ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ತ್ರಿಫಲಾ: ಚೂರ್ಣ ಒಂದು, ಲಾಭ ಹಲವು

ನಿಸರ್ಗದಲ್ಲಿ ಸಿಗುವ ಆರೋಗ್ಯ ಸಮಸ್ಯೆಗಳನ್ನು ದೂರಮಾಡುವ ನೈಸರ್ಗಿಕ ಔಷಧಿಗಳಲ್ಲಿ ತ್ರಿಫಲಾ ಚೂರ್ಣ ಕೂಡ ಒಂದು. ತ್ರಿಫಲ ಚೂರ್ಣ ಪಿತ್ತ ,ಕಫ ಹೀಗೆ ಅನೇಕ ಸಮಸ್ಯೆಗಳನ್ನು ನಿರ್ಮೂಲನೆ ಮಾಡುತ್ತದೆ. 
Published on

ಬದಲಾದ ಜೀವನ ಶೈಲಿಯಿಂದಾಗಿ ಇಂದು ಪ್ರತೀಯೊಬ್ಬರೂ ನಿತ್ಯ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದರೆ ಯಾವುದೇ ಆರೋಗ್ಯ ಸಮಸ್ಯೆಯಾದರೂ ನಿಸರ್ಗದಲ್ಲಿ ಇದಕ್ಕೆ ಪರಿಹಾರವಿದ್ದು, ಸರಿಯಾದ ಮಾರ್ಗದಲ್ಲಿ ನಾವು ಈ ಮಾರ್ಗವನ್ನು ಅನುಸರಿಸದರೆ ಖಂಡಿತಾ ನಮ್ಮ ಎಲ್ಲ ಆರೋಗ್ಯ ಸಮಸ್ಯೆಗಳಿಂದ ಹೊರಬರಬಹುದು. ಹೀಗೆ ನಿಸರ್ಗದಲ್ಲಿ ಸಿಗುವ ಆರೋಗ್ಯ ಸಮಸ್ಯೆಗಳನ್ನು ದೂರಮಾಡುವ ನೈಸರ್ಗಿಕ ಔಷಧಿಗಳಲ್ಲಿ ತ್ರಿಫಲಾ ಚೂರ್ಣ ಕೂಡ ಒಂದು. ತ್ರಿಫಲ ಚೂರ್ಣ ಪಿತ್ತ ,ಕಫ ಹೀಗೆ ಅನೇಕ ಸಮಸ್ಯೆಗಳನ್ನು ನಿರ್ಮೂಲನೆ ಮಾಡುತ್ತದೆ. 

ಇಷ್ಷಕ್ಕೂ ಏನಿದು ತ್ರಿಫಲಾ ಚೂರ್ಣ?
ಅಳಲೆ ಕಾಯಿಯ ಜೊತೆಗೆ ತಾರೇಕಾಯಿ ಮತ್ತು ನೆಲ್ಲಿಕಾಯಿಗಳನ್ನು ಬಳಸಿ ಮಾಡುವ ಒಂದು ಔಷಧೀಯ ಪುಡಿ. ಇದನ್ನು ಬೆಟ್ಟದ ನೆಲ್ಲಿಕಾಯಿ, ಕರಕ ಕಾಯಿ (ಹರೀತಕಿ) ಮತ್ತು ತಾರೆಕಾಯಿ ಅಥವಾ ತಂದ್ರಿ ಕಾಯಿ (ಬಿಭಿತಕಿ) ಎಂಬ ಮೂರು ವಸ್ತುಗಳಿಂದ ತಯಾರಿಸಲಾಗುತ್ತದೆ.

ಈ ಮೂರು ಕಾಯಿಗಳ ವಿಶೇಷವೇನು?

ಬೆಟ್ಟದ ನೆಲ್ಲಿಕಾಯಿ
ಬೆಟ್ಟದ ನೆಲ್ಲಿಕಾಯಿಯಲ್ಲಿ ಗ್ಲುಕೋಸ್, ವಿಟಮಿನ್ ಮತ್ತು ಪ್ರೋಟೀನ್ ಅಂಶಗಳು ಯಥೇಚ್ಛವಾಗಿರುತ್ತದೆ. ಬೆಟ್ಟದ ನೆಲ್ಲಿಕಾಯಿ ಪಿತ್ತ ದೋಷವನ್ನು ಸರಿಪಡಿಸುತ್ತದೆ. ಇದರಲ್ಲಿ ವಿಟಮಿನ್ ಸಿ ಹೆಚ್ಚಾಗಿರುವುದರಿಂದ ದೇಹವನ್ನು ತಂಪಾಗಿಡುತ್ತದೆ. ಅಲ್ಲದೆ ರಕ್ತ ಸಂಚಾರವನ್ನು ಸರಾಗ ಮಾಡುತ್ತದೆ ಅಂತೆಯೇ ಜ್ವರವನ್ನು ಕಡಿಮೆ ಮಾಡುತ್ತದೆ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗೆ ಪರಿಹಾರ ನೀಡುತ್ತದೆ.

ತಾರೆಕಾಯಿ
ತಾರೆಕಾಯಿ ಘಾಟು ರುಚಿಯನ್ನು ಹೊಂದಿರುತ್ತದೆ. ಇದರಲ್ಲಿ ವಿಟಮಿನ್ ಎ ಅಧಿಕವಾಗಿರುವುದರಿಂದ ಜೀರ್ಣಕ್ರಿಯೆಯನ್ನು ಸರಿಪಡಿಸುತ್ತದೆ. ಅಲರ್ಜಿಯಂತಹ ಸಮಸ್ಯೆಗಳನ್ನು ಪರಿಹಾರ ಮಾಡುತ್ತದೆ. ಕರುಳಿನಲ್ಲಿ ಇರುವಂತಹ ಕಲ್ಮಶವನ್ನು ನಾಶ ಮಾಡುತ್ತದೆ. ಅಲ್ಲದೆ ಗಂಟಲಿನ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಕಫ ಕಡಿಮೆ ಮಾಡುವುದಲ್ಲದೆ ಉಬ್ಬಸವನ್ನು ಕಡಿಮೆ ಮಾಡುತ್ತದೆ.

ಕರಕ ಕಾಯಿ
ತ್ರಿಫಲ ಚೂರ್ಣ ಗಳಲ್ಲಿ ಮುಖ್ಯವಾದ ಫಲ ಈ ಕರಕ ಕಾಯಿ. ಇದರಲ್ಲಿ ಟೆರ್ಪೆನ್ಸ್, ಪಾಲಿಫಿನಾಲ್ಸ್, ಆಂಥೋಸಯಾನಿನ್ ಮತ್ತು ಫ್ಲೇವೊನೈಡ್ ಗಳಂತಹ ಫೈಟೊಕೆಮಿಕಲ್ (ರೋಗ ನಿರೋಧ ಅಂಶ) ಗಳಿವೆ. ಭೇದಿಯನ್ನು ತಡೆಗಟ್ಟುತ್ತದೆ. ಎದೆಯ ಉರಿಯನ್ನು ಕಡಿಮೆ ಮಾಡುತ್ತದೆ, ನಾಡಿಗೆ ಸಂಬಂಧ ಸಮಸ್ಯೆಯನ್ನು ತೊಲಗಿಸುತ್ತದೆ,ಶಾರೀರಿಕ ಬಲಹೀನತೆ ಯನ್ನು ಸರಿಪಡಿಸುತ್ತದೆ ಮತ್ತು ವಾತ ಸಂಬಂದಿಸಿದ ಕಾಯಿಲೆಯನ್ನು ಹತ್ತಿರ ಬರಲು ಬಿಡುವುದಿಲ್ಲ .

ತ್ರಿಫಲ ಚೂರ್ಣ ಮಾಡವುದು ಹೇಗೆ?
3 ಬೆಟ್ಟದ ನೆಲ್ಲಿಕಾಯಿ, 2 ತಾರೆಕಾಯಿ ಮತ್ತು 1 ಕರಕ ಕಾಯಿಯನ್ನು ಚೆನ್ನಾಗಿ ಒಣಗಿಸಿ ನಂತರ ಬೀಜಗಳನ್ನು ಹೊರತೆಗೆದು ಮೇಲಿನ ಭಾಗವನ್ನು ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು. ಈ ಪುಡಿಯನ್ನು ತ್ರಿಫಲ ಚೂರ್ಣ ಎನ್ನುತ್ತಾರೆ.

ತ್ರಿಫಲ ಚೂರ್ಣದ ಲಾಭಗಳೇನು?
ಪ್ರತಿನಿತ್ಯ ಈ ತ್ರಿಫಲಾ ಚೂರ್ಣವನ್ನು ನಿಯಮಿತವಾಗಿ ಬಳಕೆ ಮಾಡಿದರೆ 100ಕ್ಕೂ ಹೆಚ್ಚು ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು. 

ತ್ರಿಫಲ ಚೂರ್ಣವನ್ನು ಬಳಸುವ ವಿಧಾನ
ಪ್ರತಿದಿನ 1 ರಿಂದ 5 ಗ್ರಾಂ ತ್ರಿಫಲ ಚೂರ್ಣವನ್ನು ಪ್ರತಿಯೊಬ್ಬರು ತೆಗೆದುಕೊಳ್ಳಬಹುದು. ರಾತ್ರಿ ಹೊತ್ತು ಹಾಲು ಅಥವಾ ಜೇನು ತುಪ್ಪದ ಜೊತೆ ಇದನ್ನು ತೆಗೆದುಕೊಳ್ಳಬಹುದು.

ಅಜೀರ್ಣ ಅಥವಾ ಭೇದಿ
ಅಜೀರ್ಣ ಅಥವಾ ಭೇದಿಯ ಸಂದರ್ಭದಲ್ಲಿ 2 ಚಮಚ ನೀರಿನ ಜೊತೆ 1 ಚಮಚ ಚೂರ್ಣವನ್ನು ಚೆನ್ನಾಗಿ ಕುದಿಸಿ ಶೋಧಿಸಿ ಅದಕ್ಕೆ ಸ್ವಲ್ಪ ನೀರು ಬೆರಸಿ ಕುಡಿಯಬೇಕು .

ಮಲಬದ್ದತೆ
ಮಲಬದ್ದತೆ ಆಗುವ ಸಂದರ್ಭದಲ್ಲಿ 5 ಗ್ರಾಂ ತ್ರಿಫಲ ಚೂರ್ಣವನ್ನು ಜೇನು ತುಪ್ಪದಲ್ಲಿ ಉಂಡೆಯ ರೀತಿ ಮಾಡಿ ಅರ್ಧ ಲೋಟ ಹಾಲಿನ ಜೊತೆ ಕುಡಿದರೆ ಮಲಬದ್ದತೆ ಸಮಸ್ಯೆ ಪರಿಹಾರ ವಾಗುತ್ತದೆ.

ಕೂದಲು
1 ಚಮಚ ತ್ರಿಫಲ ಚೂರ್ಣವನ್ನು 2 ಚಮಚ ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿ, ಶೋಧಿಸಿ ತಲೆಗೆ ಹಚ್ಚಿಕೊಂಡರೆ ತಲೆಯ ಕೂದಲು ತುಂಬಾ ಚೆನ್ನಾಗಿ ಬೆಳೆಯುತ್ತದೆ. ಚರ್ಮದ ಸಮಸ್ಯೆ, ಮುಟ್ಟಿನ ಸಮಸ್ಯೆ ಮತ್ತು ತೂಕ ನಿಯಂತ್ರಣಕ್ಕೂ ತ್ರಿಫಲ ಚೂರ್ಣ ರಾಮಬಾಣ.

ಜ್ವರ
ತ್ರಿಫಲ ಚೂರ್ಣ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಅದರ ಮುಖಾಂತರ ವಿವಿಧ ತರಹದ ಜ್ವರಗಳೊಡನೆ ಹೋರಾಡಲು ಸಹಾಯ ಮಾಡುತ್ತದೆ.

ಜೀರ್ಣಕ್ರಿಯೆ
ತ್ರಿಫಲ ಚೂರ್ಣವು ನಮ್ಮ ದೇಹದ ಪಚನ ಕ್ರಿಯೆಯನ್ನು ಹೆಚ್ಚಿಸುವ ಮುಖಾಂತರ ಆಹಾರ ಉತ್ತಮವಾಗಿ ಜೀರ್ಣವಾಗುವಂತೆ ಮಾಡುತ್ತದೆ ಅಲ್ಲದೆ ದೇಹದಲ್ಲಿ ಕೊಬ್ಬಿನ ಅನಾವಶ್ಯಕ ಶೇಖರಣೆಯನ್ನು ತಡೆಗಟ್ಟುತ್ತದೆ.

ರಕ್ತ ಶುದ್ದಿ
ತ್ರಿಫಲ ಚೂರ್ಣ ರಕ್ತ ಶುದ್ದಿ ಮಾಡಲು ಸಹಾಯಕಾರಿ ರಕ್ತದ ಸಂಚಾರವನ್ನು ಸುಗಮಗೊಳಿಸುತ್ತದೆ. ಹೀಗೆ ಶ್ವಾಸಕೋಶ ಹಾಗು ಯಕೃತ್ತ ಶುದ್ಧ ಮಾಡಲು ಸಹಾಯ ಮಾಡುತ್ತದೆ. ಶ್ವಾಸಕೋಶ ಹಾಗು ಯಕೃತ್ ಸಂಬಂಧಿಸಿದ ಹಲವಾರು ಕಾಯಿಲೆಗಳನ್ನು ದೂರಮಾಡುತ್ತದೆ.

ಇದಲ್ಲದೆ ನೈಸರ್ಗಿಕ ವಿರೇಚಕವಾಗಿಯೂ ಈ ತ್ರಿಫಲಾ ಚೂರ್ಣ ಕೆಲಸ ಮಾಡಲಿದ್ದು, ಹಲವು ಬಗೆಯ ಕ್ಯಾನ್ಸರ್ ಗಳಿಂದ ದೂರವಿರಲು ಈ ತ್ರಿಫಲಾ ಚೂರ್ಣ ಸಹಕರಿಸುತ್ತದೆ ಎಂಬುದನ್ನು ಈಗಾಗಲೇ ಹಲವು ಸಂಶೋಧನೆಗಳು ಬಹಿರಂಗ ಪಡಿಸಿವೆ.

ಅಡ್ಡ ಪರಿಣಾಮಗಳೂ ಇವೆ
ಅತಿಯಾದರೆ ಅಮೃತವೂ ವಿಷ ಎಂಬ ಮಾತಿದೆ. ತ್ರಿಫಲ ಚೂರ್ಣ ಆರೋಗ್ಯಕರ ಅಂಶಗಳನ್ನು ಹೊಂದಿದೆಯಾದರೂ ಇದರ ಅತಿಯಾದ ಬಳಕೆ ಹಲವರಲ್ಲಿ ಅಡ್ಡ ಪರಿಣಾಮಗಳನ್ನು ಮಾಡಬಹುದು. ಹೀಗಾಗಿ ತ್ರಿಫಲಾ ಚೂರ್ಣವನ್ನು ವೈದ್ಯರ ಸಲಹೆಯಂತೆ ಆಯಾ ದೇಹಕ್ಕೆ ಹೊಂದುವಂತೆ ಸರಿಪ್ರಮಾಣದಲ್ಲಿ ತೆಗೆದುಕೊಳ್ಳುವುದು ಉತ್ತಮ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com