ಬಾದಾಮಿ
ಬಾದಾಮಿ

ಬಾದಾಮಿ ತಿನ್ನುವುದರಿಂದ ಚರ್ಮ, ಕೂದಲು ಮತ್ತು ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನ? ಇಲ್ಲಿದೆ ಮಾಹಿತಿ

ಈ ಪ್ರಪಂಚದಲ್ಲಿ ಅತಿ ಆರೋಗ್ಯಕರ ಆಹಾರಗಳಲ್ಲಿ ಬಾದಾಮಿ ಪ್ರಮುಖ ಸ್ಥಾನ ಪಡೆದಿದ್ದು, ಇದರಲ್ಲಿ ಅದ್ಭುತ ಆರೋಗ್ಯಕರ ಪ್ರಯೋಜನಗಳಿವೆ. ಬಾದಾಮಿ ಪೋಷಕಾಂಶವುಳ್ಳ ಪದಾರ್ಥವಾಗಿದ್ದು, ಬಾದಾಮಿಯಿಂದ ನಮ್ಮ ಚರ್ಮ, ಕೂಡಲು ಹಾಗೂ ಆರೋಗ್ಯಕ್ಕೆ ಹಲವು ಪ್ರಯೋಜನಕಾರಿ ಅಂಶಗಳಿವೆ.

ಕೂದಲಿನ ಹೊಳಪು ಮತ್ತು ಬಲವನ್ನು ಹೆಚ್ಚಿಸುತ್ತದೆ

ಇದರಲ್ಲಿರುವ ವಿಟಮಿನ್ ಇ, ಆಂಟಿಆಕ್ಸಿಡೆಂಟ್ಸ್, ಆರೋಗ್ಯಕರ ಕೊಬ್ಬು ನಮ್ಮ ಚರ್ಮವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ. ಬಾದಾಮಿ ಚರ್ಮವನ್ನು ತೇವಗೊಳಿಸಲು ಮತ್ತು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ, ಕೊಲ್ಯಾಜಿನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಮತ್ತು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸುತ್ತದೆ.

ಕೂದಲಿನ ಆರೋಗ್ಯ ಹೆಚ್ಚಿಸುತ್ತದೆ

ಬಾದಾಮಿಯು ಕೊಬ್ಬಿನಾಮ್ಲಗಳಿಂದ ತುಂಬಿದ್ದು, ಇದು ಕೂದಲಿನ ಆರೋಗ್ಯ ಹಾಗೂ ಬಲ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬಾದಾಮಿ ಎಣ್ಣೆಯನ್ನು ಕೂದಲಿಗೆ ಹಚ್ಚಿದರೆ, ಕೂದಲಿನ ಆರೋಗ್ಯ ಹೆಚ್ಚಾಗುವುದಲ್ಲದೆ, ಕೂದಲಿನ ಹೊಳಪು ಕೂಡ ಹೆಚ್ಚಾಗುತ್ತದೆ.

ಬಾದಾಮಿಯಲ್ಲಿ ಕಂಡುಬರುವ ಮೆಗ್ನೀಸಿಯಮ್ ಆರೋಗ್ಯಕರ ಕೂದಲನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮೆಗ್ನೀಸಿಯಮ್ ಕೊರತೆಯು ಸಾಮಾನ್ಯವಾಗಿ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಆದ್ದರಿಂದ ಬಾದಾಮಿ ಎಣ್ಣೆ ಅಥವಾ ಬೀಜಗಳನ್ನು ನಿಮ್ಮ ದಿನಚರಿಯಲ್ಲಿ ಸೇರಿಸಿಕೊಂಡರೆ, ಕೂದಲು ತೆಳುವಾಗುವುದನ್ನು ತಡೆಯಬಹುದಾಗಿದೆ.

ಬಾದಾಮಿ ಎಣ್ಣೆಯನ್ನು ನೇರವಾಗಿ ನೆತ್ತಿಗೆ ಹಚ್ಚುವ ಮೂಲಕ, ಕೂದಲಿನ ಬೇರುಗಳನ್ನು ಗಟ್ಟಿ ಮಾಡಬಹುದು. ಇದು ಆರೋಗ್ಯಕರ ಕೂದಲು ಪಡೆಯಲು ಹಾಗೂ ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ.

ಚರ್ಮವನ್ನು ಪೋಷಿಸುತ್ತದೆ

ಬಾದಾಮಿಯು ಚರ್ಮವನ್ನು ಮೃದುಗೊಳಿಸುವ ಮತ್ತು ಆರೋಗ್ಯಕರವಾಗಿರುವಂತೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಅಟೊಪಿಕ್ ಎಸ್ಜಿಮಾದಂತಹ ಒಣ ಚರ್ಮದ ಸಮಸ್ಯೆಗೆ ಚಿಕಿತ್ಸೆ ನೀಡಲು ಬಾದಾಮಿ ಎಣ್ಣೆಯನ್ನು ಹೆಚ್ಚಾಗಿ ಶಿಫಾರಸು ಮಾಡಲಾಗುತ್ತದೆ. ಗರ್ಭಾವಸ್ಥೆಯಿಂದ ಉಂಟಾಗುವ ಗುರುತುಗಳನ್ನೂ ಕಡಿಮೆ ಮಾಡಲು ಇದು ಪರಿಣಾಮಕಾರಿಯಾಗಿದೆ.

ಬಾದಾಮಿಯಲ್ಲಿ ವಿಟಮಿನ್ ಇ ಮತ್ತು ಉತ್ಕರ್ಷಣ ನಿರೋಧಕಗಳಿವೆ, ಇದು ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ವಿಟಮಿನ್ ಇ ಚರ್ಮವನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸಲು ಸಹಾಯ ಮಾಡುತ್ತದೆ, ಇದು ಅಕಾಲಿಕ ವಯಸ್ಸಾಗುವಿಕೆ ಮತ್ತು ಇತರ ಚರ್ಮದ ಸಮಸ್ಯೆಗಳಿಂದ ನಿಮ್ಮ ದೇಹವನ್ನು ದೂರವಿರಿಸುತ್ತದೆ. ಬಾದಾಮಿಯಲ್ಲಿರುವ ಆರೋಗ್ಯಕರ ಕೊಬ್ಬುಗಳು ಚರ್ಮದ ಆರೋಗ್ಯಕ್ಕೆ ಸಹಕಾರಿಯಾಗಿದೆ.

ಉತ್ತಮ ಆರೋಗ್ಯಕ್ಕೆ ಸಹಕಾರಿ

ಬಾದಾಮಿಯು ಮೊನೊಸಾಚುರೇಟೆಡ್ ಫ್ಯಾಟಿ ಆಸಿಡ್ (MUFA) ಗಳಿಂದ ತುಂಬಿದ್ದು, ಇದು ಇನ್ಸುಲಿನ್ ಸುಧಾರಿಸಲು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ. ಬಾದಾಮಿಯಲ್ಲಿರುವ ಹೆಚ್ಚಿನ ಫೈಬರ್ ಮತ್ತು ಆಂಟಿಆಕ್ಸಿಡೆಂಟ್ ಅಂಶವು ಚರ್ಮದ ಕ್ಯಾನ್ಸರ್ ನಿಂದ ದೇಹವನ್ನು ರಕ್ಷಿಸಲು ಮತ್ತು ಹಾನಿಕಾರಕ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ತೂಕ ನಿರ್ವಹಣೆಗೆ ಸಹಾಯಕ

ತೂಕವನ್ನು ನಿರ್ವಹಿಸಲು ಬಯಸುವವರಿಗೆ, ಬಾದಾಮಿ ಉತ್ತಮ ಆಯ್ಕೆಯಾಗಿದೆ. ಬಾದಾಮಿಯಲ್ಲಿರುವ ಪ್ರೋಟೀನ್, ಫೈಬರ್ ಮತ್ತು ಆರೋಗ್ಯಕರ ಕೊಬ್ಬಿನ ಸಂಯೋಜನೆಯು ಹೊಟ್ಟೆ ತುಂಬಿದ ಭಾವನೆಯನ್ನು ಉತ್ತೇಜಿಸುತ್ತದೆ ಮತ್ತು ಒಟ್ಟಾರೆ ಕ್ಯಾಲೊರಿ ಸೇವನೆಯನ್ನು ಕಡಿಮೆ ಮಾಡುತ್ತದೆ. ಬೆರಳೆಣಿಕೆಯಷ್ಟು ಬಾದಾಮಿಯನ್ನು ತಿನ್ನುವುದು ಹಸಿವನ್ನು ನಿಯಂತ್ರಿಸಲು ಮತ್ತು ಅತಿಯಾಗಿ ತಿನ್ನುವುದನ್ನು ತಡೆಯಲು ಸಹಾಯ ಮಾಡುತ್ತದೆ.

ಮೆದುಳಿನ ಆರೋಗ್ಯ ಹೆಚ್ಚಿಸುತ್ತದೆ

ಬಾದಾಮಿಯ ಗುಣಗಳಲ್ಲಿ ಅತ್ಯುತ್ತಮ ಪ್ರಯೋಜನವೆಂದರೆ ಮೆದುಳಿನ ಕ್ಷಮತೆ ಹೆಚ್ಚಿಸುವುದು. ಬಾದಾಮಿಯಲ್ಲಿರುವ ವಿಟಮಿನ್ ಇ ಮೆದುಳಿನ ತಾರ್ಕಿಕ, ಸ್ಮರಣಾ ಮತ್ತು ಚಿಂತನಾ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ ಹಾಗೂ ಮರೆಗುಳಿತನವನ್ನು ಇಲ್ಲವಾಗಿಸುತ್ತದೆ. ಮಕ್ಕಳಿಗೆ ಪರೀಕ್ಷಾ ಸಮಯದಲ್ಲಿ ಹೆಚ್ಚಿನ ಸ್ಮರಣ ಶಕ್ತಿಯ ಅಗತ್ಯವಿರುವ ಕಾರಣದಿಂದಲೇ ತಾಯಂದಿರುವ ಮಕ್ಕಳಿಗೆ ತಪ್ಪದೇ ಬಾದಾಮಿಯನ್ನು ತಿನ್ನಿಸುತ್ತಾರೆ.

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ

ಬಾದಾಮಿಯನ್ನು ಒಣದಾಗಿದ್ದಾಗ ಸೇವಿಸುವುದಕ್ಕಿಂತ ನೆನೆಸಿಟ್ಟು ಸೇವಿಸಿದಾಗ ಜೀರ್ಣಿಸಿಕೊಳ್ಳುವುದು ಸುಲಭ. ನೆನೆಸಿಟ್ಟ ಬಾದಾಮಿ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಅಲ್ಲದೇ, ಪೋಷಕಾಂಶಗಳನ್ನು ಹೀರಿಕೊಳ್ಳಲು ಹೆಚ್ಚಿನ ಸಹಾಯ ಸಿಗುತ್ತದೆ. ಈ ಪೋಷಕಾಂಶಗಳು ಜೀರ್ಣಕ್ರಿಯೆಯನ್ನು ಉತ್ತೇಜಿಸುವ ಕಿಣ್ವಗಳ ಉತ್ಪಾದನೆಗೆ ಪ್ರಚೋದನೆ ನೀಡುತ್ತವೆ. ಪರಿಣಾಮವಾಗಿ ಜೀರ್ಣಕ್ರಿಯೆ ಸುಲಭ ಮತ್ತು ಪರಿಪೂರ್ಣವಾಗುತ್ತದೆ.

ಉರಿಯೂತ ಕಡಿಮೆ ಮಾಡುತ್ತದೆ

ಬಾದಾಮಿಯು ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಪಾಲಿಫಿನಾಲ್ ಉರಿಯೂತ ಕಡಿಮೆಗೊಳಿಸುವ ಸಾಮರ್ಥ್ಯ ಹೊಂದಿರುತ್ತದೆ. ನೆನೆಸಿದ ಬಾದಾಮಿ ತಿನ್ನುವುದರಿಂದ ಮುಖದ ಮೇಲೆ ಮೊಡವೆ, ಎಸ್ಜಿಮಾ, ಮತ್ತು ಸೋರಿಯಾಸಿಸ್ ನಂತಹ ಸಮಸ್ಯೆಗಳು ಸಹ ದೂರವಾಗುತ್ತದೆ. ಆರೋಗ್ಯಕರ ಕಾಂತಿಯುಕ್ತ ಚರ್ಮ ನಿಮ್ಮದಾಗುತ್ತದೆ.

ಮಿತವಾಗಿ ಸೇವಿಸಿ

ಒಂದು ದಿನಕ್ಕೆ ಸರಿಸುಮಾರು 23 ಬಾದಾಮಿಗಳನ್ನು ತಿನ್ನಬಹುದು ಎಂದು ತಜ್ಞರು ಶಿಫಾರಸು ಮಾಡುತ್ತಾರೆ. ಬಾದಾಮಿಯ ಬಹುತೇಕ ಎಲ್ಲಾ ಪೋಷಕಾಂಶಗಳು ಒಳಗಿನ ತಿರುಳಿನಲ್ಲಿದೆ ಹಾಗೂ ಸಿಪ್ಪೆಯಲ್ಲಿ ಅತ್ಯಲ್ಪ ಪ್ರಮಾಣದಲ್ಲಿವೆ. ಸಿಪ್ಪೆಯಲ್ಲಿ ಕರಗದ ನಾರು ಹೆಚ್ಚಿನ ಪ್ರಮಾಣದಲ್ಲಿದೆ. ಹಾಗಾಗಿ, ಸಿಪ್ಪೆ ಸಹಿತ ತಿನ್ನುವುದು ಉತ್ತಮವೇ ಆದರೂ ಕಡ್ಡಾಯವಲ್ಲ. ಸಿಪ್ಪೆ ನಿವಾರಿಸಿ ತಿನ್ನುವುದರಿಂದ ಹೆಚ್ಚಿನ ನಷ್ಟವೇನೂ ಇಲ್ಲದ ಕಾರಣ ಹಾಗೂ ಸಿಪ್ಪೆಯ ಮೂಲಕ ಸಿಗಬಹುದಾದ ಕರಗದ ನಾರಿನ ಅಂಶ ಬೇರೆ ಆಹಾರದ ಮೂಲಕವೂ ಸಿಗುವ ಸಾಧ್ಯತೆ ಹೆಚ್ಚಿರುವ ಕಾರಣ ಸಿಪ್ಪೆಯನ್ನು ನಿವಾರಿಸಿಯೂ ತಿನ್ನಬಹುದು ಎಂದು ತಜ್ಞರು ಹೇಳುತ್ತಾರೆ.

X

Advertisement

X
Kannada Prabha
www.kannadaprabha.com