ಖಿನ್ನತೆಯಿಂದ ಬಳಲುವ ಮಕ್ಕಳಲ್ಲಿ ಸಾಮಾಜಿಕ, ಶೈಕ್ಷಣಿಕ ಕೌಶಲ್ಯದ ಕೊರತೆ ಹೆಚ್ಚು!

ಖಿನ್ನತೆಯಿಂದ ಬಳಲುತ್ತಿರುವ ಮಕ್ಕಳಲ್ಲಿ ಇತರ ಮಕ್ಕಳಿಗಿಂತ ಆರು ಪಟ್ಟು ಹೆಚ್ಚು ಕೌಶಲ್ಯದ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಟೊರೆಂಟೊ: ಖಿನ್ನತೆಯಿಂದ ಬಳಲುತ್ತಿರುವ ಮಕ್ಕಳಲ್ಲಿ ಇತರ ಮಕ್ಕಳಿಗಿಂತ ಆರು ಪಟ್ಟು ಹೆಚ್ಚು ಕೌಶಲ್ಯದ ಕೊರತೆಯುಂಟಾಗುತ್ತದೆ ಎಂದು ಅಧ್ಯಯನವೊಂದು ಹೇಳುತ್ತದೆ. ಕೌಶಲ್ಯದ ಕೊರತೆಯಿಂದ ಮಕ್ಕಳಲ್ಲಿ ಸಮಾಜದಲ್ಲಿ ಬೇರೆಯವರೊಂದಿಗೆ ಹೇಗೆ ಮಾತನಾಡಬೇಕು, ವ್ಯವಹರಿಸಬೇಕು ಎಂಬ ಬಗ್ಗೆ ಗೊಂದಲವುಂಟಾಗುವುದಲ್ಲದೆ ಶೈಕ್ಷಣಿಕವಾಗಿಯೂ ಹಿಂದುಳಿಯುತ್ತಾರೆ ಎಂದು ತಿಳಿದುಬಂದಿದೆ.

6ರಿಂದ 12 ವರ್ಷದೊಳಗಿನ ಶೇಕಡಾ 3ರಷ್ಟು ಮಕ್ಕಳಲ್ಲಿ ಖಿನ್ನತೆಯ ಸಮಸ್ಯೆಯುಂಟಾಗುತ್ತದೆ ಆದರೆ ಪೋಷಕರು ಮತ್ತು ಶಾಲೆಯಲ್ಲಿ ಶಿಕ್ಷಕರು ಮಕ್ಕಳಲ್ಲಿರುವ ಖಿನ್ನತೆ ಸಮಸ್ಯೆಯನ್ನು ಕಂಡುಹಿಡಿಯುವಲ್ಲಿ ವಿಫಲರಾಗುತ್ತಿದ್ದಾರೆ. ಮಗುವಿನ ಖಿನ್ನತೆಯ ಮಟ್ಟವನ್ನು ಅಳೆಯಿರಿ ಎಂದು ಪೋಷಕರಲ್ಲಿ ಮತ್ತು ಶಿಕ್ಷಕರಲ್ಲಿ ಹೇಳಿದರೆ ಶೇಕಡಾ 5ರಿಂದ 10ರಷ್ಟು ಮಾತ್ರ ಅಳೆಯುತ್ತಾರೆ ಎನ್ನುತ್ತಾರೆ ಅಮೆರಿಕಾದ ಮಿಸ್ಸೌರಿ ವಿಶ್ವವಿದ್ಯಾಲಯದ ಪ್ರೊಫೆಸರ್ ಕೈತ್ ಹರ್ಮನ್.

ಉದಾಹರಣೆಗೆ ಮಗುವಿಗೆ ಶಾಲೆಯಲ್ಲಿ ಸ್ನೇಹಿತರನ್ನು ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಶಿಕ್ಷಕರು ಶಾಲೆಯಲ್ಲಿ ಹೇಳಿದರೆ ಮನೆಯಲ್ಲಿ ಪೋಷಕರು ಅದನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಪ್ರತಿಯೊಬ್ಬ ಮಗುವಿನ ವರ್ತನೆ ಮತ್ತು ಮಾನಸಿಕ ಆರೋಗ್ಯದ ಸ್ಥಿತಿಗತಿಗಳು ಬದಲಾಗುತ್ತಿರುತ್ತವೆ, ಇದನ್ನು ಪೋಷಕರು ಮತ್ತು ಶಿಕ್ಷಕರು ಪತ್ತೆಹಚ್ಚಬೇಕು ಎನ್ನುತ್ತಾರೆ ಹರ್ಮನ್.

ಸಂಶೋಧಕರು ಇದಕ್ಕಾಗಿ 643 ವಿದ್ಯಾರ್ಥಿಗಳ ಮೇಲೆ ಅಧ್ಯಯನ ನಡೆಸಿದ್ದಾರೆ. ಪ್ರಾಥಮಿಕ ಹಂತದ ಮಕ್ಕಳ ಮೇಲೆ ಈ ಅಧ್ಯಯನ ನಡೆಸಲಾಗಿದೆ. ಶೇಕಡಾ 30ರಷ್ಟು ಮಕ್ಕಳು ಸಣ್ಣ ಪ್ರಮಾಣದಿಂದ ಹಿಡಿದು ಸಾಧಾರಣ ಮಟ್ಟದವರೆಗೆ ಖಿನ್ನತೆಯನ್ನು ಅನುಭವಿಸುತ್ತಿದ್ದು ಪೋಷಕರು, ಶಿಕ್ಷಕರು ಅದನ್ನು ಮಕ್ಕಳಲ್ಲಿ ಗುರುತಿಸುವಲ್ಲಿ ವಿಫಲರಾಗುತ್ತಾರೆ ಎಂದು ಹೇಳಲಾಗುತ್ತಿದೆ.

ಆರಂಭದ ಹಂತದಲ್ಲಿ ಖಿನ್ನತೆಯ ಕೆಲವು ಲಕ್ಷಣಗಳನ್ನು ಪತ್ತೆಹಚ್ಚದಿದ್ದರೆ ದೀರ್ಘಕಾಲದಲ್ಲಿ ಅದು ತೀವ್ರ ಖಿನ್ನತೆಯ ಸಮಸ್ಯೆಯನ್ನು ತಂದೊಡ್ಡಬಹುದು ಎನ್ನುತ್ತಾರೆ ಸಂಶೋಧಕರು. ಖಿನ್ನತೆಯಿಂದ ಬಳಲುವವರಲ್ಲಿ ಕೌಶಲ್ಯದ ಸಮಸ್ಯೆ ಮತ್ತು ಕೊರತೆ ಬೇರೆ ಮಕ್ಕಳಿಗಿಂತ 6 ಪಟ್ಟು ಅಧಿಕವಾಗಿರುತ್ತದೆ. ಇವರು ಸಾಮಾಜಿಕ ಸಮಸ್ಯೆ, ಗಮನ ಸಿಗದಿರುವ ಬಗ್ಗೆ ಕೊರಗುತ್ತಿರುತ್ತಾರೆ.

ಇದಕ್ಕೆ ಪರಿಹಾರವೆಂದರೆ ಮಕ್ಕಳ ಬಳಿಯೇ ಸಮಸ್ಯೆಗಳಾಗುತ್ತಿದೆಯೇ ಎಂದು ಕೇಳುವುದು, ಅವರು ಸರಿಯಾಗಿ ಉತ್ತರಿಸದಿದ್ದರೆ ಅವರ ಕೆಲವು ವರ್ತನೆಗಳು ಅವರ ಮಾನಸಿಕ ಆರೋಗ್ಯದ ಸ್ಥಿತಿಗತಿಯನ್ನು ಹೇಳುತ್ತದೆ. ಆರಂಭದ ಹಂತದಲ್ಲಿಯೇ ಇದನ್ನು ಮಕ್ಕಳಲ್ಲಿ ಗುರುತಿಸಿ ಬಗೆಹರಿಸುವುದು ಒಳ್ಳೆಯದು, ಮಾನಸಿಕ ಆರೋಗ್ಯ ತಜ್ಞರ ಅಭಿಪ್ರಾಯ ಪಡೆಯುವುದು ಉತ್ತಮ ಎನ್ನುತ್ತಾರೆ ಸಂಶೋಧಕರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com