ಹದಿಹರೆಯ ಎನ್ನುವುದು ಏಕಾಂತದ ಅಪೇಕ್ಷೆ, ಸ್ವಂತಿಕೆಯ ಸಂಘರ್ಷ, ಸಹವರ್ತಿಗಳ ಆಕರ್ಷಣೆ ಮತ್ತು ಕೆಲವು ಬಾರಿ ಕುಟುಂಬ ಸದಸ್ಯರ ಜೊತೆಗಿನ ಘರ್ಷಣೆಗಳ ಗುಣಲಕ್ಷಣಗಳನ್ನು ಒಳಗೊಂಡಿರುವ ಸಂಕೀರ್ಣ ಘಟ್ಟವಾಗಿದೆ. ಈ ಹಂತದಲ್ಲಿ ಮಕ್ಕಳು ಸ್ವಂತಿಕೆಯ ಬಗ್ಗೆ ಗೊಂದಲವನ್ನು ಹೊಂದಿರುತ್ತಾರೆ. ಪ್ರಶ್ನೆ ಮಾಡದೆಯೇ ಯಾವುದನ್ನು ಒಪ್ಪಿಕೊಳ್ಳುವುದಿಲ್ಲ. ಏನನ್ನಾದರೂ ಮಾಡಿ ಇತರರ ಗಮನವನ್ನು ತಮ್ಮೆಡೆಗೆ ಸೆಳೆಯಲು ಯತ್ನಿಸುತ್ತಿರುತ್ತಾರೆ. ಭಾವನೆಗಳ ಮೇಲೆ ಹತೋಟಿ ಇರುವುದಿಲ್ಲ. ಸ್ವಯಂ ನಿಯಂತ್ರಣದಲ್ಲಿ ಎಡವುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಪೋಷಕರು ಮಕ್ಕಳಿಗೆ ಕೌನ್ಸಿಲಿಂಗ್ ಮಾಡಿಸಬೇಕು. ಅಲ್ಲದೆ, ಜೀವನ ಶೈಲಿಯನ್ನು ಬದಲಾಯಿಸಿಕೊಂಡು ಮಕ್ಕಳಿಗೆ ಪ್ರತೀ ದಿನ ಬೆಳಿಗ್ಗೆ ವ್ಯಾಯಾಮ ಮಾಡುವಂತೆ ತಿಳಿಸುವುದು, ಹೊರಗಿನ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಕೊಳ್ಳುವಂತೆ ಮಾಡುವುದು, ಆರೋಗ್ಯಕರ ಡಯೆಟ್ ಮಾಡುವುದು ಉತ್ತಮವಾಗಿರುತ್ತದೆ ಎಂದು ವೈದ್ಯರು ಸಲಹೆಗಳನ್ನು ನೀಡಿದ್ದಾರೆ.