಿವು

ದಣಿವು, ಆಧುನಿಕ ಯುಗದಲ್ಲಿ ರೋಗವಾಗಿ ಪರಿವರ್ತನೆಯಾಗುತ್ತಿದೆ. ಮುಖ್ಯವಾಗಿ ದಣಿವು ಎರಡು ಪ್ರಕಾರದ್ದು...
ದಣಿವು
Updated on: 

ದಣಿವು, ಆಧುನಿಕ ಯುಗದಲ್ಲಿ ರೋಗವಾಗಿ ಪರಿವರ್ತನೆಯಾಗುತ್ತಿದೆ.
ಮುಖ್ಯವಾಗಿ ದಣಿವು ಎರಡು ಪ್ರಕಾರದ್ದು. ಒಂದು ದೈಹಿಕ, ಇನ್ನೊಂದು ಮಾನಸಿಕ. ನಾವು ನಮ್ಮ ಶಕ್ತಿಗನುಗುಣವಾಗಿ ಅಧಿಕ ಶ್ರಮ ಮಾಡಿದರೆ ನಾವು ಬೇಗನೆ ದಣಿಯುತ್ತೇವೆ. ಕೆಲವು ಕಾಲ ವಿಶ್ರಾಂತಿ ಮಾಡುತ್ತಲೆ ಶಾರೀರಿಕ ದಣಿವು ಮಾಯವಾಗುತ್ತದೆ. ಕೆಲವರು ಕೆಲಸ ಮಾಡದೆಯೇ ದಣಿಯುತ್ತಾರೆ. ಅಕಾಲಿಕವಾಗಿ ಬರುವ ಈ ದಣಿವೇ ಮಾನಸಿಕ ರೋಗ! ಇದು ವಿಶೇಷವಾಗಿ ಮಹಿಳೆಯರಲ್ಲಿ ಹೆಚ್ಚು. ಈ ಬಗೆಯ ದಣಿವಿನ ಮುಖ್ಯ ಲಕ್ಷಣಗಳೆಂದರೆ- ತಲೆನೋವು, ಚಿಂತೆ, ಗಾಬರಿ, ನಿರಾಶೆ, ಮನಸ್ಸು ಏಕಾಗ್ರತೆ ಕಳೆದುಕೊಳ್ಳುವುದು ಮುಂತಾದವು. ಇವರ ಪಚನಕ್ರಿಯೆ ಸರಿಯಾಗಿರುವುದಿಲ್ಲ. ಪೌಷ್ಟಿಕ ಆಹಾರ ಸೇವನೆ ಮಾಡಿದರೂ ತೂಕ ಕಡಿಮೆಯಾಗುತ್ತಿರುತ್ತದೆ.
ತಪ್ಪು ಜೀವನ ಪದ್ಧತಿ
ನಿಮ್ಮ ದಿನಚರಿ ನಿಯಮಿತವಾಗಿಲ್ಲದಿದ್ದರೆ, ಅಂದರೆ ಊಟ-ಉಪಹಾರ, ನಿದ್ರೆ ಕ್ರಮಬದ್ಧವಾಗಿರದಿದ್ದರೆ ಬೇಗನೆ ದಣಿವೆನಿಸುತ್ತದೆ. ಪ್ರತಿ ವ್ಯಕ್ತಿ ತನ್ನ ಶಾರೀರಿಕ ಅವಶ್ಯಕತೆಗನುಗುಣವಾಗಿ ವಿಶ್ರಾಂತಿ ಪಡೆಯಬೇಕು. ಕೆಲವರಿಗೆ ಐದು ಗಂಟೆ ನಿದ್ರೆ ಸಾಕೆನಿಸಿದರೆ, ಇನ್ನು ಕೆಲವರಿಗೆ ಏಳು ಗಂಟೆ ಆಗಬೇಕು. ಹಾಗೊಂದು ವೇಳೆ ನೀವು ದೀರ್ಘ ಸಮಯದವರೆಗೆ ಬೇಕಾದಷ್ಟು ನಿದ್ರೆ ಮಾಡದಿದ್ದರೆ ನಿಶ್ಚಿತವಾಗಿಯೂ ದಣಿವಾಗುತ್ತದೆ. ಇದರಿಂದಾಗಿ ನಿಮ್ಮ ಕೆಲಸ ಮಾಡುವ ಗತಿ ನಿಧಾನಗೊಳ್ಳುತ್ತದೆ. ಹೀಗಾಗಿ ನಿಮ್ಮಷ್ಟಕ್ಕೆ ನೀವು ಗೊಂದಲಕ್ಕೊಳಗಾಗುತ್ತೀರಿ. ನಿಮ್ಮ ಮೇಲೆಯೇ ಸಿಟ್ಟಾಗುತ್ತೀರಿ. ಇದು ಸಮಯಕ್ಕೆ ಸರಿಯಾಗಿ ಊಟ ಮಾಡದೇ ಇರುವವರಿಗೂ ಅನ್ವಯಿಸುತ್ತದೆ. ಡಬ್ಬಿ ಊಟ, ಫಾಸ್ಟ್‌ಪುಡ್, ತಂಪು ಪಾನೀಯಗಳ ಬಳಕೆಯಿಂದಲೂ ಬೇಗನೆ ದಣಿವೆನಿಸುತ್ತದೆ. ಹಸಿರು ತರಕಾರಿ, ಹಾಲು, ಪನೀರ್, ಸಲಾಡ್, ಮೊಳಕೆ ಕಾಳು, ಆಹಾರಗಳು ದಣಿವಿನಿಂದ ದೂರ ಇಡುತ್ತವೆ.
ವ್ಯಾಯಾಮ ಅಭಾವ
ಯಾವುದೇ ಬಗೆಯ ವ್ಯಾಯಾಮ ಕೈಗೊಳ್ಳದಿದ್ದರೆ ಅವರಿಗೆ ಬಹುಬೇಗ ದಣಿವೆನಿಸುತ್ತದೆ. ನಿಯಮಿತ ಸುತ್ತಾಟ, ವ್ಯಾಯಾಮ, ಯೋಗಾಸನ ಕೈಗೊಳ್ಳುವುದರಿಂದ ನಿಮ್ಮ ಕಾರ್ಯಕ್ಷಮತೆಯಲ್ಲಿ ಶೇ.20ರಿಂದ 30ರಷ್ಟು ಬದಲಾವಣೆ ಕಂಡುಕೊಳ್ಳಬಹುದು. ಹಗುರವಾದ ವ್ಯಾಯಾಮಗಳಿಂದ ದಣಿವು ದೂರ ಮಾಡಬಹುದು. ಪ್ರತಿನಿತ್ಯ ಅರ್ಧ ಗಂಟೆ ನಿಯಮಿತ ವೇಗದ ನಡಿಗೆ ಅನುಸರಿಸಿದರೆ ಶಾರೀರಿಕ, ಮಾನಸಿಕ ದಣಿವು ಎರಡನ್ನೂ ದೂರ ಇಡಬಹುದು.
ಇತರ ಕಾರಣಗಳು
ಕೆಲ ಶಾರೀರಿಕ ಸ್ಥಿತಿಗಳೂ ದಣಿವಿಗೆ ಜನ್ಮ ಕೊಡುತ್ತವೆ. ರಕ್ತಹೀನತೆ, ಮಧುಮೇಹ, ಥೈರಾಯ್ಡ್ ಗ್ರಂಥಿಯಲ್ಲಿನ ಅಸಮತೋಲನ, ಕೆಲವು ರೋಗಗಳಿಂದಲೂ ಅಂದರೆ ಟಿಬಿ, ಕ್ಯಾನ್ಸರ್, ಹೃದ್ರೋಗಗಳಿಂದಲೂ ದಣಿವಾಗುತ್ತದೆ. ಅಲರ್ಜಿಯಿಂದಾಗಿಯೂ ಶಾರೀರಿಕ ದಣಿವು ಭಾಸವಾಗುತ್ತದೆ.
ದಣಿವು ಶರೀರದೊಂದಿಗೆ ಎಷ್ಟು ನಿಕಟ ಸಂಬಂಧ ಹೊಂದಿದೆಯೋ ಅಷ್ಟೇ ಮನಸ್ಸಿನೊಂದಿಗೂ ಹೊಂದಿದೆ. ರೋಗದೊಂದಿಗೆ ಬಂದ ದಣಿವು, ರೋಗದ ಮುಕ್ತಾಯದೊಂದಿಗೆ ಹೊರಟು ಹೋದರೆ ಮಾನಸಿಕ ದಣಿವನ್ನು ಮಾತ್ರ ಬೇಗ ಹೋಗಲಾಡಿಸುವುದು ಕಷ್ಟ. ಮಾನಸಿಕ ತಜ್ಞರ ಪ್ರಕಾರ, ಭಾರತೀಯ ಸನ್ನಿವೇಶದಲ್ಲಿ ದಣಿವಿನ ಸಂಬಂಧ ಪತಿ-ಪತ್ನಿಯ ಪರಸ್ಪರ ಸಂಬಂಧ, ಸೆಕ್ಸ್ ಹಾಗೂ ಅದಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಯಾವ ಸ್ತ್ರೀಯರು ತಮ್ಮ ಪತಿಯರೊಂದಿಗೆ ಸಂತುಷ್ಟ ಲೈಂಗಿಕ ಸಂಬಂಧ ಹೊಂದಿಲ್ಲವೋ ಅಂಥ ಮಹಿಳೆಯರು ದಣಿವಾದವರಂತೆ ಭಾಸವಾಗುತ್ತಾರೆ!
ವೈದ್ಯರನ್ನು ಕಾಣಿ
ದಣಿವು ಯಾವುದೇ ಪ್ರಕಾರದ್ದಾಗಿರಲಿ. ಅದರ ಬಗ್ಗೆ ನಿರ್ಲಕ್ಷ್ಯ ಬೇಡ. ಏಕೆಂದರೆ ಅದು ಯಾವುದೇ ಶಾರೀರಿಕ ಇಲ್ಲವೆ ಮಾನಸಿಕ ರೋಗದ ಲಕ್ಷಣವಾಗಬಹುದು. ತ್ವರಿತವಾಗಿ ನಿಮ್ಮ ಕೌಟುಂಬಿಕ ವೈದ್ಯರನ್ನು ಸಂಪರ್ಕಿಸಿ.

ಖಿನ್ನತೆಯೂ ಕಾರಣ

ಇದರ ಹೊರತಾಗಿ ಖಿನ್ನತೆ ಕೂಡ ದಣಿವಿನ ಒಂದು ಪ್ರಮುಖ ಭಾಗ. ಯಾವುದೇ ದುರ್ಘಟನೆ ಇಲ್ಲವೆ ಆತ್ಮೀಯ ವ್ಯಕ್ತಿಯ ನಿಧನ, ಏಕಾಂಗಿ ಜೀವನ, ಶಾರೀರಿಕ ಕ್ಷಮತೆಯ ಕೊರತೆ ಮುಂತಾದ ಕಾರಣಗಳಿಂದಾಗಿ ಖಿನ್ನತೆ ಆವರಿಸಿಕೊಳ್ಳುತ್ತದೆ. ಕೆಲವು ಮಹಿಳೆಯರು ಚಿಕ್ಕ-ಪುಟ್ಟ ಕಾರಣಗಳಿಗಾಗಿಯೇ ಒತ್ತಡ ತಂದುಕೊಳ್ಳುತ್ತಾರೆ. ಈ ಕಾರಣಗಳಿಂದಾಗಿಯೂ ಅವರು ಸತತ ದಣಿವಾದವರಂತೆ ಕಂಡು ಬರುತ್ತಾರೆ.
ಮಾನಸಿಕ ಕಾರಣಗಳ ಹೊರತಾಗಿ ಕೆಲವೊಮ್ಮೆ ಬಿಡಿಸಲಾರದ ಭಾವನಾತ್ಮಕ ಸಮಸ್ಯೆಗಳಿಂದಾಗಿಯೂ ದಣಿವು ಎನಿಸುತ್ತದೆ. ಯಾವುದೇ ಘಟನೆ ಇಲ್ಲವೆ, ಯಾವುದೇ ವ್ಯಕ್ತಿಯ ವಿರುದ್ಧ ಅತೃಪ್ತಿ ಇಲ್ಲವೆ, ದ್ವೇಷವೂ ದಣಿವಿಗೆ ಕಾರಣವಾಗುತ್ತವೆ.


ಇಲ್ಲಿವೆ ಕೆಲವು ಟಿಪ್ಸ್
ದಣಿವಿನಿಂದ ಮುಕ್ತಿ ಹೊಂದಲು ಕೆಲವು ತಾತ್ಕಾಲಿಕ ಉಪಾಯಗಳನ್ನು ಅನುಸರಿಸಬಹುದು. ಸಮಯಕ್ಕನುಸಾರವಾಗಿ ಕಾರ್ಯಕ್ರಮ ರೂಪಿಸಿ. ಪ್ರಾಥಮಿಕ ಆಧಾರದ ಮೇಲೆ ಅವನ್ನು ಪೂರ್ತಿಗೊಳಿಸಲು ಯತ್ನಿಸಿ.

  •  ಮನರಂಜನೆಗಾಗಿಯೂ ಸಮಯ ಮೀಸಲಿರಿಸಿ.
  •  ಆಗಾಗ ಪ್ರವಾಸದ ಕಾರ್ಯಕ್ರಮಗಳನ್ನು ಹಾಕಿಕೊಳ್ಳಿ.
  • ದಣಿವು ಎನಿಸುವ ಕೆಲಸ ಮಾಡುವಾಗ ಆಗಾಗ ವಿಶ್ರಾಂತಿ ಪಡೆಯುತ್ತಾ ಇರಿ.
  •  ಸಾಕಷ್ಟು ನಿದ್ರೆ ಮಾಡಿ ಹಾಗೂ ಪೌಷ್ಟಿಕ ಆಹಾರ ಸೇವಿಸಿ.
  •  ರಜೆ ದಿನಗಳಂದು ಶರೀರಕ್ಕೆ ಹಗುರ ಮಾಲಿಷ್ ಮಾಡಿ. ಇದರಿಂದ ದೇಹ ಚುರುಕಾಗುತ್ತದೆ.
  •  ಪ್ರತಿ ಮುಂಜಾನೆ ಅಡ್ಡಾಡಲು ಹೋಗಿ, ಹೂದೋಟಗಳಿಗೆ ಹೋಗಿ ಹೂಗಳ ಸ್ವಾದ ತೆಗೆದುಕೊಳ್ಳಿ.
  •  ಸಂಗೀತ ಕೇಳಿ, ನಕ್ಕು-ನಲಿಯಿರಿ. ಈ ಎಲ್ಲ ಸಂಗತಿಗಳು ನಿಮ್ಮ ದಣಿವು ನಿವಾರಿಸಿ, ಮನಸ್ಸಿಗೆ ನೆಮ್ಮದಿ ತಂದುಕೊಡುತ್ತದೆ.
  • ನೀವು ಯಾವಾಗಲೂ ಖಾಲಿ ಕುಳಿತುಕೊಳ್ಳಬೇಡಿ. ಯಾವುದೇ ಕೆಲಸದಲ್ಲಾದರೂ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ.
  •  ಅನವಶ್ಯಕ ಚಿಂತೆ ಬೇಡ. ನಿಮ್ಮ ಯೋಚನೆ ಯಾವಾಗಲೂ ಸಕಾರಾತ್ಮಕವಾಗಿರಲಿ, ಸದಾ ನಗು-ನಗುತ್ತಾ ಇರಿ.
- ವೈ.ಬಿ.ಕಡಕೋಳ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com