

ಒಬ್ಬ ವ್ಯಕ್ತಿಗೆ ಒಮ್ಮೆ ಮಧುಮೇಹ ಕಾಣಿಸಿಕೊಂಡರೆ ಅದು ಜೀವನ ಪರ್ಯಂತ ಅವರನ್ನು ಕಾಡುತ್ತಲೇ ಇರುತ್ತದೆ. ಈ ಕಾಯಿಲೆಯಿಂದಾಗಿ ರಕ್ತದಲ್ಲಿ ಸಕ್ಕರೆಮಟ್ಟ ಹೆಚ್ಚು ಕಡಿಮೆ ಆಗುತ್ತಲೇ ಇರುತ್ತದೆ, ಆದರೆ, ಸಮಸ್ಯೆಯಂತೂ ದೂರಾಗುವುದಿಲ್ಲ. ಹೀಗಾಗಿ ಇದನ್ನು ನಿರ್ವಹಣೆ ಮಾಡಿ ಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ,
ನವೆಂಬರ್ 14 ಸ್ಮರಣೀಯ ದಿನವಾಗಿದ್ದು, ಈ ದಿನವನ್ನು ವಿಶ್ವ ಮಧುಮೇಹ ದಿನವನ್ನಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತದೆ. ನವೆಂಬರ್ 14 ಇನ್ಸುಲಿನ್ ಅನ್ನು ಕಂಡುಹಿಡಿದ ಡಾ. ಫ್ರೆಡರಿಕ್ ಬ್ಯಾಂಟಿಂಗ್ ಅವರ ಜನ್ಮದಿನವಾಗಿದ್ದು, ಹೀಗಾಗಿಸ, ಈ ದಿನವನ್ನು ವಿಶ್ವ ಮಧುಮೇಹ ದಿನವಾಗಿ ಆಚರಿಸಲಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಮಕ್ಕಳು ಹಾಗೂ ಯುವ ವಯಸ್ಕರಲ್ಲಿ ಟೈಪ್-2 ಮಧುಮೇಹ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಬದಲಾದ ಜೀವನಶೈಲಿಯಿಂದಾಗಿ, ಆಹಾರವೇ ಕಾರಣ ಎಂದು ವೈದ್ಯರು ಹೇಳಿದ್ದಾರೆ.
ಸಕ್ರಾ ವರ್ಲ್ಡ್ ಆಸ್ಪತ್ರೆಯ ಅಂತಃಸ್ರಾವಶಾಸ್ತ್ರ, ಮಧುಮೇಹ, ಬೊಜ್ಜು ಮತ್ತು ತೂಕ ನಿರ್ವಹಣೆಯ ನಿರ್ದೇಶಕ ಡಾ. ಮಂಜುನಾಥ್ ಮಾಳಿಗೆ ಅವರು ಮಾತನಾಡಿ, ಕೊಬ್ಬಿನ ಶೇಖರಣೆಗೆ ಅನುಕೂಲಕರವಾದ "ತ್ರಿಫ್ಟಿ ಫಿನೋಟೈಪ್" ಕಾರಣದಿಂದಾಗಿ ದಕ್ಷಿಣ ಏಷ್ಯನ್ನರು ಮಧುಮೇಹಕ್ಕೆ ಹೆಚ್ಚು ಒಳಗಾಗುತ್ತಾರೆಂದು ಹೇಳಿದ್ದಾರೆ.
ರಾಮಯ್ಯ ಮೆಮೋರಿಯಲ್ ಆಸ್ಪತ್ರೆ ಮುಖ್ಯಸ್ಥೆ ಮತ್ತು ಸಲಹೆಗಾರ್ತಿ ಡಾ. ಚಿತ್ರಾ ಎಸ್ ಅವರು ಮಾತನಾಡಿ, ಟೈಪ್ 2 ಮಧುಮೇಹ ಸಂಸ್ಕರಿಸಿದ ಆಹಾರಗಳ ಹೆಚ್ಚಿನ ಸೇವನೆ, ಕಡಿಮೆ ನಿದ್ರೆ ಮತ್ತು ದೀರ್ಘಕಾಲದ ಒತ್ತಡದಿಂದಾಗಿ ಕಾಣಿಸಿಕೊಳ್ಳುತ್ತದೆ.
ಮಧುಮೇಹ ಹೊಂದಿರುವ ಯುವಜನರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಬಾಲ್ಯದಲ್ಲಿಯೇ ಮಧುಮೇಹ ಸಮಸ್ಯೆಯನ್ನು ಪರಿಹರಿಸದಿದ್ದರೆ, ಮುಂದಿನ 10 ವರ್ಷಗಳಲ್ಲಿ ಶೇ.100ರಷ್ಟು ಜನರಲ್ಲಿ ಮಧುಮೇಹ ಕಾಣಿಸಿಕೊಳ್ಳಬಹುದು ಎಂದು ಎಚ್ಚರಿಸಿದ್ದಾರೆ.
ಆಸ್ಟರ್ ಸಿಎಂಐ ಆಸ್ಪತ್ರೆಯ ಸಲಹೆಗಾರ ಅಂತಃಸ್ರಾವಶಾಸ್ತ್ರಜ್ಞ ಡಾ. ಮಹೇಶ್ ಡಿ.ಎಂ ಅವರು ಮಾತನಾಡಿ, ಇಂದು ಮಕ್ಕಳು ಹೊರಾಂಗಣ ಚಟುವಟಿಕೆಗಳಲ್ಲಿ ಕಡಿಮೆ ಸಮಯ ಕಳೆಯುತ್ತಿದ್ದಾರೆ. ಟಿವಿ, ಮೊಬೈಲ್ ಮೇಲೆ ಹೆಚ್ಚಿ ಅವಲಂಬಿತರಾಗುತ್ತಿದ್ದು. ಹೆಚ್ಚಿನ ಕ್ಯಾಲೋರಿ ಇರುವ ಆಹಾರ ಸೇವನೆ ಮಾಡುತ್ತಿದ್ದಾರೆ. ಇದರಿಂದ ದೈಹಿಕ ಚಟುವಟಿಕೆ ಕಡಿಮೆಯಾಗುತ್ತಿದೆ. ಇದು ಕಳೆದ ದಶಕದಲ್ಲಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಮಧುಮೇಹದಲ್ಲಿ ಶೇ.20ರಷ್ಟು ಹೆಚ್ಚಳಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಟೈಪ್ 2 ಮಧುಮೇಹ ಹೊಂದಿರುವ ಯುವ ವಯಸ್ಕರು ಹೆಚ್ಚಾಗಿ ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಅಸ್ವಸ್ಥತೆಗಳು, ಯುವತಿಯರಲ್ಲಿ ಪಿಸಿಓಎಸ್, ಆಲ್ಕೊಹಾಲ್ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಮತ್ತು ಕೆಲವು ಸಂದರ್ಭಗಳಲ್ಲಿ ಆರಂಭಿಕ ಹೃದಯಾಘಾತ ಅಥವಾ ಪಾರ್ಶ್ವವಾಯು ಸೇರಿದಂತೆ ಬಹು ಸಂಬಂಧಿತ ಪರಿಸ್ಥಿತಿಗಳನ್ನು ಎದುರಿಸಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.
ಅಪೋಲೋ ಶುಗರ್ ಕ್ಲಿನಿಕ್‌ನ ಸಲಹೆಗಾರ ವೈದ್ಯ ಮತ್ತು ಮಧುಮೇಹಶಾಸ್ತ್ರಜ್ಞ ಡಾ. ಬಾಲಾಜಿ ಜಗನ್ಮೋಹನ್ ಅವರು ಮಾತನಾಡಿ, ಶಾಲೆಗಳು ಪೌಷ್ಠಿಕಾಂಶ ಶಿಕ್ಷಣದ ಮೇಲೆ ಕೇಂದ್ರೀಕರಿಸಬೇಕು. ಹೆಚ್ಚಿನ ದೈಹಿಕ ಚಟುವಟಿಕೆಯನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದ್ದಾರೆ.
Advertisement