
20-30ರ ಯುವ ದೇಹವನ್ನು ಜಿಮ್ನಲ್ಲಿ ಶಿಸ್ತುಬದ್ಧವಾಗಿ ಹೇಗಾದರೂ ದಂಡಿಸಬಹುದು. ನಲ್ವತ್ತರ ಮೇಲೆ ಹಾಗಾಗದು. ದೇಹವೂ ಮಾತು ಕೇಳದು. ಈ ವೇಳೆ ಪಾಲಿಸಬೇಕಾದ ಪ್ರಮುಖ ಅಂಶಗಳೇನು?
ನಲ್ವತ್ತು ದಾಟಿದ ಮೇಲೆ ದೇಹದ ಮೇಲೆ ನಂಬಿಕೆ ವೀಕ್ ಆಗುತ್ತೆ. ಆ ಕಾರಣಕ್ಕೆ ನಾವಾಗ ಜಿಮ್, ಯೋಗ ಎಂಬ ಕಸರತ್ತುಗಳತ್ತ ಕತ್ತು ತಿರುಗಿಸುತ್ತೇವೆ. ಅದರಲ್ಲೂ ಆಧುನಿಕ ಮಾಂತ್ರಿಕ ವೈದ್ಯನಂತೆ ಬಂದ ಜಿಮ್ ಮೇಲೆ ಎಂಥವರಿಗೂ ಒಲವು ಹೆಚ್ಚು. ಶುಗರ್ ಬಾರದಿರುವ, ಶುಗರ್ ಇದ್ದರೂ ನಿಯಂತ್ರಣಕ್ಕೆ ತರುವ ಕಸರತ್ತುಗಳೂ ಇಲ್ಲಿವೆ. ನೀವು ಈ ಮೊದಲು ಜಿಮ್ಗೆ ಹೋಗಿದ್ದರೆ ದೇಹ ಅದಕ್ಕೆ ಒಗ್ಗಿಕೊಂಡಿರುತ್ತದೆ. ಆದರೆ, ನಲ್ವತ್ತಾದ ನಂತರ ಏಕಾಏಕಿ ಜಿಮ್ಗೆ ಹೋದಾಗ ದೇಹ ತಿಭಟಿಸಬಹುದು. ಟ್ರೈನರ್ ಹೇಳಿಕೊಟ್ಟ ಪ್ರಯೋಗವು ದೇಹದ ಇನ್ನ್ಯಾವುದೋ ಮೂಲೆಗೆ ಘಾಸಿಯನ್ನೂ ತರಬಹುದು.
20-30ರ ಯುವ ದೇಹವನ್ನು ಶಿಸ್ತುಬದ್ಧವಾಗಿ ಹೇಗಾದರೂ ದಂಡಿಸಬಹುದು. ನಲ್ವತ್ತರ ಮೇಲೆ ಹಾಗಾಗದು. ದೇಹವೂ ಮಾತು ಕೇಳದು. ಎಲ್ಲ ಅಂಗಾಂಗಗಳೂ ದಣಿವಿನ ಸ್ಥಿತಿಯಲ್ಲಿರುತ್ತವೆ. ಜಿಮ್ ಯಂತ್ರಗಳನ್ನು ಮೆಟ್ಟುವ ಮೊದಲು ಅವುಗಳಿಗೆ ಶಕ್ತಿ ತುಂಬುವ ಕೆಲಸವಾಗಬೇಕು. ಅದು ಲಘು ವ್ಯಾಯಾಮದಿಂದ ಅಥವಾ ಸತ್ವಯುತ ಆಹಾರದಿಂದಷ್ಟೇ ಸಾಧ್ಯ. ನಲ್ವತ್ತು ದಾಟಿದವರು ಪ್ರೊ.ಫೆಶನಲ್ ಜಿಮ್ ಟ್ರೈನರ್‍ಗಳ ಬಳಿಯೇ ದೇಹ ದಂಡಿಸುವುದು ಸೂಕ್ತ. ಯಾಕೆಂದರೆ, ಎಲ್ಲ ಜಿಮ್ಗಳೂ ನಿಮ್ಮ ಬಗ್ಗೆ ಕೇರ್ ತಗೊಳ್ಳೋದಿಲ್ಲ. ಟೈಮ್, ಹಣ ಇವೆಲ್ಲದರ ಅನಿವಾರ್ಯತೆಯ ಕಾರಣದಿಂದ ಅವರ ಗಮನ ನಿಮ್ಮ ಮೇಲೆ ಬೀಳದೆಯೂ ಹೋಗಬಹುದು. ಹೀಗಾಗಿ, ಸರ್ಟಿಫೆೈಡ್ ಟ್ರೈನರ್ ಗಳ ಜಿಮ್ಗಳೇ ಸೂಕ್ತ.
ಈ ವೇಳೆ ಪಾಲಿಸಬೇಕಾದ ಪ್ರಮುಖ ಅಂಶಗಳೇನು?
ವೈದ್ಯಕೀಯ ಪರೀಕ್ಷೆ: ನಿಮ್ಮ ದೇಹದ ಕಂಡೀಶನ್ ಬಗ್ಗೆ ಜಿಮ್ ಟ್ರೈನರ್‍ಗೆ ಗೊತ್ತಿರುವುದಿಲ್ಲ. ನಿಮ್ಮ ಕೊಲೆಸ್ಟ್ರಾಲ್ ಲೆವೆಲ್, ಹಾಟ್ರ್ ಬೀಟ್, ಶುಗರ್ ಪ್ರಮಾಣಗಳನ್ನು ತಿಳಿಯುವುದೂ ಮುಖ್ಯ. ವೈದ್ಯರ ಬಳಿ ಸಂಪೂರ್ಣವಾಗಿ ಟೆಸ್ಟ್ ಮಾಡಿಸಿ, ಆ ರಿಪೋರ್ಟನ್ನು ಟ್ರೈನರ್‍ಗೆ ಒಪ್ಪಿಸಿ. ನಿಮ್ಮ ದೇಹಕ್ಕೆ ಯಾವ ವ್ಯಾಯಾಮ ಒಪ್ಪುತ್ತದೆಂದು ಅವರಿಗೆ ಗೊತ್ತಾಗುತ್ತೆ. ದೇಹದ ಸಾಮರ್ಥ್ಯಕ್ಕೆ ತಕ್ಕಂತೆ ಪ್ರಯೋಗ ನಡೆಸುತ್ತಾರೆ. ನಿಮ್ಮ ದೇಹದ ಸದ್ಯದ ಫಿಟ್ನೆಸ್ ಪರಿಸ್ಥಿತಿ ಅರಿತು ಭಾರ ಎತ್ತಿಸುತ್ತಾರೆ. ಆರೋಗ್ಯ ಹದಗೆಟ್ಟಿದ್ದರೆ, ವಯಸ್ಸು 40-50 ಆಗಿದ್ದರೆ, 50-60 ಆಗಿದ್ದರೆ ಬೇರೆ ಬೇರೆ ರೀತಿಯ ವ್ಯಾಯಾಮಗಳನ್ನು ಅನುಸರಿಸಬೇಕಾಗುತ್ತದೆ.
ಯಾಕಾಗಿ ಜಿಮ್?: ಜಿಮ್ಗೆ ಹೋಗಲು ನಿಮ್ಮ ಕಾರಣವೂ ಇಲ್ಲಿ ಮುಖ್ಯ. ಆರೋಗ್ಯದ ದೃಷ್ಟಿಯಿಂದನಾ? ಫಿಟ್ನೆಸ್‍ಗಾಗಿಯಾ? ತೂಕ ಇಳಿಸಿಕೊಳ್ಳುವುದಕ್ಕಾ? ಈ ಪ್ರಶ್ನೆಗಳಿಗೆ ನಿಮ್ಮಿಂದ ಉತ್ತರ ಪಡೆದೇ ಜಿಮ್ ಟ್ರೈನರ್‍ಗಳು ಮುಂದುವರಿಯಬೇಕಾಗುತ್ತದೆ. ಇವೆಲ್ಲ ಶ್ರೇಣಿಗಳೂ ತಮ್ಮದೇ ವ್ಯಾಯಾಮ ಮಾರ್ಗಗಳನ್ನು ಹೊಂದಿವೆ. ನಿಮ್ಮ ದೇಹದ ಸಾಮರ್ಥ್ಯವನ್ನು ಇತರರೊಂದಿಗೆ ಹೋಲಿಸಿಕೊಳ್ಳಬೇಡಿ. ಎಲ್ಲಕ್ಕಿಂತ ಹೆಚ್ಚು ನಿಮ್ಗೆ ಈ ವ್ಯಾಯಾಮ ದಿಂದ ಖುಷಿ ಸಿಗಬೇಕು. ವೈದ್ಯರು ಹೇಳಿದ್ದಾರೆಂಬ ಕಾರಣವನ್ನು ತಲೆಯಲ್ಲಿಟ್ಟುಕೊಳ್ಳದೆ, ಕಸರತ್ತಿನಲ್ಲಿ ಖುಷಿಯನ್ನು ಕಂಡುಕೊಳ್ಳಬೇಕಾಗುತ್ತದೆ.
ವಾರ್ಮ್ ಅಪ್: ಜಿಮ್ಗೂ ಮುನ್ನ ದೇಹದ ತಾಪ ವೃದ್ಧಿಸಿಕೊಳ್ಳಬೇಕಾಗುತ್ತದೆ. ನಿಂತಲ್ಲೇ ಮಾಡುವ ಸರಳ ವ್ಯಾಯಾಮಗಳು ನಿಮ್ಮ ಪ್ರತಿ ಸ್ನಾಯುಗಳಲ್ಲಿ ರಕ್ತಸಂಚಲನವನ್ನು ತೀವ್ರಗೊಳಿಸುತ್ತ ವೆ. ಸ್ನಾಯುಗಳ ಬಿಗಿಹಿಡಿತವನ್ನು ಸಡಿಲಗೊಳಿಸುವುದರಿಂದ ಮಾನಸಿಕವಾಗಿಯೂ ಕಠಿಣ ವ್ಯಾಯಾಮಕ್ಕೆ ಸಜ್ಜುಗೊಳ್ಳಬಹುದು. ಕಾರ್ಡಿಯೋ, ಸ್ಟ್ರೆಚಿಂಗ್, ಜಂಪಿಂಗ್‍ಗಳೂ ಬಹಳ ಮುಖ್ಯ. ದೇಹವನ್ನು ಕೆಪಾಸಿಟಿಗೆ ತಕ್ಕಂತೆ ಬೆಂಡ್ ಮಾಡಿ. ಬಲತ್ಕಾರ ಒಳ್ಳೆಯದಲ್ಲ.
ತೂಕ ಜಾಸ್ತಿ ಎತ್ಬೇಡಿ: ನಲ್ವತ್ತಾದ ಮೇಲೆ ಮೂಳೆಗಳಲ್ಲಿ ಕ್ಯಾಲ್ಷಿಯಂ ಕೊರತೆ ಕಾಣಿಸುತ್ತದೆ. ಈ ದುರ್ಬಲ ಸ್ಥಿತಿಯಲ್ಲಿ ಹೆಚ್ಚು ಭಾರ ಎತ್ತುವುದು ಒಳ್ಳೆಯದಲ್ಲ. ಅದರಲ್ಲೂ ಮೂಳೆಗಳಲ್ಲಿ ಡ್ಯಾಮೇಜ್ ಇದ್ದರೆ ತೊಂದರೆ ಆಗಬಹುದು. ಡಂಬಲ್ಸ್‍ಗಳನ್ನು ತಿರುಗಿಸುವ ಸಾಹಸ ಬೇಡ. ಲಿಫಿ್ಟಂಗ್ ವೇಳೆ ಆತುರವೂ ಒಳ್ಳೆಯದಲ್ಲ. ಸಣ್ಣ ಪ್ರಮಾಣದ ತೂಕದಿಂದ ಮುಂದುವರಿಯಿರಿ. ಆರಂಭದಲ್ಲೇ ಚಿನ್ ಅಪ್ ಸಾಹಸಕ್ಕೆ ಮುಂದಾಗಬೇಡಿ.
ನಡುವೆ ರಿಲ್ಯಾಕ್ಸ್: ಯುವಕರಿಗೆ ವ್ಯಾಯಾಮದ ನಡುವೆ ರಿಲ್ಯಾಕ್ಸ್ ಅವಶ್ಯ ಬರೋದಿಲ್ಲ. ಆದರೆ, ನಲ್ವತ್ತರ ನಂತರ ರಿಲ್ಯಾಕ್ಸ್ ಬೇಕು. ಸ್ಟ್ರಾಂಗ್ ಇದ್ದೀನಿ ಅಂತ ನಿಮಗನ್ನಿಸಿದರೂ, ನಿಮ್ಮ ದೇಹ ಪುಟ್ಟ ವಿಶ್ರಾಂತಿಯನ್ನು ಬಯಸುತ್ತದೆ. ಅದರಲ್ಲೂ ಹೃದಯಕ್ಕೆ ಮೊದಲಿನ ಹುರುಪಿನಲ್ಲಿ ಕೆಲಸ ಮಾಡುವ ಶಕ್ತಿ ಇರೋದಿಲ್ಲ. ಯಾವುದೇ ವ್ಯಾಯಾಮವನ್ನೂ ವೇಗದಲ್ಲಿ ಮಾಡಿ ದಣಿಯಬೇಡಿ.
ಹೊಟ್ಟೆಗೇನು ಬೇಕು?
-ಜಿಮ್ಗೆ ಹೋಗುವ ಮುಕ್ಕಾಲು ಗಂಟೆ ಮೊದಲು ಲಘುವಾಗಿ ಏನಾದರೂ ಸೇವಿಸಿ
-ಎಣ್ಣೆ ತಿಂಡಿ, ಹುಳಿ ಪದಾರ್ಥ ತಿಂದರೆ ವಾಂತಿ ಆಗುವ ಅಪಾಯವಿರುತ್ತದೆ
-ನಿತ್ಯ 810 ಗ್ಲಾಸ್ ನೀರನ್ನು ಕಡ್ಡಾಯವಾಗಿ ಕುಡಿಯಿರಿ. ಹಣ್ಣಿನ ರಸ ಆದಷ್ಟು ದೇಹ ಸೇರಲಿ
-ಜಿಮ್ ಮಾಡಿದ ಕಾಲು ಗಂಟೆ ಬಳಿಕ 4 ಮೊಟ್ಟೆ ಸೇವಿಸಿ. ಕೊಬ್ಬುಯುಕ್ತ ಹಾಲು ಬೇಡ, ಸ್ಲಿಮ್ಮಿಲ್ಕ್ ಸೇವಿಸಿ
-ಮೀನು, ಹಸಿ ತರಕಾರಿ ಸೇವನೆಯಿಂದ ನಿಮ್ಮ ದೇಹಕ್ಕೆ ಅಗತ್ಯ ಪ್ರೊ.ಟೀನ್ ರವಾನೆಯಾಗುತ್ತದೆ
-ಮೊಳಕೆ ಕಾಳು ಬರಿಸಿದ ಕಾಳನ್ನು ಎಷ್ಟು ತಿಂದರೂ ಒಳ್ಳೆಯದು.
-ಈ ವೇಳೆ ಹೆಚ್ಚು ಮೊಸರನ್ನು ಸೇವಿಸಿ
-ಹೆಚ್ಚು ಮಾಂಸಾಹಾರ ತಿಂದರೆ ಮಾಂಸಖಂಡಗಳು ಉಬ್ಬುವುದಿಲ್ಲ. ಎಷ್ಟು ಬೇಕೋ ಅಷ್ಟೇ ತಿನ್ನಿ. ಈ ಬಗ್ಗೆ ಜಿಮ್ ಟ್ರೈನರ್ ಏನು ಹೇಳುತ್ತಾನೋ ಕೇಳಿ
ಖಾಲಿ ಹೊಟ್ಟೆಗೆ ಇವನ್ನು ತಿನ್ಬೇಡಿ!
ಖಾಲಿ ಹೊಟ್ಟೆಗೆ ಏನೂ ತಿಂದರೆ ನಡೆಯುತ್ತೆ ಅನ್ನೋ ಪಾಲಿಸಿಯವರು ನಾವೆಲ್ಲ. ಆದರೆ, ಇದು ತಪ್ಪು. ಹೊಟ್ಟೆ ಫುಲ್ ಖಾಲಿಯಿದ್ದಾಗ ಕೆಲವೊಂದು ಆಹಾರಗಳನ್ನು ಮೊದಲು ತಿನ್ನಲೇಬಾರದು ಎನ್ನುತ್ತದೆ ವೈದ್ಯವಿಜ್ಞಾನ. ಈ ಆಹಾರಗಳು ದೇಹದೊಳಗೆ ಸೇರಿ ಸೃಷ್ಟಿಸುವ ಅವಾಂತರಗಳು ಸಾಕಷ್ಟು. ಹಾಗಾದ್ರೆ, ಆಹಾರಗಳು ಯಾವುವು?
- ಕಾಫಿ ಟೀ: ಕಾಫಿಯಲ್ಲಿರುವ ಕೇಫಿನ್, ಟೀಯಲ್ಲಿರುವ ಟೀನಿನ್ ಅಂಶ ಹೊಟ್ಟೆಗೆ ಮೊದಲು ಸೇರಿದರೆ ಜಠರ ರಸಗಳು ಇನ್ನಷ್ಟು ಆಮ್ಲೀಯಗೊಳ್ಳುತ್ತವೆ. ಮೊದಲು ನೀರು ಕುಡಿದು, ಚಹಾ ಕಾಫಿ ಸೇವಿಸಿ.
- ಬಾಳೇಹಣ್ಣು: ಈ ಹಣ್ಣಿನಲ್ಲಿ ಮೆಗ್ನೀಶಿಯಂ ಅಂಶ ಹೆಚ್ಚಿದೆ. ಇದು ಜಠರದಲ್ಲಿ ಜೀರ್ಣಗೊಂಡು ರಕ್ತವನ್ನು ಸೇರಿದಾಗ ಅಲ್ಲಿನ ಮೆಗ್ನೀಶಿಯಂ ಅಂಶದ ಏರುಪೇರಿಗೆ ಕಾರಣವಾಗುತ್ತದೆ. ಅಜೀರ್ಣ ತಲೆದೋರಬಹುದು.
- ಸೋಡಾ: ಈ ಪಾನೀಯ ಸೇವನೆ ಖಾಲಿ ಹೊಟ್ಟೆಗೆ ಭಾರಿ ಅಪಾಯ. ಇದರಲ್ಲಿರುವ ಕಾರ್ಬನ್ ಡೈ ಆಕ್ಸೈಡ್ ಅನ್ನನಾಳ ಮತ್ತು ಜಠರವನ್ನು ತಲುಪಿ ಕಿರಿಕಿರಿ ಸೃಷ್ಟಿಸುತ್ತದೆ. ವಾಕರಿಗೆ ಶುರುವಾಗುತ್ತದೆ.
- ಟೊಮೇಟೋ: ಈ ಹಣ್ಣಿನಲ್ಲಿರುವ ಆಮ್ಲೀಯ ರಸಗಳು, ಜಠರ ರಸದೊಂದಿಗೆ ಬೆರೆತು ಬುರುಗಿನಂಥ ವಸ್ತುವನ್ನು ಉತ್ಪತ್ತಿ ಮಾಡುತ್ತವೆ. ಇದು ಕ್ಯಾನ್ಸರ್‍ಯುಕ್ತ ಗಡ್ಡೆಯ ಹುಟ್ಟಿಗೂ ಕಾರಣವಾಗಬಹುದು.
- ಮದ್ಯ: ಬರೀ ಹೊಟ್ಟೆಗ ಮದ್ಯವನ್ನು ಸೇವಿಸುವುದರಿಂದ ಕರುಳುಗಳು ಸುಡಲಾರಂಭಿಸುತ್ತವೆ. ತಲೆಹಿಡಿದುಕೊಳ್ಳುವಂತೆ ಆಗುವುದಲ್ಲದೆ, ಮದ್ಯ ರಕ್ತಕ್ಕೆ ಬೆರೆತಾಗ ಹೃದಯಾಘಾತವೂ ಸಂಭವಿಸಬಹುದು.
- ಔಷಧ: ಖಾಲಿ ಹೊಟ್ಟೆಗೆ ಔಷಧ ತೆಗೆದುಕೊಳ್ಳುವುದೂ ಅಪಾಯವೇ. ಜಠರದ ಗುಣಮಟ್ಟ ಇದರಿಂದ ಕುಸಿಯುತ್ತದೆ. ಜೀರ್ಣಕ್ರಿಯೆಗೆ ನೆರವಾಗುವ ಆಮ್ಲಗಳು ನಿಸ್ತೇಜಗೊಳ್ಳುತ್ತವೆ.
- ಮೊಸರು: ಉಪವಾಸವಿರುವ ಹೊಟ್ಟೆಗೆ ಮೊಸರು ಸೇರಿದಾಗ ಉಬ್ಬರಿಕೆ ಕಂಡುಬರುತ್ತದೆ. ನಂತರ ತಿನ್ನುವ ಆಹಾರದ ಜೀರ್ಣಕ್ರಿಯೆಗೆ ಇದು ತಡೆ ತರಬಹುದು. ತಲೆನೋವಿಗೂ ಕಾರಣ ಆಗಬಹುದು.
ವಿಜಿಯಂತೆ ನಿರಂತರ ಜಿಮ್
ನಂಟಿದ್ದರೆ ನೋ ಪ್ರಾಬ್ಲಂ ನಟ ದುನಿಯಾ ವಿಜಯ್ ಗೆ ಈಗ 41 ವರುಷ. ಇವರಿಗೆ ಜಿಮ್ ಟ್ರೈನರ್ ಆಗಿರುವ ಪಾನಿಪುರಿ ಕಿಟ್ಟಿ ವಿಜಿಗಾಗಿ ಸ್ಪೆಷಲ್ ಮೆನು ಫಿಕ್ಸ್ ಮಾಡಿದ್ದಾರೆ. ದಿನಕ್ಕೆ 12 ಮೊಟ್ಟೆ, 600 ಗ್ರಾಂ ಮೀನು, 3 ಸೇಬು, 3 ಮೂಸುಂಬಿ ಜ್ಯೂಸ್, ಸ್ಲಿಮ್ ಮಿಲ್ಕ್, ಮಧ್ಯಾಹ್ನದ ನಂತರ ಮೊಳಕೆಕಾಳು, ಹಸಿ ತರಕಾರಿ, ಸೊಪ್ಪು. ವಿಜಿಯಂತೆ ನೀವೂ ಸೇವಿಸಬೇಕಂತಿಲ್ಲ. ಯಾಕೆಂದರೆ, ವಿಜಿ ಚಿಕ್ಕಂದಿನಿಂದಲೂ ಜಿಮ್ ಜೊತೆಗೆ ಬೆಳೆದವರು. ಬಾಡಿಬ್ಯುಲ್ಡರ್ ಆದವರು. ನೀವು ಈಗಷ್ಟೇ ಜಿಮ್ಗೆ ಎಂಟ್ರಿ ಕೊಟ್ಟವರು. ಜಿಮ್ ಜತೆ ನಿರಂತರ ನಂಟು ಇಟ್ಟುಕೊಂಡಿದ್ದರೆ ಯಾವ ಅಪಾಯವೂ ಇರುವುದಿಲ್ಲ. ಆದರೆ, ಅದಕ್ಕೆ ತಕ್ಕನಾಗಿ ಆಹಾರಕ್ರಮ ಅನುಸರಿಸುತ್ತಿರಬೇಕಷ್ಟೇ. ಕೇವಲ ಜಿಮ್ ಅಭ್ಯಾಸ ನಡೆಸಿ, ಆಹಾರ ಸೇವನೆಯಲ್ಲಿ ಹಿಂದುಳಿದರೆ ನಿಶ್ಶಕ್ತಿ ಆವರಿಸುತ್ತದೆ. ಕಣ್‍ಕತ್ತಲೆ ಬಂದು ಬೀಳುವ ಅಪಾಯವಿರುತ್ತದೆ.
Advertisement