ಮಾತಾಡೋ ಪಾತ್ರಗಳೆಂದರೆ ತುಂಬಾನೇ ಇಷ್ಟ: ಯೋಗರಾಜ್ ಭಟ್

ಮಾತಾಡೋ ಪಾತ್ರಗಳಂದರೆ ತುಂಬಾನೇ ಇಷ್ಟ: ಯೋಗರಾಜ್ ಭಟ್
ಯೋಗರಾಜ್ ಭಟ್
ಯೋಗರಾಜ್ ಭಟ್
Updated on

ಬಹುಶಃ ಕನ್ನಡ ಚಿತ್ರರಂಗದಲ್ಲಿ ಒಂದು ಸಿನೆಮಾದ ಮೂಲಕ ಯಶಸ್ಸಿನ ತುತ್ತ ತುದಿ ಏರಿ ಅದಕ್ಕೆ ಜೋತು ಬೀಳದ ನಿರ್ದೇಶಕ ಇವರೊಬ್ಬರೇ ಇರಬೇಕು. ಸದಾ ಜಾಲಿಯಾಗಿರುವ, ಅನಿರೀಕ್ಷತೆಯನ್ನು ಇಷ್ಟ ಪಡುವ, ಪಡ್ಡೆ ಹುಡುಗರ ನಾಡಿಮಿಡಿತ ಬಲ್ಲ, ವ್ಯಂಗ್ಯ-ಹಾಸ್ಯ ರಸಗಳನ್ನು ಆಸ್ವಾದಿಸಿ ಕರಗತ ಮಾಡಿಕೊಂಡಿರುವ ಸಿನೆಮಾ ಕ್ಷೇತ್ರದ ಸಜ್ಜನ ನಿರ್ದೇಶಕ ನಿರ್ಮಾಪಕ ಗೀತ ರಚನಕಾರ ಎಷ್ಟೋ ನವ ನಿರ್ದೇಶಕರಿಗೆ ನೇರ ಗುರು ಯೋಗರಾಜ್ ಭಟ ಕನ್ನಡಪ್ರಭ[ಡಾಟ್]ಕಾಂ ಗೆ ಸಂದರ್ಶನ ಕೊಡಬೇಕೆಂದು ಕೇಳಿದಾಗ ಸರಳತೆಯಿಂದ ಒಪ್ಪಿಕೊಂಡರು. ಅವರ ಮನದಾಳದ ಮಾತು ಈ ಸಂಭಾಷಣೆ...

ಸಿನೆಮಾ ಅಂದ್ರೆ: ನನಗೆ ಸಿನೆಮಾ ಫ್ಯಾಸಿನೇಶನ್ ಯಾಕಂದ್ರೆ, ಒಂದು ದೊಡ್ಡ ಕತ್ತಲೆ ಕೋಣೆಯಲ್ಲಿ ನಾವು ನಿರ್ಮಿಸಿದ ದೃಶ್ಯ ನೋಡೋಕ್ಕೆ, ಶಬ್ದ ಕೇಳೋಕ್ಕೆ ದುಡ್ಡು ಕೊಡ್ತಾರೆ. ಹಾಗೆ ದುಡ್ಡು ಕೊಟ್ಟು ಅಳ್ತಾರೆ-ನಗ್ತಾರೆ. ಅಲ್ಲಿ ಒಂದು ಸಾಲಿನಲ್ಲಿ ಕೂತಿರೋರ್ಗೆ  ಮುಂದಿನ ಸಾಲಿನವರು ಯಾರು ಅಂತ ಗೊತ್ತಿರೋಲ್ಲ. ಹೊರಗೆ ಹೋಗಿ ೧೦೦ ಜನಕ್ಕೆ ನೋಡಿ ಅಂತಾರೆ ಅಥವಾ ೧೦೦ ಜನಕ್ಕೆ ನೋಡಬೇಡಿ ಅಂತಾರೆ. ಸಿನೆಮಾ ಅಂದ್ರೆ ಕತ್ತಲೆ ಕೋಣೆ, ಅಳು ನಗು..

ನಿಮ್ಮ ಮುಂದಿನ ಸಿನೆಮಾ ಹುಟ್ಟೋದು ಯಾವಾಗ: ಕೆಲವೊಂದು ಪಾತ್ರಗಳು ನಿಜ ಜೀವನದಲ್ಲಿ ನನಗೆ ಕಾಣಸಿಗುತ್ವೆ. ಅವುಗಳನ್ನ ಸಿನೆಮಾ ಮಾಡ್ಬೇಕು ಅಂತ ಅನ್ಸಿರುತ್ತೆ. ಆದರೆ ಅವು ಮುಂದೆ ಮರೆತು ಹೋಗ್ತಾವೆ. ಪ್ರತಿ ಸಿನೆಮಾ ಹುಟ್ಟೋದು ಒಂದು ಸಿನೆಮಾದ ಹೆರಿಗೆ ಸಮಯದಲ್ಲೇ. ಮುಂದಿನ ಸಾರ್ತಿ ಸರಿಯಾಗಿ ಪ್ಲಾನ್ ಮಾಡಿ ಮಾಡಬೇಕು, ಈ ತಪ್ಪು ಮಾಡಬಾರದು ಅನ್ಸುತ್ತೆ. ಆದರೆ ಸಿನೆಮಾಗಳು ಸೀರೀಸ್ ಆಫ್ ಮಿಸ್ಟೇಕ್ಸ್.

ಸಿನೆಮಾ ಮತ್ತು ಸಂಭಾಷಣೆ: ಸಂಬಾಷಣೆ ಸಿನೆಮಾದ ಜೀವಾಳ. ನಾನು ಅದರಿಂದಲೇ ಎಲ್ಲವನ್ನು ಹೆಣೆಯೋದು. ಮನುಷ್ಯ ಮೊದಲು ಮಾತಾಡ್ತಾನೆ. ಆಮೇಲೆ ಕಥೆ ಹೇಳ್ತಾನೆ. ಮನುಷ್ಯ ದಿನದಲ್ಲಿ ಸುಮಾರು ೧೦ ಘಂಟೆ ಮಾತಾಡ್ತಾನೆ. ಹೌದು ಇದು ವಿಶುಯಲ್ ಮೀಡಿಯಾ, ಆದರೆ ಭಾರತೀಯ ಸಿನೆಮಾಕ್ಕೆ ಮಾತು ಕೂಡ ಅಷ್ಟೇ ಮುಖ್ಯ. ಮಾತನ್ನು ನಾನು ಇಷ್ಟ ಪಡ್ತೀನಿ, ಪಾತ್ರಗಳನ್ನೂ ಇಷ್ಟ ಪಡ್ತೀನಿ. ಮಾತಾಡೋ ಪಾತ್ರಗಳಂದರೆ ತುಂಬಾನೇ ಇಷ್ಟ. ಅದು ಮೈನಸ್ ಅಂದ್ರೆ ಅದು ನಿಮ್ಮ ಸಮಸ್ಯೆ. ಅದು ಪ್ಲಸ್ ಅಂದ್ರು ನಿಮ್ಮ ಸಮಸ್ಯೆ.

ಸಿನೆಮಾ ಮತ್ತು ಸಂಗೀತ: ಭಾರತೀಯ ಸಿನೆಮಾಗಳಲ್ಲಿ ಸಂಗೀತ ಬಹಳ ಮುಖ್ಯ. ಯಕ್ಷಗಾನ ಇರಬಹುದು, ನೃತ್ಯರೂಪಕಗಳಿರಬಹುದು, ರಾಮಾಯಣ-ಮಹಾಭಾರತಗಳನ್ನು  ಕೂಡ ನಾವು ಹಾಡಿನ ಮೂಲಕವೇ ಹೇಳೋದು, ನಮ್ಮದು ಕ್ಯಾನ್ನಡ್ ಥಿಯೇಟರ್. ಕ್ಯಾನ್ನಡ್ ಕಲ್ಚರ್ ನಿಂದ ಹುಟ್ಟಿರೋದು ನಮ್ಮ ಭಾರತಿಯ ಸಿನೆಮಾ. ಇದಕ್ಕೆ ಬೇರೆ ದೇಶದ ಸಿನೆಮಾಗಳನ್ನು ಹೋಲಿಸುವುದು ಶುದ್ಧ ಮೂರ್ಖತನ. ಇವೊತ್ತಿನ ದಿನ ಸಂಗೀತ ಅಥವಾ ಗೀತ ರಚನೆಯ ಗುಣಮಟ್ಟದಲ್ಲಿ ಕಳಪೆಯಾಗಿಲ್ಲ. ಇವೊತ್ತೂ ಕೂಡ ಪ್ರತಿಭಾವಂತರಿದ್ದಾರೆ.ಇವೊತ್ತು ಕೂಡ ಅದ್ಭುತ ಸಿನೆಮಾ ಹಾಡುಗಳಿವೆ.

ಗೀತರಚನೆಯಲ್ಲಿ ವಿಶೇಷ ಆಸಕ್ತಿ: ನಾನು ಹಾಡುಗಳನ್ನು ಬರೆಯೋದು ಕಡಿಮೇನೆ.ಈ ಆಸಕ್ತಿ ಸಂಭಾಷಣೆ ಇಂದ ಹುಟ್ಟಿದ್ದು. ಯಾರು ಯಾರೋ ಯಾಕೆ ಹಾಡು ಬರೀಬೇಕು ನಾವೇ ಯಾಕೆ ಬರಿಬಾರ್ದು ಅಂತ ಕೂಡ ನನಗೆ ಅನ್ಸಿತ್ತು. ಸೂರಿಗೆ ಒಂದು ವಿಕೆಡ್ ಸೆನ್ಸ್ ಆಫ್ ಹ್ಯೂಮರ್ ಇದೆ. ನನಗೂ ಇದೆ. ಅದನ್ನು ಬಳಸಿಕೊಂಡು ಗೀತೆ ರಚನೆ ಮಾಡಿದ್ದು. ಅವರ ಸಿನೆಮಾಗೆ ಹಾಡು ಬರೆದುಕೊಟ್ಟೆ. ಹಾಗೆ ಅಲ್ಲಿ ಇಲ್ಲಿ ಬರೆದು ಕೊಟ್ಟೆ. ಹಾಗೆ ನೋಡಿದರೆ ಬರೆದಿರೋದು ಕಡಿಮೇನೆ. ಅದು ಬದಲಾಗಿ ಬೇರೆ ಬೇರೆ ರೂಪ ಪಡೆದು ಸಿಕ್ಕಾಪಟ್ಟೆ ಬರೆದಿದ್ದೇನೆ ಅಂತ ಜನ ಅಂದುಕೊಂಡಿದ್ದಾರೆ ಅಷ್ಟೇ!

ಗೀತರಚನೆಗೆ ಬೇಕಾದ ಸಿದ್ಧತೆ : ಸಂಗೀತ ಜ್ಞಾನ ಚೆನ್ನಾಗಿರಬೇಕು. ಅಂದರೆ ಸಂಗೀತ ಕಲಿತರಬೇಕೆ ಅಂದಲ್ಲ. ಕೇಳಿರುವ ಅನುಭವ ಇರಬೇಕು. ಇದು ಒಳ್ಳೆಯ ಸಂಗೀತ, ಇದು ಅನ್ ಪ್ರೆಡಿಕ್ಟಬಲ್ ಸೌಂಡ್ ಎಂದು ಗುರುತಿಸುವಷ್ಟು ಜ್ಞಾನ ಇರಬೇಕು. ಸಂಗೀತ-ಹಾಡುಗಳನ್ನು ಕೇಳುವುದರಲ್ಲಿ ಮಜಾ ತೆಗೆದುಕೊಂಡಿರಬೇಕು ಆಗಲೇ ಮಜವಾಗಿ ಬರೆಯೋಕೆ ಸಾಧ್ಯ. ಸ್ವರಗಳು ಮತ್ತು ಅಕ್ಷರಗಳು ಮದುವೆ ಆಗೋ ಹಾಗೆ ಬರೆಯಬೇಕಾದರೆ ಈ ಮಟ್ಟದ ಸಂಗೀತ ಜ್ಞಾನ ಇರಬೇಕು. ನಾವು ಉತ್ತರ ಕರ್ನಾಟಕದಿಂದ ಬಂದಿರೋದ್ರಿಂದ ನಾವುಉತ್ತರಾದಿ ಸಂಗೀತ ಹೆಚ್ಚೆಚ್ಚು ಕೇಳಿರ್ತೀವಿ. ನಾನಂತು ಎಲ್ಲ ತರಹದ ಸಂಗೀತ ಕೇಳ್ತೀನಿ. ಬೇರೆ ಬೇರೆ ದೇಶದ್ದ ಫೋಕ್ ಮ್ಯೂಸಿಕ್ ಕೂಡ ನನಗೆ ಇಷ್ಟ. ಆ ಕೇಳ್ಮೆ ಮುಖ್ಯ. ಹಾಗೆಯೇ ಭಾಷೆಯ ಮೇಲೆ-ಶಬ್ದ ಭಂಡಾರದ  ಮೇಲೆ ಕಮ್ಯಾಂಡ್ ಇರಬೇಕು ಹಾಗೂ ಇವೊತ್ತಿನ ಕಾಂಟೆಂಪರರಿ ವಿಕೆಡಿಟಿ, ಸೋಶಿಯಲ್ ಎಲಿಮೆಂಟ್ ಗಳನ್ನು ಸೇರಿಸೋಕ್ಕೆ ಗೊತ್ತಿರಬೇಕು. ಬರೆಯುವ ಭಾಷೆಯ  ನಾಲ್ಕೈದು ವಿವಿಧ ಡಯಲೆಕ್ಟ್ ಗೊತ್ತಿರಬೇಕು. ಅದಕ್ಕೆ ಒಂದು ದಾರ್ಷ್ಟ್ಯ-ಕೊಬ್ಬು ಬೆಳೆಸಿಕೊಳ್ಳಬೇಕು. ಯಾವುದಕ್ಕೂ ಬ್ರಾಂಡ್ ಆಗಬಾರದು. ಆದರೆ ಇದನ್ನ ಇನ್ನೊಬ್ಬ ಬರೆಯೋಕ್ಕೆ ಆಗಬಾರದು ಹಂಗೆ ಬರೀತೀನಿ ಅಂತ ಕೂತ್ಕೊಬೇಕು. ನನ್ನ ಪ್ರಕಾರ ಕೊಬ್ಬು- ವಿನಯ ಎರಡೂ ಒಂದೆ..

ಮೆಚ್ಚಿನ ಸಂಗೀತ ನಿರ್ದೇಶಕರು: ಎಸ್ ಡಿ ಬರ್ಮನ್, ಆರ್ ಡಿ ಬರ್ಮನ್, ಮತ್ತು ಎ ಆರ್ ರೆಹಮಾನ್. ತಕ್ಷಣ ನೆನಪಿಗೆ ಬರೋ ಹಾಗೆ ಹೇಳೋದಾದ್ರೆ 'ಆಂಧಿ' ಸಿನೆಮಾದ ಹಾಡುಗಳು ಬಹಳ ಇಷ್ಟ. ಗುಪ್ತ್ ಸಿನೆಮಾದ ಸಂಗೀತ ನಿರ್ದೇಶಕ ವಿಜು ಷಾ ಬಹಳ ಇಷ್ಟ ಆಗ್ತಾನೆ. ರೆಹಮಾನ್ ಗಿಂತ ಮುಂಚೆಯೇ ಹಲವಾರು ಪ್ರಯೋಗಗಳನ್ನು ಅವರು ಮಾಡಿದ್ದಾರೆ. ರೆಹಮಾನ್ ನಲ್ಲಂತು ಎಂಟನೆ ಸ್ವರ ಇದೆ. ಅವನನ್ನು ಕೇಳೋದಕ್ಕೆ  ಹಬ್ಬ. ಅವನಲ್ಲಿ ಆ ಅನ್ ಪ್ರೆಡಿಕ್ಟಬಿಲಿಟಿ ಇದೆ.

ಸಾಹಿತ್ಯ ಸಂಬಂಧ: ಕನ್ನಡ ಸಾಹಿತ್ಯದ ಪರಮ ಭಕ್ತ ನಾನು. ಇತ್ತೀಚಿನವರೆಗೂ ಎಲ್ಲವನ್ನು ಓದ್ತೀನಿ. ಸಂಗ್ರಹ ಇಡ್ತೀನಿ. ತೇಜಸ್ವಿ, ಜಯಂತ ಕಾಯ್ಕಿಣಿ, ದೇವನೂರು ಮಹಾದೇವ, ಅನಂತಮೂರ್ತಿ ಇವರೆಲ್ಲ ಬಹಳ ಇಷ್ಟ ಆಗ್ತಾರೆ.

ಸಾಹಿತ್ಯದಿಂದ ಸಿನೆಮಾ:
ತೇಜಸ್ವಿ ಅವರ ಕರ್ವಾಲೋ ಸಿನೆಮಾ ಮಾಡ್ಬೇಕು ಅಂತ ಇಷ್ಟ. ಮಾರ್ಕ್ ಟ್ವೆಯ್ನ್ ನ “ಅಡ್ವೆಂಚರ್ಸ್ ಆಫ್ ಟಾಮ್ ಸ್ವೇಯರ್” ಸಿನೆಮಾ ಮಾಡಬೇಕು ಅಂತ ಇಷ್ಟ . ದೇವನೂರು ಅವರ ಕುಸುಮಬಾಲೆ ಸಿನೆಮಾ ಮಾಡ್ಬೇಕು ಅಂತ ಇಷ್ಟ. ಅನಂತ ಮೂರ್ತಿ ಅವರ “ಪ್ರಶ್ನೆ” ಕಥೆ ಇಟ್ಕೊಂಡು ಮೂರೂ ಸಾರ್ತಿ ಸ್ಕ್ರಿಪ್ಟ್ ಮಾಡಿದ್ದೀನಿ. ಆದರೆ ಈ ಕೃತಿಗಳನ್ನ ಸುಮಾರು ಜನ ಓದಿರ್ತಾರೆ.  ಸ್ವಲ್ಪ ತಿರುಚಿದರು ಇಡೀ ಕರ್ನಾಟಕದ ಕೈಲಿ ಬೈಸಿಕೊಳ್ಳಬೇಕು. ಅಲ್ಲದೆ ನಮಗೆ ಕಾದಂಬರಿಯ ಯಾವುದೋ ಒಂದು ಭಾಗ, ಇದನ್ನು ಸಿನೆಮಾ ಮಾಡ್ಬೇಕು ಅಂತ ಟ್ರಿಗರ್ ಮಾಡಿರುತ್ತೆ. ಆದುದರಿಂದ ಬದಲಾಯಿಸದೆ ವಿಧಿ ಇರೋದಿಲ್ಲ. ಹಾಗೆಯೇ ಸಾಹಿತ್ಯದಲ್ಲಿ ಒಂದೊಂದು ಪಾತ್ರ ಕೂಡ ಒಬ್ಬೊಬ್ಬ ಓದುಗರಿಗೆ ಬೇರೆ ಬೇರೆ ರೀತಿ ದಕ್ಕಿರುತ್ತದೆ. ಆದರೆ ಸಿನೆಮಾದಲ್ಲಿ ಹಾಗಲ್ಲ. ಈ ಪಾತ್ರ ಹೀಗೆಯೆ ಅಂತ ನಾವು ಹೇಳಿಬಿಡ್ತೀವಿ. ಅದಕ್ಕೆ ಮಾರ್ಕೆಸ್ ಅವನ ಕಾದಂಬರಿ  “ಹಂಡ್ರೆಡ್ ಯಿಯರ್ಸ್ ಆಫ್ ಸಾಲಿಟ್ಯೂಡ್ ” ಕಾದಂಬರಿಯನ್ನು ಸಿನೆಮಾ ಮಾಡಲು ಒಪ್ಪಿಗೆ ನಿಡೋದೇ ಇಲ್ಲ. ನಾವೇ ಬರೆಯುವ ಸಿನೆಮಾಗಳಿಗೆ ಜನರಿಂದ ಬೈಸಿಕೊಳ್ಳೋದು ಪರವಾಗಿಲ್ಲ. ಆದರೆ ದೊಡ್ಡವರ ಸಾಹಿತ್ಯವನ್ನ ತಿರುಚಿ ಬೈಸಿಕೊಳ್ಳೋದು ಸ್ವಲ್ಪ ಕಷ್ಟ.

ಸಾಹಿತ್ಯ ಕೃತಿ ಸಿನೆಮಾ ಮಾಡ್ತಿರಾ: ಸಾಮಾನ್ಯವಾಗಿ ಪಶ್ಚಿಮ ದೇಶಗಳಲ್ಲಿ ಈ ಸಂಪ್ರದಾಯ ಇದೆ. ಅಲ್ಲೂ ಕೂಡ ಸಾಹಿತ್ಯ ಕೃತಿಗಳ ಮೂಲಕ್ಕೆ ನಿಷ್ಟವಾಗಿಯೇ ಸಿನೆಮಾ ಮಾಡ್ತಾರೆ ಅಂತ ಅಲ್ಲ, ಆದರೆ ಕೆಲವು ಸಿನೆಮಾಗಳನ್ನು ಹಾಗೆ ಮಾಡಿದ್ದಾರೆ. ದ ಬ್ರಿಡ್ಜಸ್ ಆಫ್ ಮ್ಯಾಡಿಸನ್ ಕೌಂಟಿ, ಗಾಡ್ ಫಾದರ್, ದ ಡೇ ಆಫ್ ಜಾಕಲ್, ಇತ್ತೀಚಿಗೆ ಹ್ಯಾರಿ ಪಾಟರ್ ಕೆಲವು ಉದಾಹರಣೆಗಳು. ನಮ್ಮಲ್ಲಿ ಸಿನಿಮೀಯವಾಗಿರಬೇಕು ಅಂತ ಸಾಹಿತ್ಯದ ಹಿಂದೆ ಹೋಗೋಲ್ಲ. ಆ ಟ್ರೆಡಿಶನ್ ಬೆಳೆಸಿಕೊಂಡಿಲ್ಲ. ಮೂಲ ಕೃತಿಯನ್ನು ಟ್ಯಾಂಪರ್ ಮಾಡ್ತಾ ಇದ್ದೀನಿ ಅಂತ ಒಂದು ಭಯ ಕಳೆದುಕೊಂಡರೆ ಹಾಗು ಬೈಸಿಕೊಳ್ಳಲು ಧೈರ್ಯ ಬೆಳೆಸಿಕೊಂಡರೆ ಮಾಡಬಹುದು. ನನ್ನ ಸಿನೆಮಾಗಳಿಗೂ ಬೈತಾರೆ, ಆದ್ರೆ ನಾನು ನನ್ನ ಸಿನೆಮಾಗಳಿಗೆ ಕಥೇನೆ ಮಾಡೋಲ್ಲ. ನಾನು ಬರಿ ಪಾತ್ರಗಳನ್ನ ಮಾಡ್ತೀನಿ ಅದಕ್ಕೆ ನನಗೆ ಹೆಮ್ಮೆ ಇದೆ. ಅವಾಗ ಎಷ್ಟು ಬೇಕಾದ್ರೂ ಬೈತಾ ಇರಿ ಅನ್ನಬಹುದು. ಆದರು ಇದನ್ನು ದಾಟಿ ಸುಮಾರು ಸಾಹಿತ್ಯ ಕೃತಿಗಳನ್ನು ಸಿನೆಮಾ ಮಾಡಬೇಕೆಂದು ಲೈನ್ ಅಪ್ ಮಾಡಿದ್ದೀನಿ. ಇನ್ನು ಕೆಲವು ವರ್ಷಗಳಲ್ಲಿ ಅದನ್ನೂ ಮಾಡಬಹುದು. ತೇಜಸ್ವಿ ಅವರ ಕರ್ವಾಲೋ ಕೂಡ ಆಗಬಹುದು ಅಥವಾ ಅನಂತಮೂರ್ತಿ ಅವರ ಪ್ರಶ್ನೆ ಕೂಡ ಸಿನೆಮಾ ಆಗಬಹುದು.

ಕ್ಯಾಸ್ಟಿಂಗ್: ಸಿನೆಮಾಗೆ ತುಂಬಾ ಅವಶ್ಯಕ. ಖ್ಯಾತ ನಟರನ್ನು ನಾವು ಆಯ್ಕೆ ಮಾಡಿಕೊಂಡರೆ ಅದು ಕಮರ್ಷಿಯಲ್ ಅವಶ್ಯಕತೆ. ಆದ್ರೆ ಈ ಬಿಗ್ ಸ್ಟಾರ್ ಗಳು ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳಲ್ಲ. ಅವರ ವೃತ್ತಿ ಜೀವನದ ದೃಷ್ಟಿಯಿಂದ ಮಾಡಬಾರದು ಕೂಡ. ಅವನ ಸುತ್ತ ಪ್ರಯೋಗ ಶೀಲ ಕಥೆಗಳನ್ನು ಹೆಣೆಯುವುದೂ ಕೂಡ ಕಷ್ಟ. ಹೊಸಬ ಅಥಾವಾ ದೊಡ್ಡ ಸ್ಟಾರ್ ಅಲ್ಲದವನು ಆದರೆ ಅವನು ಕಂಪ್ಲೀಟ್ ಶೇಡ್ ಲೆಸ್ ಆಗಿರ್ತಾರೆ. ಸ್ಕ್ರೀನ್ ಇನ್ನೋಸೆಂಟ್ ಆಗಿರುತ್ತೆ. ಅವರಿಗೆ ಸುಮಾರು ಅಂಡರ್ ಡಾಗಿಶ್ ಎಲಿಮೆಂಟ್ಸ್  ಅಪ್ಪ್ಲೈ ಮಾಡಬಹುದು. ಅವನು ಗ್ರೇಟ್ ಅಲ್ಲ ಅಂತಲೇ ಕಾಲೆಳೆತದ ಸಂಬಾಷಣೆ ಬರಿಬಹುದು. ಹೀಗೆ ಅವನನ್ನು ಗ್ರೇಟ್ ಮಾಡಿಡಬಹುದು. ಆಮೇಲೆ ಅವನು ನಮ್ಮ ಕೈಗೆ ಸಿಗೋಲ್ಲ. ನನ್ನ ಆಯ್ಕೆ ಯಾರು ಅಂತ ಕೇಳಿದ್ರೆ ಹೇಗೆ ಹೇಳೋದು, ಒಣ ಸಗಣಿಗೆ ತುದಿ ಯಾವುದು ಬುಡ ಯಾವುದು ಅನ್ನೋ ಹಾಗೆ, ಎರಡನ್ನು ಸಾಧ್ಯಂತವಾಗಿ ಇಷ್ಟಪಡ್ತೀನಿ. ಯಾವುದಕ್ಕೂ ಸ್ಟಿಕ್ ಆನ್ ಆಗೋಕ್ಕೆ ನಾನು ಇಷ್ಟ ಪಡೋಲ್ಲ.

ನಿಮ್ಮ ಸಿನೆಮಾ ಪಾತ್ರಗಳು:
ಪಂಚರಂಗಿಯ ರಾಕ್ ಲೈನ್ ಸುಧಾಕರ್ ಅವರ ಕುರುಡು ಪಾತ್ರ ನಾನು ನಿಜ ಜೀವನದಲ್ಲಿ ನೋಡಿದ್ದೀನಿ. ಅಪ್ಪ ಮಗ ಡ್ರೈವರ್ ಗಳಾಗಿದ್ರು. ನನ್ನ ಸುಮಾರು ಹಿರೋ ಪಾತ್ರಗಳು ಮತ್ತು ಮಾತುಕತೆಗಳು ಕಾಲೇಜು ಹುಡುಗರದ್ದು. ಕಾಲೇಜಿನಲ್ಲಿ  ಮಾತನಾಡೋಕ್ಕೆ ನನ್ನ ಕರೆದಾಗ ನಾನು ಕಾಲೇಜು ಹುಡುಗರ ಜೊತೆ ಕೂತು ಮಾತಾಡ್ತೀನಿ. ಅವರು ಹೇಳೋ ವಿಷಯಗಳಲ್ಲೇ ಬಹಳ ಅಪ್ಡೇಟ್ ಆಗಬಹುದ. ಅವರು ಕನ್ನಡ ಬಳಸುವ ರೀತಿ. ಹುಡುಗುರು ಹುಡುಗಿಯರನ್ನು, ಹುಡುಗಿಯರು ಹುಡುಗರನ್ನು ಹೇಗೆ ಕರಿತಾರೆ ಇವೆಲ್ಲಾ ಮುಖ್ಯ ಆಗ್ತವೆ.  ಗಾಳಿಪಟದ ದಿಗಂತ್ ಪಾತ್ರ ನನಗೆ ಹಾಗೇ ಸಿಕ್ಕಿದ್ದು. ಪೆದ್ದ ಪೆದ್ದನಾಗಿ ಆಡುವ ನಿಜ ಜೀವನದ ಪಾತ್ರದಿಂದಲೆ ಇನ್ಸ್ಪೈರ್ ಆಗಿದ್ದು.

ಸಿನೆಮಾದಲ್ಲಿ ಮೆಸೇಜ್ ಕೊಡ್ತಿರಾ: ತುಂಬಾ ಮಂಡೇನ್ ವಿಷಯಗಳ ಬಗ್ಗೆ, ಯಾವುದಕ್ಕಾದರೂ ಬ್ರಾಂಡ್ ಆಗುವುದರ ಬಗ್ಗೆ, ಫಾರ್ಮಾಲಿಟಿಗಳ ಬಗ್ಗೆ ನನಗೆ ತುಂಬಾ ತಿರಸ್ಕಾರ ಇರುತ್ತೆ. ಸರ್ಕ್ಯಾಸ್ಟಿಕ್ ಆಗಿ ಅವುಗಳಿಗೆ ಹೊಡಿಬೇಕು ಅಂತ ಮನಸ್ಸಿನಲಿರುತ್ತೆ. ಅದನ್ನ ಇಂಡೈರೆಕ್ಟ್ ಆಗಿ ನಾನು ಚಿತ್ರಗಳಲ್ಲಿ ಅಟ್ಟ್ಯಾಕ್ ಮಾಡ್ತೀನಿ. ಈಗ ಲೈಫು ಇಷ್ಟೇನೆ ಅಂತ ಉಲ್ಟಾ ಬರೀತೀನಿ. ವ್ಯಂಗ್ಯವಾಗಿ ಹೇಳ್ತೀನಿ. ಈ ವ್ಯಂಗ್ಯವನ್ನು ಜನ ಅರ್ಥ ಮಾಡಿಕೊಳ್ಳಬೇಕಷ್ಟೆ.

ವ್ಯಂಗ್ಯ ಹೇಗೆ ಬಂತು: ನನ್ನ ಬಾಲ್ಯ. ನನ್ನ ಊರಿನಲ್ಲಿ ಬೆಳೆದ ವಾತಾವರಣ ಹಾಗಿತ್ತು. ಅಲ್ಲಿ ನೆಟ್ಟಗೆ ಮಾತಾಡೋಕ್ಕೆ ಯಾರಿಗೂ ಬರೋಲ್ಲ. ಬನ್ನಿ ಅನ್ನೋದಕ್ಕೆ ನಿಮ್ಮ ಹೆಣ ತಗೊಂಡ್  ಬರ್ರಿ ಅಂತಾರೆ. ಹೀಗೆ ಆ ವ್ಯಂಗ್ಯ-ಹಾಸ್ಯ ನನ್ನಲ್ಲಿ ನೆಲೆಯೂರಿದೆ. ಹಾಸುಹೊಕ್ಕಾಗಿದೆ.

ಇಲ್ಲಿಯವರೆಗಿನ ಜರ್ನಿ: ನಾನು ತುಂಬಾ ಖುಶಿಯಾಗಿದ್ದೀನಿ. ಯಶಸ್ಸು ಬಂದಿದೆ ಅಂತಲ್ಲ. ಆದ್ರೆ ಮಾಡಿರೋ ಕೆಲಸಕ್ಕೆ ಖುಷಿ ಇದೆ. ನನಗೆ ಸಿನೆಮಾ ಅನ್ನೋದು ನನ್ನ ಪ್ರಯಾರಿಟಿಲ್ಲೇ ಇರಲಿಲ್ಲ. ವಿಜ್ಞಾನ-ಸಾಹಿತ್ಯ ತುಂಬಾ ಆಸಕ್ತಿ ಇತ್ತು. ಆದ್ರೆ ಓದಿದ್ದು ಬಿ ಕಾಂ. ಆಮೇಲೆ ಎಂ ಎ ಲಿಟರೇಚರ್. ಸಿನೆಮಾಗೆ ಬಂದಿದ್ದು ಆಕಸ್ಮಿಕ. ಬಹುಶಃ ಸಿನಿಮಾಟೋಗ್ರಾಫರ್ ಆಗ್ಬೇಕು ಅಂತ ಇಲ್ಲಿಗೆ ಬಂದದ್ದು. ನನಗೆ ಸಿನೆಮಾ ಮಾಡೊದಕ್ಕಿಂತ ನೋಡೋಕ್ಕೆ ಜಾಸ್ತಿ ಇಷ್ಟ ಇತ್ತು. ಆದರೆ ಇದನ್ನು ಮಾಡಬಹುದು ಅನ್ನುವ ಕಾನ್ಫಿಡೆನ್ಸ್ ಇತ್ತು. ನಿರೀಕ್ಷೆ ಸೋತಾಗ ಸಕ್ಸಸ್ ಬೇಕು ಅನ್ಸುತ್ತೆ. ನಾನು ಸಾಮಾನ್ಯವಾಗಿ ಉಡಾಫೆಯಿಂದಲೆ ಎಲ್ಲವನ್ನೂ ಮಾಡ್ತೀನಿ. ಹೆಚ್ಚೊತ್ತು ಸೀರಿಯಸ್ ಆಗಿ ಇರೋಕ್ಕೆ ಬರೋಲ್ಲ.

ನಿಮ್ಮ ಗುರುಗಳು: ಇಬ್ಬರು. ಒಬ್ಬರು ಗಿರೀಶ್ ಕಾಸರವಳ್ಳಿ, ಇನ್ನೊಬ್ಬರು ರವಿಚಂದ್ರನ್. ಇಬ್ಬರು ಎರಡು ತುದಿಗಳು. ಎಕ್ಸ್ಟ್ರೀಂ. ಅವರಿಂದ ಸಿಕ್ಕಾಪಟ್ಟೆ ಕಲಿತಿದ್ದೇನೆ.

ಹೊಸ ನಿರ್ದೇಶಕರ ಹುಟ್ಟು: ನಮ್ಮಲ್ಲಿ ಹೊಸಬರನ್ನ ಬೆಳೆಸುವಂತ ಸಂಪ್ರದಾಯ ಇಲ್ಲ. ಆದರೆ ಆ ಟ್ರೆಡಿಶನ್ ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿದೆ. ಅಲ್ಲಿ ಅಧ್ಬುತವಾಗಿ  ಬರೆಯೋರು ಇದಾರೆ. ಅವರು ಯಾವುದೇ ಬ್ರಾಂಡ್ ಗೆ ಸಿಕ್ಕಿ ಹಾಕಿಕೊಳ್ಳೋದಿಲ್ಲ. ನಮ್ಮಲ್ಲಿ ಆ ರೀತಿಯ ಸೆಕಂಡ್ ಜನರೇಶನ್ ಹುಟ್ಟುತ್ತೆ ಅನ್ಸುತ್ತೆ ಅಷ್ಟರಲ್ಲಿ ಸತ್ತೋಗುತ್ತೆ. ನಾನೇ ಸುಮಾರು ಜನರನ್ನು ಹುಟ್ಟು ಹಾಕೋಕ್ಕೆ ಪ್ರಯತ್ನಿಸಿದ್ದೇನೆ.

ನಿಮ್ಮ ಶಿಷ್ಯಂದಿರ ಬಗ್ಗೆ: ನಾನು ಬೆಳೆಸಿರುವ ಹುಡುಗರು ಸಿನೆಮಾ ಮಾಡ್ತಿದ್ದಾರೆ ಅನ್ನೋದೇ ಖುಷಿ. ಕ್ರಿಯಾಶೀಲತೆ-ಸೃಜನಶೀಲತೆಗಿಂತ ಅವರು ಸಿನೆಮಾಗಳನ್ನು ಮಾಡ್ತಾ ಇರೋದೇ ಮುಖ್ಯ. ಅವರಲ್ಲಿ ನನಗೆ ಹೆಚ್ಚು ಮಜಾ ಕೊಟ್ಟಿರುವುದು ಸೂರಿ ಮತ್ತು ಪವನ್ ಕುಮಾರ್. ಸೂರಿ ಈಸ್ಥೆಟಿಕ್ ಮಾಸ್ಟರ್.  ಪವನ್ ಜಾಗತಿಕ ಮಟ್ಟದಲ್ಲಿ ಬೆಳೆಯಬಹುದಾದವನು. ಸೂರಿಯ ಕೆಂಡಸಂಪಿಗೆ ಇತ್ತೀಚೆಗೆ ನೋಡ್ತಾ ಇದ್ದೆ. ತುಂಬಾ ಇಷ್ಟ ಆಯ್ತು. ಹಾಗೆಯೇ ಅವರಿಗೆ ನನ್ನ ಬರವಣಿಗೆ ಮೇಲೆ ಹೊಟ್ಟೆಕಿಚ್ಚಿದೆ. ನಾನು ಹಾಡು ಬರೆಯುವ ರೀತಿ, ನನ್ನ ಉಡಾಫೆತನ, ಅವರಿಗೆ ಸಿಟ್ಟು ತರಿಸುತ್ತೆ. ಹಾಗೆ ಪವನ್ ಒಡೆಯರ್ ಇರಬಹುದು, ಗಡ್ಡ ವಿಜಿ ಇರಬಹು, ಅವರು ಕೂಡ ಅಚೀವರ್ಸ್. ಹಾಗೆಯೇ ರಂಗ ಅಂತ ಒಬ್ಬ ಇದ್ದ ಅವನು ತೀರ್ಕೊಂಡುಬಿಟ್ಟ.

ಮನುಷ್ಯನಿಗೆ ಜಾತಿ-ಧರ್ಮ ಐಡೆಂಟಿಟಿ ಬೇಕಾ?:
ಇಲ್ಲ.. ನನಗೆ ಯಾವುದೇ ಜಾತಿ ಮೇಲೆ ನಂಬಿಕೆ ಇಲ್ಲ. ನಾನು ಅದರ ಕಡು ವಿರೋಧಿ. ಆದರೆ ಅದನ್ನ ಹೆಸರಿನಿಂದ ಮುಚ್ಚಿಕೊಳ್ಳೋದು ಬೇಕಿಲ್ಲ. ಈ ಸೆಕ್ಯುಲರಿಸಂ ಅಂತ ಬಡ್ಕೋಳ್ಳೊರೆ ಕಟ್ಟಾ ಜಾತಿವಾದಿ ಆಗಿರ್ತಾರೆ. ಜಾತಿ ಮುಚ್ಚಿಡೋ ಸರ್ ನೇಮ್ ಗಳನ್ನು ಇಟ್ಕೊಳ್ಳೊ ಅವಶ್ಯಕತೆ ಇಲ್ಲ. ನಮ್ಮಪ್ಪ ನಮಗೆ ಈ ಜಾತಿ ಐಡೆಂಟಿಟಿ ಬೆಳೆಸಿಕೊಳ್ಳೊ ಹಾಗೆ ಬೆಳೆಸಿಯೆ ಇಲ್ಲ. ನನಗೆ ಧರ್ಮದ ಮೇಲೂ ನಂಬಿಕೆ ಇಲ್ಲ. ದೇವರ ಮೇಲೂ ನಂಬಿಕೆ ಇಲ್ಲ. ನಾನು ಏಥೀಸ್ಟ್. ನಾನು ಪ್ರಕೃತಿ ನಂಬ್ತೀನಿ. ಆದರೆ ನಂಬುವವರ ಜೊತೆ ಸುಖಾಸುಮ್ಮನೆ ಜಿದ್ದಾಜಿದ್ದಿಗೆ ಬೀಳುವುದಿಲ್ಲ. ಇದು ನನ್ನ ವ್ಯಯಕ್ತಿಕ ಅಭಿಪ್ರಾಯ.

ಫಿಲಾಸಫಿ: ನಾನು ಓದೋದ್ರಲ್ಲಿ ಹಾಗು ನಾನು ನೋಡೋದ್ರಲ್ಲಿ ಅದು ಹೆಚ್ಚು ಗೋಚರ ಆಗುತ್ತೆ ಆದರೆ ನಾನು ಮಾಡುವ ಕೆಲಸದಲ್ಲಿ ಅದನ್ನು ಮುನ್ನಲೆಗೆ ತರೋಲ್ಲ.

ಫಿಲಂ ಫೆಸ್ಟಿವಲ್ಸ್:
ನಾನು ಹೋಗೋದು ಕಡಿಮೆ. ನನಗೆ ವೆಸ್ಟರ್ನ್ ಇನ್ಫ್ಲುಯೆನ್ಸ್ ಅವಶ್ಯಕತೆ ಇಲ್ಲ. ಸಿನೆಮಾಗಳನ್ನು ಎಂಜಾಯ್ ಮಾಡಲು ನೋಡ್ತೀನಿ. ಸುಮಾರು ಜನ ಆ ಸಿನೆಮಾ ನೋಡಿದ್ದಿರಾ.. ಈ ಸಿನೆಮಾ ನೋಡಿದ್ದಿರಾ.. ಅಂತ ಕೇಳ್ತಾರೆ. ಆ ಕಥೆ ಹೇಳಿದ್ರೆ ನನಗೆ ಅದರ ಬಗ್ಗೆ ಗೊತ್ತಿರುತ್ತೆ. ಆದರೆ ಹೆಸರು ನೆನಪಿರೋಲ್ಲ. ಫೆಸ್ಟಿವಲ್ ಗಯ್  ಅನಿಸಿಕೊಳ್ಳೋದು, ಈ ವೆಸ್ಟರ್ನ್ ಆಟಿಟ್ಯೂಡ್ ಇಟ್ಕೊಳ್ಳೋದು ನನಗೆ ಇಷ್ಟ ಆಗೋಲ್ಲ. ಜ್ಞಾನ ದಾಹ ಅಥಾವ ಪ್ರೇಕ್ಷಕನಾಗಿ ನೋಡೋದಾದ್ರೆ ಸರಿ ಆದರೆ ವಯಕ್ತಿಕವಾಗಿ ಸ್ಪೂರ್ತಿಗೋಸ್ಕರ ವಿಶ್ವ ಸಿನೆಮಾಗಳನ್ನು ನೋಡೋ ಅವಶ್ಯಕತೆ ಇಲ್ಲ. ನಮ್ಮ ಸುತ್ತಲೇ ಎಷ್ಟೋ ವಿಷಯಗಳಿಂದ ಸ್ಪೂರ್ತಿ ಸಿಗುತ್ತೆ. ಓದೋದ್ರಿಂದ ಹೆಚ್ಚು ಸಿಗುತ್ತೆ.

ಚಿತ್ರ ವಿಮರ್ಶಕರ ಬಗ್ಗೆ: ವಿಮರ್ಶಕರಿಂದ-ವಿಮರ್ಶೆಯಿಂದ ದಾಖಲೆ ಸುಲಭ ಆಗುತ್ತೆ. ಆದರೆ ದುರಂತ ಎಂದರೆ ವಿಮರ್ಶಕರು ಜನ ಸಮುದಾಯದ ಅಭಿಪ್ರಾಯಕ್ಕೆ ವಿರುದ್ಧವಾಗಿ ವ್ಯಯಕ್ತಿವಾಗಿ ಏನೇನೋ ಬರೆದುಬಿಡ್ತಾರೆ. ವಿಮರ್ಶಕರ ಮಧ್ಯೆದಲ್ಲೇ ಒಮ್ಮತ ಇರೋಲ್ಲ. ಆದುದರಿಂದ ವಿಮರ್ಶೆ ಕರಿಶ್ಮ್ಯಾಟಿಕ್ ಆಗಿ ಉಳಿದುಕೊಳ್ಳಲಿಲ್ಲ. ನನ್ನ ಸಿನೆಮಾಗಳಿಗೆ ಯಾರು ಹೊಗಳಿದರು ತಲೆ ಕೆಡಿಸಿಕೊಳ್ಳಲ್ಲ. ಬೈದ್ರು ತಲೆ ಕೆಡಿಸಿಕೊಳ್ಳಲ್ಲ.

ಸೆಲೆಬ್ರಿಟಿಯಾಗಿರೋದು: ಸಣ್ಣ ಪುಟ್ಟ ಇರಿಟೇಶನ್ ಇರುತ್ತೆ. ಆದ್ರೆ ನನಗೆ ಅದು ಹೆಚ್ಚೇನೂ ತೊಂದರೆ ಕೊಟ್ಟಿಲ್ಲ. ಅದನ್ನ ನಾನು ಎಂಜಾಯ್ ಮಾಡ್ತೀನಿ. ಅದನ್ನ ಸಹಜತೆಯಿಂದ ತೆಗೆದುಕೊಳ್ಳಬೇಕು.

ನಂಬಿಕೆ ಅನ್ನೋದು: ಬೇಕಾಗಿದೆ, ಬದುಕನ್ನ ಮೋಹಿಸಬೇಕು. ಮನುಷ್ಯರನ್ನ ನಂಬೋದು ಬೇಕಾಗಿಲ್ಲ.. ನಾನು ಮನುಷ್ಯರ ಬಗ್ಗೆ ತಿಳಿದುಕೊಳ್ತೀನಿ.. ಆಗ ಶಾಕ್ ಆಗೋಲ್ಲ. ನಂಬೋದು ಮೂರ್ಖತನ. ತಿಳುವಳಿಕೆ ಕಾಂಪ್ಲಿಕೇಟೆಡ್. ನೋಯಿಂಗ್ ಇಸ್ ಬೆಟರ್. ಮತ್ತೊಬ್ಬನ ಕಾಲೆಳೆದು-ತುಳಿದು ಬದುಕಬಾರದು ಅನ್ನೋದು ರೆಸ್ಪಾನ್ಸಿಬಿಲಿಟಿ.

ಬಿಡುವಿದ್ದಾಗ: ಓದ್ತೀನಿ, ಟಿ ವಿ ಲ್ಲಿ ಸಿನೆಮಾ ನೋಡ್ತೀನಿ. ಮಲಗೋದು ..ಆಟ ಆಡ್ತೀನಿ. ಇಷ್ಟೇ!

ವಾಸ್ತುಪ್ರಕಾರ: ವಾಸ್ತು ಗೀಸ್ತು ಅಂತ ತುಂಬಾ ಕುರುಡಾಗಿ ನಂಬುವವರನ್ನು ಕಂಡರೆ  ನನಗೆ ಹೆಚ್ಚು ಸಿಟ್ಟು ಬರುತ್ತೆ. ಅದನ್ನ ಲಿರಿಕಲ್ ಆಗಿ ಕೆಲವು ಕಡೆ ಲೇವಡಿ ಮಾಡಿದ್ದೆ. “ಕುಬೇರ ಮೂಲೆ ಮಾತ್ರ ಕಟ್ಸು” ಅಂತ ಪಂಚರಂಗಿ ಚಿತ್ರದಲ್ಲಿ ಬರೆದಿದ್ದೆ. ಎಲೆಕ್ಷನ್ ಸಮಯದಲ್ಲಿ ವಾಸ್ತು ಪ್ರಕಾರ ಅಂತ ಒಂದು ಹಾಡು ಮಾಡಿದ್ದೆ. ಅದು ಸಿಕ್ಕಾಪಟ್ಟೆ ಪಾಪುಲರ್ ಆಗೋಯ್ತು. ನಮ್ಮ ಹರಿಕೃಷ್ಣ ಮತ್ತಿ ಕೆ ಸಿ ಎನ್ ವಾಸ್ತು ತುಂಬಾ ನಂಬ್ತಾರೆ. ನನಗೆ ಯಾವುದೇ ವ್ಯಕ್ತಿಯ ಕುರುಡು ನಂಬಿಕೆ ಇಷ್ಟ ಆಗೋಲ್ಲ. ಹುಟ್ಟಿದ ಮೇಲೆ ಯೋಚನಾ ಶಕ್ತಿ ಇರಬೇಕು. ಆದುದರಿಂದ ಈ ವಿಷಯ ಇಟ್ಕೊಂಡು ಸಿನೆಮಾ ಮಾಡಬೇಕು ಅನ್ನಿಸ್ತು. ವಾಸ್ತು ಅನೋದು ಕಟ್ಟಡದಲ್ಲಿಲ್ಲ. ತಲೆಲ್ಲೇ ಇದೆ ಅಂತ ಹೇಳೋಕ್ಕೆ ಬಹಳ ಹಾಸ್ಯಮಯವಾಗಿ ಪ್ರಯತ್ನಿಸಿದ್ದೇನೆ. ರಕ್ಷಿತ್ ಶೆಟ್ಟಿ ಇವೊತ್ತಿನ ಹುಡುಗ. ಟೆಕ್ನಿಷಿಯನ್. ಸ್ಪುರಧ್ರೂಪಿ. ಜಗ್ಗೇಶ್ ನಾನು ಮೊದಲಿಂದ ಇಷ್ಟ ಪಡುವವರು. ಎಕ್ಸ್ ಪ್ರೆಸ್ಸಿವ್. ಅವರಿಗೆ ತುಂಬಾ ವಿಕೆಡ್ ಸೆನ್ಸ್ ಆಫ್ ಹ್ಯೂಮರ್ ಇದೆ. ಇಬ್ಬರು ನಾಯಕ ನಟರು. ಅನಂತ್ ನಾಗ್, ಸುಧಾರಾಣಿ, ಸುಧಾ ಬೆಳವಾಡಿ. ಟಿ ಎನ್ ಸೀತಾರಾಮ್ ಹೀಗೆ ದೊಡ್ಡ ತಾರಾಗಣ ಇದೆ. ೨೫ ದಿನ ಹೊರಗಡೆ ಶೂಟ್ ಮಾಡಿದ್ದೀನಿ. ಸ್ವಿಟ್ಜರ್ ಲ್ಯಾಂಡ್ ನ ಬರ್ನ್ಸ್ ಸಿಟಿ ಅಕ್ಕ ಪಕ್ಕ. ಡಿಸೆಂಬರ್ ೨೫ ರ ಆಸುಪಾಸಿನಲ್ಲಿ ಸಿನೆಮಾ ಬರುತ್ತೆ. ಸಂಗೀತ ಹರಿಕೃಷ್ಣ.

ಸಂದರ್ಶನ: ಗುರುಪ್ರಸಾದ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com