ವೈದ್ಯರ ಬಿಳಿ ಕೋಟ್ ನಿಷೇಧಕ್ಕೆ ಸಲಹೆ: ಅಧ್ಯಯನ

ಭಾರತೀಯ ವೈದ್ಯರು ಧರಿಸುವ ಉದ್ದ ತೋಳಿನ ಬಿಳಿ ಕೋಟ್ ನಿಂದ ಸೋಂಕು ಹೆಚ್ಚುತ್ತದೆ ಎಂದು ಹೊಸ ಅಧ್ಯಯನವೊಂದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಭಾರತೀಯ ವೈದ್ಯರು ಧರಿಸುವ ಉದ್ದ ತೋಳಿನ ಬಿಳಿ ಕೋಟ್ ನಿಂದ ಸೋಂಕು ಹೆಚ್ಚುತ್ತದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

ಉದ್ದ ತೋಳಿನ ಬಿಳಿ ಕೋಟ್ ನಲ್ಲಿರುವ ಕೀಟಾಣುಗಳು ರೋಗಿಗಳಿಗೆ ಸೋಂಕನ್ನು ಉಂಟು ಮಾಡುವುದರ ಜೊತೆಗೆ ಇರುವ ರೋಗವನ್ನು ಉಲ್ಪಣಗೊಳಿಸುತ್ತದೆ ಎಂದು ಬೆಂಗಳೂರಿನ ಯೆಣೆಪೋಯ ಮೆಡಿಕಲ್ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿ ಎಡ್ಮಂಡ್ ಫರ್ನಾಂಡಿಸ್ ತಮ್ಮ ಸಂಶೋಧನೆಯಿಂದ  ತಿಳಿಸಿದ್ದಾರೆ.

ಪ್ರತಿ ಆಸ್ಪತ್ರೆಯಲ್ಲೂ ಸಮಿತಿಯೊಂದನ್ನು ರಚಿಸಿ ಸೋಂಕಿನ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ತಿಳಿಸಿದ್ದಾರೆ. ವೈದ್ಯ ವಿದ್ಯಾರ್ಥಿಗಳ ಹಾಗೂ ವೈದ್ಯರ ವೈಟ್ ಕೋಟ್ ನಿಷೇಧ ಮಾಡುವುದು ಭಾರತೀಯ ಆರೋಗ್ಯ ಸಚಿವಾಲಯಕ್ಕೆ ಸುಲಭವಾದ ಕೆಲಸವಾಗಿದೆ ಎಂದು ಕಾಲೇಜಿನಲ್ಲಿ ಪ್ರಕಟವಾಗುವ ಸ್ಟಡಿ ಜರ್ನಲ್ ನಲ್ಲಿ ವಿವರಿಸಿದ್ದಾರೆ.

ಉದ್ದ ತೋಳಿನ ಬಿಳಿಕೋಟನ್ನು 19ನೇ ಶತಮಾನದಿಂದಲೂ ಧರಿಸುತ್ತಿದ್ದು, ಆಸ್ಪತ್ರೆಗಳಲ್ಲಿ ಸೋಂಕು ಹಾಗೂ ಮಲಿನತೆ ತಡೆಯಲು ನಿಷೇಧಿಸುವ ಅಗತ್ಯವಿದೆ ಎಂದು ಫರ್ನಾಂಡೀಸ್ ಹೇಳಿದ್ದಾರೆ.

ಭಾರತದಲ್ಲಿ ಕಾಲೇಜಿಗೆ ಬರುವ ಪ್ರತಿ ವೈದ್ಯ ವಿದ್ಯಾರ್ಥಿಯೂ ವೈಟ್ ಕೋಟ್ ಧರಿಸುವುದು ಸಾಮಾನ್ಯ. ತಾವು ಧರಿಸಿದ ಕೋಟನ್ನು ಬಿಚ್ಚಿ ಕುರ್ಚಿ, ಟೇಬಲ್ ಮೇಲೆ ಹಾಕುತ್ತಾರೆ. ಇತ್ತೀಚೆಗೆ ಕೆಲವು ಕಿರಿಯ ಡಾಕ್ಟರ್ ಗಳು ವೈಟ್ ಕೋಟ್ ಧರಿಸಿಕೊಂಡೇ ಶಾಪಿಂಗ್ ಮಾಲ್, ಸಿನಿಮಾ ಥಿಯೇಟರ್ ಗೆ ಹೋಗುತ್ತಾರೆ. ಇದರಿಂದ ಗಾಳಿಯಿಂದ ಬರುb ರೋಗಾಣುಗಳು ಕೋಟ್ ಮೂಲಕ ರೋಗಿಗಳಿಗೆ ಹರಡುತ್ತದೆ ಎಂದು ತಿಳಿಸಿದ್ದಾರೆ.

ವೈಟ್ ಕೋಟ್ ನ್ನು ಸಾಂಕೇತಿಕವಾಗಿ ಧರಿಸಲಾಗುತ್ತದೆಯೇ ಹೊರತು ಅದು ವೃತ್ತಿಯನ್ನು ಪ್ರತಿನಿಧಿಸುವುದಿಲ್ಲ ಎಂದು ಫರ್ನಾಂಡಿಸ್ ಹೇಳಿದ್ದಾರೆ.

2007 ರಲ್ಲಿ ಬ್ರಿಟನ್ ನಲ್ಲಿ ವೈದ್ಯರು ಉದ್ದ ತೋಳಿನ ವೈಟ್ ಕೋಟ್ ಬಳಸದಂತೆ ನಿರ್ಧಾರ ಕೈಗೊಳ್ಳಲಾಯಿತು. 2009 ರಲ್ಲಿ ಅಮೇರಿಕಾದಲ್ಲೂ ವೈದ್ಯರು ವೈಟ್ ಕೋಟ್ ಬಳಸದಂತೆ ಪ್ರಸ್ತಾವನೆ ಸಲ್ಲಿಸಲಾಯಿತು. ಆದರೆ ವೈದ್ಯರು ತಮ್ಮ ಸಾಂಪ್ರಾದಾಯಿಕ ವೈಟ್ ಕೋಟ್ ಗಳಿಗೆ ನಿಷೇಧ ಹೇರುವುದನ್ನು ವಿರೋಧಿಸಿದ್ದರಿಂದ ಪ್ರಸ್ತಾವನೆಯನ್ನು ಕೈ ಬಿಡಲಾಯಿತು.

ವೈಟ್ ಕೋಟ್ ಧರಿಸುವುದಕ್ಕಿಂತ ಚೆನ್ನಾಗಿರುವ ಬಟ್ಟೆ ಧರಿಸಿ, ಮುಖದಲ್ಲಿ ಉತ್ಸಾಹದ ನಗು ತೋರುವುದು ವೈದ್ಯರಿಗೆ ಬಹಳ ಮುಖ್ಯ ಎಂದು ಹೇಳಿರುವ ಅವರು ಪ್ರತಿಯೊಂದು ಮೆಡಿಕಲ್ ಸೆಂಟರ್ ಪ್ರತಿಯೊಬ್ಬ ವೈದ್ಯ ಹಾಗೂ ವಿದ್ಯಾರ್ಥಿಗೆ ನೇಮ್ ಬ್ಯಾಡ್ಜ್ ನೀಡುವುದು ಅವಶ್ಯಕ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com