

ಕೂದಲು (Hair) ಒಬ್ಬರ ನೋಟ ಮತ್ತು ಸೌಂದರ್ಯವನ್ನು ಹೆಚ್ಚಿಸುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಉದ್ದವಾದ, ದಪ್ಪ ಕೂದಲು ಪಡೆಯಲು ಹೆಣ್ಣು ಮಕ್ಕಳು ಪಡುವ ಪರದಾಟ ಅಷ್ಟಿಷ್ಟಲ್ಲ. ಶಾಂಪೂ, ಕಂಡೀಷನರ್, ಎಣ್ಣೆಗಳನೆಲ್ಲ ಬಳಸುತ್ತಾರೆ. ವಾರಕ್ಕೆ ಎರಡರಿಂದ ಮೂರು ಬಾರಿ ತಲೆಗೆ ಎಣ್ಣೆ ಹಾಕಿ ಸ್ನಾನ ಮಾಡುತ್ತಾರೆ. ಆದರೆ, ತಲೆ ಸ್ನಾನ ಮಾಡುವಾಗ ಜೊತೆಗೆ ಕೆಲ ತಪ್ಪುಗಳನ್ನೂ ಮಾಡುತ್ತಾರೆ.
ಈ ನಿಟ್ಟಿನಲ್ಲಿ ತಲೆಗೆ ಸ್ನಾನ ಮಾಡುವಾಗ ಕೆಲ ಸೂಕ್ಷ್ಮತೆಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ಈ ಬಗ್ಗೆ ಗಮನ ಹರಿಸಿದರೆ ಕೂದಲಿನ ಸಮಸ್ಯೆಗಳನ್ನು ದೂರವಾಗಿಸಬಹುದು.
ಕೂದಲಿನ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ, ಸ್ನಾನ ಮಾಡುವಾಗ ನೀರಿನ ತಾಪಮಾನ ಬಹುಮುಖ್ಯ ಪಾತ್ರವಹಿಸುತ್ತದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ತಣ್ಣನೆಯ ಹಾಗೂ ಬೆಚ್ಚಗಿನ ನೀರಿನಲ್ಲಿ, ಚಳಿಗಾಲದಲ್ಲಿ ಹೆಚ್ಚು ಬಿಸಿನೀರಿನಲ್ಲಿ ತಲೆ ಸ್ನಾನ ಮಾಡುವುದುಂಟು. ಇದು ಎಷ್ಟು ಸರಿ...? ಈ ಬಗ್ಗೆ ಇಲ್ಲಿದೆ ಮಾಹಿತಿ...
ಚಳಿಗಾಲದಲ್ಲಿ ಬಿಸಿ ನೀರಿನ ಸ್ನಾನ ನಮ್ಮ ದೇಹಕ್ಕೆ ಮುದ ನೀಡಿದರೂ ಇದರಿಂದ ಹಾನಿ ಇದೆ ಎಂಬುದನ್ನು ನೀವು ಮರೆಯಬಾರದು. ಚಳಿಯಲ್ಲಿ ನೆಮ್ಮದಿ ಸಿಗುತ್ತದೆ ಎಂದು ನೀವು ಹೊಗೆಯಾಡುವಷ್ಟು ಬಿಸಿಯಾದ ನೀರಿನಿಂದ ಸ್ನಾನ ಮಾಡಿದರೆ ಅದು ಅತೀ ಹೆಚ್ಚು ಕೂದಲು ಸಮಸ್ಯೆಗೆ ಕಾರಣವಾಗುತ್ತದೆ?
ಇದು ಅದು ಒಂದೇ ದಿನದಲ್ಲಿ ಉಂಟಾಗುವ ಪ್ರಕ್ರಿಯೆ ಅಲ್ಲ, ನಿಧಾನಗತಿಯಲ್ಲಿ ಅದರ ಪರಿಣಾಮ ನಮಗೆ ತಿಳಿಯುತ್ತದೆ. ಸಾಮಾನ್ಯವಾಗಿ ನಮ್ಮ ತಲೆ ಮೇಲಿನ ಪದರವು ಎಣ್ಣೆಯ ಅಂಶವನ್ನು ತನ್ನಲ್ಲಿ ಹಿಡಿದುಕೊಂಡಿರುತ್ತದೆ. ಆದರೆ, ಬಿಸಿ ನೀರಿನ ಸ್ನಾನವು ಈ ಅಂಶವನ್ನು ತೆಗೆಯಲು ಕಾರಣವಾಗುತ್ತದೆ. ಇದೊಂದು ನೈಸರ್ಗಿಕ ರೀತಿಯ ಆಯಿಲ್ ಆಗಿರಲಿದೆ. ಆದರೆ, ಬಿಸಿನೀರು ನಮ್ಮ ತಲೆ ಮೇಲಿನ ಪದ ನಾಶಕ್ಕೆ ಕಾರಣವಾಗುತ್ತದೆ. ಇದು ತಲೆಯಲ್ಲಿ ಹೊಟ್ಟು ಉಂಟಾಗಲು ಕಾರಣವಾಗುತ್ತದೆ.
ಈ ಅಂಶ ತಲೆಯಿಂದ ಹೊರಟು ಹೋಗುವುದರಿಂದ ನಿಮ್ಮ ಕೂದಲು ಒಣಗುತ್ತದೆ, ಬಿರುಕು ಉಂಟಾಗುತ್ತದೆ ಮತ್ತು ನಂತರದ ದಿನಗಳಲ್ಲಿ ಸೀಳುವುದು, ಅರ್ಧಕ್ಕೆ ತುಂಡಾಗುವುದು, ಮೊಂಡಾಗುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಬಿಸಿ ನೀರಿನ ಸ್ನಾನವೂ ಒಂದು ಕಾರಣವಾಗಿರಲಿದೆ. ಅದರಲ್ಲೂ ನೀವು ಕೂದಲಿಗೆ ಕಲರಿಂಗ್ ಮಾಡಿದ್ದರೆ ಬಿಸಿ ನೀರಿನ ಸ್ನಾನವು ವಿನಾಶಕ್ಕೆ ಸುಲಭ ದಾರಿ ಮಾಡಿಕೊಡಲಿದೆ.
ನಿಮ್ಮ ಕೂದಲು ಬಣ್ಣ ಕಳೆದುಕೊಳ್ಳುವುದು, ಶೈನಿಂಗ್ ಕಡಿಮೆಯಾಗುವುದು, ಕೂದಲಿನ ಬುಡ ದುರ್ಬಲವಾಗಲು ಕೂಡ ಇದು ಕಾರಣವಾಗಬಹುದು. ಹಾಗೆ ನಿಮ್ಮ ನೆತ್ತಿಯ ಮೇಲೆ ಬಿಸಿ ನೀರು ಬೀಳುವುದರಿಂದ ಬೇಗ ಒಣಗಿದಂತೆ ಅನುಭವವಾಗಬಹುದು, ಇದರಿಂದ ನಿಮ್ಮ ನೆತ್ತಿ ಮೇಲಿನ ಕೂದಲು ಬಹುಬೇಗ ಉದುರಲು ಆರಂಭಿಸಬಹುದು. ಶಾಖದಿಂದಾಗಿ ನೆತ್ತಿ ಒಣಗುವುದು, ತುರಿಕೆ, ಸಿಪ್ಪೆ ಸುಲಿಯುವುದು ಉಂಟಾಗಬಹುದು.
ಕೂದಲಿನ ಆರೋಗ್ಯ ಕಾಪಾಡಲು ಉಗುರು ಬೆಚ್ಚಗಿನ ನೀರು ಬಳಕೆ ಮಾಡುವುದು ಉತ್ತಮ. ಎಣ್ಣೆ ಹಚ್ಚಿ ಕೆಲ ಸಮಯ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದು ಉತ್ತಮ ಅಭ್ಯಾಸವಾಗಿದೆ.
ತಣ್ಣಗಿನ ನೀರು ಕೂಡ ಕೂದಲಿನ ಆರೋಗ್ಯ ಕಾಪಾಡಲು ಪ್ರಯೋಜನಗಳನ್ನೂ ನೀಡುತ್ತದೆ. ಕಂಡೀಷನರ್ ಹಾಕಿದ ಬಳಿಕ ತಣ್ಣಗಿನ ನೀರಿನಲ್ಲಿ ತೊಳೆಯುವುದರಿಂದ ಅದು ಕೂದಲಿನ ಹೊರಪೊರೆ ಮುಚ್ಚಲು ಸಹಾಯ ಮಾಡುತ್ತದೆ. ಇದು ಕೂದಲು ಉದುರುವುದನ್ನು ತಡೆಯುತ್ತದೆ. ಅಲ್ಲದೆ, ಕೂದಲು ಹೊಳೆಯುವಂತೆಯೂ ಮಾಡುತ್ತದೆ. ಶಾಂಪು ಹಾಕಿದ ಬಳಿಕ ತೊಳೆಯಲು ಉಗುರು ಬೆಚ್ಚಗಿನ ನೀರನ್ನು ಉಪಯೋಗಿಸಿದರೆ, ಕಂಡೀಷನ್ ಬಳಸಿದಾಗ ತಣ್ಣಗಿನ ನೀರಿನಿಂದ ತೊಳೆಯುವುದರಿಂದ ಉತ್ತಮ ಪ್ರಯೋಜನ ಪಡೆಯಬಹುದು.
Advertisement