ಬಂಜೆತನ ನಿವಾರಣೆಗೆ ಆಯುರ್ವೇದ ಚಿಕಿತ್ಸೆ

ವಿಜ್ಞಾನ ಎಷ್ಟೊಂದು ಮುಂದುವರಿದಿದ್ದರೂ ಎಷ್ಟೋ ದಂಪತಿಗಳ ಪಾಲಿಗೆ ತಮ್ಮ ಕರುಳ ಕುಡಿಯನ್ನು ಪಡೆಯುವುದು ದೂರದ ಮಾತೇ ಸರಿ.
ಬಂಜೆತನ ನಿವಾರಣೆಗೆ ಆಯುರ್ವೇದ ಚಿಕಿತ್ಸೆ

ವಿಜ್ಞಾನ ಎಷ್ಟೊಂದು ಮುಂದುವರಿದಿದ್ದರೂ ಎಷ್ಟೋ ದಂಪತಿಗಳ ಪಾಲಿಗೆ ತಮ್ಮ ಕರುಳ ಕುಡಿಯನ್ನು ಪಡೆಯುವುದು ದೂರದ ಮಾತೇ ಸರಿ. ವಿಜ್ಞಾನ ಮುಂದುವರಿದಂತೆ ವೈದ್ಯಕೀಯ ಚಿಕಿತ್ಸೆಗೂ ಸಂಪೂರ್ಣವಾಗಿ ವಿಜ್ಞಾನನವನ್ನೋ ಅಳವಡಿಸಿಕೊಂಡಿರುವ ಈ ದಿನಗಳಲ್ಲಿ ಯಾವುದೇ ಅಡ್ಡ ಪರಿಣಾಮಗಳು ಇಲ್ಲದಂತಹ ಆಯುರ್ವೇದದ ಚಿಕಿತ್ಸೆ ನೀಡಿ ಬಂಜೆತನದ ಪಟ್ಟ ನಿವಾರಿಸುವುದನ್ನೇ ಕಾಯಕವಾಗಿಸಿಕೊಂಡಿದ್ದಾರೆ ತಿ.ನರಸೀಪುರ ತಾಲ್ಲೂಕಿನ ಚನ್ನಬಸವಯ್ಯನ ಹುಂಡಿಯ ಮಲ್ಲಿಕಾರ್ಜುನ ಮಠದ ಮಹಾದೇವಾರಾಧ್ಯ ಸ್ವಾಮಿಗಳು. ವಂಶ ಪಾರಂಪರ್ಯವಾಗಿ ಬೆಳೆದು ಬಂದಿರುವ ಶಿವಶಕ್ತಿ ಪ್ರಯೋಗ ಎಂಬ ಆಯುರ್ವೇದದ ಔಷಧದಿಂದಲೇ ಎಷ್ಟೋ ಮಹಿಳೆಯರಿಗೆ ತಾಯ್ತನದ ಸುಖ ನೀಡುತ್ತಿದೆ ಈ ಕುಟುಂಬ. ತಮ್ಮ ಹಿರಿಯರ ಮಾರ್ಗವನ್ನೇ ಇಂದಿಗೂ ಅನುಸರಿಸುತ್ತಾ ಬಂದಿರುವ ಈ ಕುಟುಂಬ ಗಿಡಮೂಲಿಕೆಗಳಿಂದಲೇ ಔಷಧಿ ಸಿದ್ಧಪಡಿಸುತ್ತಾರೆ.

ಬಡವ, ಶ್ರೀಮಂತರೆನ್ನದೆ ಎಲ್ಲಾ ದಂಪತಿಗಳು ತಮ್ಮ ಕರುಳ ಕುಡಿಗಾಗಿ ಹಾತೊರೆಯುತ್ತಾರೆ. ಇಂದಿನ ಯಾಂತ್ರಿಕ ಬದುಕಿನಲ್ಲಿ ಬಂಜೆತನದ ಪ್ರಮಾಣ ಹೆಚ್ಚುತ್ತಿದೆ. ಇದಕ್ಕೆ ವೈಜ್ಞಾನಿಕ ಚಿಕಿತ್ಸೆಗಳು ನೂರಾರಿವೆ. ಆದರೆ ಎಲ್ಲರಿಗೂ ಈ ಚಿಕಿತ್ಸೆಗಳು ಹೊಂದುವುದಿಲ್ಲ, ಸೂಕ್ಷ್ಮ ಮನಃಸ್ಥಿತಿ ಅಥವಾ ಅವರ ಆರೋಗ್ಯಕ್ಕೆ ಸಂಬಂಧಿಸಿ ವೈಜ್ಞಾನಿಕ ಚಿಕಿತ್ಸೆಗಳಲ್ಲಿ ಅಡ್ಡ ಪರಿಣಾಮಗಳು ಉಂಟಾಗುವ ಸಾಧ್ಯತೆಗಳು ಒಂದು ಕಡೆಯಾದರೆ, ಆರ್ಥಿಕ ಪರಿಸ್ಥಿತಿ ಮುಗ್ಗಟ್ಟು ಇನ್ನೊಂದೆಡೆ.

ಆದರೂ ಮಕ್ಕಳಿಗಾಗಿ ಎಷ್ಟೆಲ್ಲಾ ಖರ್ಚಾದರೂ ಪರವಾಗಿಲ್ಲ ಎಂದು ಒಂದು ಮಗುವನ್ನು ಪಡೆಯುವುದು ಪ್ರತಿ ದಂಪತಿಯ ಹಂಬಲ. ತಹ ಮನಃಸ್ಥಿತಿ ಇದ್ದರೂ, ಚಿಕಿತ್ಸೆಯ ಖರ್ಚನ್ನೇ ಯೋಚಿಸುತ್ತಾ ಈ ಚಿಕಿತ್ಸೆ ಫಲಕಾರಿಯಾಗದೆ ಇರುವಂತಹ ಸಾಧ್ಯತೆಗಳೂ ಇವೆ. ಇಂತಹ ದಂಪತಿಗಳಿಗೆ ಯಾವುದೇ ಅಡ್ಡಪರಿಣಾಮಗಳು ಇಲ್ಲದ ಮತ್ತು ಹೆಚ್ಚು ಖರ್ಚು ಇಲ್ಲದಂತಹ ಚಿಕಿತ್ಸೆಯೆಂದರೆ ಆಯುರ್ವೇದದ ಚಿಕಿತ್ಸೆ. ಇಂದು ಪ್ರನಾಳ ಶಿಶುವೆಂಬ ದುಬಾರಿ ವಿಧಾನ ಹೊರತುಪಡಿಸಿದರೆ, ನಿಖರವಾಗಿ ಈ ದಂಪತಿಗಳಿಗೆ ಮಕ್ಕಳಾಗುವಂತೆ ಚಿಕಿತ್ಸೆ ನೀಡುತ್ತೇನೆಂಬ ಮಾತು ಹೇಳುವ ವೈದ್ಯರೂ ಅಪರೂಪವೇ. ಇಂತಹ ಸನ್ನಿವೇಶದಲ್ಲಿ ಚನ್ನಬಸವಯ್ಯನಹುಂಡಿಯ ಶ್ರೀಗಳು, ಕೇವಲ ಆಯುರ್ವೇದದಿಂದ ತಯಾರಾದ ಗಿಡಮೂಲಿಕೆಗಳ ಔಷಧಿಯಿಂದ ತಾಯ್ತನದ ವರ ನೀಡುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.

ಹಿನ್ನೆಲೆ: ತಿ. ನರಸೀಪುರ ತಾಲ್ಲೂಕಿನಲ್ಲಿರುವ ಈ ಚನ್ನಬಸವಯ್ಯನ ಹುಂಡಿ ಹಳ್ಳಿಯಲ್ಲಿ ವೀರಶೈವ ಧರ್ಮ ಪರಂಪರೆಯುಳ್ಳ ಪಂಚಾಚಾರ್ಯರು ಸ್ಥಾಪಿಸಿದ ಮಲ್ಲಿಕಾರ್ಜನ ಮಠವಿದೆ. ಈ ಮಠದಲ್ಲಿಯೇ ವಾಸವಿರುವ ಕುಟುಂಬ 500 ವರ್ಷಗಳಿಂದಲೂ ಯಾವುದೇ ಪ್ರಚಾರವಿಲ್ಲದೆ ತಮ್ಮದೇ ಆದ ಕಾಯಕದಲ್ಲಿ ತೊಡಗಿದೆ. ಆಯುರ್ವೇದದ ಮೂಲಕ ಬಂಜೆಯ ಬವಣೆ ನೀಗುವುದು ಇವರ ಮುಖ್ಯ ಕಾಯಕ.

ಬಾಳೆಎಲೆ ಮಲ್ಲಿಕಾರ್ಜುನ ಮಠವೆಂದೇ ಖ್ಯಾತಿ ಪಡೆದ ಈ ಮಠದಲ್ಲಿ ಈಗ ಕೈಂಕರ್ಯ ನಡೆಸುತ್ತಿರುವವರು ಮಹಾದೇವ ಆರಾಧ್ಯ ಸ್ವಾಮಿಗಳು. ತಲೆಮಾರಿನ ಪದ್ಧತಿಯನ್ನು ಉಳಿಸಿಕೊಂಡು ಬಂದಿರುವ ಈ ಮಲ್ಲಿಕಾರ್ಜುನ ಮಠ, ಶಿವಶಕ್ತಿ ಪ್ರಯೋಗ ಎಂಬ ಹೆಸರಿನ ಈ ಚಿಕಿತ್ಸೆ ನೀಡುತ್ತಾ ಸೇವೆಯಲ್ಲಿ ನಿರತವಾಗಿದೆ.

ಚಿಕಿತ್ಸಾ ವಿಧಾನ: ಮೊದಲಿಗೆ ಚಿಕಿತ್ಸೆಗೆ ಬರುವ ದಂಪತಿಗಳಿಗೆ ಚಿಕಿತ್ಸಾ ವಿಧಾನದಲ್ಲಿ ನಂಬಿಕೆ ಬರುವಂತೆ ತಿಳಿಹೇಳಿ ದಂಪತಿಗಳ ಒಪ್ಪಿಗೆ ಪಡೆದೇ ಚಿಕಿತ್ಸೆಯನ್ನು ಆರಂಭಿಸುತ್ತಾರೆ. ಸಂತಾನ ಪ್ರಾಪ್ತಿಯಲ್ಲಿ ಮುಖ್ಯವಾಗಿ ದೋಷದ ಗುರುತು ಪತ್ತೆಹಚ್ಚಬೇಕಾಗುತ್ತದೆ. ಇದಕ್ಕೆ ತಮ್ಮದೇ ಆದ ಕೆಲವ ವಿಧಾನಗಳನ್ನು ಅಳವಡಿಸಿಕೊಂಡಿರುವ ಸ್ವಾಮಿಗಳು, ಮೊದಲು ಸ್ತ್ರೀಗೆ ಔಷಧೋಪಚಾರದ ಮೂಲಕ ಪ್ರಾರಂಭಿಸುತ್ತಾರೆ. ಈ ಹಂತದಲ್ಲಿ ಪ್ರಥಮವಾಗಿ ಸ್ತ್ರೀಯ ಋತುಚಕ್ರದಲ್ಲಿನ ದೋಷಗಳೇನಾದರು ಇದ್ದಲ್ಲಿ ಅದನ್ನು ಸಾಮಾನ್ಯವಾಗಿ ದಿನನಿತ್ಯ ಉಪಯೋಗಿಸುವ ಗಿಡಮೂಲಿಕೆಗಳಿಂದ ತಯಾರಿಸಿದ ಔಷಧಿಗಳ ಮೂಲಕ ನಿವಾರಿಸಿ ಸರಿಪಡಿಸುತ್ತಾರೆ. ನಂತರ ಮೂರು ತಿಂಗಳು ವಿಶಿಷ್ಟ ರೀತಿಯ ಔಷಧೋಪಚಾರ ಪ್ರಾರಂಭಿಸಿ ಅದರ ಮೂಲಕ ಸ್ತ್ರೀಯ ದೇಹದಲ್ಲಿ ಪೂರ್ಣ ಪ್ರಮಾಣದಲ್ಲಿ ಅಂಡಾಣುಗಳು ಬಿಡುಗಡೆ, ಗರ್ಭಕೋಷದಲ್ಲಿರುವ ವಾತ, ಶೀತ, ಪಿತ್ತ, ಉಷ್ಣಗಳ ದೋಷಗಳನ್ನು ಹಾಗು ವಿಶಿಷ್ಟ ಶಿವಶಕ್ತಿ ಪ್ರಯೋಗದಿಂದ ವೀರ್ಯಾಣುಗಳ ದೋಷ ಪರಿಹಾರವನ್ನು ಮಾಡಲು ಪ್ರಯತ್ನಿಸುತ್ತಾರೆ.
ಹೀಗೆ ಔಷಧಿ ತೆಗೆದುಕೊಂಡ ಸಾಮಾನ್ಯ ಸ್ತ್ರೀಯು ಈ ಔಷಧ ತೆಗೆದುಕೊಂಡ ನಂತರ ತನ್ನಲ್ಲಿ ಆದ ಬದಲಾವಣೆಯನ್ನು ವಿವರಿಸಿದರೆ, ಇದನ್ನು ಪರಿಶೀಲಿಸಿ ಕಳೆದ ಮೂರು ತಿಂಗಳಲ್ಲಿ ಔಷಧದಿಂದ ಮಹಿಳೆಯ ಆರೋಗ್ಯದ ಮೇಲಾದ ಪರಿಣಾಮಗಳನ್ನು ಗಮನಿಸಿ ಮುಂದಿನ ಕ್ರಮವನ್ನು ಕೈಗೂಳ್ಳುತ್ತಾರೆ.

ಮಕ್ಕಳಾಗದ ಕಾರಣಕ್ಕೆ ಹೆಣ್ಣು ಗಂಡು ಇಬ್ಬರೂ ಸಹ ಕಾರಣರು. ಹಾಗೇನಾದರು ದೋಷವಿದ್ದಲ್ಲಿ ಇಬ್ಬರಿಗೂ ಸಹ ಔಷಧೋಪಚಾರ ಅವಶ್ಯಕತೆ ಇರುತ್ತದೆ.
ಅಲ್ಲದೆ ಸ್ತ್ರೀಯರಲ್ಲಿನ ಗುಣಲಕ್ಷಣಗಳು ಸ್ವಾಭಾವಿಕವಾಗಿ ಅಥವಾ ಔಷಧೋಪಚಾರದಿಂದ ಗರ್ಭ ಧರಿಸುವ ಸ್ಥಿತಿಯಲ್ಲಿದ್ದೂ ಸಹ ವ್ಯತ್ಯಯ ಕಂಡುಬಂದಲ್ಲಿ, ಪುರುಷರನ್ನೂ ಔಷಧೋಪಚಾರಗಳಿಗೆ ಗುರಿಪಡಿಸುತ್ತಾರೆ.

ಮಹಿಳೆಗೆ ಚಿಕಿತ್ಸೆ ಶುರು ಮಾಡಿದ ಮೂರು ತಿಂಗಳ ನಂತರ, ಅಗತ್ಯವಿದ್ದಲ್ಲಿ ಪುರುಷರಿಗೂ ಮೂರು ತಿಂಗಳ ಚಿಕಿತ್ಸೆ ನೀಡುವರು. ಈ ಚಿಕಿತ್ಸೆ ಪ್ರಮುಖವಾಗಿ ಹೆಚ್ಚಿನ ರಕ್ತದ ಉತ್ಪತ್ತಿ, ಮಾನಸಿಕ ದೃಢತೆ, ನರದೌರ್ಬಲ್ಯ ನಿವಾರಣೆಗೆ ನೆರವಾಗುವುದಲ್ಲದೆ, ಪುರುಷರಲ್ಲಿನ ಸಣ್ಣಪುಟ್ಟ ವ್ಯತ್ಯಾಸಗಳನ್ನು ಸರಿಪಡಿಸುತ್ತದೆ. ಹಾಗೇನಾದರು ಸಂತಾನ ಪ್ರಾಪ್ತಿಯ ತೊಂದರೆಗಳಿದ್ದಲ್ಲಿ ನಿವಾರಣೋಪಾಯಗಳನ್ನು ಅನುಸರಿಸಲು ಹೇಳುತ್ತಾರೆ.

ಸ್ತ್ರೀ ಗರ್ಭ ಧರಿಸಿದ ನಂತರ ಮುಂದಿನ ತಪಾಸಣೆಗೆ ವೈದ್ಯರ ಸಲಹೆ ಪಡೆಯುವಂತೆ ತಿಳಿಸುತ್ತಾರೆ. ಈಗ ಜಾರಿಯಲ್ಲಿರುವ ಎಲ್ಲಾ ರೋಗ ನಿರೋಧಕ ಚುಚ್ಚುಮದ್ದುಗಳನ್ನು ಪಡೆಯುವಂತೆ ಸಲಹೆ ನೀಡುತ್ತಾರೆ. ಗರ್ಭ ಧರಿಸಿದ ಸಂದರ್ಭದಲ್ಲಿ ವೈದ್ಯರ ಸಲಹೆ ಅತ್ಯಗತ್ಯ ಎನ್ನುವ ಸ್ವಾಮಿಗಳು, ಈ ಸಮಯದಲ್ಲಿ ಸತ್ಸಂಗ, ಸದ್ ಗ್ರಂಥಗಳ ಪಾರಾಯಣ, ಮಧುರಸಂಗೀತ, ಶುಚಿರುಚಿ ಹಾಗು ಪುಷ್ಟಿಕರ ಭೋಜನ, ಮಾನಸಿಕ ಸಂತುಲನಗಳನ್ನು ಕಾಪಾಡಿಕೊಳ್ಳುವಂತೆ ಸಲಹೆ ನೀಡುತ್ತಾರೆ.

ಖರ್ಚು-ವೆಚ್ಚ: ವ್ಯವಸಾಯವನ್ನೇ ನಂಬಿರುವ ಇವರು ಪೂರ್ವಜರ ಮಾರ್ಗವನ್ನು ಮುಂದುವರಿಸುವ ಹಂಬಲ ಹೊಂದಿದವರು. ಈ ಚಿಕಿತ್ಸೆಗೆ ದುಡ್ಡೇ ಮುಖ್ಯವಲ್ಲ ಎನ್ನುವ ಇವರು, ತಾವು ಮಾಡುವ ಚಿಕಿತ್ಸೆಗೆ ಇಂತಿಷ್ಟೇ ಎಂದು ಯಾವುದೇ ಶುಲ್ಕವನ್ನೂ ಇದುವರೆಗೂ ನಿಗದಿಪಡಿಸಿಲ್ಲ. ಅವರವರ ಶಕ್ತಿಯನುಸಾರ ಔಷಧ ಖರ್ಚನ್ನು ನೀಡಬಹುದು. ತುಂಬಾ ಅನುಕೂಲಸ್ಥರಲ್ಲದಿದ್ದರೂ ಹೃದಯ ವೈಶಾಲ್ಯಕ್ಕೇನೂ ಕೊರತೆಯಿಲ್ಲ. ಹೆಚ್ಚಿನ ವಿವರಗಳಿಗೆ: 08227-271101, 94481 76851 ಸಂಪರ್ಕಿಸಬಹುದು.

ಇದೇ ಸತ್ಯ, ಅಂತಿಮ ಎಂಬ ಅಭಿಪ್ರಾಯ ನಮ್ಮದಲ್ಲ. ವೈದ್ಯವಿಜ್ಞಾನದಲ್ಲಿ ನುರಿತವರು, ಸಂಶೋಧನೆಯಲ್ಲಿ ಆಸಕ್ತಿ ಇರುವವರು ಈ ಬಗ್ಗೆ ವೈಜ್ಞಾನಿಕ ವಿವೇಚನೆ ನಡೆಸಿ ಸತ್ಯ ಹೊರಗೆಡಹಬಹುದೆಂಬ ದೂರಾಲೋಚನೆಯೂ ಈ ಲೇಖನದ್ದಾಗಿದೆ. ಈ ಮಠದ ಬಗೆಗಿನ ಪರಿಚಯಾತ್ಮಕ ಬರಹ ಇದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com