ಮಾತಾಡ್ ಮಾತಾಡ್ ಮಜ್ಜಿಗೆ!

ಹಾಲಿಗೆ ಹೋಲಿಸಿದರೆ, ಮಜ್ಜಿಗೆಯಲ್ಲಿ ಶೇಕಡಾ ಅರ್ಧದಷ್ಟು ಕಡಿಮೆ ಕ್ಯಾಲೊರಿ ಹಾಗೂ ಮುಕ್ಕಾಲು ಅಂಶ ಕಡಿಮೆ ಕೊಬ್ಬಿನಂಶವಿದೆ...
ಮಜ್ಜಿಗೆ
ಮಜ್ಜಿಗೆ
Updated on

ಹಾಲಿಗೆ ಹೋಲಿಸಿದರೆ, ಮಜ್ಜಿಗೆಯಲ್ಲಿ ಶೇಕಡಾ ಅರ್ಧದಷ್ಟು ಕಡಿಮೆ ಕ್ಯಾಲೊರಿ ಹಾಗೂ ಮುಕ್ಕಾಲು ಅಂಶ ಕಡಿಮೆ ಕೊಬ್ಬಿನಂಶವಿದೆ. ಮಜ್ಜಿಗೆಯು ಕಷಾಯ ಹಾಗೂ ಅಮ್ಲರಸ ಹೊಂದಿದ್ದು, ಲಘು ಗುಣದಿಂದಾಗಿ ಸುಲಭವಾಗಿ ಜೀರ್ಣ ಹೊಂದುತ್ತದೆ...

ಮಜ್ಜಿಗೆಯು ಮಾನವನಿಗೆ ಅಮೃತ ಸಮಾನ. ಇದು ಆಹಾರವೂ ಹೌದು, ಔಷಧವೂ ಹೌದು. ಭಾರತೀಯರಿಗೆ ಇದಿಲ್ಲದಿದ್ದರೆ ಊಟವೇ ಅಪೂರ್ಣ. ಆಯುರ್ವೇದ ಚಿಕಿತ್ಸೆಯಲ್ಲೂ ಮಜ್ಜಿಗೆಯ ಮದ್ದಿಗೆ ಅಗ್ರಸ್ಥಾನವಿದೆ. ಆಯುರ್ವೇದದಲ್ಲಿ ಮಜ್ಜಿಗೆಯನ್ನು ರೋಗಿಗಳ ಚಿಕಿತ್ಸೆಗಷ್ಟೇ ಅಲ್ಲದೆ, ರೋಗವನ್ನು ತಡೆಯುವ ಉದ್ದೇಶವಾಗಿ ಆಹಾರರೂಪವಾಗಿಯೂ ಬಳಸಲಾಗುತ್ತದೆ. ಮೊಸರಿಗೆ ನೀರನ್ನು ಬೆರೆಸಿ ಚೆನ್ನಾಗಿ ಕಡೆದಾಗ ಶಾಖ ಉತ್ಪಾದನೆಯಾಗಿ ಹಲವು ಗುಣಗಳ ಪರಿವರ್ತನೆಯೊಂದಿಗೆ ಬೆಣ್ಣೆಯು ಬೇರ್ಪಡುತ್ತದೆ. ಇನ್ನುಳಿದ ಭಾಗವನ್ನು ಮಜ್ಜಿಗೆಯಾಗಿ ಬಳಸಬೇಕು.

ಬಿ12ನ ಕಣಜ?
ಮಜ್ಜಿಗೆಯಲ್ಲಿ ದೇಹದ ಆರೋಗ್ಯಕ್ಕೆ ಅಗತ್ಯವಿರುವ ಖನಿಜಾಂಶಗಳು ಅಧಿಕವಾಗಿವೆ. ಅನೀಮಿಯಾ, ಮಾನಸಿಕ ಒತ್ತಡ ಹಾಗೂ ಧಾತುಗಳ ಬೆಳವಣಿಗೆಗೆ ಅಗತ್ಯವಿರುವ ವಿಟಮಿನ್ ಬಿ12 ಪ್ರಮುಖವಾಗಿದೆ. ಇದು ಗ್ಲೂಕೋಸನ್ನು ಸುಲಭವಾಗಿ ಜೀರ್ಣಿಸಿ ಶಕ್ತಿಯಾಗಿ ಪರಿವರ್ತಿಸುತ್ತದೆ. ಆದ್ದರಿಂದ ಮಜ್ಜಿಗೆಯ ಸೇವನೆಯಿಂದ ತತ್ ಕ್ಷಣ ಶಕ್ತಿ ಪಡೆಯಬಹುದು. ? ಇದರಲ್ಲಿನ ಪೊಟಾಶಿಯಂ ಅಂಶವು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಅಲ್ಲದೆ ಮಜ್ಜಿಗೆಯಲ್ಲಿ ಕ್ಯಾಲ್ಶಿಯಂ ಹಾಗೂ ಫಾಸ್ಪರಸ್ ಅಂಶ ಹೆಚ್ಚಾಗಿದ್ದು, ಮೂಳೆಗಳಿಗೆ ಅಗತ್ಯ ಪುಷ್ಠಿ ನೀಡುತ್ತದೆ. ಮಜ್ಜಿಗೆಯು ರಕ್ತನಾಳಗಳಲ್ಲಿ ಲೇಪಿತವಾಗಿರುವ ಕೊಬ್ಬಿನಂಶ ತೆಗೆದುಹಾಕುತ್ತದೆ. ಅತಿಯಾದ ಭೋಜನದ ನಂತರ ಮಜ್ಜಿಗೆ ಸೇವಿಸಿದರೆ, ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ ಹಾಗೂ ಅತಿಯಾದ ಆಹಾರದ ಸೇವನೆಯಿಂದಾಗುವ ಉಬ್ಬಸವನ್ನು ಕಡಿಮೆಗೊಳಿಸುತ್ತದೆ.

ಜಠರವಿಕಾರಗಳಿಗೆ  ಮಜ್ಜಿಗೆ ದಿವ್ಯೌಷಧಿ, ಬೇಧಿ, ರಕ್ತಬೇಧಿ ಹಾಗೂ ಕರುಳಿನ ವಿಕಾರಗಳಲ್ಲಿ, ಕರುಳಿನಲ್ಲಾಗುವ ವಿಪರೀತ ಒತ್ತಡವನ್ನು ಕಡಿಮೆಯಾಗಿಸಿ ಅಗತ್ಯ ನೀರಿನಾಂಶ ಹಾಗೂ ಖನಿಜಾಂಶವನ್ನು ನೀಡುತ್ತದೆ. ಮಜ್ಜಿಗೆಯು ಜಠರದ ಒಳಪದರವನ್ನು ಲೇಪಿಸಿ, ಜಠರದ ತೀಕ್ಷ್ಣ ಸ್ರಾವವನ್ನು ನಿಯಂತ್ರಿಸುತ್ತದೆ. ಹುಳಿತೇಗು, ಹೊಟ್ಟೆಹುರಿ, ಎದೆಯುರಿ ನಿವಾರಿಸುತ್ತದೆ. ಕ್ಷಾರ ಹಾಗೂ ಕಷಾಯ  ಗುಣಗಳಿಂದಾಗಿ ಮೂಲವ್ಯಾಧಿಯಲ್ಲಿನ ಗುದಾಂಕುರವನ್ನು ನಿವಾರಿಸುತ್ತದೆ. ಲಿವರ್‍ನಲ್ಲಿನ ವಿಷಗುಣಗಳನ್ನು ತೆಗೆದುಹಾಕುತ್ತದೆ.

ಕರುಳನ್ನು ಶುದ್ಧಗೊಳಿಸಿ ಮಲಬದ್ಧತೆ ನಿವಾರಿಸುತ್ತದೆ. ಕರುಳಿನಲ್ಲಿ ಹಲವು ರಾಸಾಯನಿಕ ಕ್ರಿಯೆಗಳಿಗೆ ಪ್ರಾಕೃತವಾಗಿ ಅಗತ್ಯವಿರುವ ಜೈವಿಕ ಬ್ಯಾಕ್ಟೀರಿಯಾದ ವೃದ್ಧಿಗೆ ಸಹಕಾರಿಯಾಗುತ್ತದೆ. ಮಜ್ಜಿಗೆ ಸೇವನೆಯಿಂದ ತೆರೆದ ಗಾಯ, ಬಾಯಿಹುಣ್ಣು, ರಕ್ತಸ್ರಾವದಂಥ ರೋಗಗಳು ಬಹುಬೇಗ ಗುಣವಾಗುತ್ತವೆ. ಹಲವು ಔಷಧಿಗಳಿಂದ ಸಂಸ್ಕಾರಿತವಾದ ಮಜ್ಜಿಗೆಯನ್ನು ಸೋರಿಯಾಸಿಸ್‍ನಂಥ ಚರ್ಮರೋಗಗಳಲ್ಲಿ ತಕ್ರಧಾರ ಎಂಬ ಪಂಚಕರ್ಮ ಚಿಕಿತ್ಸೆಗೆ ಬಳಸಲಾಗುವುದು.

ಮನೆಮದ್ದಾಗಿ ಮಜ್ಜಿಗೆ
ಮಜ್ಜಿಗೆಗೆ ಸೈಂದವ ಉಪ್ಪು ಮತ್ತು ಹಸಿಶುಂಠಿರಸವನ್ನು ಬೆರೆಸಿ ಸೇವಿಸುವುದರಿಂದ ವಾಂತಿ ಕಡಿಮೆಯಾಗುತ್ತದೆ. ಅರ್ಧ ಚಮಚ ಶುಂಠಿರಸ ಹಾಗೂ ಜೀರಿಗೆಪುಡಿಯನ್ನು ಮಜ್ಜಿಗೆಯೊಂದಿಗೆ ಸೇವಿಸಿದರೆ ಅಸಿಡಿಟಿ, ಮಲಬದ್ಧತೆ ಹಾಗೂ ಮೂಲವ್ಯಾಧಿ ನಿವಾರಣೆಯಾಗುತ್ತದೆ. 1 ಚಿಟಿಕೆ ಉಪ್ಪು, 1 ಚಮಚ ಸಕ್ಕರೆಯೊಂದಿಗೆ 1 ಗ್ಲಾಸ್ ಮಜ್ಜಿಗೆಯು ಸಧ್ಯೋ ಶಕ್ತಿದಾಯಕವಾಗಿದ್ದು, ಅಗತ್ಯ ನೀರಿನಾಂಶವನ್ನು ನೀಡುತ್ತದೆ ಹಾಗೂ ಅತಿಸಾರವನ್ನು ನಿಯಂತ್ರಿಸುತ್ತದೆ. ತ್ವಚೆಯ ಕಾಂತಿಯನ್ನು ಹೆಚ್ಚಿಸಿ ಮುಪ್ಪನ್ನು ತಡೆಯುತ್ತದೆ.

- ಡಾ. ಮಹೇಶ್ ಶರ್ಮಾ ಎಂ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com