ವಯಸ್ಕರಲ್ಲಿ ಸಂತೋಷದ ಪ್ರಮಾಣ ಇಳಿಮುಖ: ಅಧ್ಯಯನ ವರದಿ

ಭೌತಿಕ ಸೌಕರ್ಯಗಳು ಹೆಚ್ಚಾದಷ್ಟೂ ಮನುಷ್ಯನ ಸಂತಸ ಹೆಚ್ಚಾಗುವುದು ಸ್ವಾಭಾವಿಕ. ಆದರೆ ಹೊಸ ಸಂಶೋಧನೆಯೊಂದು ಇದು ಸುಳ್ಳು ಎನ್ನುತ್ತಿದೆ.
ವಯಸ್ಕರಲ್ಲಿ ಸಂತೋಷದ ಪ್ರಮಾಣ ಇಳಿಮುಖ
ವಯಸ್ಕರಲ್ಲಿ ಸಂತೋಷದ ಪ್ರಮಾಣ ಇಳಿಮುಖ

ವಾಷಿಂಗ್ಟನ್: ಭೌತಿಕ ಸೌಕರ್ಯಗಳು ಹೆಚ್ಚಾದಷ್ಟೂ ಮನುಷ್ಯನ ಸಂತಸ ಹೆಚ್ಚಾಗುವುದು ಸ್ವಾಭಾವಿಕ. ಆದರೆ ಹೊಸ ಸಂಶೋಧನೆಯೊಂದು ಇದು ಸುಳ್ಳು ಎನ್ನುತ್ತಿದೆ. 
ಸಾನ್ ಡಿಯಾಗೋ ವಿಶ್ವವಿದ್ಯಾನಿಲಯ, ಫ್ಲಾರಿಡಾ ಅಟ್ಲಾಂಟಿಕ್ ವಿಶ್ವವಿದ್ಯಾಲಯ ಮತ್ತು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ನಡೆಸಿರುವ ಅಧ್ಯಯನದ ಪ್ರಕಾರ, 30 ವರ್ಷದ ವಯಸ್ಸಿನ ಯುವ ಸಮುದಾಯ ಆ ವಯಸ್ಸಿನಲ್ಲಿ ತಮ್ಮ ಪೋಷಕರಿದ್ದಷ್ಟೂ ಸಂತಸವಾಗಿಲ್ಲವಂತೆ. 
ಅಧ್ಯಯನ ವರದಿಗಾಗಿ 1972 -2014 ವರೆಗೆ 13 ರಿಂದ 96 ವಯೋಮಿತಿಯ ಸುಮಾರು 1 .3 ಮಿಲಿಯನ್ ಅಮೆರಿಕನ್ನರನ್ನು ಸಮೀಕ್ಷೆಗೊಳಪಡಿಸಲಾಗಿತ್ತು. ಸಮೀಕ್ಷೆ ಪ್ರಕಾರ 30 ವರ್ಷದ ವಯಸ್ಸಿನ ಯುವಕರು ತಮ್ಮ ಪೋಷಕರು ಹಾಗೂ ತಮಗಿಂತ ಚಿಕ್ಕವರಾಗಿರುವ 18 -29 ವರ್ಷದವರಿಗಿಂತ ಕಡಿಮೆ ಸಂತೋಷವಾಗಿರುತ್ತಾರೆ ಎಂದು ತಿಳಿದುಬಂದಿದೆ.
1970 ರಲ್ಲಿ 30 ವರ್ಷ ವಯಸ್ಸಿನ ಶೇ.38 ರಷ್ಟು ಜನರು ಸಂತಸವಾಗಿದ್ದೇವೆ ಎಂದು ಹೇಳಿದ್ದರೆ ಅದು 2010 ರ ವೇಳೆಗೆ ಶೇ.32 ಕ್ಕೆ ಇಳಿಕೆಯಾಗಿದೆ. ಅಗಾಧವಾದ ನಿರೀಕ್ಷೆಗಳಿಗೆ ಅಮೇರಿಕನ್ ಸಂಸ್ಕೃತಿ ಹೆಚ್ಚು ಒತ್ತು ನೀಡಿದ್ದು, ತಮ್ಮ ನಿರೀಕ್ಷೆಗಳನ್ನು ತಲುಪಲು ಸಾಧ್ಯವಿಲ್ಲ ಎಂದು ಅರಿವಾಗಿರುವುದೂ ಅಸಂತೋಷಕ್ಕೆ ಪ್ರಮುಖ ಕಾರಣ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. 
ಇಂದಿನ ಪೀಳಿಗೆಯ ಪೋಷಕರು 30 ವರ್ಷ ವಯಸ್ಸಿನವರಿರಬೇಕಾದರೆ ಹೆಚ್ಚು ನಿರೀಕ್ಷೆಗಳನ್ನು ಇಟ್ಟುಕೊಳ್ಳುತ್ತಿರಲಿಲ್ಲ ಆದ್ದರಿಂದ ಹೆಚ್ಚು ಸಂತೋಷವಾಗಿರುತ್ತಿದ್ದರು. ಆದರೆ ಇಂದಿನ ಪೀಳಿಗೆ ಅಗಾಧ ನಿರೀಕ್ಷೆಗಳನ್ನಿಟ್ಟುಕೊಂಡು ಅದು ಈಡೇರಲು ಸಾಧ್ಯವಿಲ್ಲ ಎಂದು ತಿಳಿಯುತ್ತಿದ್ದಂತೆ ಅಸಂತೋಷಕ್ಕೀಡಾಗುತ್ತಾರೆ. 30 ವರ್ಷ ವಯಸ್ಸಿನ ಪುರುಷ- ಮಹಿಳೆಯರಲ್ಲಿ ಸಮಾನವಾದ ಅಸಂತೋಷವಿದೆ ಎಂದು ಸಂಶೋಧಕರು ಹೇಳಿದ್ದಾರೆ. ಸೋಶಿಯಲ್ ಸೈಕಲಾಜಿಕಲ್ ಮತ್ತು ವ್ಯಕ್ತಿತ್ವ ವಿಜ್ಞಾನಕ್ಕೆ ಸಂಬಂಧಿಸಿದ ಜರ್ನಲ್ ನಲ್ಲಿ ಅಧ್ಯಯನ ವರದಿ ಪ್ರಕಟವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com