
ನಿಮ್ಮ ಮೈಯೊಳಗೆ ಬೊಜ್ಜು ಶೇಖರಣೆಯಾಗಿದೆಯಾ? ಇದರ ನಿವಾರಣೆಗೆ ಬಹಳ ತಲೆಕೆಡಿಸಿ ಕೊಂಡಿದ್ದೀರಾ? ಅಗತ್ಯನೇ ಇಲ್ಲ... ನಿಮ್ಮ ಮನೆಯಲ್ಲಿ ಮೆಟ್ಟಿಲುಗಳಿದ್ದರೆ ಅದರಿಂದಲೇ ಬೊಜ್ಜಿಗೆ ಮದ್ದುಣಿಸಬಹುದು...
ಗುರ್ನಾಮ ಸಿಂಗ್ 22ರ ಯುವಕನಾದರೂ, 170 ಕೆಜಿ ತೂಗುತ್ತಿದ್ದ! ಈ ಬೊಜ್ಜಿನಿಂದಾಗಿ ಅತನಿಗೆ ಮದುವೆಯಾಗುತ್ತಿರಲಿಲ್ಲ ಮತ್ತು ಸರಿಯಾದ ಉದ್ಯೋಗವೂ ಸಿಗುತ್ತಿರಲಿಲ್ಲ. ಎಲ್ಲಿ ಚಿಕಿತ್ಸೆ ಮಾಡಿಸಿದರೂ ಅವನ ಪರ್ಸ್ ಸಣ್ಣದಾಗುತ್ತಿತ್ತೇ ವಿನಾ, ದೇಹ ಮಾತ್ರ ಸಣ್ಣದಾಗುತ್ತಿರಲಿಲ್ಲ. ಆದರೂ ಛಲ ಬಿಡದ ವಿಕ್ರಮನಂತೆ, ಕೊನೆಯ ಪ್ರಯತ್ನವೆಂದು ನಗರದ ಬಹು ಮಹಡಿ ಕಟ್ಟಡದ 18ನೇ ಅಂತಸ್ತಿನಲ್ಲಿ ಕ್ಲಿನಿಕ್ ಇಟ್ಟುಕೊಂಡಿರುವ, ಹಲವಾರು ವಿದೇಶಿ ಪದವಿ ಪಡೆದ, ನಗರದ ಪ್ರಸಿದ್ಧ ಸ್ಲಿಮ್ಮಿಂಗ್ ಪರಿಣಿತ ವೈದ್ಯನಲ್ಲಿ ಹೋದ.
ಆತ ಅವನನ್ನು ಸುಮಾರು ಅರ್ಧ ತಾಸು ಕೂಲಂಕಷವಾಗಿ ಪರೀಕ್ಷಿಸಿ ಮತ್ತು ಅವನ ಎಲ್ಲ ಚರಿತ್ರೆಯನ್ನು ಕೇಳಿ, ಅತನಿಗೆ ದಿನಕ್ಕೆ ಮೂರು ಬಾರಿ, 60 ದಿನ, ಮುಂಜಾನೆ 8 ಗಂಟೆ, ಮಧ್ಯಾಹ್ನ 2 ಗಂಟೆ ಮತ್ತು ರಾತ್ರಿ 8 ಗಂಟೆಗೆ ತನ್ನ ಕ್ಲಿನಿಕ್‍ಗೆ ಕಟ್ಟಡದ ಮೆಟ್ಟಲು ಹತ್ತಿ ಬಂದು ಬ್ಲಡ್ ಪ್ರೆಶರ್, ನಾಡಿಮಿಡಿತ ಮತ್ತು ತೂಕವನ್ನು ಪರೀಕ್ಷಿಸಿಕೊಳ್ಳುವಂತೆ ಮತ್ತು ಹೋಗುವಾಗ ಮೆಟ್ಟಿಲು ಇಳಿದು ಹೋಗುವಂತೆ ಸೂಚಿಸಿದ. ಎರಡು ತಿಂಗಳ ನಂತರ ಚಿಕಿತ್ಸೆ ಆರಂಭಿಸುವುದಾಗಿ ಹೇಳಿ ಕಳಿಸಿದ. ಹಾಗೆಯೇ ಅತನ ನೆಮ್ಮದಿಗೆ ಇರಲಿ ಎಂದು ವಿಟಮಿನ್ ಮಾತ್ರೆಯನ್ನು ಬರೆದುಕೊಟ್ಟಿದ್ದ.
ಸ್ವಲ್ಪ ಕಷ್ಟವಾದರೂ ಆತ ದಿನಾಲೂ ಮೂರು ಬಾರಿ ಆತನ ಕ್ಲಿನಿಕ್‍ಗೆ ಹೋಗಿ ಬರುತ್ತಿದ್ದ ಮತ್ತು ಅತ ಬರೆದುಕೊಟ್ಟಿದ್ದ ಮಾತ್ರೆಯನ್ನು ನಿಷ್ಠೆಯಿಂದ ನುಂಗುತ್ತಿದ್ದ. ಸುಮಾರು ಎರಡು ತಿಂಗಳ ನಂತರ ತನ್ನ ದೇಹ ಸಣ್ಣದಾಗುತ್ತಿರುವುದನ್ನು ಮತ್ತು ತೂಕವೂ ಕಡಿಮೆಯಾಗಿದ್ದನ್ನು ನೋಡಿ ಆತ ಅಚ್ಚರಿ ಹಾಗೂ ಸಂತೋಷದಿಂದ ಯಾವುದೇ ಚಿಕಿತ್ಸೆ ಮತ್ತು ಔಷಧವಿಲ್ಲದೆ ಇದು ಹೇಗೆ ಸಾಧ್ಯವೆಂದು ವೈದ್ಯರಲ್ಲಿ ಕೇಳಿದ. ಅದಕ್ಕೆ ವೈದ್ಯರು ನಗುತ್ತಾ, `ನಿನಗೆ ಯಾವುದೇ ರೋಗವಿಲ್ಲ. ನಿನ್ನ ದೇಹ ವ್ಯಾಯಾಮ ಇಲ್ಲದೇ ಹತೋಟಿ ಇಲ್ಲದೇ ಬೆಳೆದಿತ್ತು. ಕಳೆದು ಎರಡು ತಿಂಗಳಿನಿಂದ ಲಿಫ್ಟ್ ಇಲ್ಲದೇ ಈ ಕಟ್ಟಡದ 18ನೇ ಅಂತಸ್ತಿನವರೆಗೆ ದಿನಕ್ಕೆ ಮೂರು ಬಾರಿ ಏರಿ- ಇಳಿದಿದ್ದರಿಂದ ಸರಿಯಾದ ವ್ಯಾಯಾಮ ದೊರೆತು ನಿನ್ನ ಬೊಜ್ಜು ಕರಗಿ ದೇಹ ಸ್ಲಿಮ್ ಆಗಿದೆ. ನಿನಗೆ ನೇರವಾಗಿ ವ್ಯಾಯಾಮ ಮಾಡು ಎಂದಿದ್ದರೆ ನೀನು ಒಪ್ಪುತ್ತಿರಲಿಲ್ಲ. ಅಂತೆಯೇ ಇದನ್ನು ಬೇರೆ ಮಾರ್ಗದಲ್ಲಿ ಮಾಡಿಸಿದೆ!'?
- ಡಾ. ಅನಿಕೇತ್ ಶರ್ಮಾ
Advertisement