ಎಚ್ಚರ; ಬ್ರೆಡ್, ಬನ್, ಪಿಜ್ಜಾ ಅಷ್ಟೇ ಏಕೆ ಪಾವ್ ಕೂಡ ಕ್ಯಾನ್ಸರ್ ತರಬಲ್ಲವು!

ಬೇಕರಿ ತಿನಿಸುಗಳ ಪ್ರಿಯರಿಗೆ ಇಲ್ಲೊಂದು ಶಾಕಿಂಗ್ ಸುದ್ದಿಇದ್ದು, ನಿತ್ಯ ಇಷ್ಟ ಪಟ್ಟು ತಿನ್ನುವ ಬ್ರೆಡ್‌, ಬನ್‌, ಪಿಜ್ಜಾ, ಬರ್ಗರ್‌ ಹಾಗೂ ಪಾವ್‌ಗಳನ್ನು ತಿಂದರೆ ಅವು ಮಾರಕ ಕ್ಯಾನ್ಸರ್ ಖಾಯಿಲೆಗೆ ಕಾರಣವಾಗಬಲ್ಲವು ಎಂದು ವರದಿಯೊಂದು ಹೇಳಿದೆ.
ಬ್ರೆಡ್ ಪಿಜ್ಜಾ ಬರ್ಗರ್ ನಿಂದ ಮಾರಕ ಕ್ಯಾನ್ಸರ್ (ಸಂಗ್ರಹ ಚಿತ್ರ)
ಬ್ರೆಡ್ ಪಿಜ್ಜಾ ಬರ್ಗರ್ ನಿಂದ ಮಾರಕ ಕ್ಯಾನ್ಸರ್ (ಸಂಗ್ರಹ ಚಿತ್ರ)

ನವದೆಹಲಿ: ಬೇಕರಿ ತಿನಿಸುಗಳ ಪ್ರಿಯರಿಗೆ ಇಲ್ಲೊಂದು ಶಾಕಿಂಗ್ ಸುದ್ದಿಇದ್ದು, ನಿತ್ಯ ಇಷ್ಟ ಪಟ್ಟು ತಿನ್ನುವ ಬ್ರೆಡ್‌, ಬನ್‌, ಪಿಜ್ಜಾ, ಬರ್ಗರ್‌ ಹಾಗೂ ಪಾವ್‌ಗಳನ್ನು ತಿಂದರೆ ಅವು ಮಾರಕ ಕ್ಯಾನ್ಸರ್  ಖಾಯಿಲೆಗೆ ಕಾರಣವಾಗಬಲ್ಲವು ಎಂದು ವರದಿಯೊಂದು ಹೇಳಿದೆ.

ಈ ವರದಿಯನ್ನು ನಂಬಲು ಕಷ್ಟವಾದರೂ ಇದು ಸತ್ಯ. ಖ್ಯಾತ ಕೊಕಾಕೋಲಾ ಸಂಸ್ಥೆಯ ಪಾನೀಯಗಳಾದ ಪೆಪ್ಸಿ, ಕೋಕ್‌ ನಂತಹ ಪಾನೀಯಗಳಲ್ಲಿ ವಿಷಕಾರಿ ಅಂಶಗಳಿವೆ ಎಂದು ಕೆಲವು  ವರ್ಷಗಳ ಹಿಂದೆ ವರದಿ ನೀಡಿ ಸಂಚಲನ ಮೂಡಿಸಿದ್ದ ವಿಜ್ಞಾನ ಮತ್ತು ಪರಿಸರ ಕೇಂದ್ರ (ಸಿಎಸ್‌ಇ) ಸಂಸ್ಥೆ ಈ ಗಂಭೀರ ವರದಿ ನೀಡಿದ್ದು, ದೆಹಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ರಸಿದ್ಧ  ಸಂಸ್ಥೆಗಳ ಬ್ರಾಂಡ್‌ಗಳ ಸುಮಾರು 38 ಬ್ರೆಡ್‌, ಬನ್‌, ಪಾವ್‌, ಪಿಜ್ಜಾ, ಬರ್ಗರ್‌ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಈ ಆಘಾತಕಾರಿ ಅಂಶ ಹೊರಬಿದ್ದಿದೆ. ಸಂಸ್ಥೆ ಪರೀಕ್ಷಿಸಿದ ತಿನಿಸುಗಳ  ಪೈಕಿ ಶೇ.84ರಲ್ಲಿ ಹಲವು ದೇಶಗಳಲ್ಲಿ ನಿಷೇಧಕ್ಕೊಳಗಾಗಿರುವ, ಅತ್ಯಂತ ಅಪಾಯಕಾರಿಯಾದ ಪೊಟಾಶಿಯಂ ಬ್ರೋಮೇಟ್‌ ಹಾಗೂ ಪೊಟಾಶಿಯಂ ಅಯೋಡೇಟ್‌ನಂತಹ ಅಂಶಗಳು  ಪತ್ತೆಯಾಗಿದ್ದು, ಈ ವಿಷಯ ಬಹಿರಂಗವಾಗುತ್ತಿದ್ದಂತೆ ಕೇಂದ್ರ ಸರ್ಕಾರ ತನಿಖೆಗೆ ಆದೇಶಿಸಿದೆ.

ಏನಿದು ಪೊಟಾಶಿಯಂ ಬ್ರೊಮೇಟ್?
ಪೊಟಾಶಿಯಂ ಬ್ರೊಮೇಟ್ ಎಂಬುದು ಒಂದು ರಾಸಾಯನಿಕವಾಗಿದ್ದು, ತಿನಿಸುಗಳ ರುಚಿಗೆ ಮತ್ತು ಅವು ಮೃದುವಾಗಿರಲೆಂದುಹ ಹೆಚ್ಚಿನ ಬೇಕರಿ ಸಂಸ್ಥೆಗಳು ಇವುಗಳನ್ನು ಬಳಕೆ ಮಾಡುತ್ತವೆ. ಈ  ಪೊಟಾಶಿಯಂ ಬ್ರೋಮೇಟ್‌ ಎಂಬುದು ಮಾನವರಲ್ಲಿ ಕ್ಯಾನ್ಸರ್‌ ತರಬಲ್ಲದು ಎಂದು ಈಗಾಗಲೇ ವಿಶ್ವಮಟ್ಟದಲ್ಲಿ ಆರೋಗ್ಯ ಸಂಸ್ಥೆಗಳಿಂದ ನಿರ್ಧಾರವಾಗಿದೆ. ಪೊಟಾಶಿಯಂ ಅಯೋಡೇಟ್‌ನಿಂದ  ಥೈರಾಯ್ಡ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಥೈರಾಯ್ಡ್ ಕ್ಯಾನ್ಸರ್‌ ಕೂಡ ಬರಬಲ್ಲದು. ಇದೇ ಕಾರಣಕ್ಕಾಗಿ ವಿಶ್ವದ ನಾನಾ ದೇಶಗಳಲ್ಲಿ ಈ ಅಪಾಯಕಾರಿ ಪೊಟಾಶಿಯಂ ಬ್ರೊಮೇಟ್  ರಾಸಾಯನಿಕವನ್ನು ನಿಷೇಧಿಸಲಾಗಿದೆ. ಆದರೆ ಇವುಗಳ ಬಳಕೆಗೆ ಭಾರತದಲ್ಲಿ ಮಾತ್ರ ನಿಷೇಧ ಹೇರಲಾಗಿಲ್ಲ ಎಂದು ಸಿಎಸ್‌ಇ ತಿಳಿಸಿದೆ.

ಪ್ಯಾಕ್‌ ಆಗಿರುವ ಬ್ರೆಡ್‌, ಪಾವ್‌ ಹಾಗೂ ಬನ್‌, ರೆಡಿ- ಟು- ಈಟ್‌ ಬರ್ಗರ್‌ ಬ್ರೆಡ್‌, ರೆಡಿ-ಟು- ಈಟ್‌ ಪಿಜ್ಜಾ ಬ್ರೆಡ್‌ಗಳ 38 ಮಾದರಿಗಳನ್ನು ರಾಜಧಾನಿ ದೆಹಲಿಯ ಜನಪ್ರಿಯ ಫಾಸ್ಟ್‌ಫ‌ುಡ್‌  ಮಳಿಗೆಗಳಿಂದ ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ ಶೇ.84ರಷ್ಟು ಅಂದರೆ 32 ಮಾದರಿಗಳಲ್ಲಿ ಅಪಾಯಕಾರಿ ಅಂಶಗಳು ಪತ್ತೆಯಾಗಿವೆ. ಆದಾಗ್ಯೂ ಅದನ್ನು ಖಚಿತಪಡಿಸಿಕೊಳ್ಳಲು  ಮತ್ತೊಂದು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಯಿತು. ಅಲ್ಲೂ ಅಪಾಯಕಾರಿ ಅಂಶಗಳು ದೃಢಪಟ್ಟಿವೆ. ಬ್ರೆಡ್‌ಗಳ ಮೇಲಿನ ಲೇಬಲ್‌ ಪರಿಶೀಲಿಸಿ, ಸಂಬಂಧಿಸಿದ ಉದ್ಯಮ ಹಾಗೂ  ವಿಜ್ಞಾನಿಗಳಿಗೆ ವಿಷಯ ತಿಳಿಸಲಾಗಿದೆ ಎಂದು ಸಿಎಸ್‌ಇ ಉಪ ಮಹಾನಿರ್ದೇಶಕ ಚಂದ್ರ ಭೂಷಣ್‌ ತಿಳಿಸಿದ್ದಾರೆ.

ಇದೇ ವೇಳೆ ಪೊಟಾಶಿಯಂ ಬ್ರೋಮೇಟ್‌ ಹಾಗೂ ಪೊಟಾಶಿಯಂ ಅಯೋಡೇಟ್‌ಗಳನ್ನು ತಕ್ಷಣವೇ ನಿಷೇಧಿಸಬೇಕು ಎಂದು ಆಹಾರ ಸುರಕ್ಷತಾ ಪ್ರಾಧಿಕಾರ ಎಫ್ಎಸ್‌ಎಸ್‌ಎಐ ಅನ್ನು ಅವರು  ಒತ್ತಾಯಿಸಿದ್ದಾರೆ.

ತನಿಖಾ ವರದಿ ಬಳಿಕ ಕ್ರಮ
ಇವ್ವು ಸಿಎಸ್‌ಇ ವರದಿ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು, ವಿಷಯ ನಮ್ಮ ಗಮನಕ್ಕೆ ಬಂದಿದೆ. ತುರ್ತಾಗಿ ಈ ಕುರಿತು ವರದಿ ನೀಡುವಂತೆ ತಿಳಿಸಿದ್ದೇನೆ.  ಗಾಬರಿಗೆ ಒಳಗಾಗಬೇಕಾದ ಅಗತ್ಯವಿಲ್ಲ. ತನಿಖಾ ವರದಿಯ ಮಾಹಿತಿಯನ್ನು ಶೀಘ್ರದಲ್ಲೇ ತಿಳಿಸುತ್ತೇನೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com