ಹದಿಹರೆಯದ ಗರ್ಭಧಾರಣೆ ತಾಯಿ-ಮಗುವಿನ ಆರೋಗ್ಯದ ಮೇಲೆ ಪರಿಣಾಮ: ವೈದ್ಯಕೀಯವಾಗಿ ದೃಢ

ಕರ್ನಾಟಕದಲ್ಲಿ ವರ್ಷಕ್ಕೆ ಸುಮಾರು 9.5 ಲಕ್ಷ ಶಿಶುಗಳು ಜನಿಸುತ್ತಿದ್ದು, ಕಳೆದ ವರ್ಷ 19 ವರ್ಷಕ್ಕಿಂತ ಕೆಳಗಿನ 6,714 ಮಂದಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು: ಕರ್ನಾಟಕದಲ್ಲಿ ವರ್ಷಕ್ಕೆ ಸುಮಾರು 9.5 ಲಕ್ಷ ಶಿಶುಗಳು ಜನಿಸುತ್ತಿದ್ದು, ಕಳೆದ ವರ್ಷ 19 ವರ್ಷಕ್ಕಿಂತ ಕೆಳಗಿನ 6,714 ಮಂದಿ ಮಹಿಳೆಯರು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿನ ಆರೋಗ್ಯ ವಿಚಾರದಲ್ಲಿ ಹೆರಿಗೆ ಸಂದರ್ಭದಲ್ಲಿ ತಾಯಿಯ ವಯಸ್ಸು ತುಂಬಾ ಮುಖ್ಯವಾಗಿರುತ್ತದೆ ಮತ್ತು ಶಿಶು ಮರಣ, ಪೆರಿನಾಟಲ್ ಮರಣ (ಗರ್ಭಾವಸ್ಥೆಯ 22 ವಾರಗಳಿಂದ ಜನನದ ನಂತರ ಏಳು ದಿನಗಳ), ಜನನ ಮತ್ತು ಗರ್ಭಪಾತಗಳಿಗೆ ಬಹಳ ಹತ್ತಿರದ ಸಂಬಂಧವನ್ನು ಹೊಂದಿರುತ್ತದೆ.
ಕಳೆದ ವರ್ಷ 19 ಕ್ಕಿಂತ ಕಡಿಮೆ ವಯಸ್ಸಿನಲ್ಲಿ ಹೆರಿಗೆಯಾದ ಮಹಿಳೆಯರಲ್ಲಿ ದಕ್ಷಿಣ ಕರ್ನಾಟಕದವರ ಸಂಖ್ಯೆ ಜಾಸ್ತಿಯಾಗಿತ್ತು. ಚಿಕ್ಕಬಳ್ಳಾಪುರದಲ್ಲಿ 1,449 ಮಹಿಳೆಯರು, ಯಾದಗಿರಿಯಲ್ಲಿ 1,062, ಮಂಡ್ಯದಲ್ಲಿ 1,056, ಚಾಮರಾಜನಗರದಲ್ಲಿ 660 ಮತ್ತು ಮೈಸೂರಿನಲ್ಲಿ 582 ಮಹಿಳೆಯರು 19 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ.
ಹೆಣ್ಣು ಮಕ್ಕಳಿಗೆ ಮದುವೆಯಾಗಿ ಹೆರಿಗೆಯಾಗಲು 18 ವರ್ಷ ಕಾನೂನು ರೀತ್ಯಾ ಒಪ್ಪಿಗೆಯಾದರೂ ಕೂಡ ವೈದ್ಯರು 20 ವರ್ಷದ ನಂತರವಷ್ಟೇ ಹೆರಿಗೆಗೆ ಶಿಫಾರಸು ಮಾಡುತ್ತಾರೆ. ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯ ಮಕ್ಕಳ ವೈದ್ಯಶಾಸ್ತ್ರದ ವಿಭಾಗದ ಮುಖ್ಯಸ್ಥೆ ಪ್ರೇಮಲತಾ ಆರ್ ಅವರು ಹೇಳುವ ಪ್ರಕಾರ, ವೈದ್ಯಕೀಯ ದೃಷ್ಟಿಕೋನದಿಂದ ತರುಣಾವಸ್ಥೆಯ ನಂತರ ಮಹಿಳೆಯರು ಗರ್ಭತಾಳುವುದು ಉತ್ತಮ. ತಾಯಿಯೇ ಸಂಪೂರ್ಣವಾಗಿ ಪ್ರೌಢಿಮೆ ಹೊಂದದಿರುವಾಗ ಮಗು ಅಪಕ್ವವಾಗಿ ಹುಟ್ಟುವ ಸಾಧ್ಯತೆಯಿದೆ.
ತಾಯಿ ಗರ್ಭಾವಸ್ಥೆಯಲ್ಲಿ ರಕ್ತ ಕ್ಷೀಣತೆಯಿಂದ ಬಳಲುವ ಸಾಧ್ಯತೆಯಿದೆ. 18 ಅಥವಾ 19ರ ಬದಲು 20ನೇ ವಯಸ್ಸಲ್ಲಿ ತಾಯಿ ಗರ್ಭತಾಳಲು ನಾವು ಶಿಫಾರಸು ಮಾಡುತ್ತೇವೆ ಎನ್ನುತ್ತಾರೆ.
ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ನಿರ್ದೇಶಕಿ ಡಾ.ಆಶಾ ಬೆನಕಪ್ಪ, ಪ್ರೌಢಾವಸ್ಥೆಯಲ್ಲಿ ಗರ್ಭತಾಳುವುದು ಕೇವಲ ಮಹಿಳೆಯ ವಯಸ್ಸಿಗೆ ಸಂಬಂಧಪಟ್ಟ ವಿಷಯ ಮಾತ್ರವಲ್ಲ. 16 ವರ್ಷಕ್ಕಿಂತ ಕೆಳಗೆ ಗರ್ಭ ಧರಿಸಿದರೆ ಅದನ್ನು ವೈದ್ಯಕೀಯದಲ್ಲಿ ಹದಿಹರೆಯದ ಗರ್ಭಧಾರಣೆ ಎಂದು ಕರೆಯುತ್ತೇವೆ. ತಾಯಿಯ ತೂಕ ಮತ್ತು ಎತ್ತರವನ್ನು ಇಲ್ಲಿ ಪರಿಗಣಿಸಲಾಗುತ್ತದೆ. ಉದಾಹರಣೆಗೆ ತಾಯಿಯ ತೂಕ 40 ಕೆಜಿಗಿಂತ ಕಡಿಮೆಯಿದ್ದು ಎತ್ತರ 145 ಸೆಂಮೀಗಿಂತ ಕಡಿಮೆಯಿದ್ದರೆ ಹುಟ್ಟುವ ಮಗುವಿನ ತೂಕ ಕಡಿಮೆಯಾಗಿರುತ್ತದೆ.
ಎರಡೂವರೆ ಕೆಜಿಗಿಂತ ಕಡಿಮೆಯಿರುತ್ತದೆ. ಚಿಕ್ಕ ವಯಸ್ಸಿನ ತಾಯಂದಿರಲ್ಲಿ ಗರ್ಭಾಶಯದ ಒಳಗಿನ ಬೆಳವಣಿಗೆಯಲ್ಲಿ ಕುಂಠಿತವಿರುತ್ತದೆ. ನಮ್ಮ ದೇಶದಲ್ಲಿ ಶೇಕಡಾ 75ರಷ್ಟು ತಾಯಂದಿರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ತಾಯಿಯ ಅಪೌಷ್ಟಿಕತೆ ಕೂಡ ಒಂದು ಸವಾಲಾಗಿದೆ. ಎರಡನೆಯದಾಗಿ, ಹೆಣ್ಣು ತಾಯ್ತನಕ್ಕೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಿದ್ದವಾಗಿರಬೇಕು. ಅದು ಮಹಿಳೆಗೆ ತನ್ನಷ್ಟಕ್ಕೇ ಬರುತ್ತದೆ ಎನ್ನುತ್ತಾರೆ.
ತಾಯಿಯ ಆರೋಗ್ಯದ ಉಪ ನಿರ್ದೇಶಕ ಡಾ.ರಾಜ್ ಕುಮಾರ್ ಎನ್ ಹೇಳುವ ಪ್ರಕಾರ, ಕರ್ನಾಟಕದಲ್ಲಿ ವರ್ಷಕ್ಕೆ ಹುಟ್ಟುವ ಸುಮಾರು 9.5 ಲಕ್ಷ ಮಕ್ಕಳಲ್ಲಿ ಶೇಕಡಾ 2.5ರಷ್ಟು ಹದಿಹರೆಯದಲ್ಲಿ ಗರ್ಭಧಾರಣೆಯಾಗಿ ಹುಟ್ಟುವ ಮಕ್ಕಳಾಗಿವೆ.  ಚಿಕ್ಕ ವಯಸ್ಸಿನಲ್ಲೇ ಮದುವೆ, ಬಡತನ, ಅನಕ್ಷರತೆ, ಬಡತನ, ಸಾಮಾಜಿಕ ಅಭದ್ರತೆ ಕೆಲವು ಕಾರಣಗಳು ಇವಕ್ಕೆ ಕಾರಣವಾಗಿರುತ್ತವೆ. 18 ವರ್ಷಕ್ಕೆ ಮದುವೆಯಾದರೆ ಮದುವೆಯಾದ ಕೂಡಲೇ ಮಕ್ಕಳಾಗಬೇಕೆಂಬ ಸಂಪ್ರದಾಯ ನಮ್ಮಲ್ಲಿದೆ. ಮೊದಲ ಮಗು ತಡವಾಗಿ ಹುಟ್ಟಿದರೆ ಮತ್ತು ಮೊದಲ ಮಗು ಮತ್ತು ಎರಡನೇ ಮಗುವಿನ ಮಧ್ಯೆ ಅಂತರ ಇದ್ದರೆ ನಮ್ಮಲ್ಲಿ ಅನೇಕರು ಇಷ್ಟಪಡುವುದಿಲ್ಲ. ಆದರೆ ಬೇಗನೆ ಮದುವೆಯಾದ ಮಹಿಳೆಯರು ಈ ನಿಯಮ ಅನುಸರಿಸಿದರೆ ತಾಯಿ ಮತ್ತು ಹುಟ್ಟುವ ಮಗುವಿನ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು. 
ಕಾನೂನಿನ ಭಯವಿಲ್ಲದಿರುವುದು: ಗರ್ಭ ಧರಿಸಿದ ಮಹಿಳೆ ಚಿಕ್ಕ ವಯಸ್ಸಿನವರಾಗಿದ್ದು ಸರ್ಕಾರಿ ಆರೋಗ್ಯ ಸೌಲಭ್ಯಕ್ಕೆ ಮನೆಯವರು ಕರೆದುಕೊಂಡು ಬಂದಾಗ ಆರೋಗ್ಯ ಇಲಾಖೆ ಅಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಕ್ಷಣಾ ಇಲಾಖೆಯ ಗಮನಕ್ಕೆ ತಂದಿರುವುದಿಲ್ಲ. ನಮ್ಮ ರಾಜ್ಯದ ಅನೇಕ ತಾಲ್ಲೂಕುಗಳಲ್ಲಿ ಇಂದಿಗೂ ಹದಿಹರೆಯದ ಹೆರಿಗೆಗಳು ನಡೆಯುತ್ತಿರುತ್ತವೆ. ಯಾವುದೇ ವೈದ್ಯಕೀಯ ಕಾನೂನು ಕೇಸುಗಳು ದಾಖಲಾಗಿರುವುದಿಲ್ಲ. 18 ವರ್ಷಕ್ಕೆ ಹೆರಿಗೆಗೆ ಬಂದ ಯುವತಿಯನ್ನು ಆಕೆ ಇನ್ನೂ ಚಿಕ್ಕವಳೆಂದು ಪರಿಗಣಿಸುವುದಿಲ್ಲ.
ಹಾಸನದ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ.ಜನಾರ್ಧನ್ ಹೆಚ್.ಎಲ್ ಹೇಳುವ ಪ್ರಕಾರ, ಎಷ್ಟು ಪ್ರೌಢಾವಸ್ಥೆಯ ಹೆರಿಗೆ ಕೇಸುಗಳು ಗಮನಕ್ಕೆ ಬರುತ್ತವೆ? ಹಾಸನದಲ್ಲಿ ಇದುವರೆಗೆ ಒಂದು ಕೂಡ ದಾಖಲಾಗಿಲ್ಲ. ಆರೋಗ್ಯ ಇಲಾಖೆಯಲ್ಲಿ ತಾಯಿ ಮತ್ತು ಮಗುವಿನ ಸಂಪೂರ್ಣ ವಿವರ, ಸಂಪರ್ಕ ಸಂಖ್ಯೆಗಳಿರುತ್ತವೆ. ಹಾಗಾಗಿ ಅವರನ್ನು ಪತ್ತೆಹಚ್ಚುವುದು ಕಷ್ಟವೇನಲ್ಲ ಎನ್ನುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com