ಕಾರ್ಡಿಯಾಕ್ ಸ್ಟೆಂಟ್ ಗಳ ಬೆಲೆಯಲ್ಲಿ ಭಾರಿ ಇಳಿಕೆ

ಈ ಹಿಂದೆ 2018-19ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ಕಾರ್ಡಿಯಾಕ್ ಸ್ಟೆಂಟ್ ಗಳ ಬೆಲೆಯಲ್ಲಿ ಭಾರಿ ಇಳಿಕೆಯಾಗಿದ್ದು, ಔಷಧ ಲೇಪಿತ ಸ್ಟೆಂಟ್‌ಗಳ ಬೆಲೆ 27, 890 ರೂ.ಗೆ ಇಳಿಕೆ ಮಾಡಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಈ ಹಿಂದೆ 2018-19ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ಕಾರ್ಡಿಯಾಕ್ ಸ್ಟೆಂಟ್ ಗಳ ಬೆಲೆಯಲ್ಲಿ ಭಾರಿ ಇಳಿಕೆಯಾಗಿದ್ದು, ಔಷಧ ಲೇಪಿತ ಸ್ಟೆಂಟ್‌ಗಳ ಬೆಲೆ 27, 890 ರೂ.ಗೆ ಇಳಿಕೆ  ಮಾಡಲಾಗಿದೆ.
ಈ ಬಗ್ಗೆ ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರ (ಎನ್‌ಪಿಪಿಎ) ಮಾಹಿತಿ ನೀಡಿದ್ದು, ದುಬಾರಿಯಾಗಿದ್ದ ಕಾರ್ಡಿಯಾಕ್ ಸ್ಟೆಂಟ್ ಗಳ ಬೆಲೆಯನ್ನು 27, 890ರೂಗಳಿಗೆ ಇಳಿಕೆ ಮಾಡಿದೆ. ಅಂತೆಯೇ ಲೋಹದ ಸ್ಟಂಟ್‌ ಗಳ ಬೆಲೆಯಲ್ಲಿ  ಹೆಚ್ಚಳ ಮಾಡಲಾಗಿದ್ದು 7,400 ರಿಂದ 7,660 ರೂಗಳಿಗೆ ದರ ಹೆಚ್ಚಿಸಲಾಗಿದೆ. ಅಂತೆಯೇ ಈ ಬೆಲೆ ಜಿಎಸ್‌ಟಿ ಹೊರತು ಪಡಿಸಿದ ಬೆಲೆಯಾಗಿದೆ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ. ಶೇ. 5 ರಷ್ಟು ಜಿಎಸ್‌ಟಿ ದರ ಹೇರಿಕೆ ಬಳಿಕ  ಡಿಇಎಸ್‌ನ ಬೆಲೆ 29,285 ರೂ.ಗಳಾದರೆ ಲೋಹದ ಸ್ಟೆಂಟ್‌ ಗಳ ದರ 8,043 ರೂ.ಗಳಾಗಲಿದೆ. ಪರಿಷ್ಕೃತ ದರಗಳು 2019ರ ಮಾರ್ಚ್‌ 31ರ ವರೆಗೆ ಚಾಲ್ತಿಯಲ್ಲಿರಲಿವೆ ಎಂದು ತಿಳಿದುಬಂದಿದೆ.
ಕಳೆದ ವರ್ಷ ಫೆಬ್ರವರಿ 14ರಂದು ಡಿಇಎಸ್‌ ಸ್ಟೆಂಟ್‌ ಬೆಲೆಯನ್ನು 30,180 ರು ಹಾಗು ಲೋಹದ ಸ್ಟೆಂಟ್‌ಅನ್ನು 7,400 ರುಗೆ ನಿಗದಿ ಮಾಡಲಾಗಿತ್ತು.
ಎನ್‌ಪಿಪಿಎ ನೀಡಿರುವ ಮಾಹಿತಿಯಂತೆ ದೇಶದಲ್ಲಿ ಶೇ.95ರಷ್ಟು ಸ್ಟೆಂಟ್ ಗಳು ಔಷಧ ಲೇಪಿತ ವಿಎಸ್‌ ಸ್ಟೆಂಟ್‌ಗಳಾದ ಕಾರಣ ಒಟ್ಟಾರೆಯಾಗಿ ಸ್ಟೆಂಟ್‌ ಗಳ ಬೆಲೆ ಇಳಿಕೆ ಮಾಡಲಾಗಿದೆ. ಇನ್ನು ಕಾರ್ಡಿಯಾಕ್ ಸ್ಟೆಂಟ್ ಗಳು  ಮಾತ್ರವಲ್ಲದೇ ಆಂಜಿಯೋಪ್ಲಾಸ್ಟಿಗೆ ಬೇಕಾದ ಔಷಧೀಯ ವಸ್ತುಗಳ ದರಗಳ ಕುರಿತೂ ಎನ್‌ಪಿಪಿಎ ನಿರ್ಧಾರ ಕೈಗೊಂಡಿದ್ದು, ಆಮದು ದರ-ಮಾರಾಟ ದರದ ಮಧ್ಯೆ ಇರುವ ವ್ಯತ್ಯಾಸವನ್ನು ಸಾರ್ವಜನಿಕಗೊಳಿಸಲಾಗಿದೆ. 
ಆಂಜಿಯೋಪ್ಲಾಸ್ಟಿಗೆ ಬೇಕಾದ ಔಷಧೀಯ ವಸ್ತುಗಳ ಕ್ಯಾಥೇಟರ್‌, ಬಲೂನ್‌ ಗಳು ಹಾಗು ಗೈಡ್‌ ವೈರ್‌ ಗಳ ಬೆಲೆಗಳನ್ನು ಆಸ್ಪತ್ರೆ ಬಿಲ್‌ಗಳಲ್ಲಿ ಪ್ರತ್ಯೇಕವಾಗಿ ನಮೂದಿಸಲು ಸೂಚಿಸಲಾಗಿದೆ. ಈ ಔಷಧಿಗಳ ಬೆಲೆಗಳನ್ನು ಖಾಸಗಿ  ಆಸ್ಪತ್ರೆಗಳು ದುಬಾರಿಯಾಗಿ ನಮೂದಿಸುತ್ತಿದ್ದ ಕುರಿತು ವ್ಯಾಪಕ ದೂರುಗಳ ಬಂದ ಹಿನ್ನಲೆಯಲ್ಲಿ ಎನ್ ಪಿಪಿಎ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ. 
ಆಂಜಿಯೋಪ್ಲಾಸ್ಟಿಯನ್ನು ಕೈಗೆಟುಕುವ ದರದಲ್ಲಿ ಸಿಗುವಂತೆ ಮಾಡಲು ಕೇಂದ್ರ ಸರ್ಕಾರ ಔಷಧೀಯ ಪರಿಕರಗಳ ದರದಲ್ಲಿ ಶೇ 85ರಷ್ಟು ಇಳಿಕೆ ಮಾಡಿತ್ತು. ಆದರೆ ಈ ಸ್ಟೆಂಟ್ ಗಳಿಂದಲೇ ಭಾರಿ ಹಣ ಮಾಡುತ್ತಿದ್ದ ಖಾಸಗಿ  ಆಸ್ಪತ್ರೆಗಳು ಸರ್ಕಾರದ ನಡೆಯನ್ನು ತೀವ್ರವಾಗಿ ವಿರೋಧಿಸಿದ್ದವು. 
ಇನ್ನು ಸ್ಟೆಂಟ್ ಗಳ ದರ ಇಳಿಕೆಯಿಂದ ಆಸ್ಪತ್ರೆಗಳ ಆದಾಯಕ್ಕೆ ಎದುರಾಗುವ ಕೊರತೆ ನೀಗಿಸಿಕೊಳ್ಳಲು ಖಾಸಗಿ ಆಸ್ಪತ್ರೆಗಳು ತಮ್ಮ ಸೇವಾ ದರಗಳನ್ನು ಏರಿಕೆ ಮಾಡಿವೆ ಎಂಬ ವಾದ ಕೂಡ ಕೇಳಿ ಬರುತ್ತಿದ್ದು, ಪ್ರಸ್ತುತ ಭಾರತದಲ್ಲಿ  ಔಷಧಿಗಳ ದರ ನಿಯಂತ್ರಣಕ್ಕೆ ಕಾನೂನು ಇದೆಯಾದರೂ ಆಸ್ಪತ್ರೆಗಳ ಸೇವಾದರ ನಿಯಂತ್ರಣಕ್ಕೆ ಕಾನೂನು ಇಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com