ನೆನಪಿನ ಶಕ್ತಿ ಮತ್ತು ಮಿದುಳಿನ ಶಕ್ತಿಯನ್ನು ಹೆಚ್ಚಿಸಲು ಯಾವ ಆಹಾರಗಳನ್ನು ಸೇವಿಸಬೇಕು?

ನಮ್ಮ ಮಿದುಳಿನ ಆರೋಗ್ಯ ನಮ್ಮ ಒಟ್ಟಾರೆ ಆರೋಗ್ಯದ ಮೂಲಾಧಾರ. ಆದ್ದರಿಂದ ನಿಮ್ಮ ಮಿದುಳಿನ ಕಾರ್ಯವನ್ನು ಹೆಚ್ಚಿಸಲು ಸಹಾಯ ಮಾಡುವ ಆಹಾರ ಪದಾರ್ಥಗಳ ಪಟ್ಟಿ ಇಲ್ಲಿದೆ ನೋಡಿ...
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಮನುಷ್ಯನಿಗೆ ವಯಸ್ಸಾಗುತ್ತಾ ಹೋದಂತೆ ಮಿದುಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದಿಲ್ಲ ಎಂಬುದು ಬಹುತೇಕ ಜನರ ಚಿಂತೆಯಾಗಿರುತ್ತದೆ. ವಯಸ್ಸಾಗುವಿಕೆ ನಮ್ಮ ನಿಯಂತ್ರಣದಲ್ಲಿಲ್ಲದಿದ್ದರೂ, ಈ ಪ್ರಮುಖ ಅಂಗವು ಉತ್ತಮವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಲು ಸರಿಯಾದ ಪೋಷಣೆಯನ್ನು ಒದಗಿಸುವುದು ತುಂಬಾ ಮುಖ್ಯ. ಹೃದಯ ಮತ್ತು ಶ್ವಾಸಕೋಶದ ಆರೋಗ್ಯಕರ ಕಾರ್ಯಾಚರಣೆ ಸೇರಿದಂತೆ ನಮ್ಮ ದೇಹದಲ್ಲಿನ ಹೆಚ್ಚಿನ ವಿಷಯಗಳಿಗೆ ಮಿದುಳು ಕಾರಣವಾಗಿದೆ. ಇದು ಮೆಮೊರಿ, ಸ್ಪರ್ಶ ಮತ್ತು ಭಾವನೆಗಳಂತಹ ಮೂಲಭೂತ ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತದೆ ಮತ್ತು ಪ್ರಮುಖ ಮಾನಸಿಕ ಕಾರ್ಯಗಳಲ್ಲಿ ನಮಗೆ ಸಹಾಯ ಮಾಡುತ್ತದೆ. ನಮ್ಮ ಮಿದುಳಿನ ಆರೋಗ್ಯ ನಮ್ಮ ಒಟ್ಟಾರೆ ಆರೋಗ್ಯದ ಮೂಲಾಧಾರ. ಆದ್ದರಿಂದ ನಿಮ್ಮ ಮಿದುಳಿನ ಕಾರ್ಯವನ್ನು ಹೆಚ್ಚಿಸಲು ಸಹಾಯ ಮಾಡುವ ಆಹಾರ ಪದಾರ್ಥಗಳ ಪಟ್ಟಿ ಇಲ್ಲಿದೆ ನೋಡಿ...

ನಟ್ಸ್ ಮತ್ತು ಸೀಡ್ಸ್‌ಗಳು

ಕೆಲವು ನಟ್ಸ್ ಮತ್ತು ಸೀಡ್ಸ್‌ಗಳು ಪೋಷಕಾಂಶಗಳ ಶಕ್ತಿ ಕೇಂದ್ರಗಳಾಗಿವೆ. ಇವು ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತವೆ. ಕುಂಬಳಕಾಯಿ ಬೀಜಗಳಲ್ಲಿ ಝಿಂಕ್ ಹೇರಳವಾಗಿದ್ದು, ಜ್ಞಾಪಕ ಶಕ್ತಿ ವೃದ್ಧಿಗೆ ತುಂಬಾ ಸಹಕಾರಿ. ವಾಲ್‌ನಟ್ಸ್ ಕೂಡ ಒಮೆಗಾ-3 ಮತ್ತು ಇತರ ಅಗತ್ಯ ಪೋಷಕಾಂಶಗಳನ್ನು ಹೊಂದಿದ್ದು, ಮೆಮೊರಿ ಮತ್ತು ಮಿದುಳಿನ ಕಾರ್ಯಚಟುವಟಿಕೆಗೆ ಅಗತ್ಯವಾಗಿದೆ. ಸೂರ್ಯಕಾಂತಿ ಬೀಜಗಳು ಸೇರಿದಂತೆ ಇತರೆ ವಿವಿಧ ನಟ್ಸ್ ಮತ್ತು ಸೀಡ್ಸ್‌ಗಳಲ್ಲಿನ ವಿಟಮಿನ್ ಇ ಮಿದುಳಿನ ಆರೋಗ್ಯವನ್ನು ಗಮನಾರ್ಹವಾಗಿ ಹೆಚ್ಚಿಸಲು ಅವಶ್ಯಕವಾಗಿದೆ.

ಫ್ಯಾಟಿ ಮೀನು

ಸಾಲ್ಮನ್, ಟ್ರೌಟ್ ಮತ್ತು ಸಾರ್ಡೀನ್‌ ಸೇರಿದಂತೆ ಇತರೆ ಎಣ್ಣೆಯುಕ್ತ ಮೀನುಗಳಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳು ತುಂಬಿರುತ್ತವೆ. ಇದು ನಿಮ್ಮ ಮಿದುಳು ಸರಿಯಾಗಿ ಕಾರ್ಯನಿರ್ವಹಿಸಲು ಅಗತ್ಯವಾಗಿರುತ್ತದೆ. ನಿಮ್ಮ ಮಿದುಳಿನಲ್ಲಿರುವ ಹೆಚ್ಚಿನ ಕೊಬ್ಬಿನ ಕೋಶಗಳು ಒಮೆಗಾ -3 ಕೊಬ್ಬಿನಾಮ್ಲಗಳಾಗಿರುವುದರಿಂದ, ಫ್ಯಾಟಿ ಮೀನುಗಳನ್ನು ನಿಯಮಿತವಾಗಿ ಸೇವಿಸುವುದು ಸ್ಮರಣೆಯನ್ನು ಸುಧಾರಿಸುತ್ತದೆ.

ಸಂಪೂರ್ಣ ಧಾನ್ಯಗಳು

ಧಾನ್ಯಗಳಲ್ಲಿ ಕಂಡುಬರುವ ಫೈಬರ್ ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆ ಮತ್ತು ಮಿದುಳಿಗೆ ಅತ್ಯಗತ್ಯ. ಇದು ರಕ್ತದೊತ್ತಡ ನಿಯಂತ್ರಿಸುವುದರ ಜೊತೆಗೆ ಮಿದುಳಿನ ಉರಿಯೂತದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಆರೋಗ್ಯಕರ ದೇಹ ಮತ್ತು ಮನಸ್ಸನ್ನು ಕಾಪಾಡಿಕೊಳ್ಳಲು, ಪ್ರತಿದಿನವೂ ನಿಮ್ಮ ಆಹಾರದಲ್ಲಿ ಧಾನ್ಯಗಳನ್ನು ಸೇರಿಸಲು ಯತ್ನಿಸಿ. ಈ ಧಾನ್ಯಗಳು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹಸಿರು ತರಕಾರಿಗಳು

ಹಸಿರು ತರಕಾರಿಗಳಾದ ಬ್ರೋಕೋಲಿ, ಕೇಲ್ ಮತ್ತು ಪಾಲಕ್‌ನಲ್ಲಿರುವ ಕಬ್ಬಿಣ, ವಿಟಮಿನ್ ಇ, ವಿಟಮಿನ್ ಕೆ ಮತ್ತು ವಿಟಮಿನ್ ಬಿ 9 (ಫೋಲೇಟ್) ಗಳು ಮಿದುಳಿನ ಕೋಶಗಳ ಬೆಳವಣಿಗೆಗೆ ನಿರ್ಣಾಯಕವಾಗಿವೆ ಮತ್ತು ಮೆಮೊರಿ ಸಂಬಂಧಿತ ಸಮಸ್ಯೆಗಳನ್ನು ತಡೆಯುತ್ತದೆ. ಫೋಲೇಟ್ ಅಧಿಕವಾಗಿರುವ ಆಹಾರಗಳನ್ನು ಸೇವಿಸುವುದರಿಂದ ಮಿದುಳಿನ ನರ ಕೋಶಗಳಿಗೆ ಹಾನಿಯುಂಟುಮಾಡುವ ಹೋಮೋಸಿಸ್ಟೈನ್ ಮಟ್ಟ ಕಡಿಮೆಯಾಗುತ್ತದೆ. ವಿಟಮಿನ್ ಕೆ ಅರಿವಿನ ಸುಧಾರಣೆ ಮತ್ತು ಮಾನಸಿಕ ಜಾಗರೂಕತೆಯನ್ನು ಉತ್ತೇಜಿಸುತ್ತದೆ.

ಅವಕಾಡೊ

ಅವಕಾಡೊಗಳನ್ನು ಮಿದುಳಿನ ಆಹಾರವೆಂದೇ ಪರಿಗಣಿಸಲಾಗುತ್ತದೆ. ಏಕೆಂದರೆ, ಅವುಗಳು ನಿರಂತರ ಮಾನಸಿಕ ಆರೋಗ್ಯವನ್ನು ಬೆಂಬಲಿಸುವ ಪ್ರಯೋಜನಕಾರಿ ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿವೆ. ಹೆಚ್ಚುವರಿಯಾಗಿ, ಪೊಟ್ಯಾಸಿಯಮ್ ಮತ್ತು ವಿಟಮಿನ್ ಕೆ ಅನ್ನು ಹೊಂದಿರುತ್ತದೆ. ಇದು ಮಿದುಳಿನ ಅರಿವಿನ ಪ್ರಕ್ರಿಯೆಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಬೆರ್ರಿಗಳು

ಇತ್ತೀಚಿನ ಕೆಲವು ಅಧ್ಯಯನಗಳ ಪ್ರಕಾರ, ನಿಯಮಿತವಾಗಿ ಬ್ಲೂಬೆರಿಗಳನ್ನು ಸೇವಿಸುವುದರಿಂದ ಅಲ್ಪಾವಧಿಯ ಮೆಮೊರಿ ನಷ್ಟವನ್ನು ತಡೆಯಬಹುದು. ಡಾರ್ಕ್ ಬೆರಿಗಳಲ್ಲಿ ಹೇರಳವಾಗಿರುವ ವಿಟಮಿನ್ ಕೆ ಮತ್ತು ಸಿ ನೆನಪಿನ ಶಕ್ತಿಯನ್ನು ಕಾಪಾಡಿಕೊಳ್ಳಲು ಅವಶ್ಯಕ. ಈ ಹಣ್ಣುಗಳಲ್ಲಿನ ಫ್ಲೇವನಾಯ್ಡ್‌ಗಳು ಉರಿಯೂತ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುತ್ತವೆ. ಇವು ಮಿದುಳಿನ ಕೋಶಗಳಲ್ಲಿ ಉರಿಯೂತದ ಅಪಾಯವನ್ನು ಕಡಿಮೆ ಮಾಡುತ್ತದೆ. ಹೆಚ್ಚುವರಿಯಾಗಿ, ನೆನಪಿನ ಶಕ್ತಿ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯಗಳಿಗೆ ಸಹಾಯ ಮಾಡುತ್ತದೆ.

ಅರಿಶಿನ

ಅರಿಶಿನ ಪ್ರಮುಖವಾಗಿ ಮಸಾಲೆ ಪದಾರ್ಥ. ಇದು ಲೆಕ್ಕವಿಲ್ಲದಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ಅನೇಕ ಆಯುರ್ವೇದ ಔಷಧಿಗಳು ಮತ್ತು ಚಿಕಿತ್ಸೆಗಳಲ್ಲಿ ನಿರ್ಣಾಯಕ ಅಂಶವಾಗಿ ಕಾರ್ಯನಿರ್ವಹಿಸುತ್ತದೆ. ಇದು ಮಿದುಳಿನ ಟಾನಿಕ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಹೊಸ ಮಿದುಳಿನ ಕೋಶಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದು ಖಿನ್ನತೆ ಮತ್ತು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com