-ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ರಾಷ್ಟ್ರದ ಪವಿತ್ರ ಸಾಂಸ್ಕೃತಿಕ ಕ್ಷೇತ್ರ ಕಾಶಿಯಲ್ಲೂ ಕನ್ನಡದ ಕಲರವ. ಕನ್ನಡ ನಾಡ ಗೀತೆಗಳ ಜತೆಗೆ ವಚನಗಳ ಗಾಯನ. ಅಲ್ಲಿ ಹತ್ತಾರು ವರ್ಷಗಳ ಹಿಂದೆ ನಾಡು ತೊರೆದ ಕನ್ನಡಿಗರ ಸಮಾಗಮ. ಇದಕ್ಕೆ ವೇದಿಕೆ ಒದಗಿಸಿದ್ದು ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆ. ಬೆನ್ನೆಲುಬಾಗಿ ನಿಂತದ್ದು ಕಾಶಿ ಕನ್ನಡ ಸಂಘ. ಹೊರನಾಡಿನಲ್ಲೂ ಕನ್ನಡ ರಾಜ್ಯೋತ್ಸವ ಆಚರಿಸುವುದಕ್ಕೆ ಪ್ರೋತ್ಸಾಹಿಸುತ್ತಿರುವ ವಾರ್ತಾ ಇಲಾಖೆ ಕಾಶಿಯಲ್ಲಿರುವ ಜಂಗಮವಾಡಿಮಠದಲ್ಲಿ ಭಾನುವಾರ ರಾಜ್ಯೋತ್ಸವ ಕಾರ್ಯಕ್ರಮ ಏರ್ಪಡಿಸಿತ್ತು.
ಕಡೂರು ತಾಲೂಕು ಗಿರಿಯಾಪುರದ ಕಲಾವಿದರಿಂದ ಆಕರ್ಷಕ ಕಂಸಾಳೆ ನೃತ್ಯ. ನಂತರ ಚಿತ್ರದುರ್ಗದ ಸಾಣೆಹಳ್ಳಿಯ ಶಿವ ಸಂಚಾರ ಕಲಾತಂಡ ಶರಣ ಸತಿ ಲಿಂಗ ಪತಿ ನಾಟಕ ಪ್ರದರ್ಶನ. ಕನ್ನಡ ಮತ್ತು ಕರ್ನಾಟಕವನ್ನು ಮತ್ತಷ್ಟು ಬಲಿಷ್ಠವಾಗಿ ಕಟ್ಟಬೇಕಾದರೆ, ಹೊರ ನಾಡಿನ ಕನ್ನಡಿಗರು ನಮ್ಮೊಂದಿಗೆ ಸಾಗಬೇಕಾದರೆ ಇಂತಹ ಕಾರ್ಯಕ್ರಮಗಳು ಅತ್ಯಗತ್ಯ ಎಂದು ವಾರ್ತಾ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ಹೇಳಿದರು.
ಕಲೆ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜನರನ್ನು ಒಂದು ಗೂಡಿಸುತ್ತಿರುವ ಕರ್ನಾಟಕ ಸರ್ಕಾರ ಕೆಲಸ ಅಭಿನಂದನಾರ್ಹ ಎಂದು ಬನಾರಸ್ ಹಿಂದೂ ವಿವಿಯ ಸಂಗೀತ ವಿಭಾಗದ ನಿರ್ದೇಶಕಿ ಶಾರದಾ ವೇಲಂಕರ್ ಹೇಳಿದರು. ಸರ್ವಧರ್ಮಗಳು ಶಾಂತಿಯನ್ನೇ ಬಯಸುತ್ತವೆ ಎಂದು ಜಂಗಮವಾಡಿ ಮಠದ ಶ್ರೀ ಡಾ.ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ತಿಳಿಸಿದರು.