ಬಾರಿಸದಿರಲಿ ದಡಾರ

ಬಾರಿಸದಿರಲಿ ದಡಾರ

ಬೇಸಿಗೆ ಬಂತೆಂದರೆ ಸಾಕು, ದಡಾರ ಅಥವಾ ಮೀಸೆಲ್ಸ್ ಹಾವಳಿ ಸಾಮಾನ್ಯ. ಪ್ರತಿ ಬಾರಿ ಮಾರ್ಚ್-ಏಪ್ರಿಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ದಡಾರ ಈ ಬಾರಿ ಫೆಬ್ರವರಿ ಪ್ರಾರಂಭದಲ್ಲಿಯೇ ಕಾಲಿಟ್ಟಿದೆ.

ಸೋಂಕು ಉಂಟು ಮಾಡುವ ಈ ರೋಗ ಮೊದಲಿನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿಲ್ಲವಾದರೂ ರೋಗದ ಕುರಿತು ಮುನ್ನೆಚ್ಚರಿಕೆ ಅಗತ್ಯ. ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ದಡಾರ, ಕೆಲವು ಬಾರಿ ವಯಸ್ಕರನ್ನೂ ಬಾಧಿಸುತ್ತದೆ.
ದಡಾರವನ್ನು ಕೆಲವು ಗ್ರಾಮೀಣ ಪ್ರದೇಶದಲ್ಲಿ 'ಅಮ್ಮ' ಎಂದೂ ಕರೆಯಲಾಗುತ್ತದೆ. ಮಕ್ಕಳಿಗೆ  ದಡಾರದ ಚುಚ್ಚುಮದ್ದು ಕೊಡಿಸುವ ಮೂಲಕ ಈ ರೋಗ ನಿಯಂತ್ರಿಸಬಹುದು. ಸಾಮಾನ್ಯವಾಗಿ ಮಗು ಜನಿಸಿದ ಆರು ತಿಂಗಳವರೆಗೆ ದಡಾರ ಕಾಣಿಸಿಕೊಳ್ಳುವುದಿಲ್ಲ. ಇದಕ್ಕೆ ತಾಯಿಯಿಂದ ಬಳುವಳಿಯಾಗಿ ಪಡೆದ ರೋಗ ನಿರೋಧಕ ಶಕ್ತಿಯೇ ಕಾರಣ. ದಡಾರದ ಉಪಟಳ ಆರು ತಿಂಗಳಿಂದ ಐದು ವರ್ಷದೊಳಗಿನ ಮಕ್ಕಳಲ್ಲಿ ಸಾಮಾನ್ಯ.

ಮುನ್ನೆಚ್ಚರಿಕೆ ಏನು?
ದಡಾರ ರೋಗಿಯ ಬಾಯಲ್ಲಿ, ಮೂಗಿನಲ್ಲಿ ಮತ್ತು ಗಂಟಲ ಸ್ರವಿಕೆಯಲ್ಲಿ ವೈರಸ್‌ಗಳಿರುತ್ತವೆ. ರೋಗಿ ಸೀನಿದಾಗ, ಕೆಮ್ಮಿದಾಗ ಹೊರಗಿನ ಪರಿಸರಕ್ಕೆ ವೈರಸ್‌ಗಳು ಸೇರುತ್ತವೆ. ಉಸಿರಾಟದ ಮೂಲಕ ರೋಗಾಣುಗಳು ಆರೋಗ್ಯವಂತ ವ್ಯಕ್ತಿಯ ದೇಹ್ನ ಪ್ರವೇಶಿಸಿ, ರೋಗ ಲಕ್ಷಣಗಳನ್ನು ಹೊರಹೊಮ್ಮಿಸುತ್ತವೆ. ಆರೋಗ್ಯವಂತ ಮಗುವಿಗೆ ಸೋಂಕಿನ ಮೂಲಕ ದಡಾರ ಹರಡುತ್ತದೆ. ದಡಾರ ರೋಗಿ ಉಪಯೋಗಿಸಿದ ಸೋಂಕಿನಿಂದ ಕೂಡಿದ ವಸ್ತುಗಳಿಂದಲೂ ಸೋಂಕು ಹರಡಬಹುದು. ದಡಾರ ಕಾಣಿಸಿಕೊಂಡ ಪ್ರಾರಂಭದ ಐದು ದಿನಗಳವರೆಗೆ ಸೋಂಕು ತೀವ್ರವಾಗಿರುವುದರಿಂದ ಬೇರೆ ಮಕ್ಕಳಿಂದ ಮಗುವನ್ನು ಪ್ರತ್ಯೇಕವಾಗಿರಿಸುವುದು ಅಗತ್ಯ.

ದಡಾರ ತಡೆಗಟ್ಟುವ ಚುಚ್ಚುಮದ್ದನ್ನು ಕೊಡಿಸದಿದ್ದರೆ ಮಗುವಿಗೆ ದಡಾರ ರೋಗ ಬರುವ ಸಾಧ್ಯತೆ ಹೆಚ್ಚು. ಎಳೆಯ ಮಕ್ಕಳಲ್ಲಿ ಮತ್ತು ಅಪೌಷ್ಟಿಕತ್ನೆ ಹೊಂದಿರುವ ಮಕ್ಕಳಲ್ಲಿ ದಡಾರ ಬಹಳ ತೀವ್ರ ತೊಡಕನ್ನ್ನುಂಟು ಮಾಡುತ್ತದೆ. ದಡಾರ ಪ್ರಾಣಕ್ಕೆ ಹಾನಿಕಾರಕ ಅಲ್ಲವಾದರೂ, ಮಕ್ಕಳಿಗೆ ಸ್ವಲ್ಪಮಟ್ಟಿಗೆ ತೊಂದರೆಯನ್ನುಂಟು ಮಾಡುತ್ತದೆ. ಇದರಿಂದಾಗಿ ಮಕ್ಕಳು ಕಿರಿಕಿರಿ ಮಾಡುತ್ತವೆ.

ಏನಿದು ದಡಾರ?
ಸಿಲ್ಲಾ ಎಂಬ ವೈರಾಣುವಿನಿಂದ ಬರುವ ಇದು ಒಂದು ಅಂಟು ರೋಗ. ಒಬ್ಬರಿಂದ ಒಬ್ಬರಿಗೆ ಬಹಳ ಬೇಗ ಹರಡುತ್ತದೆ. ಶಾಲೆಗೆ ಹೋಗುವ ಮಕ್ಕಳಲ್ಲಿ ದಡಾರ ಕಾಣಿಸಿಕೊಂಡಲ್ಲಿ, ಮಗು ಗುಣಮುಖವಾಗುವವರೆಗೂ ಶಾಲೆಗೆ ಕಳುಹಿಸದೇ ಇರುವುದು ಒಳಿತು. ದಡಾರ ಇರುವ ಮಗುವನ್ನು ಶಾಲೆಗೆ ಕಳುಹಿಸಿದಲ್ಲಿ ಇತರ ಮಗುವಿಗೂ ರೋಗ ಅಂಟುವ ಸಾಧ್ಯತೆ ಹೆಚ್ಚು.
ಈ ರೋಗ ಕಾಣಿಸಿಕೊಳ್ಳುವ ಮೊದಲನೇ ದಿನ ಜ್ವರ ಬರುತ್ತದೆ. ಆರಂಭದಲ್ಲಿ ಮುಖದ ಮೇಲಷ್ಟೇ ಕಾಣಿಸಿಕೊಳ್ಳುವ ನೀರಗುಳ್ಳೆಗಳು ದಿನಗಳೆದಂತೆ ಹೊಟ್ಟೆ ಹಾಗೂ ದೇಹದ ಇತರ ಭಾಗಕ್ಕೂ ವಿಸ್ತರಿಸುತ್ತವೆ. ನೀರ ಗುಳ್ಳೆಗಳಿಂದ ಪ್ರಾರಂಭದಲ್ಲಿ ಸ್ವಲ್ಪ ನವೆ ಇರುತ್ತದೆ. ಮೊದಲು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಈ ದಡಾರ ಇತ್ತೀಚಿನ ವರ್ಷಗಳಲ್ಲಿ 18ರಿಂದ 40 ವರ್ಷ ವಯೋವಾನದವರಲ್ಲೂ ಕಂಡುಬರುತ್ತಿದೆ. ಮಕ್ಕಳಲ್ಲಿ ದಡಾರ ಕಾಣಿಸಿಕೊಂಡರೆ ಅಮ್ಮ ಅಥವಾ ದೇವಿಯ ಕಾಟವೆಂಬ ಮೂಢನಂಬಿಕೆಯಿಂದ ಕೆಲವರು ದೇವಸ್ಥಾನಗಳಿಗೆ ತೆರಳಿ, ಎಣ್ಣೆ ಹಾಕಿ ಬರುತ್ತಾರೆ. ಇದರ ಬದಲು ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡಿದಲ್ಲಿ ಮಗು ಬೇಗ ಗುಣಮುಖವಾಗುತ್ತದೆ.

ರೋಗದ ಲಕ್ಷಣ ಏನು?
    ಶೀತ, ಕೆಮ್ಮು ಮತ್ತು ಮೂಗಿನಲ್ಲಿ ಸುರಿತ
    38 ಡಿಗ್ರಿ ಸೆಂಟಿಗ್ರೇಡ್ (100.4 ಡಿಗ್ರಿ ಎಫ್) ಅಥವಾ ಅದಕ್ಕಿಂತಲೂ ಹೆಚ್ಚು ಇರುವ ಜ್ವರ
    ಸಿಂಬಳದ ಸೋರಿಕೆ
    ಕಣ್ಣುಗಳು ಕೆಂಪಗಾಗಿ ಊದಿಕೊಂಡು, ಕಣ್ಣೀರು ಸುರಿಯ ತೊಡಗುತ್ತದೆ.
    ಬೆಳಕನ್ನು ನೋಡಲಾಗುವುದಿಲ್ಲ.
    ದವಡೆ ಹಲ್ಲಿನ ಹತ್ತಿರ, ಕೆನ್ನೆಯ ಲೋಳ್ಪರೆಯ ಮೇಲೆ ಕಾಪ್ಲಿಕ್ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ.

-ಆನಂದ ಅಂಗಡಿ
angadia4@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com