ಮಕ್ಕಳಿಗೆ ಜ್ವರ ಬಂದಾಗ ಏನು ಮಾಡಬೇಕು? ಪ್ರಥಮ ಚಿಕಿತ್ಸೆ ಬಗ್ಗೆ ಇಲ್ಲಿದೆ ಮಾಹಿತಿ...

ವಾತಾವರಣ ಬದಲಾದಂತೆ ಮಕ್ಕಳಿಗೆ ಜ್ವರ, ನೆಗಡಿ ಹಾಗೂ ಕೆಮ್ಮು ಬರುವುದು ಸಾಮಾನ್ಯ. ಮಕ್ಕಳಿಗೆ ಬರುವಂತಹ ಜ್ವರ ಕಾಳಜಿ ವಹಿಸದೇ ಹೋದಲ್ಲಿ ಅದು ಗಂಭೀರ ಸ್ವರೂಪವನ್ನೂ ಪಡೆದುಕೊಳ್ಳುತ್ತದೆ. ಕೆಲವು ಜ್ವರ ಸಣ್ಣ ಪ್ರಮಾಣದ ವೈರಸ್ ಗಳಿಂದ ಬರುತ್ತದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾತಾವರಣ ಬದಲಾದಂತೆ ಮಕ್ಕಳಿಗೆ ಜ್ವರ, ನೆಗಡಿ ಹಾಗೂ ಕೆಮ್ಮು ಬರುವುದು ಸಾಮಾನ್ಯ. ಮಕ್ಕಳಿಗೆ ಬರುವಂತಹ ಜ್ವರ ಕಾಳಜಿ ವಹಿಸದೇ ಹೋದಲ್ಲಿ ಅದು ಗಂಭೀರ ಸ್ವರೂಪವನ್ನೂ ಪಡೆದುಕೊಳ್ಳುತ್ತದೆ. ಕೆಲವು ಜ್ವರ ಸಣ್ಣ ಪ್ರಮಾಣದ ವೈರಸ್ ಗಳಿಂದ ಬರುತ್ತದೆ. 

ಮಕ್ಕಳಿಗೆ ಜ್ವರ ಬಂದ ಕೂಡಲೇ ಪೋಷಕರು ಭೀತಿಗೊಳಗಾಗುವುದು ಸಾಮಾನ್ಯ. ಕೆಲವು ಜ್ವರಗಳು ಒಂದೆರಡು ದಿನಗಳಿದ್ದರೆ, ಇನ್ನೂ ಕೆಲ ಜ್ವರ ಸಾಕಷ್ಟು ದಿನಗಳ ಕಾಲ ಮಕ್ಕಳನ್ನು ಕಾಡುತ್ತದೆ. 

ಮಕ್ಕಳಿಗೆ ಜ್ವರ ಬಂದಾಗ ವೈದ್ಯರ ನೆರವು ಹಾಗೂ ಸಲಹೆ ಪಡೆದುಕೊಳ್ಳುವುದು ಅತ್ಯಂತ ಮುಖ್ಯವಾಗಿರುತ್ತದೆ. ಮಕ್ಕಳಿಗೆ ಜ್ವರ ಬಂದಾಗ ಮನೆಯಲ್ಲಿಯೇ ಮಾಡಿಕೊಳ್ಳಬೇಕಾದ ಪ್ರಥಮ ಚಿಕಿತ್ಸೆ ಹಾಗೂ ಜ್ವರವನ್ನು ಕಂಡು ಹಿಡಿಯುವುದು ಹೇಗೆ? ಜ್ವರ ಬರಲು ಕಾರಣವೇನು ಎಂಬುದರ ವಿವರ ಇಲ್ಲಿದೆ...

ಜ್ವರ ಎಂದರೇನು? ಜ್ವರ ಬರಲು ಕಾರಣವೇನು? 
ಮನುಷ್ಯನ ದೇಹದಲ್ಲಿ ವೈರಸ್ ಅಥವಾ ಬ್ಯಾಕ್ಟಿರಿಯಾಗಳು ದಾಳಿ ನಡೆಸಿದಾಗ ನಮ್ಮ ಅದರೊಂದಿಗೆ ಹೋರಾಟ ನಡೆಸುತ್ತದೆ. ಈ ವೇಳೆ ದೇಹದ ಉಷ್ಣಾಂಶಗಳು ಹೆಚ್ಚಾಗುತ್ತದೆ. ಈ ವೇಳೆ ಉಂಟಾಗುವ ಉಷ್ಣಾಂಶವೇ ಜ್ವರವೆಂದು ಕರೆಯಲಾಗುತ್ತದೆ. ಕೆಲವರು ಜ್ವರ ಯಾಕಾದರೂ ಬರುತ್ತದೋ ಎಂದು ಬೇಸರವಾಗುವುದುಂಟು. ಒಂದು ರೀತಿಯಲ್ಲಿ ಮನುಷ್ಯನಿಗೆ ಜ್ವರ ಬರುವುದೂ ಕೂಡ ಉತ್ತಮವಾದ ಹಾಗೂ ಆರೋಗ್ಯಕರ ದೇಹದ ಲಕ್ಷಣವೂ ಹೌದು. 

ನಮ್ಮ ದೇಹದಲ್ಲಿ ಬ್ಯಾಕ್ಟಿರಿಯಾಗಳ ವಿರುದ್ಧ ಹೋರಾಡುವ ಶಕ್ತಿ ಇದೆ ಎಂಬುದನ್ನು ಈ ಜ್ವರ ಸೂಚಿಸುತ್ತದೆ. ಸಣ್ಣ ರೀತಿಯಲ್ಲಿ ಬರುವ ಜ್ವರಗಳಿಗೆ ಔಷಧಿಗಳನ್ನು ತೆಗೆದುಕೊಂಡು ದೇಹದಲ್ಲಿರುವ ಹೋರಾಟದ ಶಕ್ತಿಯನ್ನು ಕುಗ್ಗಿಸಬಾರದು. 

ಜ್ವರವನ್ನು ಕಂಡು ಹಿಡಿಯುವುದು ಹೇಗೆ?
ಸಾಮಾನ್ಯವಾಗಿ ಕೈಯಲ್ಲಿ ಮುಟ್ಟಿ ನೋಡಿ ದೇಹ ಬಿಸಿ ಇದ್ದಾಗ ಜ್ವರ ಇದೆ ಎಂದು ಹೇಳುವುದುಂಟು. ಆದರೆ, ನಿಖರವಾಗಿ ಜ್ವರ ಇದೆ ಎಂದು ಕಂಡು ಹಿಡಿಯಲು ಥರ್ಮೋಮೀಟರ್ ಬಳಸುವುದು ಉತ್ತಮ. ಮಕ್ಕಳಿರುವ ಮನೆಗಳಲ್ಲಿ ಈ ಥರ್ಮೋಮೀಟರ್ ಅತ್ಯವಶ್ಯಕವಾಗಿರುತ್ತದೆ. ಪ್ರತೀಬಾರಿ ಇದನ್ನು ಬಳಸುವ ಮುನ್ನ ಹಾಗೂ ಬಳಸಿದ ಬಳಿಕ ಸ್ವಚ್ಛ ಮಾಡಿ ತೆಗೆದು ಇಡಬೇಕು. 

ಥರ್ಮೋಮೀಟರ್ ಬಳಕೆ ಹೇಗೆ...?
ಥರ್ಮೋಮೀಟರ್ ಅನ್ನು ಮೂರು ರೀತಿಯ ವಿಧಾನಗಳಲ್ಲಿ ಬಳಕೆ ಮಾಡಲಾಗುತ್ತದೆ. 
ರೆಕ್ಟಲ್, ಓರಲ್ ಹಾಗೂ ಆರ್ಮ್'ಪಿಟ್ ಟೆಂಪರೇಚರ್ ಎಂದು ಬಳಕೆ ಮಾಡಲಾಗುತ್ತದೆ. ರೆಕ್ಟಲ್ ಎಂದರೆ, ಮಗುವಿನ ಕಾಲಿನ ಸಂದಿ ಮೂತ್ರ ವಿಸರ್ಜನೆ ಮಾಡುವ ಜಾಗದಲ್ಲಿ ಇಟ್ಟು ಪರೀಕ್ಷೆ ಮಾಡಲಾಗುತ್ತದೆ. ಭಾರತದಲ್ಲಿ ಇದನ್ನು ಮುಜುಗರ ಎಂದು ತಿಳಿಯುವುದರಿಂದ ಮನೆಯಲ್ಲಿ ಇದನ್ನು ಮಾಡುವುದಿಲ್ಲ. ಆದರೆ, ವೈದ್ಯರು ಜ್ವರದ ನಿಖರತೆ ತಿಳಿಯಲು ಆಸ್ಪತ್ರೆಗಳನ್ನು ಈ ವಿಧಾನವನ್ನು ಅನುಸರಿಸುತ್ತಾರೆ. ಈ ವಿಧಾನ ದೇಹದ ಉಷ್ಣಾಂಶತೆಯನ್ನು ನಿಖರವಾಗಿ ತೋರಿಸುತ್ತದೆ. 

ಓರಲ್ ಎಂದರೆ ಮಕ್ಕಳ ಬಾಯಲ್ಲಿಟ್ಟು ಪರೀಕ್ಷೆ ಮಾಡಲಾಗುತ್ತದೆ. ನಾಲಿಗೆಯ ಕೆಳಗೆ ಇಟ್ಟು ಉಷ್ಣಾಂಶತೆಯನ್ನು ಪರೀಕ್ಷೆ ಮಾಡಲಾಗುತ್ತದೆ. ಸಾಮಾನ್ಯ ಈ ರೀತಿಯ ವಿಧಾನವನ್ನು 4 ವರ್ಷದ ಮೇಲ್ಪಟ್ಟ ಮಕ್ಕಳಿಗೆ ಮಾಡಲಾಗುತ್ತದೆ. 

ಆರ್ಮ್'ಪಿಟ್ ಎಂದರೆ ಕಂಕುಳ ಸಂದಿಯಲ್ಲಿ ಇಟ್ಟು ಥರ್ಮೋಮೀಟರ್ ಇಟ್ಟು ಉಷ್ಣಾಂಶತೆಯನ್ನು ಪರೀಕ್ಷೆ ಮಾಡಲಾಗುತ್ತದೆ. 

ಜ್ವರದ ನಿಖರತೆ ತಿಳಿಯುವುದು ಹೇಗೆ?
ಮಕ್ಕಳನ್ನು ಸಾಮಾನ್ಯವಾಗಿ ಬಟ್ಟೆಯಲ್ಲಿ ಸುತ್ತಿ ಬೆಚ್ಚಗಿಡಲಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಕೂಡಲೇ ಜ್ವರ ಪರೀಕ್ಷೆ ಮಾಡಿದಾಗ ಸಾಮಾನ್ಯವಾಗಿಯೇ ಉಷ್ಣಾಂಶ ಹೆಚ್ಚಾಗಿ ತೋರಿಸುತ್ತದೆ. ಬಿಸಿ ಪದಾರ್ಥಗಳನ್ನು ತಿಂದಾಗ ಅಥವಾ ತಣ್ಣಗಿನ ಪದಾರ್ಥಗಳನ್ನು ಸೇವಿಸದಾಗಲೂ ಉಷ್ಣಾಂಶವನ್ನು ನಿಖರವಾಗಿ ಪರಿಶೀಲಿಸಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ 30 ನಿಮಿಷಗಳ ಬಳಿಕ ಹಾಗೂ ಸ್ನಾನ ಮಾಡಿದ 15 ನಿಮಿಷಗಳ ಬಳಿಕ ಜ್ವರವನ್ನು ಪರಿಶೀಲಿಸಬೇಕು. 

ಆರ್ಮ್'ಪಿಟ್ ಎಂದರೆ ಕಂಕುಳ ಸಂದಿಯಲ್ಲಿ ಥರ್ಮೋಮೀಟರ್ ಇಟ್ಟು ಪರಿಶೀಲನೆ ಮಾಡುವಾಗ 1 ಡಿಗ್ರಿ ಸೇರಿಸಿಕೊಂಡು ಜ್ವರವನ್ನು ಪರಿಶೀಲಿಸಬೇಕು. ರೆಕ್ಟಲ್ ಹಾಗೂ ಓರಲ್ ನಲ್ಲಿ ದೇಹದ ಉಷ್ಣಾಂಶತೆ ನಿಖರವಾಗಿ ತಿಳಿಯುತ್ತದೆ. 

ವೈದ್ಯರ ಬಳಿ ಯಾವಾಗ ಹೋಗಬೇಕು...? 
ಪದೇ ಪದೇ ಔಷಧಿಗಳನ್ನು ನೀಡುವುದರಿಂದ ಮಗುವಿನ ದೇಹದಲ್ಲಿರುವ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸಬಾರದು. ಜ್ವರ ನಿಖರತೆಯನ್ನು ತಿಳಿದು ವೈದ್ಯರ ಬಳಿ ಹೋಗಿ ಔಷಧಿಯನ್ನು ಪಡೆಯಬೇಕುತ್ತದೆ. 3 ತಿಂಗಳಿನ ಒಳಗಿನ ಮಕ್ಕಳು ಅತ್ಯಂತ ಸೂಕ್ಷ್ಮವಾಗಿರುತ್ತದೆ. ಇಂತಹ ಮಕ್ಕಳ ದೇಹದ ಉಷ್ಣಾಂಶತೆ 98,99 ಇದ್ದರೆ ಅದು ಸಾಮಾನ್ಯ ಎಂದು ತಿಳಿಯಬೇಕು. 100.2ಗಿಂತಲೂ ಹೆಚ್ಚು ಉಷ್ಣಾಂಶತೆ ಇದ್ದರೆ ವೈದ್ಯರ ಬಳಿ ಹೋಗಬೇಕು. 3 ತಿಂಗಳಿಗಿಂತಲೂ ಮೇಲ್ಪಟ್ಟ ಮಕ್ಕಳಿಗೆ 101ಗಿಂತಲೂ ಹೆಚ್ಚಾಗಿದ್ದರೆ ಹೋಗಬೇಕು. 1 ವರ್ಷಕ್ಕಿಂತಲೂ ಮೇಲ್ಪಟ್ಟ ಮಕ್ಕಳಿಗೆ ಜ್ವರ ಇದ್ದರೂ ಆರಾಮವಾಗಿದ್ದರೆ, ಆಟವಾಡಿಕೊಂಡಿದ್ದರೆ ವೈದ್ಯರ ಬಳಿ ಹೋಗುವುದೂ ಬೇಡ. ಮಕ್ಕಳು ಎಂದಿನಂತೆ ಇಲ್ಲದೆ, ವಾಂತಿ ಮಾಡಿಕೊಳ್ಳುವುದು, ನಿಶ್ಯಕ್ತಿಯಿಂದಿದ್ದರೆ ವೈದ್ಯರ ಬಳಿ ಹೋಗಬೇಕು. 

ಪ್ರಥಮ ಚಿಕಿತ್ಸೆ ಹೇಗೆ...?

  • ಸ್ಪಾಂಜ್ ಬಾತ್ ಎಂದರೆ ಸಣ್ಣ ಮಕ್ಕಳಿಗೆ ಬೆಚ್ಚಗಿನ ನೀರಿನಲ್ಲಿ ಕಾಟನ್ ಬಟ್ಟೆಯನ್ನು ತೆಗೆದುಕೊಂಡು ನೀರಿನಲ್ಲಿ ಹಾಕಿ ಹಿಂಡಿ ದೇಹವನ್ನು ಒರೆಸಬೇಕು. ದೊಡ್ಡ ಮಕ್ಕಳು ತಡೆದುಕೊಳ್ಳುವ ಶಕ್ತಿ ಎಂದೆನಿಸಿದರೆ ತಣ್ಣಗಿನ ನೀರಿನಲ್ಲಿಯೇ ಬಟ್ಟೆಯನ್ನು ಹಾಕಿ ಹಿಂಡಿ ಒರೆಸಬೇಕು. ನೀರು ಉಷ್ಣತೆಯನ್ನು ತಗ್ಗಿಸಲು ನೆರವಾಗುವುದರಿಂದ ಈ ವಿಧಾನವನ್ನು ಅನುಸರಿಸುವುದು ಉತ್ತಮ
  • ಜ್ವರ ಬಂದಾಗ ಫ್ಯಾನ್ ಹಾಕುವುದು ಉತ್ತಮ. ಚಳಿ ಇಲ್ಲದಿದ್ದರೆ ಅಗತ್ಯ ಎನಿಸಿದರೆ ಫ್ಯಾನ್ ಹಾಗೂ ಎಸಿಗಳನ್ನು ಬಳಸಬಹುದು. 
  • ಜ್ವರ ಬಂದ ಕೂಡಲೇ ಮಕ್ಕಳಿಗೆ ಸ್ವೆಟರ್ ಹಾಗೂ ಟೋಪಿಗಳನ್ನು ಹಾಕುತ್ತಾರೆ. ಸಾಮಾನ್ಯವಾಗಿ ವಿದ್ಯಾವಂತರೇ ಇಂತಹ ಕೆಲಸಗಳನ್ನು ಮಾಡುವುದು ಹೆಚ್ಚು. ಇದು ಸರಿಯಾದ ರೀತಿಯಲ್ಲ. ಮಕ್ಕಳಿಗೆ ಫಿಟ್ಟಿಂಗ್ ಬಟ್ಟೆಗಳನ್ನು ಹಾಕಬಾರದು, ಕಾಟನ್ ಬಟ್ಟೆಗಳನ್ನು ಹಾಕುವುದು ಉತ್ತಮ. ಜ್ವರ ಬಂದಾಗ ಮಕ್ಕಳಿಗೆ ಗಾಳಿಯ ಅಗತ್ಯತೆ ಹೆಚ್ಚಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಬೆಚ್ಚಗಿಡುವುದರಿಂದ ಮಕ್ಕಳಿಗೆ ಫಿಟ್ಸ್ ಬರುವ ಸಾಧ್ಯಗಳು ಹೆಚ್ಚು. 
  • ಹಾಲು ಕುಡಿಯುವ ಮಕ್ಕಳಿದ್ದರೆ ಜ್ವರ ಬಂದಾಗ ಆಗಾಗ ಹಾಲನ್ನು ಕುಡಿಸಬೇಕು. ದೊಡ್ಡ ಮಕ್ಕಳಾದರೆ ನೀರನ್ನು ಕುಡಿಸಬೇಕು. ದೇಹ ನಿರ್ಜಲೀಕರಣಗೊಳ್ಳದಂತೆ ನೋಡಿಕೊಳ್ಳಬೇಕು. ದ್ರವ ಪದಾರ್ಥ ಹೆಚ್ಚಾಗಿ ನೀಡಬೇಕು. 
  • ಮಕ್ಕಳಿಗೆ ಹೆಚ್ಚು ವಿಶ್ರಾಂತಿ ನೀಡಬೇಕು. ಹೊರಗೆ ಕಳುಹಿಸುವುದನ್ನು ನಿಯಂತ್ರಿಸುವುದು ಒಳ್ಳೆಯದು. ಇಂತಹ ಸಂದರ್ಭದಲ್ಲಿ ಮನೆಯಲ್ಲಿಯೇ ಪೋಷಕರು ಮಕ್ಕಳೊಂದಿಗೆ ಆಟವಾಡಬೇಕು. ಇದರಿಂದ ಮಕ್ಕಳು ಹೊರ ಹೋಗುವುದು ನಿಯಂತ್ರಣಗೊಳ್ಳುತ್ತದೆ. ಜ್ವರ ಬಂದಂತಹ ಸಂದರ್ಭದಲ್ಲಿ ಹೆಚ್ಚು ಹೆಚ್ಚು ಸಮಯ ಅವರೊಂದಿಗೆ ಕಾಲ ಕಳೆಯಿರಿ. ಅಗತ್ಯವಿಲ್ಲದ ಸಂದರ್ಭದಲ್ಲಿ ಮಕ್ಕಳಿಗೆ ಸಾಧ್ಯವಾದಷ್ಟು ಔಷಧಿ ನೀಡುವುದನ್ನು ನಿಯಂತ್ರಿಸಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com