ಮಳೆಗಾಲದ ಜ್ವರ ಲಘುವಾಗಿ ತೆಗೆದುಕೊಳ್ಳಬೇಡಿ: ಒಂದೇ ಲಕ್ಷಣದ ಹಿಂದೆ ಅಡಗಿದೆ 3 ಸೋಂಕುಗಳು, ಡೆಂಗ್ಯೂ, ಚಿಕುನ್‌ಗುನ್ಯಾ, ಝಿಕಾ; ಗುರುತಿಸೋದು ಹೇಗೆ..?

ಡೆಂಗ್ಯೂ, ಚಿಕೂನ್‌ಗುನ್ಯಾ ಮತ್ತು ಝೀಕಾ ಸೋಂಕುಗಳು ಆರಂಭದ ದಿನಗಳಲ್ಲಿ ಬಹುತೇಕ ಒಂದೇ ರೀತಿಯ ಲಕ್ಷಣಗಳನ್ನು ತೋರಿಸಬಹುದು. ವಿಶೇಷವೆಂದರೆ, ಈ ಮೂರೂ ಸೋಂಕುಗಳು ಈಡಿಸ್‌ ಜಾತಿಯ ಸೊಳ್ಳೆಗಳ ಮೂಲಕ ಹರಡುತ್ತವೆ.
File photo
ಸಂಗ್ರಹ ಚಿತ್ರ
Updated on: 

ಮಳೆಗಾಲ ಆರಂಭವಾಗುತ್ತಿದ್ದಂತೆ ಮನೆಗಳ ಸುತ್ತಮುತ್ತ ನೀರು ಸಂಗ್ರಹವಾಗುವ ಹೂವಿನ ಕುಂಡಗಳು, ಹಳೆಯ ಟೈರ್‌ಗಳು, ಟೆರೇಸ್‌ಗಳು ಸೊಳ್ಳೆಗಳ ಸಂತಾನೋತ್ಪತ್ತಿಗೆ ತಾಣವಾಗುತ್ತವೆ. ಇದಲ್ವದೆ, ಮಳೆ ನೀರು ನಿಂತಿರುವ ತೆರೆದ ಪಾತ್ರೆಗಳು, ಒಡೆದ ಬಕೆಟ್‌ಗಳು, ತೆಂಗಿನ ಚಿಪ್ಪುಗಳು ಹಾಗೂ ನೀರು ಹರಿಯದೆ ನಿಂತಿರುವ ಚರಂಡಿಗಳೂ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತವೆ.

ಇಂತಹ ವಾತಾವರಣದಲ್ಲಿ ಸೊಳ್ಳೆಗಳ ಸಂಖ್ಯೆ ಹೆಚ್ಚಾಗುವುದರಿಂದ ಡೆಂಗ್ಯೂ, ಚಿಕುನ್‌ಗುನ್ಯಾ ಮತ್ತು ಝಿಕಾದಂತಹ ಸೋಂಕುಗಳು ಹರಡುವ ಅಪಾಯವೂ ಹೆಚ್ಚುತ್ತದೆ. ಹೀಗಾಗ ಮಳೆಗಾಲದಲ್ಲಿ ಜ್ವರ, ತಲೆನೋವು, ಮೈಕೈ ನೋವು ಕಾಣಿಸಿಕೊಂಡಾಗ ಅದು ಸಾಮಾನ್ಯ ಜ್ವರವೆಂದು ಭಾವಿಸಿ ನಿರ್ಲಕ್ಷಿಸುವ ಬದಲು, ಅದರ ಹಿಂದಿನ ಕಾರಣವನ್ನು ತಿಳಿದುಕೊಳ್ಳುವುದು ಮುಖ್ಯ. ಏಕೆಂದರೆ ಈ ಮೂರೂ ಸೋಂಕುಗಳು ಆರಂಭದಲ್ಲಿ ಬಹುತೇಕ ಒಂದೇ ರೀತಿಯ ಲಕ್ಷಣಗಳನ್ನು ತೋರಿಸುತ್ತವೆ. ಹಾಗಾದರೆ ಡೆಂಗ್ಯೂ, ಚಿಕೂನ್‌ಗುನ್ಯಾ ಮತ್ತು ಝೀಕಾ ನಡುವಿನ ವ್ಯತ್ಯಾಸವೇನು? ಯಾವ ಲಕ್ಷಣಗಳು ಅಪಾಯದ ಸೂಚನೆ ನೀಡುತ್ತವೆ? ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು? ಈ ಬಗ್ಗೆ ವೈದ್ಯರು ನೀಡುವ ಸಲಹೆಗಳನ್ನು ತಿಳಿದುಕೊಳ್ಳೋಣ.

ಡೆಂಗ್ಯೂ, ಚಿಕುನ್‌ಗುನ್ಯಾ ಮತ್ತು ಝಿಕಾ ಸೋಂಕುಗಳು ಆರಂಭದ ದಿನಗಳಲ್ಲಿ ಬಹುತೇಕ ಒಂದೇ ರೀತಿಯ ಲಕ್ಷಣಗಳನ್ನು ತೋರಿಸಬಹುದು. ವಿಶೇಷವೆಂದರೆ, ಈ ಮೂರೂ ಸೋಂಕುಗಳು ಈಡಿಸ್‌ ಜಾತಿಯ ಸೊಳ್ಳೆಗಳ ಮೂಲಕ ಹರಡುತ್ತವೆ.

ಹೀಗಾಗಿ ಕೇವಲ ಜ್ವರದ ಲಕ್ಷಣಗಳನ್ನು ಗಮನಿಸಿ ಯಾವ ಸೋಂಕು ತಗುಲಿದೆ ಎಂದು ನಿರ್ಧರಿಸುವುದು ಕಷ್ಟ. ರೋಗದ ಸ್ವರೂಪ, ಕಾಣಿಸಿಕೊಳ್ಳುವ ಲಕ್ಷಣಗಳು ಮತ್ತು ರಕ್ತ ಪರೀಕ್ಷೆಯ ಫಲಿತಾಂಶಗಳ ಆಧಾರದಲ್ಲಿ ವೈದ್ಯರು ಸೋಂಕನ್ನು ಪತ್ತೆಹಚ್ಚುತ್ತಾರೆ.

ಗುರುಗ್ರಾಮದ ಸಿಕೆ ಬಿರ್ಲಾ ಆಸ್ಪತ್ರೆಯ ಆಂತರಿಕ ವೈದ್ಯಕೀಯ ವಿಭಾಗದ ಸಹ ನಿರ್ದೇಶಕ ಡಾ. ತುಷಾರ್ ತಯಾಲ್ ಅವರ ಪ್ರಕಾರ, ಡೆಂಗ್ಯೂ, ಚಿಕುನ್‌ಗುನ್ಯಾ ಮತ್ತು ಝಿಕಾ ಸೋಂಕುಗಳು ಜ್ವರ, ತಲೆನೋವು, ಸ್ನಾಯು ನೋವು ಹಾಗೂ ಮೈಕೈ ನೋವಿನಂತಹ ಸಾಮಾನ್ಯ ಲಕ್ಷಣಗಳಿಂದ ಆರಂಭವಾಗಬಹುದು. ಆದಾಗ್ಯೂ ಕೆಲವು ಕ್ಲಿನಿಕಲ್ ಲಕ್ಷಣಗಳು ವೈದ್ಯರಿಗೆ ಸಂಭಾವ್ಯ ಸೋಂಕನ್ನು ಗುರುತಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ಗುರುಗ್ರಾಮದ ಮೆಡಾಂಟಾ ಆಸ್ಪತ್ರೆಯ ಆಂತರಿಕ ವೈದ್ಯಕೀಯ ವಿಭಾಗದ ಉಪಾಧ್ಯಕ್ಷೆ ಡಾ. ಸುಶೀಲಾ ಕಟಾರಿಯಾ ಅವರು ಮಾತನಾಡಿ, ಮೊದಲ ಎರಡು ದಿನಗಳಲ್ಲಿ ಚಿಕುನ್‌ಗುನ್ಯಾ ಮತ್ತು ಝಿಕಾ ಸೋಂಕುಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವುದು ಕಷ್ಟ. ಡೆಂಗ್ಯೂ, ಚಿಕುನ್‌ಗುನ್ಯಾ ಮತ್ತು ಝಿಕಾ ಒಂದೇ ರೀತಿಯ ಲಕ್ಷಣಗಳನ್ನು ತೋರಿಸಿದರೂ, ಡೆಂಗ್ಯೂ ಸೋಂಕಿನ ಸಂದರ್ಭದಲ್ಲಿ ರಕ್ತದಲ್ಲಿನ ಪ್ಲೇಟ್‌ಲೆಟ್‌ಗಳ ಸಂಖ್ಯೆ ತ್ವರಿತವಾಗಿ ಇಳಿಯುವ ಸಾಧ್ಯತೆ ಇರುವುದರಿಂದ ಹೆಚ್ಚಿನ ಎಚ್ಚರಿಕೆ ಅಗತ್ಯ ಎಂದು ತಿಳಿಸಿದ್ದಾರೆ.

File photo
Kidney stones: ಕಿಡ್ನಿಯಲ್ಲಿ ಕಲ್ಲುಗಳಾಗುವುದೇಕೆ? ಪುರುಷರು, ಮಹಿಳೆಯರಲ್ಲಿ ಯಾರಿಗೆ ಅಪಾಯ ಹೆಚ್ಚು?

ಡೆಂಗ್ಯೂ: ತೀವ್ರ ಮೈಕೈ ನೋವು, ಪ್ಲೇಟ್‌ಲೆಟ್‌ಗಳ ಇಳಿಕೆ

ಡೆಂಗ್ಯೂ ಸೋಂಕು ಕಾಣಿಸಿಕೊಂಡಾಗ ತೀವ್ರವಾದ ಮೈಕೈ ನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು ಮತ್ತು ರಕ್ತದಲ್ಲಿನ ಪ್ಲೇಟ್‌ಲೆಟ್‌ಗಳ ಸಂಖ್ಯೆ ಕಡಿಮೆಯಾಗುವ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಕೆಲವು ರೋಗಿಗಳಲ್ಲಿ ಹೊಟ್ಟೆ ನೋವು, ನಿರಂತರ ವಾಂತಿ ಹಾಗೂ ರಕ್ತಸ್ರಾವದಂತಹ ಅಪಾಯಕಾರಿ ಸೂಚನೆಗಳೂ ಕಂಡುಬರಬಹುದು ಎಂದು ಡಾ. ತುಷಾರ್ ತಯಾಲ್ ಹೇಳಿದ್ದಾರೆ.

ಜ್ವರ ಕಡಿಮೆಯಾಗುತ್ತಿದೆ ಎಂದ ಮಾತ್ರಕ್ಕೆ ಅಪಾಯ ದೂರವಾಯಿತು ಎಂದು ಭಾವಿಸಬಾರದು. ಕೆಲವು ಸಂದರ್ಭಗಳಲ್ಲಿ ಜ್ವರ ಇಳಿಯುವ ಸಮಯದಲ್ಲೇ ಡೆಂಗ್ಯೂನಿಂದ ಉಂಟಾಗುವ ತೊಂದರೆಗಳ ಅಪಾಯ ಹೆಚ್ಚಾಗಬಹುದು. ಹೀಗಾಗಿ ಸೋಂಕಿನ ಶಂಕೆ ಇದ್ದಾಗ ಆರಂಭದಲ್ಲೇ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಮತ್ತು ವೈದ್ಯರ ಸಲಹೆಯಂತೆ ಪ್ಲೇಟ್‌ಲೆಟ್‌ಗಳ ಸಂಖ್ಯೆ ಸೇರಿದಂತೆ ಅಗತ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಮುಖ್ಯ.

ಚಿಕುನ್‌ಗುನ್ಯಾ: ಕೀಲು ನೋವು ಪ್ರಮುಖ ಲಕ್ಷಣ

ಚಿಕುನ್‌ಗುನ್ಯಾ ಸೋಂಕಿನಲ್ಲಿ ಕೀಲು ನೋವು ಪ್ರಮುಖ ಲಕ್ಷಣವಾಗಿರುತ್ತದೆ. ಹಠಾತ್ತನೆ ಕಾಣಿಸಿಕೊಳ್ಳುವ ಹೆಚ್ಚಿನ ಜ್ವರದ ಬಳಿಕ ಮಣಿಕಟ್ಟು, ಬೆರಳುಗಳು, ಮೊಣಕಾಲು ಮತ್ತು ಪಾದದ ಕೀಲುಗಳಲ್ಲಿ ತೀವ್ರ ನೋವು ಉಂಟಾಗಬಹುದು. ಕೆಲವರಿಗೆ ಕೈಯಿಂದ ಬಾಟಲಿಯ ಮುಚ್ಚಳ ತೆರೆಯುವುದಕ್ಕೂ, ಮೆಟ್ಟಿಲು ಹತ್ತುವುದಕ್ಕೂ ತೊಂದರೆಯಾಗಬಹುದು.

ಜ್ವರ ಕಡಿಮೆಯಾದ ಬಳಿಕವೂ ಕೀಲು ನೋವು ಮತ್ತು ಬಿಗಿತ ತಕ್ಷಣ ಮಾಯವಾಗದೇ ಹಲವು ವಾರಗಳವರೆಗೆ ಮುಂದುವರಿಯಬಹುದು. ಕೆಲವು ರೋಗಿಗಳಲ್ಲಿ ತಿಂಗಳುಗಳ ಕಾಲವೂ ಈ ಸಮಸ್ಯೆ ಕಾಡುವ ಸಾಧ್ಯತೆ ಇದೆ. ಹೀಗಾಗಿ ಜ್ವರ ಕಡಿಮೆಯಾದರೂ ಕೀಲು ನೋವು ಮುಂದುವರಿದರೆ ನಿರ್ಲಕ್ಷಿಸದೆ ವೈದ್ಯರನ್ನು ಸಂಪರ್ಕಿಸಬೇಕು.

ಝಿಕಾ: ಸೌಮ್ಯ ಲಕ್ಷಣ, ಆದರೆ ಗರ್ಭಿಣಿಯರು ಎಚ್ಚರ ವಹಿಸಬೇಕು

ಝಿಕಾ ಸೋಂಕು ಸಾಮಾನ್ಯವಾಗಿ ಸೌಮ್ಯ ಸ್ವರೂಪದಲ್ಲಿರುತ್ತದೆ. ಕೆಲವರಲ್ಲಿ ಚರ್ಮದ ಮೇಲೆ ಕೆಂಪು ದದ್ದುಗಳು, ಕಣ್ಣು ಕೆಂಪಾಗುವುದು ಮತ್ತು ಕೀಲು ನೋವು ಕಾಣಿಸಿಕೊಳ್ಳಬಹುದು. ಇನ್ನೂ ಕೆಲವರಿಗೆ ಯಾವುದೇ ಸ್ಪಷ್ಟ ಲಕ್ಷಣಗಳು ಕಾಣಿಸದೇ ಇರಬಹುದು. ಆದರೆ ಗರ್ಭಿಣಿಯರು ಈ ಸೋಂಕಿನ ಬಗ್ಗೆ ವಿಶೇಷ ಎಚ್ಚರಿಕೆ ವಹಿಸಬೇಕು ಎಂದು ಡಾ. ಕಟಾರಿಯಾ ಹೇಳಿದ್ದಾರೆ.

ಝಿಕಾ ವೈರಸ್ ಗರ್ಭದಲ್ಲಿರುವ ಮಗುವಿನ ಮೆದುಳಿನ ಬೆಳವಣಿಗೆಗೆ ಹಾನಿಯುಂಟುಮಾಡುವ ಸಾಧ್ಯತೆ ಇದೆ. ಹೀಗಾಗಿ ಗರ್ಭಿಣಿಯರಿಗೆ ಜ್ವರದೊಂದಿಗೆ ಚರ್ಮದ ಮೇಲೆ ದದ್ದುಗಳು ಕಾಣಿಸಿಕೊಂಡರೆ ತಡಮಾಡದೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದೂ ಸಲಹೆ ನೀಡಿದ್ದಾರೆ.

File photo
ಹವಾಮಾನ ಬದಲಾವಣೆ: ಮನುಷ್ಯನ ಮೆದುಳಿನ ಕಾರ್ಯನಿರ್ವಹಣೆಯಲ್ಲಿ ವ್ಯತ್ಯಯ, ಮಾನಸಿಕ ಆರೋಗ್ಯದ ಮೇಲೂ ಪರಿಣಾಮ !

ಸೋಂಕು ಕಾಣಿಸಿಕೊಂಡಾಗ ಏನು ಮಾಡಬೇಕು..?

ಜ್ವರ ಕಾಣಿಸಿಕೊಂಡಾಗ ಸಾಕಷ್ಟು ನೀರು ಮತ್ತು ಇತರ ದ್ರವಗಳನ್ನು ಸೇವಿಸುವುದು ಮುಖ್ಯ. ದೇಹದಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಆದರೆ, ವೈದ್ಯರ ಸಲಹೆಯಿಲ್ಲದೆ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳಬಾರದು. ವಿಶೇಷವಾಗಿ ಡೆಂಗ್ಯೂ ಸೋಂಕು ಇಲ್ಲ ಎಂಬುದು ದೃಢವಾಗುವವರೆಗೆ ಆಸ್ಪಿರಿನ್ ಮತ್ತು ಐಬುಪ್ರೊಫೆನ್‌ನಂತಹ ಔಷಧಗಳನ್ನು ಸ್ವಯಂ ಸೇವಿಸುವುದನ್ನು ತಪ್ಪಿಸಬೇಕು. ಇವು ರಕ್ತಸ್ರಾವದ ಅಪಾಯವನ್ನು ಹೆಚ್ಚಿಸಬಹುದು.

ಯಾವುದೇ ಔಷಧ ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಸುರಕ್ಷಿತ. ಸೋಂಕಿನ ತೀವ್ರತೆಗೆ ಅನುಗುಣವಾಗಿ ವೈದ್ಯರು ಪರೀಕ್ಷೆ, ಚಿಕಿತ್ಸೆ ಮತ್ತು ಮುಂದಿನ ಮೇಲ್ವಿಚಾರಣೆಯ ಬಗ್ಗೆ ನಿರ್ಧರಿಸುತ್ತಾರೆ.

ಯಾವಾಗ ಆಸ್ಪತ್ರೆಗೆ ಹೋಗಬೇಕು..?

  • ರಕ್ತಸ್ರಾವ, ನಿಲ್ಲದ ವಾಂತಿ ಅಥವಾ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡರೆ ಕಾಯಬಾರದು. ಅದೇ ದಿನ ಆಸ್ಪತ್ರೆಗೆ ತೆರಳಿ ವೈದ್ಯಕೀಯ ನೆರವು ಪಡೆಯಬೇಕು. ವಿಶೇಷವಾಗಿ ಡೆಂಗ್ಯೂ ಶಂಕೆ ಇದ್ದಾಗ ಇಂತಹ ಲಕ್ಷಣಗಳನ್ನು ನಿರ್ಲಕ್ಷಿಸುವುದು ಅಪಾಯಕಾರಿ.

  • ಮಳೆಗಾಲದಲ್ಲಿ ಜ್ವರ ಮತ್ತು ಮೈಕೈ ನೋವು ಕಾಣಿಸಿಕೊಂಡಾಗ ಅದು ಸಾಮಾನ್ಯ ಜ್ವರವೆಂದು ನಿರ್ಲಕ್ಷಿಸಬೇಡಿ. ಡೆಂಗ್ಯೂ, ಚಿಕುನ್‌ಗುನ್ಯಾ ಮತ್ತು ಝಿಕಾ ಸೋಂಕುಗಳು ಆರಂಭದಲ್ಲಿ ಒಂದೇ ರೀತಿಯಾಗಿ ಕಾಣಿಸಿಕೊಂಡರೂ, ಅವುಗಳಿಂದ ಉಂಟಾಗುವ ಅಪಾಯಗಳು ಮತ್ತು ಚಿಕಿತ್ಸೆಯ ವಿಧಾನಗಳು ವಿಭಿನ್ನವಾಗಿರುತ್ತದೆ.

  • ಊಹೆಯ ಆಧಾರದಲ್ಲಿ ಔಷಧ ಸೇವಿಸುವ ಬದಲು ವೈದ್ಯರನ್ನು ಸಂಪರ್ಕಿಸಿ ಅಗತ್ಯ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ. ಸಾಕಷ್ಟು ದ್ರವ ಸೇವಿಸಿ, ವೈದ್ಯರ ಸಲಹೆಯಿಲ್ಲದೆ ನೋವು ನಿವಾರಕಗಳನ್ನು ತೆಗೆದುಕೊಳ್ಳಬೇಡಿ. ಅಪಾಯಕಾರಿ ಲಕ್ಷಣಗಳು ಕಂಡುಬಂದರೆ ತಕ್ಷಣ ಆಸ್ಪತ್ರೆಗೆ ತೆರಳಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com