ಸಾಂದರ್ಭಿಕ ಚಿತ್ರ
ಆರೋಗ್ಯ
ಮೃದು, ತ್ವಚೆಭರಿತ ತುಟಿ ರಕ್ಷಣೆಗೆ ಇಲ್ಲಿವೆ ಕೆಲವು ಸಲಹೆಗಳು
ಚಳಿಗಾಲ ಆರಂಭವಾಗಿದೆ, ಈ ಸಮಯದಲ್ಲಿ ನಾವು ನಮ್ಮ ತುಟಿಗಳ ರಕ್ಷಣೆಗೆ ವಿಶೇಷ ಕಾಳಜಿ...
ಚಳಿಗಾಲ ಆರಂಭವಾಗಿದೆ, ಈ ಸಮಯದಲ್ಲಿ ನಾವು ನಮ್ಮ ತುಟಿಗಳ ರಕ್ಷಣೆಗೆ ವಿಶೇಷ ಕಾಳಜಿ ವಹಿಸುವುದು ಅಗತ್ಯ. ಸಾಕಷ್ಟು ನೀರು ಕುಡಿಯುವುದು, ತುಟಿಗೆ ಬೆಣ್ಣೆ, ತುಪ್ಪ ಸವರುವುದರಿಂದ, ನಾಲಗೆಯ ಉತ್ತಮ ಆರೈಕೆ ಮಾಡುವುದರಿಂದ ತುಟಿ ಒಡೆಯುವ ಸಮಸ್ಯೆಯಿಂದ ದೂರ ಉಳಿಯಬಹುದು.
ಅಭಿಷೇಕ್ ರಾಜ್ ಎನ್ನುವ ಮುಖದ ಸೌಂದರ್ಯ ತಜ್ಞ ಕೆಲವು ಸಲಹೆಗಳನ್ನು ನೀಡುತ್ತಾರೆ:
ಸಾಕಷ್ಟು ನೀರು ಕುಡಿಯಿರಿ: ಚಳಿಗಾಲದಲ್ಲಿ ಚರ್ಮ ಬೇಗನೆ ಒಣಗುತ್ತದೆ. ಸಾಕಷ್ಟು ನೀರು ಕುಡಿಯುವುದರಿಂದ ಆ ಸಮಸ್ಯೆಯನ್ನು ಬಹುತೇಕ ಕಡಿಮೆ ಮಾಡಬಹುದು. ತುಟಿಗೂ ಇದೇ ಕ್ರಮವನ್ನು ಅಳವಡಿಸಿಕೊಳ್ಳಬೇಕು. ಸಾಮಾನ್ಯವಾಗಿ ಜನರು ಬೇಸಿಗೆಯಲ್ಲಿ ಹೆಚ್ಚು ನೀರು ಕುಡಿಯುತ್ತಾರೆ, ಚಳಿಗಾಲದಲ್ಲಿ ನೀರು ಸೇವಿಸುವ ಪ್ರಮಾಣ ಕಡಿಮೆಯಾಗುತ್ತದೆ. ಚಳಿಗಾಲದಲ್ಲಿ ಬೆವರುವುದು ಮತ್ತು ಬಾಯಾರಿಕೆಯಾಗುವುದು ಕಡಿಮೆ. ಹಾಗೆಂದು ಬಾಯಾರಿಕೆಯಾಗುವುದಿಲ್ಲವೆಂದು ನೀರು ಕುಡಿಯದೆ ಇರಬಾರದು, ಚರ್ಮ ಮತ್ತು ತುಟಿ ಒಣಗಿಹೋಗದಂತೆ ನೋಡಿಕೊಳ್ಳಲು ನೀರು ಅತ್ಯಗತ್ಯ.
ನಿಮ್ಮ ನಾಲಗೆಯ ಕಾಳಜಿ ಮುಖ್ಯ: ಅನೇಕರಿಗೆ ನಾಲಿಗೆಯಿಂದ ತುಟಿಯನ್ನು ಆಗಾಗ ನೆಕ್ಕುತ್ತಿರುವ ಅಭ್ಯಾಸವಿರುತ್ತದೆ. ತುಟಿಗಳು ಒಣಗಿದರೆ ಈ ಅಭ್ಯಾಸ ಹೆಚ್ಚಾಗುತ್ತದೆ. ಆದರೆ ಹೀಗೆ ಮಾಡುವುದರಿಂದ ತುಟಿ ಇನ್ನಷ್ಟು ಒಡೆಯುತ್ತದೆ ಮತ್ತು ತುಟಿ ಒಣಗಿ ಹೋಗುತ್ತದೆ.
ವಿಟಮಿನ್ ಬಿ ಕೊರತೆಯನ್ನು ನಿವಾರಿಸಿ:ವಿಟಮಿನ್ ಬಿ ಇರುವ ಪದಾರ್ಥಗಳನ್ನು ಕಡಿಮೆ ಸೇವಿಸುವುದರಿಂದ ಹೊಟ್ಟೆಯ ಪಚನ ಕ್ರಿಯೆ ಮೇಲೆ ಪರಿಣಾಮ ಬೀರುವುದಲ್ಲದೆ ತುಟಿಯ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ. ತುಟಿ ಮತ್ತು ಬಾಯಿಯ ಮೂಲೆಗಳು ಕೆಲವೊಮ್ಮೆ ಒಡೆದು ಹೋಗುತ್ತವೆ ಇದಕ್ಕೆ ವಿಟಮಿನ್ ಬಿ ಕೊರತೆ ಕಾರಣವಾಗಿದ್ದು ಇದರಿಂದ ಬಾಯಿ ಅಲ್ಸರ್ ಕೂಡ ಬರಬಹುದು. ಹೆಚ್ಚೆಚ್ಚು ವಿಟಮಿನ್ ಬಿ ಅಂಶವಿರುವ ಪದಾರ್ಥಗಳನ್ನು ತೆಗೆದುಕೊಳ್ಳುವುದರಿಂದ ಚಳಿಗಾಲದಲ್ಲಿ ತುಟಿಯ ರಕ್ಷಣೆ ಮಾಡಿಕೊಳ್ಳಬಹುದು.
ಧೂಮಪಾನದಿಂದ ದೂರವಿರಿ: ಹೆಚ್ಚೆಚ್ಚು ಸಿಗರೇಟು ಸೇವಿಸುತ್ತಿದ್ದರೆ ನಿಮ್ಮ ತುಟಿ ಕಪ್ಪಾಗುವುದಲ್ಲದೆ, ತುಟಿ ಒಣಗುತ್ತದೆ. ಅವ್ಯಾಹತ ಸಿಗರೇಟು ಸೇವನೆ ಮತ್ತು ಕಾಫಿ ಸೇವನೆ ಅಭ್ಯಾಸವಿರುವವರ ತುಟಿ ಸಾಮಾನ್ಯವಾಗಿ ಕಪ್ಪಾಗಿರುತ್ತದೆ.
ತೊಳೆಯುತ್ತಿರಿ: ತುಟಿಯನ್ನು ಆರೋಗ್ಯವಂತವಾಗಿ ಚೆನ್ನಾಗಿ ಇಟ್ಟುಕೊಳ್ಳಲು ಸ್ಕ್ರಬ್ ನಿಂದ ಆಗಾಗ ತೊಳೆಯುತ್ತಿರಿ. ಅದು ತುಟಿಯಲ್ಲಿನ ಅನವಶ್ಯಕ ಕೋಶಗಳನ್ನು ಸ್ವಚ್ಛಗೊಳಿಸಿ ತೇವವಾಗಿ ಇಟ್ಟುಕೊಳ್ಳುವಂತೆ ಮಾಡುತ್ತದೆ. ತುಟಿಯ ಅನವಶ್ಯಕ ಡೆಡ್ ಸೆಲ್ ಗಳನ್ನು ತೆಗೆಯಲು ಸಕ್ಕರೆ ಪುಡಿಗೆ ಆಲಿವ್ ಎಣ್ಣೆ ಅಥವಾ ಜೇನು ಬೆರೆಸಿ ಹಚ್ಚುತ್ತಿರಿ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ