
ವರ್ಷವಿಡೀ ತತ್ತಿಯಿರಿಸುವ ಹೇನು ಒಂದು ಸಲಕ್ಕೆ ಮುನ್ನೂರು ತತ್ತಿಯಿಡುತ್ತದೆ! ಒಂದು ತಿಂಗಳಿನಲ್ಲಿ 12 ತಲೆಮಾರುಗಳ ವಂಶಾಭಿವೃದ್ಧಿ ಮಾಡುತ್ತದೆ. ಇದರ ನಿರ್ಮೂಲನೆಗೆ ಪರಿಹಾರ ಏನು?
ಕೂದಲುಗಳ ನಡುವೆ ಮಕ್ಕಳು ಮರಿ ಮಾಡ್ಕೊಂಡು ಸಂಸಾರ ಹೂಡಿರುವ ಹೇನು ಅತ್ಯಂತ ಸಮಸ್ಯಾತ್ಮಕ ಕೀಟ. ಮಾನವನ ವಿಕಾಸದೊಂದಿಗೇ ಹೇನುಗಳೂ ಜತೆಗೂಡಿ ಬಂದಿವೆ ಎಂಬುದು ಒಂದು ಸೋಜಿಗ. ಪುಟ್ಟ ಕಾಲುಗಳಲ್ಲಿರುವ ಕೊಂಡಿಯಾಕಾರದ ಉಗುರುಗಳಿಂದ ಹೇನು ಭದ್ರವಾಗಿ ತೊಗಲಿಗೆ ಅಂಟಿಕೊಳ್ಳುತ್ತದೆ. ಅದರ ಸಂತಾನಾಭಿವೃದ್ಧಿಗೆ ಅಗತ್ಯ ಉಷ್ಣಾಂಶ ಮನುಷ್ಯನ ದೇಹದಲ್ಲಿ ಸಿಗುತ್ತದೆ. ನಮ್ಮ ರಕ್ತವೇ ಅದಕ್ಕೆ ಮುಖ್ಯಾಹಾರ. ಹೇನಿಗೆ ಆಹಾರವಿಲ್ಲದೆ 70 ತಾಸಿಗಿಂತ ಹೆಚ್ಚು ವೇಳೆ ಬದುಕುವ ಶಕ್ತಿಯಿಲ್ಲ. ಹೇನು ಒಬ್ಬರಿಂದ ಒಬ್ಬರಿಗೆ ಹರಡುತ್ತದಲ್ಲದೆ ಬೇರೆ ಪರಾವಲಂಬಿ ಬ್ಯಾಕ್ಟೀರಿಯಾಗಳಿಗೂ ತನ್ನ ದೇಹದಲ್ಲಿ ಆಶ್ರಯ ನೀಡಿ ಕೆಲವು ಕಾಯಿಲೆಗಳನ್ನೂ ತರಬಹುದು.
ವರ್ಷವಿಡೀ ತತ್ತಿಯಿರಿಸುವ ಹೇನು ಒಂದು ಸಲಕ್ಕೆ ಮುನ್ನೂರು ತತ್ತಿಯಿಡುತ್ತದೆ! ಒಂದು ತಿಂಗಳಿನಲ್ಲಿ 12 ತಲೆಮಾರುಗಳ ವಂಶಾಭಿವೃದ್ಧಿ ಮಾಡುತ್ತದೆ. ತತ್ತಿಯಲ್ಲಿರುವ ಅಂಟುದ್ರವದಿಂದಾಗಿ ಕೂದಲಿಗೆ ಅಂಟಿಕೊಳ್ಳುವ ಅದು ನೀರು ಹೊಯ್ದರೂ ಕೆಳಗೆ ಬೀಳದು. ಸಂಪರ್ಕದಿಂದ ಮಾತ್ರವಲ್ಲ ಬಾಚಣಿಕೆ, ಟೋಪಿ ಇತ್ಯಾದಿಗಳ ಮೂಲಕವೂ ಹೇನುಗಳು ತಲೆಯಿಂದ ತಲೆಗೆ ವರ್ಗಾವಣೆಯಾಗುತ್ತವೆ. ಅದನ್ನು ಬಾಚಣಿಕೆಯಿಂದ ತೆಗೆದು ನಿರ್ಮೂಲನೆ ಮಾಡಬಹುದಾದರೂ ಬಾಚಣಿಕೆಯ ಹಲ್ಲುಗಳ ನಡುವಿನ ಅಂತರ ಒಂದು ಮಿ.ಮೀ.ಗಿಂತ ಕಡಿಮೆಯಿರಬೇಕು. ಅದರ ನಿವಾರಣೆಗೆ ಸಾಕಷ್ಟು ಶಾಂಪೂ, ಔಷಧಿಗಳು ಮಾರುಕಟ್ಟೆಯಲ್ಲಿವೆ.
ಕರ್ಪೂರದಿಂದ ತಯಾರಾಗುವ ಬೆನ್ನಿನೇನ್, ಬೆನ್ಸೈಲ್, ಬೆನ್ಸೋಯೋಟ್ ಮೊದಲಾದ ದ್ರವ್ಯಗಳಿವೆ. ಹೆಕ್ಸಾಕ್ಲೋರೈಡ್ ಕೂಡ ಪರಿಣಾಮಕಾರಿ ಹೇನುನಾಶಕ. ಇಷ್ಟಲ್ಲದೆ ಮನೆಯಲ್ಲೇ ಹೇನು ತೊಲಗಿಸಲು ಮಾಡಿಕೊಳ್ಳಬಹುದಾದ ಕೆಲವು ಔಷಧಗಳು ಇಲ್ಲಿವೆ...
1.ತುಳಸಿಯ ಕದಿರನ್ನು ಬಟ್ಟೆಯಲ್ಲಿ ಕಟ್ಟಿ ತಲೆದಿಂಬಿನ ಕೆಳಗಿಟ್ಟುಕೊಂಡು ಮಲಗಿದರೆ ಹೇನು ಸಾಯುತ್ತದೆ.
2.ಹುಳಿ ಮಜ್ಜಿಗೆಯನ್ನು ತಲೆಗೆ ದಪ್ಪವಾಗಿ ಲೇಪಿಸಿ ಬಟ್ಟೆಯನ್ನು ಕಟ್ಟಿ ಎರಡು ತಾಸಿನ ಬಳಿಕ ಸ್ನಾನ ಮಾಡಬೇಕು. ಹದಿನೈದು ದಿನಕ್ಕೊಂದು ಸಲದಂತೆ 3 ಸಲ ಈ ಚಿಕಿತ್ಸೆ ಮಾಡಬೇಕು.
3.ದೇಹದಲ್ಲಿರುವ ಎಲ್ಲ ವಿಧದ ಹೇನುಗಳ ನಾಶಕ್ಕೆ ದತ್ತೂರದ ಎಲೆಯ ರಸ ಒಂದು ಸಿದ್ಧೌಷಧ. ನಾಲ್ಕು ಪಾಲು ರಸ ಮತ್ತು ಒಂದು ಪಾಲು ಸಾಸಿವೆ ಎಣ್ಣೆಯಿಂದ ತೈಲ ತಯಾರಿಸಿ ಹಚ್ಚಿದರೆ ತತ್ತಿಗಳೊಂದಿಗೇ ಹೇನು ನಾಶವಾಗುವುದು.
4.ಕಾಳುಜೀರಿಗೆಯನ್ನು ನಿಂಬೆರಸದಲ್ಲಿ ಅರೆದು ಹೇನಿರುವ ಭಾಗದಲ್ಲಿ ಲೇಪಿಸಿ ಎರಡು ತಾಸಿನ ಬಳಿಕ ಸ್ನಾನ ಮಾಡುವ ಚಿಕಿತ್ಸೆಯನ್ನು ಒಂದೂವರೆ ತಿಂಗಳಲ್ಲಿ ಮೂರು ಸಲ ಮಾಡುವುದೂ ಹೇನು ನಿರ್ಮೂಲನೆಗೆ ಸಹಕಾರಿ.
5.ಕಡು ಕಾರೆಕಾಯಿಯನ್ನು ಅರೆದು ತಲೆಗೂದಲಿಗೆ ಹಚ್ಚಿ ಸ್ನಾನ ಮಾಡುವುದರಿಂದಲೂ ಹೇನು ನಾಶವಾಗುತ್ತದೆ.
- ಪ. ರಾಮಕೃಷ್ಣ ಶಾಸ್ತ್ರಿ
Advertisement