ಕಂಪ್ಯೂಟರ್ ದೃಷ್ಟಿ ಸಮಸ್ಯೆ ನಿಯಂತ್ರಣಕ್ಕೆ 10 ಮಾರ್ಗಗಳು

ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಲ್ಯಾಪ್ ಟಾಪ್, ಟ್ಯಾಬ್ಲೆಟ್ಸ್, ಸ್ಮಾರ್ಟ್ ಫೋನ್ , ಇ-ರೀಡರ್ ಗಳಂತಹ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಲ್ಯಾಪ್ ಟಾಪ್, ಟ್ಯಾಬ್ಲೆಟ್ಸ್, ಸ್ಮಾರ್ಟ್ ಫೋನ್ , ಇ-ರೀಡರ್ ಗಳಂತಹ ಡಿಜಿಟಲ್ ಸಾಧನಗಳು ನಮ್ಮ ದಿನನಿತ್ಯ ಜೀವನದಲ್ಲಿ ಅವಿಭಾಜ್ಯ ಅಂಗಗಳಾಗಿ ಮಾರ್ಪಾಡಾಗಿವೆ. ನಮ್ಮ ದಿನನಿತ್ಯದ ಕೆಲಸಗಳಲ್ಲಿ ಬಹುತೇಕ ಕೆಲಸಗಳು ಕಂಪ್ಯೂಟರ್ ನ್ನು ಅವಲಂಬಿತವಾಗಿವೆ. ಇದರ ಜೊತೆಗೆ ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಮಾಧ್ಯಮಗಳ ಅಭಿವೃದ್ಧಿಯಿಂದಾಗಿ ನಾವು ದಿನದ ಬಹುತೇಕ ಸಮಯವನ್ನು ಕಂಪ್ಯೂಟರ್, ಸ್ಮಾರ್ಟ್ ಫೋನ್ ಗಳ ಮುಂದೆ ಕಳೆಯುವಂತಾಗಿದೆ.
ಇತ್ತೀಚೆಗೆ ಬ್ಯಾಂಕ್ ಆಫ್ ಅಮೆರಿಕಾ ನಡೆಸಿದ ಅಧ್ಯಯನ ಪ್ರಕಾರ, ಹೆಚ್ಚೆಚ್ಚು ತಂತ್ರಜ್ಞಾನಗಳ ಬಳಕೆಯಿಂದ ಜನರಿಗೆ ವಿಶ್ವದಾದ್ಯಂತ ಸಮಸ್ಯೆಗಳು ಎದುರಾಗುತ್ತಿರುವುದು ಕಂಡುಬರುತ್ತಿದೆ. ಬೆಳಗ್ಗೆ ಹಾಸಿಗೆಯಿಂದ ಎದ್ದ ತಕ್ಷಣ ಮೊಬೈಲ್ ಫೋನ್ ಗಳನ್ನು ಕೈಗೆತ್ತಿಕೊಳ್ಳುವುದರಿಂದ ಹಿಡಿದು ರಾತ್ರಿ ಮಲಗುವವರೆಗೆ ಡಿಜಿಟಲ್ ಪರದೆಯ ಮುಂದೆ ಜನರು ಬಹುತೇಕ ಸಮಯಗಳನ್ನು ಕಳೆಯುವುದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.
ಕಂಪ್ಯೂಟರ್, ಸ್ಮಾರ್ಟ್ ಫೋನ್ ಗಳ ಮೂಲಕ ಸಂವಹನ ಹೆಚ್ಚಾದಂತೆ ಕಂಪ್ಯೂಟರ್ ವಿಷನ್ ಸಿಂಡ್ರೊಮ್ ಎಂಬ ಕಾಯಿಲೆ ಮನುಷ್ಯನಲ್ಲಿ ಕಾಣಿಸಿಕೊಳ್ಳುತ್ತದೆ. ಅಂದರೆ ಮನುಷ್ಯನ ದೃಷ್ಟಿ ಮೇಲೆ ಪರಿಣಾಮ ಬೀರಿ ಕಣ್ಣಿನ ಸಮಸ್ಯೆಗಳು ತಲೆದೋರುತ್ತವೆ. ಈ ಕಾಯಿಲೆಯ ಕೆಲವು ಲಕ್ಷಣಗಳೆಂದರೆ ಮಂದ ದೃಷ್ಟಿ, ಕಣ್ಣುಗಳು ದಣಿಯುವುದು, ತಲೆನೋವು, ಕುತ್ತಿಗೆ ನೋವು ಮತ್ತು ಕಣ್ಣುಗಳ ತೇವ ಆರುವುದು ಇತ್ಯಾದಿಗಳು.
ಹಾಗಾದರೆ ಈ ಸಮಸ್ಯೆಗಳಿಂದ ನಿವಾರಣೆ ಹೇಗೆ ಮತ್ತು ಅನಿವಾರ್ಯ ಪರಿಸ್ಥಿತಿಯಲ್ಲಿ ತಂತ್ರಜ್ಞಾನವನ್ನು ಸುರಕ್ಷಿತವಾಗಿ ಹೇಗೆ ಬಳಸಬಹುದು ಎಂಬುದಕ್ಕೆ ಇಲ್ಲಿದೆ ಪರಿಹಾರಗಳು:
1. ಕಂಪ್ಯೂಟರ್ ಪರದೆ ಮೇಲೆ ಕುಳಿತುಕೊಳ್ಳುವ ಸಮಯದ ಬಗ್ಗೆ ಜಾಗ್ರತೆಯಿರಲಿ. ರಾತ್ರಿ ಮಲಗುವ ಹೊತ್ತಿಗೆ ಕತ್ತಲೆಯಲ್ಲಿ ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್ ನೋಡುವ ಬದಲು ಅವುಗಳಿಂದ ಆದಷ್ಟು ದೂರವಿರಿ. ಕೆಲಸ ಕಾರ್ಯಗಳ ಅಗತ್ಯಗಳಿಗೆ ಮಾತ್ರ ಮೊಬೈಲ್, ಕಂಪ್ಯೂಟರ್ ಗಳನ್ನು ಬಳಸಿ. ಬೇಸರವಾಗುತ್ತಿದೆ, ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲವೆಂದು ಗ್ಯಾಜೆಟ್ ಗಳನ್ನು ಬಳಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಡಿ.
2. 20-20-20 ನಿಯಮವನ್ನು ಅನುಸರಿಸಿ: ಕಚೇರಿ ಕೆಲಸಗಳಿಗೆ ಅಥವಾ ಉನ್ನತ ವ್ಯಾಸಂಗಗಳಲ್ಲಿ ಪ್ರಾಜೆಕ್ಟ್ ಕೆಲಸಗಳಿಗೆ ದಿನದಲ್ಲಿ 10 ಗಂಟೆಗಳ ಕಾಲ ಕಂಪ್ಯೂಟರ್ ಪರದೆಯನ್ನು ನೋಡಬೇಕಾದ ಅನಿವಾರ್ಯತೆಯಿರಬಹುದು. ಕಂಪ್ಯೂಟರ್ ಮುಂದಿನ ಕೆಲಸಗಳ ಅವಧಿಯನ್ನು ಕಡಿತ ಮಾಡಲು ಸಾಧ್ಯವಿಲ್ಲದ ಸಂದರ್ಭದಲ್ಲಿ 20-20-20 ನಿಯಮವನ್ನು ಪಾಲಿಸಿರಿ. ಪ್ರತಿ 20 ನಿಮಿಷಗಳಿಗೊಮ್ಮೆ 20 ಸೆಕೆಂಡುಗಳ ಕಾಲ ವಿರಾಮ ತೆಗೆದುಕೊಂಡು ಕಂಪ್ಯೂಟರ್ ನಿಂದ 20 ಅಡಿ ದೂರದಲ್ಲಿ ಬೇರೆ ವಿಷಯಗಳು ಮತ್ತು ವಸ್ತುಗಳ ಮೇಲೆ ನಿಮ್ಮ ಕಣ್ಣುಗಳನ್ನು ಹರಿಸಿ. ಇದರಿಂದ ಕಣ್ಣಿಗೆ ಆಯಾಸ ಕಡಿಮೆ ಮಾಡಬಹುದಲ್ಲದೆ ನೀವು ಸಕ್ರಿಯರಾಗಿರುವಂತೆ ಮಾಡುತ್ತದೆ.
3. ಕಣ್ಣುಗಳಿಗೆ ವ್ಯಾಯಾಮ ನೀಡಿ: ನಿಮ್ಮ ಕಣ್ಣುಗಳು ಆಗಾಗ ಮಂಜು ಮಂಜು ಆದಂತೆ ಕಣ್ಣುಗಳನ್ನು ತಿಕ್ಕಬೇಕು ಅನಿಸುತ್ತಿರುತ್ತದೆಯೇ? ಕಂಪ್ಯೂಟರ್ ಪರದೆ ಮೇಲೆ ಮತ್ತು ಮೊಬೈಲ್ ಫೋನ್ ಗಳು ಹೆಚ್ಚೆಚ್ಚು ಬಳಸುತ್ತಿರುವವರ ಕಣ್ಣುಗಳು ಕಿರಿಕಿರಿಯಾದಂತೆ, ಮಂಜು ಕವಿದಂತೆ ಭಾಸವಾಗಬಹುದು. ಇಂತಹ ಸಮಸ್ಯೆಗಳನ್ನು ಬಗೆಹರಿಸಲು ಕಣ್ಣುಗಳನ್ನು ತಿರುಗಿಸುವುದು, ಆಗಾಗ ಕಣ್ಣುಗಳನ್ನು ಮಿಟುಕಿಸುವುದು ಮತ್ತು ಆಗಾಗ ಕಣ್ಣುಗಳನ್ನು ಬೇರೆಡೆಗೆ ಹರಿಸುವ ಮೂಲಕ ಸ್ವಲ್ಪ ವಿರಾಮ ನೀಡಬಹುದು.
4.ಸೂಕ್ತ ಕನ್ನಡಕ ಬಳಸಿ: ನಿಮ್ಮ ಕಣ್ಣುಗಳಿಗೆ ಆಯಾಸ ಕಡಿಮೆ ಮಾಡಲು ಕಂಪ್ಯೂಟರ್ ನೋಡಲೆಂದೇ ಕನ್ನಡಕಗಳು ಸಿಗುತ್ತವೆ. ಅಂತಹ ಕನ್ನಡಕಗಳನ್ನು ಬಳಸಿ, ಇಂತಹ ಕನ್ನಡಕಗಳು ಕಂಪ್ಯೂಟರ್ ಹೊರಸೂಸುವ ನೀಲಿ ಕಿರಣಗಳನ್ನು ತಡೆಯುತ್ತವೆ.
5. ಕಂಪ್ಯೂಟರ್ ಪರದೆಯ ಸೆಟ್ಟಿಂಗ್ ಗಳನ್ನು ಹೊಂದಾಣಿಕೆ ಮಾಡಿಕೊಳ್ಳಿ: ನಿಮ್ಮ ಬಳಿ ಇರುವ ಕಂಪ್ಯೂಟರ್ ಪರದೆ ಅಥವಾ ಲ್ಯಾಪ್ ಟಾಪ್ ಸೆಟ್ಟಿಂಗ್ ಗಳು ನಿಮ್ಮ ಕಣ್ಣಿಗೆ ಆಯಾಸವನ್ನು ತರುತ್ತಿದ್ದರೆ ಪರದೆಯನ್ನು ಪ್ರಕಾಶಮಾನವಾಗಿಡುವುದು ಅಥವಾ ಬೆಳಕು ಕಡಿಮೆ ಮಾಡುವುದು, ಅಕ್ಷರಗಳ ಗಾತ್ರವನ್ನು ಹೆಚ್ಚು-ಕಡಿಮೆ ಮಾಡುವುದು ಇತ್ಯಾದಿಗಳನ್ನು ಮಾಡಿಕೊಳ್ಳಿ.
6. ಉತ್ತಮ ಬೆಳಕು ಇದೆ ಎಂದು ಖಚಿತಪಡಿಸಿಕೊಳ್ಳಿ: ಕಣ್ಣಿಗೆ ಆಯಾಸವನ್ನು ತಡೆಯಲು ಕೆಲಸದ ಸ್ಥಳದಲ್ಲಿ ಉತ್ತಮ ಬೆಳಕು ಬೇಕು.ಬೆಳಕು, ನೆರಳು ಮತ್ತು ಪ್ರತಿಬಿಂಬಗಳು ಕಣ್ಣಿನ ಒತ್ತಡಕ್ಕೆ ಕಾರಣವಾಗಬಹುದು. ಕಂಪ್ಯೂಟರ್, ಮೊಬೈಲ್ ಪರದೆಯನ್ನು ಹೆಚ್ಚು ಪ್ರಕಾಶಮಾನವಾಗಿ ಇಡದೆ ಕನಿಷ್ಟವಾಗಿಟ್ಟುಕೊಳ್ಳಿ. ವಿದ್ಯುದೀಪಗಳಿಂದ ಅಥವಾ ಕಿಟಕಿಯಿಂದ ಬೆಳಕು ಪ್ರತಿಬಿಂಬವಾಗದಂತೆ ನೋಡಿಕೊಳ್ಳಿ.
7. ನಿಮ್ಮ ಡೆಸ್ಕ್ ನ್ನು ಮರುವ್ಯವಸ್ಥೆ ಮಾಡಿಕೊಳ್ಳಿ: ಕಚೇರಿ, ಮನೆಯಲ್ಲಿ ನೀವು ಡೆಸ್ಕ್ ಟಾಪ್ ನ್ನು ಬಳಸುತ್ತಿದ್ದರೆ ನಿಮ್ಮ ಕಣ್ಣಿನ ಮಟ್ಟಕ್ಕಿಂತ ಕಂಪ್ಯೂಟರ್ ಮಾನಿಟರ್ ಕೆಳಗಿರಲಿ ಮತ್ತು ಕಣ್ಣಿನಿಂದ 20ರಿಂದ 28 ಇಂಚುಗಳಷ್ಟು ದೂರವಿರಲಿ. ಕಂಪ್ಯೂಟರ್ ಪರದೆ ನೋಡಲು ನಿಮ್ಮ ಕೊರಳು ಮತ್ತು ಕಣ್ಣನ್ನು ಮುಂದೆ ಚಾಚುವಂತಾಗಬಾರದು.
8. ಕಣ್ಣಿನ ಪರೀಕ್ಷೆಯನ್ನು ಸೂಕ್ತವಾಗಿ ಮಾಡಿಸಿಕೊಳ್ಳಿ: ನಿಮಗೆ ಪದೇ ಪದೇ ತಲೆನೋವು ಬರುತ್ತಿದ್ದರೆ, ಕಣ್ಣಲ್ಲಿ ನೀರು ಬರುತ್ತಿದ್ದರೆ, ಕಣ್ಣು ಮಂಜಾಗುತ್ತಿದ್ದರೆ ಕಣ್ಣು ಪರೀಕ್ಷೆ ಮಾಡಿಸಿಕೊಳ್ಳಿ. ಕಣ್ಣಿನ ವೈದ್ಯರಿಗೆ ತೋರಿಸುವಾಗ ಮನೆ, ಕಚೇರಿಯಲ್ಲಿ ಎಷ್ಟು ಸಮಯ ಕಂಪ್ಯೂಟರ್ ಮುಂದೆ ಕಳೆಯುತ್ತೀರಿ ಎಂಬುದನ್ನು ಮಾತ್ರ ಹೇಳಲು ಮರೆಯಬೇಡಿ.
9. ಪರ್ಯಾಯ ನೋಡಿಕೊಳ್ಳಿ: ಸಾಮಾಜಿಕ ಮಾಧ್ಯಮಗಳು ಹುಟ್ಟಿಕೊಳ್ಳುವ ಮುನ್ನ ಮನುಷ್ಯನು ಫೋನ್ ಮತ್ತು ಪರಸ್ಪರ ಮುಖಾಮುಖಿಯಾಗಿ ಇಲ್ಲವೇ ಪತ್ರಗಳ ಮೂಲಕ ಸಂವಹನ ನಡೆಸುತ್ತಿದ್ದರು. ಈಗಲೂ ಸಾಧ್ಯವಾದರೆ ಹೆಚ್ಚಾಗಿ ಫೋನ್ ಗಳನ್ನೇ ಬಳಸಿ.
10. ನಡೆದಾಡುತ್ತಾ ಮಾತನಾಡಿ: ಪ್ರಾಜೆಕ್ಟರ್ ನ್ನು ಇರಿಸಿ ಟೇಬಲ್ ಸುತ್ತಲೂ ಕುಳಿತು ತಮ್ಮ ಮುಂದೆ ಲ್ಯಾಪ್ ಟಾಪ್ ಇಟ್ಟುಕೊಂಡು ಸಭೆಯಲ್ಲಿ ಭಾಗವಹಿಸುವ ಬದಲು ವಾಕ್ ಅಂಡ್ ಟಾಕ್ ಮೀಟಿಂಗ್ ಡಿಜಿಟಲ್ ಸಾಧನಗಳಿಂದ ದೂರವುಳಿಯಲು ಸಹಾಯ ಮಾಡಬಹುದು.ಬಾಯಿಮಾತಿಗೆ ಹೆಚ್ಚು ಅವಕಾಶಗಳಿದ್ದು ಅನೇಕ ಆಲೋಚನೆಗಳು ಕೂಡ ಹೊರಬರುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com