ಆಸಿಡಿಟಿ: ಆಹಾರದಲ್ಲಿ ಎಚ್ಚರಿಕೆ ಅಗತ್ಯ

ನಲ್ವತ್ತು ವರ್ಷ ಪ್ರಾಯದ ಸುರೇಶ್ ಖಾರವಾದ ಪಲಾವ್ ತಿಂದು ಆಫೀಸಿಗೆ ಹೋಗಿದ್ದರು. ತಿಂಡಿ ತಿಂದು ಒಂದು ಗಂಟೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನಲ್ವತ್ತು ವರ್ಷ ಪ್ರಾಯದ ಸುರೇಶ್ ಖಾರವಾದ ಪಲಾವ್ ತಿಂದು ಆಫೀಸಿಗೆ ಹೋಗಿದ್ದರು. ತಿಂಡಿ ತಿಂದು ಒಂದು ಗಂಟೆ ಕಳೆಯುವುದರಲ್ಲಿ ಹೊಟ್ಟೆ, ಎದೆ ಉರಿಯಲು ಆರಂಭ. ಹೊಟ್ಟೆಯನ್ನು ತಂಪುಗೊಳಿಸಲು ಏನಾದ್ರು ಜ್ಯೂಸ್, ಹಣ್ಣು ತಿನ್ನೋಣವೆಂದರೆ ವಾಕರಿಕೆಯ ಅನುಭವ. ಜೊತೆಗೆ ತಲೆನೋವು. ಆಸಿಡಿಟಿ ಸಮಸ್ಯೆ ಇರುವ ಸುರೇಶ್‍ಗೆ ಆಹಾರದಲ್ಲಿ ಸ್ವಲ್ಪ ಏರುಪೇರಾದರೆ ಸಮಸ್ಯೆ.

ಗೃಹಿಣಿಯಾಗಿರುವ ನಳಿನಿಗೆ ಎಣ್ಣೆಯಲ್ಲಿ ಕರಿದ ಬಜ್ಜಿ, ಬೋಂಡ ತಿಂದರೆ ತಲೆನೋವು. ಯಾಕೆ ಹೀಗಾಗುತ್ತಿದೆ ಎಂದು ವೈದ್ಯರನ್ನು ಸಂಪರ್ಕಿಸಿದಾಗ ಅವರಿಂದ ಬಂದ ಉತ್ತರ ಆಸಿಡಿಟಿ ಸಮಸ್ಯೆಯಿದೆ ಎಂದು.

ಇಂದು ಬಹುತೇಕರಲ್ಲಿ ಕಾಡುತ್ತಿರುವ ಸಮಸ್ಯೆ ಗ್ಯಾಸ್ ಟ್ರಬಲ್, ಆಸಿಡಿಟಿ. ಮೂವತ್ತು ವರ್ಷ ಕಳೆದರೆ ಸಾಕು ಖಾರದ, ಗ್ಯಾಸಿನ, ಎಣ್ಣೆ ಪದಾರ್ಥಗಳನ್ನು ತಿಂದರೆ ಹೊಟ್ಟೆಯುರಿ, ಎದೆ ಉರಿ, ತಲೆನೋವು, ಹೊಟ್ಟೆಯಲ್ಲಿ ಒಂದು ತರಹದ ಯಾತನೆ ಸುರು. ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ನಮ್ಮ ದೇಹ, ಮನಸ್ಸಿನ ಆರೋಗ್ಯದ ಮೇಲೆಯೂ ಪ್ರಭಾವ ಬೀರುತ್ತದೆ.

ಆಸಿಡಿಟಿ ಸಮಸ್ಯೆ ಇರುವವರು ಗಡ್ಡೆ, ಎಣ್ಣೆ ಹಾಕಿದ ಮಸಾಲೆ  ಪದಾರ್ಥಗಳಿಂದ ದೂರ ಇರುವುದು ಒಳ್ಳೆಯದು. ಹಸಿರು ತರಕಾರಿಗಳು, ಸೊಪ್ಪು, ನಾರಿನ ಪದಾರ್ಥಗಳು ಉತ್ತಮ. ಕೊಬ್ಬಿನಂಶ ಹೆಚ್ಚಾಗಿರುವ ಆಹಾರ ಕೂಡ ಉತ್ತಮವಲ್ಲ. ಬಿಸ್ಕತ್ತು, ಸಬೆಳ್ತಿಗೆ ಅಕ್ಕಿ, ಮೈದಾ ಹಿಟ್ಟಿನ ಆಹಾರಗಳಿಂದ ಆದಷ್ಟು ದೂರವಿರಬೇಕು. ಇವು ಜೀರ್ಣವಾಗುವುದು ನಿಧಾನ. ಬದಲಿಗೆ ಗೋಧಿಯ ಪದಾರ್ಥಗಳು ಹಾಗೂ ಕುಚ್ಚಿಲಕ್ಕಿ ಊಟ ಉತ್ತಮ ಆಹಾರ. ಮಾಂಸದ ಸೇವನೆ ಮಾಡುವವರು ಹೆಚ್ಚು ಕೊಬ್ಬು ಇರುವ ಮಾಂಸಗಳಿಂದ ದೂರ ಇರುವುದು ಒಳ್ಳೆಯದು ಎನ್ನುತ್ತಾರೆ ಬೆಂಗಳೂರಿನ ದಾಸರಹಳ್ಳಿಯ ವೈದ್ಯೆ ವೆಂಕಟಲಕ್ಷ್ಮಿ.

ದೂರವಿಡಬೇಕಾದ ಪದಾರ್ಥಗಳು: ಖಾರ ಮಸಾಲೆ ಹಾಕಿದ ಆಹಾರ ಪದಾರ್ಥಗಳು,  ಹುಳಿ ಬಳಕೆ, ಕಾಫಿ ಸೇವನೆ ಕೂಡ ಒಳ್ಳೆಯದಲ್ಲ, ಅದರ ಬದಲು ಚಹಾ ಸೇವಿಸಿ. ಎಣ್ಣೆಯಲ್ಲಿ ಕರಿದ ಪದಾರ್ಥ, ಕಡಲೆ ಹಿಟ್ಟಿನಿಂದ ಮಾಡಿದ ಆಹಾರ ಸೇವನೆಯಿಂದ ದೂರವಿದ್ದರೆ ಒಳ್ಳೆಯದು. ಆಸಿಡಿಟಿ ಸಮಸ್ಯೆಯಿಂದ ಬಳಲುತ್ತಿರುವವರು ಹೊಟ್ಟೆಯನ್ನು ಖಾಲಿ ಬಿಡದೆ ಗಂಟೆಗೊಮ್ಮೆ ಏನಾದರೂ ಲಘು ಆಹಾರ ತಿನ್ನಬೇಕು. ಬೆಳಿಗ್ಗೆ ಎದ್ದ ಮೇಲೆ ಅರ್ಧ ಲೀಟರ್ ನೀರು ಸೇವಿಸಿಯೇ ನಿತ್ಯದ ಕಾರ್ಯ ಆರಂಭಿಸಬೇಕು. ತಾಮ್ರ ಪಾತ್ರದಲ್ಲಿಟ್ಟ ನೀರು ಸೇವನೆ ಉತ್ತಮ. ಲೋಳೆಸರ, ಪುದೀನಾ ಸೊಪ್ಪಿನ ರಸವನ್ನು ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಎರಡು-ಮೂರು ತಿಂಗಳು ಪ್ರತಿನಿತ್ಯ ಸೇವಿಸುತ್ತಾ ಬಂದರೆ ಆಸಿಡಿಟಿಯನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು. ನಿಯಮಿತ ಆಹಾರಕ್ರಮ, ಹೊತ್ತುಹೊತ್ತಿಗೆ ಸೂಕ್ತ ಸತ್ವಭರಿತ ಆಹಾರ, ನೀರನ್ನು ಹೆಚ್ಚು ಕುಡಿಯುವುದು, ಯೋಗ, ಧ್ಯಾನ, ದೇಹದ ಸಮತೂಕ, ಶಿಸ್ತಿನ ಜೀವನ ಕ್ರಮದ ಮೂಲಕ ಆಸಿಡಿಟಿ ಬಾಧೆಯಿಂದ ದೂರ ಉಳಿಯಬಹುದು. ಆಸಿಡಿಟಿ ಸಮಸ್ಯೆಗೆ  ಸಮತೋಲಿತ ಆಹಾರ ಸೇವನೆ, ಹಣ್ಣು-ತರಕಾರಿಗಳನ್ನು ಹೆಚ್ಚಾಗಿ ಬಳಸುವುದು, ಗ್ಯಾಸಿನ ಪದಾರ್ಥಗಳಿಂದ ದೂರ ಇರುವುದು ಎನ್ನುತ್ತಾರೆ ವೈದ್ಯರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com