ಪ್ರಸವ ನಂತರದ ಖಿನ್ನತೆ ಮತ್ತು ಅದರಿಂದಾಗುವ ಸಮಸ್ಯೆಗಳು

ಖಿನ್ನತೆ ಅನ್ನುವುದು ಒಂದು ವೈದ್ಯಕೀಯ ಸ್ಥಿತಿಯಾಗಿದ್ದು, ವ್ಯಕ್ತಿಯ ಭಾವನೆಗೆ, ಯೋಚನೆಗೆ ಹಾಗೂ ಕಾರ್ಯನಿರ್ವಹಣೆಗೆ ವಿರುದ್ಧವಾಗಿ ಪರಿಣಾಮ ಬೀರುವ ಕಾರ್ಯ ಮಾಡುತ್ತದೆ.
ಪ್ರಸವ ನಂತರದ ಖಿನ್ನತೆ (ಚಿತ್ರವನ್ನು ಸಾಂದರ್ಭಿಕವಾಗಿ ಬಳಸಲಾಗಿದೆ)
ಪ್ರಸವ ನಂತರದ ಖಿನ್ನತೆ (ಚಿತ್ರವನ್ನು ಸಾಂದರ್ಭಿಕವಾಗಿ ಬಳಸಲಾಗಿದೆ)

ಖಿನ್ನತೆ ಅನ್ನುವುದು ಒಂದು ವೈದ್ಯಕೀಯ ಸ್ಥಿತಿಯಾಗಿದ್ದು, ವ್ಯಕ್ತಿಯ ಭಾವನೆಗೆ, ಯೋಚನೆಗೆ ಹಾಗೂ ಕಾರ್ಯನಿರ್ವಹಣೆಗೆ ವಿರುದ್ಧವಾಗಿ ಪರಿಣಾಮ ಬೀರುವ ಕಾರ್ಯ ಮಾಡುತ್ತದೆ. ಮನಸ್ಸಿನ ಸ್ಥಿತಿಯನ್ನು ಸದಾ ದುಃಖ ಹಾಗೂ ಒಂಟಿತನದಿಂದ ಬಳಲುವಂತೆ ಮಾಡುತ್ತದೆ. ನೀವು ನಿಜವಾಗಿಯೂ ಯಾವುದೇ ಕ್ರಿಯೆಯಲ್ಲಿ ಸಂತೋಷ ಅನುಭವಿಸುವಕ್ಕೆ ಇದು ಅವಕಾಶ ಮಾಡಿಕೊಡುವುದಿಲ್ಲ. ಅನುಭವಿಸಬೇಕಿರುವ ಸನ್ನಿವೇಶ, ಸಂದರ್ಭ, ಸ್ಥಿತಿಯ ಸಂದರ್ಭದಲ್ಲಿ ಆಸಕ್ತಿಯನ್ನೇ ಕಳೆದುಕೊಳ್ಳುವಂತೆ ಮಾಡುತ್ತದೆ.ಈ ಖಿನ್ನತೆಗೆ ಕಾರಣವಾಗುವ ಅಂಶಗಳು ಮಾನಸಿಕ ಹಾಗೂ ಲೈಂಗಿಕ ಕಿರುಕುಳದ ಹಿನ್ನೆಲೆಯಿಂದ ಸಂಬಂಧಿಸಿದವರ ಮೇಲೆ ಪರಿಣಾಮ ಉಂಟುಮಾಡಿ, ತಮ್ಮಅತ್ಯಂತ ಪ್ರೀತಿಪಾತ್ರರ ಮೇಲಿನ ವಿಶ್ವಾಸ, ಹಿಡಿತವನ್ನೇ ಕಳೆದುಕೊಳ್ಳುವಂತೆ ಮಾಡುತ್ತದೆ. ಪ್ರಸವಾನಂತರ ಅಂದರೆ ಮಗುವಿನ ಜನನದ ನಂತರ ಪೋಷಕರಲ್ಲಿ ಕಂಡುಬರುವ ಖಿನ್ನತೆಯನ್ನು ಇದೇ ಸಮಸ್ಯೆಗೆ ಹೋಲಿಸಿ ಹೇಳಬಹುದಾಗಿದೆ. ಇದನ್ನು ಸೂಕ್ತವಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ. ಬಹುತೇಕ ದಂಪತಿ ಪಾಲಿಗೆ ಒಂದು ಮಗುವಿನ ಜನನ ಅವರ ಬದುಕಿನಲ್ಲಿಯೇ ಅತ್ಯಂತ ಸುಂದರವಾದ ಕ್ಷಣವಾಗಿರುತ್ತದೆ. ಆದರೆ ಇವರಲ್ಲಿ ಕೆಲವರು ಈ ಮಧುರ ಕ್ಷಣದ ಅನುಭವವನ್ನು ನಕಾರಾತ್ಮಕವಾಗಿ ಕೂಡ ಅನುಭವಿಸುತ್ತಾರೆ. ಈ ನಕಾರಾತ್ಮಕ ಭಾವನೆಯ ಪರಿಣಾಮವೇ ಪ್ರಸವಾನಂತರದ ಖಿನ್ನತೆಗೆ ಸಾಮಾನ್ ಯಕಾರಣವಾಗಿ ಮಾರ್ಪಡುತ್ತದೆ.

ಪ್ರಸವಾನಂತರದ ಖಿನ್ನತೆಯು ಹಲವಾರು ರೋಗಲಕ್ಷಣವನ್ನು ಪ್ರಚುರಪಡಿಸುತ್ತದೆ. ಇದರಲ್ಲಿ ಕಿರಿಕಿರಿ, ತೀವ್ರ ದುಃಖ ಅಥವಾ ಹತಾಶೆ, ಅನಿಯಮಿತ ಆಹಾರ ಸೇವನೆ, ಶಕ್ತಿಹೀನತೆ, ಮೂಡಿ ಅಥವಾ ಪ್ರಕ್ಷುಬ್ಧತೆ, ಆಗಾಗ್ಗೆ ಕಾಡುವ ತಲೆನೋವು, ದೈಹಿಕ ನೋವುಗಳು, ಮಗುವಿನೊಂದಿಗೆ ಒಂದೇ ಕಡೆ ಕೂತಿರುವ ತೊಂದರೆ ಹಾಗೂ ಮಗುವಿನ ಆರೈಕೆ ಮಾಡುವ ಸಾಮರ್ಥ್ಯದ ಕುರಿತು ಕೂಡ ಹಲವರಲ್ಲಿ ಅನುಮಾನ ವ್ಯಕ್ತವಾಗುವುದು ಸಮಸ್ಯೆಯ ಪ್ರಮುಖ ಲಕ್ಷಣಗಳು. ಈ ಖಿನ್ನತೆ ಸಮಸ್ಯೆಯು ಸಾಮಾನ್ಯವಾಗಿ ಗರ್ಭಿಣಿಯರಾದ ಎರಡು ಅಥವಾ ಮೂರನೇ ವಾರದ ನಂತರ ಕಾಡಲಾರಂಭಿಸುತ್ತದೆ. ಇನ್ನು ಕೆಲ ಪ್ರಕರಣಗಳಲ್ಲಿ ಪ್ರಸವಾನಂತರ ಒಂದು ತಿಂಗಳಲ್ಲಿ ಇಲ್ಲವೇ ಪ್ರಸವಪೂರ್ವ ಒಂದು ತಿಂಗಳ ಮುನ್ನ ಕಾಡುತ್ತದೆ. ಒಂದೊಮ್ಮೆ ಇದಕ್ಕೆ ಸೂಕ್ತ ಚಿಕಿತ್ಸೆ ಸಿಗದ ಸಂದರ್ಭ, ತಿಂಗಳುಗಳ ಕಾಲ, ವರ್ಷಗಳ ಕಾಲ ಇದರ ಕಾಟ ಇರುತ್ತದೆ. ಗಮನಾರ್ಹ ಸಂಗತಿಯೆಂದರೆ ಇದು ತಾಯಿ ಹಾಗೂ ಮಗುವಿನ ಪ್ರಾಣಕ್ಕೇ ಅಪಾಯ ತಂದಿಡುವ ಸಾಧ್ಯತೆ ಇರುತ್ತದೆ ಎಂದು ಸಕ್ರ ವರ್ಲ್ಡ್ ಆಸ್ಪತ್ರೆಯ ಮನೋವೈದ್ಯ ಸಲಹೆಗಾರರಾದ ಡಾ. ನವೀನ್‍ ಜಯರಾಮ್ ತಿಳಿಸುತ್ತಾರೆ.

ಪ್ರಸವಾನಂತರದ ಖಿನ್ನತೆಗೆ ಬಹುಮುಖ್ಯವಾಗಿ ಗರ್ಭ ಪೂರ್ವ ಹಾಗೂ ಗರ್ಭಾವಸ್ತೆಯಲ್ಲಿ ಉಂಟಾಗುವ ಹಾರ್ಮೋನು ಬದಲಾವಣೆ ಅತ್ಯಂತ ಪ್ರಮುಖ ಕಾರಣ. ಮಹಿಳೆಯರ ಗರ್ಭಾವಸ್ತೆಯಲ್ಲಿ ಈಸ್ಟ್ರೋಜೆನ್ ಹಾಗೂ ಪ್ರೊಜೆಸ್ಟ್ರಾನ್ ಹಂತಗಳು ಉನ್ನತ ಮಟ್ಟದಲ್ಲಿ ಇರುತ್ತವೆ. ಪ್ರಸವದ ನಂತರ ಈ ಹಾರ್ಮೋನ್‍ಗಳು ತಕ್ಷಣ ಇಳಿದು ಹೋಗುತ್ತವೆ. ಹಾಗೂ ಇವು ಸಾಮಾನ್ಯ ಮಟ್ಟಕ್ಕೆ ಬಂದು ನಿಲ್ಲುತ್ತವೆ. ಈ ಮೇಲಿನ ಖಿನ್ನತೆಗೆ ಇದು ಕೂಡ ಕಾರಣ ಎಂದು ಹೇಳಲಾಗುತ್ತದೆ.

ಸಾಮಾನ್ಯವಾಗಿ ತಾಯಂದಿರು ಪಿಪಿಡಿ ಜತೆ ಸಂಬಂಧ ಹೊಂದಿರುತ್ತಾರೆ. ಸಂಶೋಧನೆಗಳ ಅಂದಾಜಿನ ಪ್ರಕಾರ, ತಮ್ಮ ಮಗುವಿನ ಜನನದ ನಂತರ ಶೇ.10ರಷ್ಟು ಪುರುಷರು ಖಿನ್ನತೆಯ ಲಕ್ಷಣಕ್ಕೆ ಒಳಗಾಗುತ್ತಾರೆ. ಹಾಗೂ ಇದನ್ನು ಗುಣಪಡಿಸಿಕೊಳ್ಳಲು ಪುರುಷರು ಮುಂದಾಗದಿದ್ದರೆ, ತಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳಲಾಗದೇ ಮಕ್ಕಳ ಮೇಲೆ ಹಿಂಸಾತ್ಮಕವಾಗಿ ಇವರು ತಿರುಗುತ್ತಾರೆ ಎಂದು ಸಂಶೋಧನೆ ಹೇಳಿದೆ. ಪಿಪಿಡಿಯು ಇಲ್ಲಿ ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ಮಕ್ಕಳು ಕೂಡ ತಾಯಂದಿರಿಂದ ದೂರ ಸರಿಯುವ ಇಲ್ಲವೇ ತಾಯಂದಿರೇ ಮಕ್ಕಳ ಬಗ್ಗೆ ಬೇಸರ ಪಡುವ ಸಾಧ್ಯತೆ ಇರುತ್ತದೆ. ಇದು ಮಕ್ಕಳ ಸರಿಯಾದ ಬೆಳವಣಿಗೆ ಮೇಲೆ ಕೂಡ ಪರಿಣಾಮ ಬೀರಬಹುದು. ಇದು ಅವರನ್ನು ಜನರತ್ತ ಆತಂಕ, ಭಯಭೀತ ಹಾಗೂ ಸ್ಪಂಧನಾರಹಿತ ರನ್ನಾಗಿಸುವತ್ತ ದಾರಿ ಮಾಡಿಕೊಡುವ ಆತಂಕ ಇರುತ್ತದೆ. ಸಂಶೋಧನೆಯಿಂದ ತಿಳಿದು ಬಂದಿರುವ ಇನ್ನೊಂದು ಅಂಶವೆಂದರೆ, ಪಿಪಿಡಿ ಸಮಸ್ಯೆಯಿಂದ ಬಳಲುತ್ತಿರುವ ತಾಯಿಯ ಎದೆಹಾಲು ಸೇವಿಸುವ ಮಗುವಿನ ತೂಕ ಹೆಚ್ಚಳ ಸಾಮಾನ್ಯ ತಾಯಿಯ ಎದೆಹಾಲು ಸೇವಿಸುವ ಮಗುವಿನ ತೂಕ ಹೆಚ್ಚಳಕ್ಕೆ ಹೋಲಿಸಿದರೆ ನಿರೀಕ್ಷಿತ ಮಟ್ಟದಲ್ಲಿ ಇರುವುದಿಲ್ಲ. ಕಡಿಮೆ ಇರುತ್ತದೆ ಎಂದು ತಿಳಿಸಲಾಗಿದೆ.

ಆದಾಗ್ಯೂ ಖಿನ್ನತೆ ಶಮನಕಾರಿಗಳು ಹಾಗೂ ಇತರೆ ಔಷಧಿಗಳು ಪಿಪಿಡಿ ಸಮಸ್ಯೆ ನಿವಾರಣೆಗೆ ಬಳಕೆಗೆ ಸೂಚಿಸಲಾಗುತ್ತದೆ. ಏನೇ ಇರಲಿ ಅತ್ಯಂತ ಪ್ರಮುಖವಾಗಿ ನೀಡಬಹುದಾದ ಸಲಹೆ ಎಂದರೆ ಪಾಲಕರು ವೃತ್ತಿಪರ ಮನಃಶಾಸ್ತ್ರಜ್ಞರು ಅಥವಾ ಮನೋವೈದ್ಯರನ್ನೇ ಸಂಪರ್ಕಿಸುವುದು ಹಾಗೂ ಅವರ ಸಹಕಾರ ಪಡೆಯುವುದು ಉತ್ತಮ. ಏಕೆಂದರೆ ಖಿನ್ನತೆಯ ಶಮನಕಾರಿ ಔಷಧ, ಚಿಕಿತ್ಸೆಯು ಹಲವು ಋಣಾತ್ಮಕ ಹಾಗೂ ಅಡ್ಡ ಪರಿಣಾಮವನ್ನು ಬೀರುತ್ತವೆ. ಈ ಸಮಸ್ಯೆಯಿಂದ ಬಳಲುತ್ತಿರುವ ದಂಪತಿ ತಮ್ಮ ಹೆಸರನ್ನುಇದಕ್ಕೆ ಸಹಕರಿಸುವ ಸಮುದಾಯದಲ್ಲಿ ನಮೂದಿಸಿಕೊಳ್ಳುವುದು ಉತ್ತಮ. ಏಕೆಂದರೆ ಇಲ್ಲಿ ಬರುವ ಇತರೆ ಕುಟುಂಬ ಸದಸ್ಯರ ಅನುಭವನ್ನು ತಿಳಿದುಕೊಳ್ಳಬಹುದು. ಅಲ್ಲದೇ ಇಲ್ಲಿ ನಡೆಯುವ ಸಮಾಲೋಚನಾ ಸಭೆಗಳಲ್ಲಿ ಕೂಡ ಪಾಲ್ಗೊಳ್ಳಬಹುದಾಗಿರುತ್ತದೆ. ಕುಟುಂಬ ಸದಸ್ಯರೊಂದಿಗೆ ಹೆಚ್ಚಿನ ಸಮಯ ಕಳೆಯುವುದು ಹಾಗೂ ಅವರನ್ನು ಪ್ರೀತಿಯಿಂದ ನೋಡಿಕೊಳ್ಳುವುದು ಕೂಡ ಈ ಸಮಸ್ಯೆಗೆ ಪರಿಹಾರ ಎಂದು ಪರಿಗಣಿಸಲಾಗಿದೆ. ಖಿನ್ನತೆಯ ಸಮಸ್ಯೆಯಿಂದ ಹೊರ ಬರಲು ಇದು ಸಹಕರಿಸುತ್ತದೆ. ಒಂದು ಆರೋಗ್ಯಕಾರಿ ಆಹಾರ ಪದ್ಧತಿ ಹಾಗೂ ಸೂಕ್ತವಾದ ನಿದ್ರೆ ಕೂಡ ಪಿಪಿಡಿ ಇರುವವರಿಗೆ ಹಾಗೂ ನಿವಾರಿಸಿಕೊಳ್ಳಲು ಬಯಸುವವರಿಗೆ ಅತ್ಯಂತ ಪ್ರಮುಖವಾಗಿರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com