
ನ್ಯೂಯಾರ್ಕ್: ಚೈನಾದಲ್ಲಿ ಸಾಂಪ್ರದಾಯಿಕ ಔಷಧವಾಗಿ ಬಳಸಲ್ಪಡುವ ಗಿಡಮೂಲಿಕೆಯ ರಸ ಹೊಟ್ಟೆಹಸಿವನ್ನು ಕಡಿಮೆ ಮಾಡಿ ತೂಕವನ್ನು ಇಳಿಸಬಲ್ಲುದಾಗಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
"ಥಂಡರ್ ಗಾಡ್' ಬಳ್ಳಿಯಿಂದ ತೆಗೆಯಲಾದ ಸಾರವನ್ನು ಬೊಜ್ಜಿಗೆ ಔಷಧಿಯಾಗಿ ಅಭಿವೃದ್ಧಿಪಡಿಸಬಹುದು ಎಂದು ಈ ಅಧ್ಯಯನದ ಸಂಶೋಧನೆ ತಿಳಿಸಿದೆ.
ಬೊಜ್ಜು ಇಲಿಗಳಲ್ಲಿ ಈ ಉತ್ಪನ್ನದ ಬಳಕೆಯಿಂದ ಆಹಾರ ಸೇವನೆಯನ್ನು ಗಣನೀಯವಾಗಿ ಕಡಿಮೆಯಾಗಿ ದೇಹದ ತೂಕವನ್ನು ೪೫% ಇಳಿಸಲು ಸಾಧ್ಯವಾಗಿದೆ ಎಂದು ಅಧ್ಯಯನ ತಿಳಿಸಿದೆ.
ಸೆಲೆಸ್ಟ್ರಾಲ್ ಎಂದು ಕರೆಯಾಲಾಗುವ ಈ ಸಾರ ಹೊಟ್ಟೆ ಹಸಿವು ತಡೆಯಬಲ್ಲ ಹಾರ್ಮೋನ್ 'ಲೆಪ್ಟಿನ್' ಉತ್ಪಾದನೆಯನ್ನು ಹೆಚ್ಚು ಮಾಡುತ್ತದೆ ಎಂದು ಸಂಶೋಧಕರು ಗಮನಿಸಿದ್ದಾರೆ.
"ಈ ಸೆಲೆಸ್ಟ್ರಾಲ್ ಇಲಿಗಳ ಮೇಲೆ ಕೆಲಸ ಮಾಡಿದಂತೆಯೇ ಮನುಷ್ಯರ ಮೇಲೂ ಕೆಲಸ ಮಾಡಿದರೆ ಇದು ಬೊಜ್ಜನ್ನು ಮತ್ತು ಬೊಜ್ಜಿನಿಂದ ಉಂಟಾಗುವ ಹೃದ್ರೋಗ, ಟೈಪ್-೨ ಡಯಾಬೆಟೆಸ್, ಪಿತ್ತಜನಕಾಂಗದ ಊತ ಇವುಗಳನ್ನು ಪರಿಹರಿಸುವ ಪರಿಣಾಮಕಾರಿ ಔಷಧಿಯಾಗಬಲ್ಲುದು" ಎಂದು ಹಾರ್ವಾರ್ಡ್ ವೈದ್ಯಕೀಯ ಶಾಲೆಯ ಪ್ರೊಫೆಸರ್ ಹಾಗು ಈ ಅಧ್ಯನದ ಪ್ರಮುಖ ಸಂಶೋಧನಕಾರ ಅಮುಟ್ ಆಜ್ಕ್ಯಾನ್ ತಿಳಿಸಿದ್ದಾರೆ.
ಈ ಸೆಲೆಸ್ಟ್ರಾಲ್ ಚಿಕಿತ್ಸೆ ಪ್ರಾರಂಭವಾದ ಒಂದು ವಾರದಲ್ಲೇ ಬೊಜ್ಜು ದೇಹದ ಇಲಿಗಳು ಇತರ ಇಲಿಗಳಿಗೆ ಹೋಲಿಸಿದಾಗ ಆಹಾರ ಸೇವನೆಯನ್ನು ಶೇಕಡಾ ೮೦% ಕಡಿಮೆ ಮಾಡಿದವು ಎಂದು ಸಂಶೋಧಕರು ತಿಳಿಸಿದ್ದಾರೆ. ಮೂರನೆ ವಾರದ ಅಂತ್ಯದಲ್ಲಿ ದೇಹದ ಕೊಬ್ಬಿನ ಅಂಶವೆಲ್ಲಾ ಕರಗಿ ದೇಹದ ತೂಕ ಶೇಕಡಾ ೪೫% ಕಡಿಮೆಯಾಗಿತ್ತು ಎಂದಿದೆ.
'ಥಂಡರ್ ಗಾಡ್' ಬಳ್ಳಿಯ ಬೇರುಗಳಲ್ಲಿ ಅಲ್ಪ ಪ್ರಮಾಣದಲ್ಲಿ ಈ ಸೆಲೆಸ್ಟ್ರಾಲ್ ಕಂಡುಬರುತ್ತದೆ. ಇದನ್ನು ನೇರವಾಗಿ ಮನುಷ್ಯ ಸೇವಿಸಿದರೆ ದೇಹಕ್ಕೆ ಬೇರೆ ರೀತಿಯ ಹಾನಿಯುಂಟಾಗಬಹುದು ಎಂದು ಕೂಡ ಆಜ್ಕ್ಯಾನ್ ಎಚ್ಚರಿಸಿದ್ದಾರೆ.
Advertisement