ನಮ್ಮ ದೇಹಕ್ಕೆ ಮೆಗ್ನೀಸಿಯಮ್ ತುಂಬಾ ಮುಖ್ಯವೇಕೆ..? ಕೊರತೆಯಾದರೆ ಏನಾಗುತ್ತದೆ..?

ನಮ್ಮ ದೇಹವು ಮೆಗ್ನೀಸಿಯಮ್ ಅನ್ನು ಉತ್ಪಾದಿಸುವುದಿಲ್ಲ. ಆದ್ದರಿಂದ ನಾವು ತಿನ್ನುವ ಆಹಾರದಿಂದ ಅಥವಾ ಆಹಾರ ಪೂರಕಗಳಿಂದ ಹೊರಗಿನ ಮೂಲಗಳಿಂದ ಮೆಗ್ನೀಸಿಯಂ ಅನ್ನು ಪಡೆಯಬೇಕು.
file photo
ಸಂಗ್ರಹ ಚಿತ್ರ
Updated on

ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಸಾಕಷ್ಟು ಜನರು ವಿವಿಧ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಆರೋಗ್ಯ ಸಮಸ್ಯೆಗಳಿಗೆ ಮೂಲ ಕಾರಣವೇನು? ಈ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ. ಅನಾರೋಗ್ಯಕ್ಕೆ ಸರಿಯಾದ ಕಾರಣವನ್ನು ಸರಿಯಾದ ಸಮಯದಲ್ಲಿ ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ.

ವಿಶೇಷವಾಗಿ ದೇಹದಲ್ಲಿನ ವಿಟಮಿನ್​ನಂತಹ ಕೊರತೆಯು ವಿವಿಧ ರೋಗಗಳಿಗೆ ಕಾರಣವಾಗುತ್ತದೆ. ಅದೇ ರೀತಿ ನಮ್ಮ ದೇಹವು ಕಾರ್ಯ ನಿರ್ವಹಿಸಲು ಮತ್ತು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮೆಗ್ನೀಸಿಯಮ್ ಅತ್ಯಂತ ಅಗತ್ಯವಿರುವ 7 ಮುಖ್ಯ ಖನಿಜಗಳಲ್ಲಿ ಒಂದಾಗಿದೆ.

ಹೆಚ್ಚಿನ ಜನರು ಕೆಲವು ವಿಟಮಿನ್​ಗಳು ಮತ್ತು ಇತರ ಪೂರಕಗಳ ಮೌಲ್ಯವನ್ನು ಅರ್ಥಮಾಡಿಕೊಂಡಿದ್ದರೂ ಮೆಗ್ನೀಸಿಯಮ್ ಅನ್ನು ಕಡೆಗಣಿಸುತ್ತಾರೆ. ಮೆಗ್ನೀಸಿಯಮ್ ಕೊರತೆಯು ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವುದರಿಂದ ಇದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ.

ಮೆಗ್ನೀಸಿಯಮ್ ಅನೇಕ ಅಗತ್ಯ ದೈಹಿಕ ಕಾರ್ಯಗಳನ್ನು ನಿಯಂತ್ರಿಸಲು ಮತ್ತು ಸುಗಮಗೊಳಿಸಲು ಸಹಾಯ ಮಾಡುತ್ತದೆ. ಮೆಗ್ನೀಸಿಯಮ್ ನಮ್ಮ ದೇಹದಲ್ಲಿನ ಜೀವರಾಸಾಯನಿಕ ಕ್ರಿಯೆಗಳನ್ನು ನಿಯಂತ್ರಿಸಲು ಸಹಾಯ ಮಾಡುವ 300ಕ್ಕೂ ಹೆಚ್ಚು ವಿಭಿನ್ನ ಕಿಣ್ವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ನಮ್ಮ ದೇಹವು ಮೆಗ್ನೀಸಿಯಮ್ ಅನ್ನು ಉತ್ಪಾದಿಸುವುದಿಲ್ಲ. ಆದ್ದರಿಂದ ನಾವು ತಿನ್ನುವ ಆಹಾರದಿಂದ ಅಥವಾ ಆಹಾರ ಪೂರಕಗಳಿಂದ ಹೊರಗಿನ ಮೂಲಗಳಿಂದ ಮೆಗ್ನೀಸಿಯಂ ಅನ್ನು ಪಡೆಯಬೇಕು.

ಮೆಗ್ನೀಸಿಯಮ್ ಕೊರತೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳೇನು...?

ಶಕ್ತಿಯ ಕೊರತೆ

ಮೆಗ್ನೀಸಿಯಮ್ ಅಂಗಾಂಶಗಳಿಗೆ ಶಕ್ತಿ ನೀಡುತ್ತದೆ. ಇದರ ಕೊರತೆ ಆದಾಗ ದೇಹ ದುರ್ಬಲಗೊಳ್ಳುತ್ತದೆ. ದೇಹದಲ್ಲಿ ಮೆಗ್ನೀಸಿಯಮ್ ಮಟ್ಟವು ತುಂಬಾ ಕಡಿಮೆ ಇದ್ದಾಗ ಸೂಕ್ತ ಪ್ರಮಾಣದಲ್ಲಿ ಎಟಿಪಿ ಬಿಡುಗಡೆ ಮಾಡಲು ಸಾಧ್ಯವಾಗದು. ಇದರ ಪರಿಣಾಮವಾಗಿ ಬಳಲಿಕೆ, ನಿಶ್ಯಕ್ತಿ ಮತ್ತು ಸಹನೆ ಇಲ್ಲದಂತೆ ಆಗುವುದು. ಸೂಕ್ತ ಪ್ರಮಾಣದಲ್ಲಿ ವಿಶ್ರಾಂತಿ ಪಡೆದ ಬಳಿಕವೂ ಬಳಲಿಕೆ ಕಂಡು ಬರುತ್ತಲಿದ್ದರೆ, ಆಗ ಮೆಗ್ನೀಸಿಯಮ್ ಸೇವನೆ ಹೆಚ್ಚಿಸಬೇಕು.

ದೇಹದಲ್ಲಿ ಶಕ್ತಿಯ ಮೂಲವಾಗಿರುವಂತಹ ಅಡೆನೊಸಿನ್ ಟ್ರೈಫಾಸ್ಫೇಟ್ (ಎಟಿಪಿ) ಉತ್ಪತ್ತಿಯಲ್ಲಿ ಮೆಗ್ನೀಸಿಯಮ್ ಪ್ರಮುಖ ಪಾತ್ರ ವಹಿಸುವುದು. ಎಟಿಪಿ ಜೀವಶಾಸ್ತ್ರವಾಗಿ ಕ್ರಿಯಾತ್ಮಕವಾಗಲು ಮೆಗ್ನೀಸಿಯಮ್ ಬೇಕು. ಮೆಗ್ನೀಸಿಯಮ್ ಸರಿಯಾಗಿ ಇಲ್ಲದೆ ಇದ್ದರೆ ಆಗ ಅಂಗಾಂಶಗಳು ಶಕ್ತಿಯನ್ನು ಪರಿಣಾಮಕಾರಿಯಾಗಿ ಸಂಗ್ರಹಿಸಲು ತೊಂದರೆ ಅನುಭವಿಸುತ್ತದೆ.​

ಸ್ನಾಯು ಸೆಳೆತ

ಈ ಸಮಸ್ಯೆ ಸಾಮಾನ್ಯವಾಗಿದ್ದು ಈ ಸಮಸ್ಯೆಯಿಂದ ಬಳಲುತ್ತಿರುವವರು ಮನೆಮದ್ದು ಸಲಹೆಗಳನ್ನು ಆರಿಸಿಕೊಳ್ಳಬಹುದು. ಸೆಳೆತ ಮತ್ತು ನಡುಕ ಮೆಗ್ನೀಸಿಯಮ್ ಕೊರತೆಯ ಲಕ್ಷಣಗಳಾಗಿವೆ. ಆದರೆ ಇದಕ್ಕೆ ಬೇರೆ ಕಾರಣಗಳೂ ಇರಬಹುದು. ತೀವ್ರತರವಾದ ಪ್ರಕರಣಗಳಲ್ಲಿ ಮೆಗ್ನೀಸಿಯಮ್ ಕೊರತೆಯು ರೋಗಗ್ರಸ್ತವಾಗುವಿಕೆಗಳಿಗೆ ಕಾರಣವಾಗಬಹುದು.

ಅಸಹಜ ಹೃದಯ ಬಡಿತ

ಮೆಗ್ನೀಸಿಯಮ್ ಕೊರತೆ ನಿಮ್ಮ ಹೃದಯ ಬಡಿತದ ಮೇಲೆ ಪರಿಣಾಮ ಬೀರುತ್ತದೆ. ಹೃದಯ ಸ್ನಾಯುವಿನ ಸಂಕೋಚನ ಮತ್ತು ವಿಶ್ರಾಂತಿಯನ್ನು ನಿಯಂತ್ರಿಸುವ ಅನೇಕ ಖನಿಜಗಳಲ್ಲಿ ಮೆಗ್ನೀಸಿಯಮ್ ಒಂದಾಗಿದೆ. ಇದರ ಕೊರತೆಯು ಹೃದಯ ಬಡಿತವನ್ನು ವೇಗಗೊಳಿಸುತ್ತದೆ. ಇದು ಹೃದಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಖಿನ್ನತೆ ಮತ್ತು ಆತಂಕ

ಮೆಗ್ನೀಸಿಯಮ್ ಕೊರತೆಯು ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ದೇಹದಲ್ಲಿ ಕಡಿಮೆ ಮಟ್ಟದ ಮೆಗ್ನೀಸಿಯಮ್ ಖಿನ್ನತೆಯ ಅಪಾಯವನ್ನು ಹೆಚ್ಚಿಸುತ್ತದೆ. ಮೆಗ್ನೀಸಿಯಮ್ ನರವೈಜ್ಞಾನಿಕ ಮಾರ್ಗಗಳೊಂದಿಗೆ ಸಹಕರಿಸುತ್ತದೆ. ಇದು ಸರಿಯಾಗಿ ಕೆಲಸ ಮಾಡದಿದ್ದರೆ ಖಿನ್ನತೆ ಮತ್ತು ಆತಂಕದಂತಹ ಮಾನಸಿಕ ಅಸ್ವಸ್ಥತೆಗಳಿಗೆ ಕಾರಣವಾಗಬಹುದು.

ದುರ್ಬಲ ಮೂಳೆಗಳು

ಕ್ಯಾಲ್ಸಿಯಂ ಮಾತ್ರವಲ್ಲ, ಮೆಗ್ನೀಸಿಯಮ್ ಕೂಡ ಮೂಳೆಗಳ ಆರೋಗ್ಯದೊಂದಿಗೆ ಬಲವಾದ ಸಂಬಂಧವನ್ನು ಹೊಂದಿದೆ. ದೇಹದಲ್ಲಿನ ಮೆಗ್ನೀಸಿಯಮ್'ನ ಶೇಕಡಾ 50 ಕ್ಕಿಂತ ಹೆಚ್ಚು ಮೂಳೆಗಳಲ್ಲಿ ಸಂಗ್ರಹವಾಗುತ್ತದೆ. ಮೆಗ್ನೀಸಿಯಮ್ ಕೊರತೆಯು ಆಸ್ಟಿಯೊಪೊರೋಸಿಸ್​ನಂತಹ ಮೂಳೆ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗಬಹುದು.

ಆಯಾಸ

ಸ್ನಾಯುವಿನ ಕಾರ್ಯದಲ್ಲಿ ಮೆಗ್ನೀಸಿಯಮ್ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಮೆಗ್ನೀಸಿಯಮ್ ಕೊರತೆಯು ಸ್ನಾಯುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ, ವ್ಯಕ್ತಿಯು ಬೇಗನೆ ದಣಿಯುತ್ತಾನೆ. ಆಯಾಸವು ಇದರ ಪ್ರಾಥಮಿಕ ಪ್ರತಿಕ್ರಿಯೆಯಾಗಿದೆ. ಆದ್ದರಿಂದ ನಿಖರವಾದ ಕಾರಣವನ್ನು ತಿಳಿಯಲು ವೈದ್ಯರನ್ನು ಸಂಪರ್ಕಿಸಿ.

file photo
Apple cider vinegar ಬಗ್ಗೆ ಎಷ್ಟು ಗೊತ್ತು? ಇದರಲ್ಲಿರುವ ಆರೋಗ್ಯ ಪ್ರಯೋಜನೆಗಳೇನು..?

ಮೆಗ್ನೀಸಿಯಮ್ ಕೊರತೆಯಾಗಲು ಕಾರಣವೇನು..?

ಅಸಮರ್ಪಕ ಆಹಾರ ಸೇವನೆ

ಮೆಗ್ನೀಸಿಯಂ ಹೊಂದಿರುವ ಆಹಾರಗಳ ಸೇವನೆ ಕಡಿಮೆ ಇದ್ದರೆ, ದೇಹಕ್ಕೆ ಸಾಕಷ್ಟು ಮೆಗ್ನೀಸಿಯಂ ಲಭಿಸುವುದಿಲ್ಲ.

ಜೀರ್ಣಾಂಗವ್ಯೂಹದ ಸಮಸ್ಯೆಗಳು

ದೀರ್ಘಕಾಲಿಕ ಕಾಯಿಲೆ, ಸೆಲಿಯಾಕ್ ಕಾಯಿಲೆ ಮತ್ತು ಜೀರ್ಣಾಂಗವ್ಯೂಹದ ಶಸ್ತ್ರಚಿಕಿತ್ಸೆಯಂತಹ ಪರಿಸ್ಥಿತಿಗಳು ದೇಹವು ಮೆಗ್ನೀಸಿಯಂ ಅನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ.

ಕೆಲ ಔಷಧಿಗಳ ಬಳಕೆ

ಮೂತ್ರವರ್ಧಕಗಳು ಮತ್ತು ಪ್ರೋಟಾನ್ ಪಂಪ್ ಇನ್ಹಿಬಿಟರ್ಗಳು (PPIs) ಮೆಗ್ನೀಸಿಯಂ ದೇಹದಿಂದ ಹೊರಹಾಕುವಿಕೆಯನ್ನು ಹೆಚ್ಚಿಸಬಹುದು ಅಥವಾ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡಬಹುದು.

ಮದ್ಯಪಾನ

ದೀರ್ಘಕಾಲದ ಆಲ್ಕೋಹಾಲ್ ಸೇವನೆಯು ಮೆಗ್ನೀಸಿಯಂ ಅನ್ನು ದೇಹವು ಹೀರಿಕೊಳ್ಳುವ ಮತ್ತು ಉಳಿಸಿಕೊಳ್ಳುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.

ವಯಸ್ಸಾಗುವಿಕೆ

ವಯಸ್ಸಾದಂತೆ, ದೇಹವು ಮೆಗ್ನೀಸಿಯಂ ಅನ್ನು ಹೀರಿಕೊಳ್ಳುವ ಮತ್ತು ಉಳಿಸಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳಬಹುದು, ಇದರಿಂದಾಗಿ ಕೊರತೆಯ ಪ್ರಮಾಣ ಹೆಚ್ಚಾಗುತ್ತದೆ.

ಅತಿಯಾದ ಬೆವರುವಿಕೆ

ತೀವ್ರ ಬೆವರುವಿಕೆಯು ಮೆಗ್ನೀಸಿಯಂ ನಷ್ಟಕ್ಕೆ ಕಾರಣವಾಗಬಹುದು, ವಿಶೇಷವಾಗಿ ಕ್ರೀಡಾಪಟುಗಳಲ್ಲಿ ಮತ್ತು ಕೆಲವು ವೈದ್ಯಕೀಯ ಪರಿಸ್ಥಿತಿಗಳಿರುವವರಲ್ಲಿ.

ಅಪೌಷ್ಟಿಕತೆ

ಅಪೌಷ್ಟಿಕತೆ ಅಥವಾ ಹಸಿವಿನ ಪರಿಸ್ಥಿತಿಗಳು ಮೆಗ್ನೀಸಿಯಂ ಕೊರತೆಗೆ ಕಾರಣವಾಗಬಹುದು. ಇದಲ್ಲದೆ, ದೀರ್ಘಕಾಲದ ಒತ್ತಡವು ಮೆಗ್ನೀಸಿಯಮ್ ಕೊರತೆಗೆ ಕಾರಣವಾಗುತ್ತದೆ. ಜನನ ನಿಯಂತ್ರಣ ಮಾತ್ರೆಗಳ ಬಳಕೆ ಕೂಡ ಮೆಗ್ನೀಸಿಯಂ ಕೊರತೆಗೆ ಕಾರಣವಾಗುತ್ತದೆ.

file photo
ಹಲಸಿನ ಹಣ್ಣು ತಿಂದು ಬೀಜ ಬಿಸಾಡದಿರಿ... ಇದರಲ್ಲಿದೆ ಬೆಟ್ಟದಷ್ಟು ಪ್ರಯೋಜನ...!

ಕೊರತೆ ನೀಗಿಸಲು ಇರುವ ಆಹಾರ ಮೂಲಗಳು ಯಾವುದು...?

ಮೆಗ್ನೀಸಿಯಮ್ ಕುಂಬಳಕಾಯಿ ಬೀಜಗಳು, ಪಾಲಕ್, ಬೀನ್ಸ್, ಕಂದು ಅಕ್ಕಿ, ಕಡಲೆಕಾಯಿ, ಬಾದಾಮಿ ಮತ್ತು ಗೋಡಂಬಿಗಳಲ್ಲಿ ಕಂಡುಬರುತ್ತದೆ.

ಬೆಣ್ಣೆ ಹಣ್ಣು (ಆವಕಾಡೊ) ದ್ವಿದಳ ಧಾನ್ಯಗಳು, ಪೌಲ್ಟ್ರಿ ಮತ್ತು ಡಾರ್ಕ್ ಚಾಕೊಲೇಟ್ ಹಾಲಿನಲ್ಲಿಯೂ ಮೆಗ್ನೀಸಿಯಮ್ ಇರುವುದರಿಂದ ಅವುಗಳನ್ನು ಹೆಚ್ಚು ಸೇವಿಸುವುದು ಉತ್ತಮ.

ಕೊರತೆ ಇದೆ ಎಂದು ಇವುಗಳನ್ನೇ ಹೆಚ್ಚು ಸೇವಿಸದಿರಿ. ಅತಿಯಾದರೆ, ಅಮೃತವೂ ವಿಷವಾಗುವುದು ಎಂಬ ಮಾತಿದೆ. ಹೀಗಾಗಿ ಹೆಚ್ಚುವರಿ ಮೆಗ್ನೀಸಿಯಮ್ ಅತಿಸಾರ ಅಥವಾ ಇತರ ಜೀರ್ಣಕಾರಿ ಅಸ್ವಸ್ಥತೆಯನ್ನು ಉಂಟುಮಾಡಬಹುದು.

ಮೆಗ್ನೀಸಿಯಮ್‌ನಲ್ಲೂ ಹಲವು ರೂಪಗಳಿವೆ. ಇದರಲ್ಲಿ ಪ್ರತಿಯೊಂದೂ ನಿರ್ದಿಷ್ಟ ಉಪಯೋಗಗಳನ್ನು ಹೊಂದಿದೆ. ಆ ವಿಧಗಳು ಯಾವುವು? ಇಲ್ಲಿದೆ ಮಾಹಿತಿ...

ಮೆಗ್ನೀಸಿಯಮ್ ಸಿಟ್ರೇಟ್: ಜೀರ್ಣಕಾರಿ ಸಮಸ್ಯೆಗಳು ಮತ್ತು ಮಾನಸಿಕ ಆರೋಗ್ಯ ಬೆಂಬಲಕ್ಕಾಗಿ ಇದನ್ನು ಬಳಸಲಾಗುತ್ತದೆ.

ಮೆಗ್ನೀಸಿಯಮ್ ಕ್ಲೋರೈಡ್: ಎದೆಯುರಿ ಮತ್ತು ಮಲಬದ್ಧತೆಗೆ ಸಹಾಯಕವಾಗಿದೆ, ಇದನ್ನು ಸ್ನಾಯುಗಳ ನೋವಿಗೂ ಬಳಕೆ ಮಾಡಲಾಗುತ್ತದೆ.

ಮೆಗ್ನೀಸಿಯಮ್ ಮಲೇಟ್: ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಬಳಕೆ ಮಾಡಲಾಗುತ್ತದೆ, ಇದು ತಲೆನೋವನ್ನು ತಡೆಯುತ್ತದೆ.

ಮೆಗ್ನೀಸಿಯಮ್ ಸಲ್ಫೇಟ್: ಸ್ನಾಯುಗಳ ಒತ್ತಡವನ್ನು ಕಡಿಮೆ ಮಾಡುವುದು ಮತ್ತು ಒತ್ತಡವನ್ನು ಕಡಿಮೆ ಮಾಡಲು ಇದನ್ನು ಬಳಕೆ ಮಾಡಲಾಗುತ್ತದೆ.

ಮೆಗ್ನೀಸಿಯಮ್ ಗ್ಲೈಸಿನೇಟ್: ನಿದ್ರೆ ಹೆಚ್ಚಿಸಲು ಮತ್ತು ಆತಂಕವನ್ನು ಕಡಿಮೆ ಮಾಡಲು ಬಳಕೆ ಮಾಡಲಾಗುತ್ತದೆ.

ಮೆಗ್ನೀಸಿಯಮ್ ಟೌರೇಟ್: ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com