ಸಾಂದರ್ಭಿಕ ಚಿತ್ರ
ಆರೋಗ್ಯ
ಹೃದ್ರೋಗಿಗಳಿಗೂ ಉತ್ತಮ ಯೋಗ, ಪ್ರಾಣಾಯಾಮ
ಹೃದ್ರೋಗ ಇರುವವರಿಗೆ ಸಾಮಾನ್ಯವಾಗಿ ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ, ರಕ್ತ ಹೆಪ್ಪುಗಟ್ಟುವಿಕೆ ...
ಹೈದರಾಬಾದ್: ಹೃದ್ರೋಗ ಇರುವವರಿಗೆ ಸಾಮಾನ್ಯವಾಗಿ ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ, ರಕ್ತ ಹೆಪ್ಪುಗಟ್ಟುವಿಕೆ ಇತ್ಯಾದಿ ಸಮಸ್ಯೆಗಳಿರುತ್ತವೆ.
ಹೃದ್ರೋಗ ಇರುವವರಿಗೆ ಆಕಸ್ಮಿಕವಾಗಿ ಆಘಾತವಾಗುವ ಮತ್ತು ಹಠಾತ್ತಾಗಿ ಸಾವು ಸಂಭವಿಸುವ ಪ್ರಮಾಣ ಹೆಚ್ಚು. ಒಮ್ಮೆ ಹೃದಯಾಘಾತವಾದರೆ ನಂತರ ಹಿಂದಿನಷ್ಟು ಸಹಜ ಜೀವನ ನಡೆಸುವುದು ಕಷ್ಟವಾಗುತ್ತದೆ.
ಹಾಗಾದರೆ ಹೃದ್ರೋಗ ಇರುವವರು ದಿನನಿತ್ಯ ಔಷಧಿಗಳಲ್ಲದೆ ಹೇಗೆ ನಿಯಂತ್ರಣದಲ್ಲಿಟ್ಟುಕೊಂಡು ಉತ್ತಮ ಜೀವನಶೈಲಿಯನ್ನು ನಡೆಸಬಹುದು ಎಂಬುದಕ್ಕೆ ಉತ್ತರ ಹೃದಯ ಪುನರ್ವಸತಿ ಕಾರ್ಯಕ್ರಮ. ಈ ಪರಿಕಲ್ಪನೆ ಪಾಶ್ಚಾತ್ಯ ದೇಶಗಳಲ್ಲಿ ಸಾಮಾನ್ಯ. ಇದರ ಖರ್ಚುವೆಚ್ಚ ಅಧಿಕ ಮತ್ತು ಮಾನವ ಸಂಪನ್ಮೂಲ ಹಾಗೂ ಕೆಲವು ಸಾಧನಗಳು ಬೇಕಾಗಿರುವುದರಿಂದ ಭಾರತಕ್ಕೆ ಇನ್ನೂ ಅಷ್ಟೊಂದು ಪರಿಚಿತವಾಗಿಲ್ಲ.
ಇಂದು ಯೋಗ ಎಲ್ಲೆಡೆ ಜನಪ್ರಿಯವಾಗುತ್ತಿದೆ. ಯೋಗದಿಂದ ಆರೋಗ್ಯ ಎಂದು ಎಲ್ಲರೂ ಕಂಡುಕೊಂಡಿದ್ದಾರೆ. ಆದರೆ ವೈಜ್ಞಾನಿಕವಾಗಿ ಇದು ಸಾಜೀತಾಗದಿರುವುದರಿಂದ ಹೃದಯ ಸಮಸ್ಯೆ ಇರುವವರು ಯೋಗ ಮಾಡಿದರೆ ತೊಂದರೆಯಾಗುತ್ತದೆ ಎಂಬ ಮನೋಭಾವವಿದೆ.
ಈ ಹಿನ್ನಲೆಯಲ್ಲಿ ಲಂಡನ್ ಸ್ಕೂಲ್ ಆಫ್ ಹೈಜಿನ್ ಅಂಡ್ ಟೊಪಿಕಲ್ ಮೆಡಿಸಿನ್ , ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾ ಮತ್ತು ಇತರ ಸಂಶೋಧನಾ ಸಂಸ್ಥೆಗಳು ಹೃದ್ರೋಗ ಸಮಸ್ಯೆ ಹೊಂದಿರುವವರಿಗೆ ರಚನಾತ್ಮಕ ಯೋಗ ಆರೈಕೆ ಕುರಿತು ಇತ್ತೀಚೆಗೆ ಅಧ್ಯಯನ ನಡೆಸಿದವು.
ಸಾಮಾನ್ಯ ಆರೈಕೆ ಪಡೆಯುವ ಹೃದ್ರೋಗಿಗಳ ಜೊತೆ ರಚನಾತ್ಮಕ ಯೋಗ ಆರೈಕೆ ಪಡೆದ ಹೃದ್ರೋಗಿಗಳನ್ನು ಹೋಲಿಕೆ ಮಾಡಲಾಯಿತು. ಅದರಲ್ಲಿ ಈ ಹಿಂದೆ ಹೃದಯಾಘಾತಕ್ಕೀಡಾದ ರೋಗಿಗಳಿಗೆ ಯೋಗಾಭ್ಯಾಸ ಬೆಳ್ಳಿರೇಖೆಯಾಗಿ ಗೋಚರವಾಯಿತು.ಹೃದ್ರೋಗಗಳಿಂದ ಹೆಚ್ಚಿನ ಸಂಕೀರ್ಣ ಸಮಸ್ಯೆಗಳನ್ನು ಬಗೆಹರಿಸಬಹುದು ಎಂದು ತೋರಿಸಲಾಯಿತು.
ಹೃದ್ರೋಗಿಗಳು ಯೋಗಾಭ್ಯಾಸ, ದೈಹಿಕ ವ್ಯಾಯಾಮ ಮಾಡುವಾಗ ಅವರ ನಾಡಿಮಿಡಿತ, ರಕ್ತದೊತ್ತಡ ಮತ್ತು ರೋಗಿಗಳ ಹೃದಯದ ಮೇಲೆ ಒತ್ತಡ ಹೆಚ್ಚಾಗುವುದಿಲ್ಲ ಎಂದು ತಿಳಿದುಬಂತು.ಹೃದ್ರೋಗಿಗಳಿಗೆ ಉಸಿರಾಟದ ವ್ಯಾಯಾಮಗಳಾದ ಅನುಲೋಮ-ವಿಲೋಮ, ಭ್ರಮರಿ ಪ್ರಾಣಾಯಾಮ, ಉಜ್ಜಯಿ ಪ್ರಾಣಾಯಾಮ ಮತ್ತು ಜಪ, ಏಕಾಂತ ಧ್ಯಾನ ಮತ್ತು ಶವಾಸನ ಸೇರಿದಂತೆ ಹಲವು ಧ್ಯಾನ ಅಭ್ಯಾಸಗಳನ್ನು ಹೇಳಿಕೊಡಲಾಯಿತು.
ಅಧ್ಯಯನದಲ್ಲಿ ಹೃದ್ರೋಗಿಗಳಿಗೆ ಸುಮಾರು 13 ವಾರಗಳ ಕಾಲ ತರಬೇತು ಪಡೆದ ಯೋಗ ಗುರುಗಳು ಹೇಳಿಕೊಡುತ್ತಿದ್ದರು. 3 ತಿಂಗಳು ಕಳೆದ ನಂತರ ಹೃದ್ರೋಗಿಗಳ ಆರೋಗ್ಯದಲ್ಲಿ ಸಕಾರಾತ್ಮಕ ಬದಲಾವಣೆ ಕಂಡುಬಂತು. ಹೃದ್ರೋಗಿಗಳಿಗೆ ಇಂತಹ ವ್ಯಾಯಾಮ ಸುಲಭ ಮತ್ತು ಸುರಕ್ಷಿತ ವಿಧಾನ ಎಂದು ಗೊತ್ತಾಯಿತು.

