'ಪುಸ್ತಕ ಸಂಸೃತಿ' ನಮ್ಮಲ್ಲಿ ಇನ್ನೂ ಹುಟ್ಟಿಲ್ಲ

ಎಷ್ಟೋ ಮಹತ್ವದ ಪುಸ್ತಕಗಳು ಸರ್ಕಾರಿ...
ಪುಸ್ತಕಮನೆಯಲ್ಲಿ ತಮ್ಮ ಸಂಗ್ರಹದ ನಡುವೆ ಹರಿಹರಪ್ರಿಯ
ಪುಸ್ತಕಮನೆಯಲ್ಲಿ ತಮ್ಮ ಸಂಗ್ರಹದ ನಡುವೆ ಹರಿಹರಪ್ರಿಯ

ಎಷ್ಟೋ ಮಹತ್ವದ ಪುಸ್ತಕಗಳು ಸರ್ಕಾರಿ ಗ್ರಂಥಾಲಯಗಳಲ್ಲಿ ಸಿಗುವುದಿಲ್ಲ. ಯಾರಿಗಾದರೂ, ಎಲ್ಲೂ ಕಂಡಿರದ ಪುಸ್ತಕವನ್ನು ನೋಡಲೇಬೇಕು-ಓದಲೇಬೇಕು, ಅಧ್ಯಯನಕ್ಕೆ ಬೇಕೇಬೇಕು ಎಂದೆನಿಸಿದಾಗ ಥಟ್ಟನೆ ನೆನಪಿಗೆ ಬರುವುದು ಪುಸ್ತಕಮನೆ. ಹೆಚ್ಚೆಚ್ಚು ಪುಸ್ತಕಗಳನ್ನು ಯಾರು ಬೇಕಾದರೂ ಸಂಗ್ರಹಿಸಿಯಾರು, ಆದರೆ ಕನ್ನಡ ಪುಸ್ತಕಗಳ- ಕನ್ನಡ ಪತ್ರಿಕೆಗಳ ಸಮಗ್ರತೆಯ, ವ್ಯವಸ್ಥಿತ ಜೋಡಣೆಯ ವಿಶ್ವರೂಪ ದರ್ಶನ ಪಡೆಯಬೇಕಾದರೆ ಹರಿಹರಪ್ರಿಯ ಅವರ ಪುಸ್ತಕಮನೆಗೇ ಬರಬೇಕು. ಕನ್ನಡ-ಸಾಹಿತ್ಯ-ಸಂಸ್ಕೃತಿ ಚಿಂತಕ, ಬರಹಗಾರ, ಭಾಷಣಕಾರ ಎಲ್ಲದ್ದಕ್ಕೂ ಹೆಚ್ಚಾಗಿ ಕರ್ನಾಟಕದ ಅತ್ಯುತ್ತಮ ಪುಸ್ತಕ ಸಂಗ್ರಹಕಾರ, ಪುಸ್ತಕ-ಸಾಹಿತ್ಯ-ಸಂಸ್ಕೃತಿ ಇವುಗಳ ಚರ್ಚೆಗೆ ತಮ್ಮ ಒಂದು ಸಾಯಂಕಾಲವನ್ನು ನಮಗೆ ಬಿಟ್ಟುಕೊಟ್ಟಿದ್ದರು. ಅದರ ಫಲವೇ ಈ ವಿಶೇಷ ಸಂದರ್ಶನ.

1.    ಕರ್ನಾಟಕದ ಅತ್ಯುತ್ತಮ ಪುಸ್ತಕ ಸಂಗ್ರಹಕಾರರು ನೀವು. ಪುಸ್ತಕಮನೆಯ ಈ ಸುದೀರ್ಘ ಇತಿಹಾಸದಲ್ಲಿ ಒಂದು ಮೂಲಭೂತ ಪ್ರಶ್ನೆ. ಈ ಪುಸ್ತಕ ಸಂಗ್ರಹ ಅನ್ನೋದು ಏನು? ಕಲೆಯಾ? ಆಸಕ್ತಿಯಾ? ಅಬ್ಸೆಶನ್ನಾ-ಗೀಳಾ-ಹುಚ್ಚಾ?

ಇಲ್ಲ. ಅವೆಲ್ಲವೂ ಸರಿ. ಅವು ಯಾವುದನ್ನೂ ಕೂಡ ಬೇರ್ಪಡಿಸೋಕ್ಕೆ ಆಗೊಲ್ಲ. ಕಲೆ ಒಳಗೆ ಹುಚ್ಚಿದೆ. ಹುಚ್ಚನ್ನು ಕೂಡ ಕಲೆಯ ಮಟ್ಟಕ್ಕೆ ಏರಿಸಬಹುದು. ಸಾಧನೆ ಮಾಡೋದೆ ಹುಚ್ಚು. ಪುಸ್ತಕ ಸಂಗ್ರಹ ಕಲೆ ಕೂಡ ಹೌದು, ವಿಜ್ಞಾನ ಕೂಡ ಹೌದು. ವ್ಯವಸ್ಥಿತ ಜ್ಞಾನ ಅಥವಾ ವಿಜ್ಞಾನ ಅಂತಲೇ ಕರೆಯಬಹುದು. ಮೊದಲಿಗೆ ಅದು ಒಂದು ಗೀಳಿನಂತೆ ಶುರು ಆಗುತ್ತೆ. ಕ್ರಮೇಣ ಅದು ಹುಚ್ಚಾಗಿ ಪರಿವರ್ತನೆ ಹೊಂದಬಹುದು, ಆಮೇಲೆ ಕಲೆ ಆಗಬಹುದು. ಅದಕ್ಕೊಂದು ವ್ಯವಸ್ಥಿತ ರೂಪ ಕೊಟ್ಟಾಗ ಅದು ವಿಜ್ಞಾನವೇ.

2.    ಪುಸ್ತಕ ಸಂಗ್ರಹಕಾರರಿಗೆ “First Edition” / “Signed Edition”  ಪುಸ್ತಕಗಳ ಮೇಲೆ ಒಂದು ವಿಶೇಷ ಮೋಹವಿರುತ್ತೆ ಯಾಕೆ?

ಅಂತಹ ಪುಸ್ತಕ ಸಂಗ್ರಹಕಾರರು ಕರ್ನಾಟಕದಲ್ಲಿ ಎಷ್ಟು ಜನ ಇದಾರೆ ಅನ್ನೋದೆ ನನ್ನ ಪ್ರಶ್ನೆ. ದೇಶದಲ್ಲಿ ಕೆಲವರು ಇದ್ದಾರೆ ಅಂತ ಕೇಳಿದ್ದೀನಿ. ವಿಶ್ವದಲ್ಲಿ ಬಹಳ ಜನ ಇದಾರೆ. ಅಮೇರಿಕ ಐಟಿ ಬಿಟಿಗೆ ಪ್ರಖ್ಯಾತಿ ಅಂತ ಕೇಳಿದ್ರೂ, ಅಲ್ಲೇ ಹೆಚ್ಚು ಪುಸ್ತಕದ ಗೀಳು ಇರೋದು. ಈ ಪ್ರಶ್ನೆ ಅಲ್ಲಿಗೆ ಅನ್ವಯಿಸುತ್ತೆ. ಮುಂಬೈನಲ್ಲೂ ಅಂತಹ ಸಂಗ್ರಹಕಾರರು ಇದಾರೆ ಅಂತ ಕೇಳಿದ್ದೀನಿ. ಆದ್ರೆ ನಾನು ನೋಡಿಲ್ಲ. ನನ್ನ ಅಧ್ಯಯನದ ಪ್ರಕಾರ, ಕಲ್ಕತ್ತಾದ ಅಶುತೋಷ್ ಮುಖರ್ಜಿ, ಆಂಧ್ರದ ನಾರ್ಲಾ, ಮಹಾರಾಷ್ಟ್ರದ ಡಾ. ಬಿ ಆರ್ ಅಂಬೇಡ್ಕರ್ ಅತಿ ಮಹತ್ತ್ವದ ಪುಸ್ತಕ ಸಂಗ್ರಹಕಾರರು.

ಈ ಮೊದಲ ಮುದ್ರಣ ಅಂದ್ರೆ, ಲೇಖಕ ಬದುಕಿರುವಾಗಲೇ ರೂಪ ತಳೆದಿರುತ್ತೆ. ಹಾಗಾಗಿ ಒಂದು ಅಟ್ಯಾಚ್‍ಮೆಂಟ್. ಕೆಲವೊಮ್ಮೆ ಲೇಖಕ ಸತ್ತ ಮೇಲೂ ಪುಸ್ತಕ ಪ್ರಕಟ ಆಗಿರಬಹುದು. ಆದರೂ ಮೊದಲ ಮುದ್ರಣ ಮಾಡುವವನಿಗೆ ಆ ಪುಸ್ತಕದ ಮೇಲೆ ಒಂದು ಕರುಳು ಬಳ್ಳಿಯ ಸಂಬಂಧ ಇರುತ್ತೆ. ನನ್ನ ಬಳಿ ಇರುವ ಮೊದಲ ಮುದ್ರಣದ ಪುಸ್ತಕಗಳನ್ನು ಗಮನಿಸಿದರೆ, ತಾಂತ್ರಿಕವಾಗಿ ಇಷ್ಟು ಬೆಳೆದಿದ್ದರೂ ಇತ್ತೀಚೆಗೆ ಪ್ರಕಟವಾಗುವ ಪುಸ್ತಕಗಳನ್ನು ಮುಟ್ಟುವುದಕ್ಕೂ ಬೇಸರವಾಗುತ್ತೆ. ಆ ಮೊದಲ ಮುದ್ರಣದ ಅದೇನೊ ಸಂತೋಷ ಕೊಡುತ್ತೆ. ಆದರೆ ಆ ಸಂತೋಷ ಏನು ಅಂತ ಹೇಳೋಕ್ಕೇ ಆಗೊಲ್ಲ. ತಂದೆ ತಾಯಿಗೆ ಮೊದಲ ಮಗು ಇದ್ದ ಹಾಗೆ, ಒಂದು ರೀತಿಯ ಅಟ್ಟ್ಯಾಚ್‍ಮೆಂಟ್.
ಇನ್ನು ಸೈನ್ಡ್ ಎಡಿಶನ್ ವಿಚಾರಕ್ಕೆ ಬಂದರೆ, ಅಲ್ಲಿ ಮಹತ್ತ್ವ ಬರೋದು, ಯಾರು ಯಾರಿಗೆ ಆ ಪುಸ್ತಕ ಸಹಿ ಮಾಡಿ ಕೊಟ್ಟಿದ್ದಾರೆ ಎನ್ನುವುದರಲ್ಲಿ. ಉದಾಹರಣೆಗೆ, ಡಿವಿಜಿ, ಮಾಸ್ತಿ ಅವರಿಗೆ ಪುಸ್ತಕ ಕೊಟ್ಟರೆ, ಅದರಲ್ಲಿ ಏನು ಬರೆದು ಕೊಟ್ಟಿದ್ದಾರೆ, ಪುಸ್ತಕ ತೆಗೆದುಕೊಂಡವರು ಏನಾದ್ರು ಗುರುತು ಹಾಕ್ಕೊಂಡಿದಾರಾ ಪುಸ್ತಕದಲ್ಲಿ ಅನ್ನೋದೆ ಕುತೂಹಲ. ಲೇಖಕನ ಮತ್ತು ತೆಗೆದುಕೊಂಡವನ ಜೀವಧಾರೆ ಎನ್ನಬಹುದಾದ ಹಸ್ತಾಕ್ಷರ ಅದರಲ್ಲಿ ಇರುತ್ತೇ ಅನ್ನೋದಕ್ಕೆ ಅದನ್ನ ವಿಶೇಷವಾಗಿ ಕಲೆಕ್ಟ್ ಮಾಡ್ತೀವಿ.

3.    ನೀವು ಸಂಗ್ರಹಿಸಿದ ಪುಸ್ತಕ, ನೀವು ಓದಿ, ನಿಮಗೆ ಇಷ್ಟವಾಗದೆ ಹೋದರೆ, ಆ ಪುಸ್ತಕವನ್ನೇನು ಮಾಡ್ತೀರಾ?

ಇಲ್ಲ ಅಂತಹ ಪ್ರಶ್ನೆಯೇ ಬರೋದಿಲ್ಲ. ಸಂಗ್ರಹಿಸೋದು ಅಂದರೆ ಅದು ಇಷ್ಟವಾದದನ್ನೇ ಸಂಗ್ರಹ ಮಾಡೋದು. ಅದನ್ನು ಬಹಳ ಕಷ್ಟ ಪಟ್ಟು ಸಂಗ್ರಹಿಸ್ತೀವಿ, ಸಂಗ್ರಹಯೋಗ್ಯವಾದವನ್ನೇ!

4.    ಲಂಕೇಶ್ ಒಂದು ಸಂದರ್ಶನದಲ್ಲಿ ಹೇಳ್ತಾರೆ.. “ಪುಸ್ತಕ ಓದೋದು ಒಂದು ಕಲೆ, ಕವರ್ ಟು ಕವರ್ ಓದುವ ಅವಶ್ಯಕತೆ ಇಲ್ಲ. ಬ್ಲರ್ಬ್, ಇಂಟ್ರೊಡಕ್ಶನ್, ರಿವ್ಯೂ ಏನು ಓದಿದರೂ ಅದು ಅನುಭವದ ಭಾಗವೇ ಅಂತ..” ಓದುವ ಬಗೆಯ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ಓದು.. ಒಬ್ಬೊಬ್ಬರದೂ ಒಂದೊಂದು ಓದುವ ಕ್ರಮ ಇರುತ್ತೆ. ಮೊದಲನೆ ಪ್ರಶ್ನೆ ಕೇಳಿದೆರೆಲ್ಲಾ, ಸಂಗ್ರಹ ಹುಚ್ಚೋ, ಗೀಳೋ ಅಂತ.. ಹಾಗೆ ಸಂಗ್ರಹಿಸುವವರ ಓದು ಬೇರೆ. ಲಂಕೇಶ ಒಬ್ಬ ಕ್ರಿಯೆಟಿವ್ ಬರಹಗಾರನಾಗಿ, ಅವರ ಮಾತು ಸರಿ. ತನಗೆ ಏನು ಬೇಕೋ, ಹೇಗೆ ಬೇಕೋ ಹಾಗೆ ಓದಿಕೊಳ್ತಾ ಇದ್ರು. ಸಂಗ್ರಹಕಾರರ ಓದು ಬೇರೆ. ಅದು ಮಗು ಎತ್ಕೊಂಡು ಆಟ ಆಡಿಸೋ ಹಾಗೆ. ಅದಕ್ಕೆ ಸಮಯದ ನಿಗದಿ ಇಲ್ಲ. ಮಗು ಅತ್ತಾಗ್ಲೂ ಎತ್ಕೋತಾರೆ, ಸುಮ್ಮನೆ ಮುದ್ದು ಮಾಡೋಕ್ಕೂ ಎತ್ಕೋತಾರೆ. ಹಾಗೇನೇ ಪುಸ್ತಕ ಇದೆ ಅಂತ ಆಗಾಗ ಮುಟ್ಟಿ ಮುಟ್ಟಿ ನೋಡ್ತಾನೆ ಇರ್ತಾರೆ. ಸಂಗ್ರಹಕಾರ, ಸೃಜನಶೀಲ ಲೇಖಕ, ವಿಮರ್ಶಕ, ಸಂಶೋಧಕ ಎಲ್ಲರೂ ಬೇರೆ ಬೇರೆ ರೀತಿಯಲ್ಲಿ ಓದ್ತಾರೆ.
ಇನ್ನು ನನ್ನ ಓದುವ ಕ್ರಮ ಅಂದರೆ, ಮುಖಪುಟದ ಶೀರ್ಷಿಕೆಯ ಅಕ್ಷರ ವಿನ್ಯಾಸದಿಂದ ಹಿಡಿದು, ಅರ್ಪಣೆ, ಮುನ್ನುಡಿ ಎಲ್ಲವನ್ನೂ, ಏನನ್ನೂ ಬಿಡದೆ ಓದುವುದು ಮತ್ತು ಒಂದು ಸಾರ್ತಿ ಓದಿಬಿಟ್ಟರೆ, ಇದು ದಾಷ್ಟ್ರ್ಯ ಪದ ಅನ್ನಿಸಬಹುದು, ಆದರೆ ಅರೆದು ಕುಡಿದುಬಿಡ್ತೀನಿ. ಆಮೇಲೆ ಆ ಪುಸ್ತಕದ ಯೋಗ್ಯತೆಯನ್ನು ಜಡ್ಜ್ ಮಾಡ್ತೀನಿ. ಬಿಸಾಕ್ತೀನಿ ಅಂತ ಅಲ್ಲ. ಬರಹಗಾರನ-ಬರಹದ ಒಟ್ಟು ಮೋಟೀವ್-ಉದ್ದೇಶ ಏನು ಅಂತ ಗ್ರಹಿಸ್ತೀನಿ.

5.    ಸಂಗ್ರಹ-ಓದು-ಬರಹ-ಸಂಗೀತ-ನಾಟಕ-ಚಿತ್ರಕಲೆ ಹೀಗೆ ಎಲ್ಲ ಕಲಾ ಪ್ರಕಾರಗಳಲ್ಲೂ ಸಮಾನ ಅಭಿರುಚಿ ಹೊಂದಿದ್ದೀರ ಮತ್ತು ಎಲ್ಲದರಲ್ಲೂ ಸೃಜನಶೀಲ ರೀತಿಯಲ್ಲೋ ಅಥವಾ ಸೃಜನೇತರ ರೀತಿಯಲ್ಲೋ, ತಮ್ಮ ಕೃಷಿ ಕೂಡ ಇದೆ. ನಿಮ್ಮ ಸಮಯ ಹೇಗೆ ಹೊಂದಿಸಿಕೊಳ್ತೀರ? ಅಥವಾ ಹೇಗೆ ಬ್ಯಾಲೆನ್ಸ್ ಮಾಡ್ತೀರಾ?

ಕಾರಂತರಿಗೆ ಎಲ್ಲದ್ದಕ್ಕೂ ಹೇಗೆ ಸಮಯ ಮಾಡ್ಕೋತೀರ ಅಂತ ಕೇಳ್ದಾಗ, ಅವರ ಬದುಕಿನ ಕ್ರಮದ ಬಗ್ಗೆ ಒಮ್ಮೆ ಹೀಗೆ ಹೇಳಿದ್ದಾರೆ, ಒಂದು ಕೆಲಸದಿಂದ ಇನ್ನೊಂದು ಕೆಲಸಕ್ಕೆ ಹೋಗೋದೆ ಬಿಡುವು ಅಂತಾರೆ.
ಕಲೆಯ ವಿಷಯದಲ್ಲಿ ಹೇಳೋದಾದ್ರೆ, ಆ ಕಲೆಯಲ್ಲಿ ಎಷ್ಟು ಸ್ಪೇಸ್ ಇದೆ ಅನ್ನೋದೆ ಮುಖ್ಯ ಆಗುತ್ತೆ, ಎಲ್ಲವನ್ನೂ ತುಂಬಿದಾರೆ ಅದರಲ್ಲಿ ಅನ್ನೋದಕ್ಕಿಂತ. ಸಂಗೀತದಲ್ಲೂ ಅಷ್ಟೆ, ಹಾಡೋದಕ್ಕಿಂತ ಕೇಳೋದು ಬಹು ಮುಖ್ಯ. ಮನೋಧರ್ಮ ಅಲ್ಲಿರೋದು. ಮೃದಂಗದಲ್ಲೂ ಕಾರ್ವೆ ಅಂತಾರೆ. ಅದು ಗ್ಯಾಪ್. ಅದು ಮುಖ್ಯ. ಹಾಗಾಗಿ, ಇವುಗಳಲ್ಲಿ ಅವೆಲ್ಲಾ ಬೇರೆ ಬೇರೆ ಅಲ್ಲ. ಸಂಗೀತಕಾರ ಸಂಗೀತದಲ್ಲಿನ ಸಾಹಿತ್ಯ ಗ್ರಹಿಸ್ತಾ ಇರಬಹುದು. ಸಾಹಿತಿ ಆದವನು ಕಾವ್ಯದಲ್ಲಿ ಲಯ ಹಿಡಿಬೋದು. ಹಾಗಾಗಿ ಒಂದು ಬಿಟ್ಟು ಇನ್ನೊಂದಿಲ್ಲ.

ಎಲ್ಲವನ್ನೂ ನಿರ್ವಹಿಸುವುದು ಒಬ್ಬನ ಸಾಮರ್ಥ್ಯದ ಮೇಲೆ ನಿಂತಿರುತ್ತದೆ. ಯಾವುದನ್ನು ಬೇಕಾದ್ರೂ ತನ್ನ ತೆಕ್ಕೆಗೆ ತೆಗೆದುಕೊಳ್ಳಬಹುದು. ಸಮಯ ತಾನಾಗೆ ಒದಗುತ್ತದೆ. ಸಾಹಿತಿಗಳಾದವರು ಸಿನಿಮಾದಿಂದಲೋ, ಕ್ರೀಡೆಯಿಂದಲೋ ಸ್ಫೂರ್ತಿ ತಗೊಳ್ತಾ ಇರಬಹುದು. ಹೀಗೆ ತನ್ನನ್ನು ತಾನು ಮತ್ತೆ ಮತ್ತೆ ಜೀವಂತಗೊಳಿಸುವುದಕ್ಕೆ ಇವೆಲ್ಲಾ ವಿಧಾನಗಳು. ಎಲ್ಲದರಲ್ಲೂ ತೊಡಗಿಸಿಕೊಳ್ಳೋದರಲ್ಲೇ ಇರೋದು. ಉದಾಹರನೆ ಟ್ಯಾಗೋರ್ 70ನೆ ವಯಸ್ಸಿನಲ್ಲಿ ವೇಷ ಹಾಕಿದ್ದು. ಕೆಲವರು ತಮ್ಮ ರಂಗಗಳನ್ನು ಬೇರೆ ಬೇರೆ ಸಮಯಗಳಲ್ಲಿ ಬದಲಾಯಿಸಿಕೊಂಡಿದ್ದಾರೆ. ಆದರೂ ನನಗೆ ಇವೆಲ್ಲವೂ ಒಂದೆ. ಹಾಗಾಗಿ ಎಲ್ಲವನ್ನೂ ಬ್ಯಾಲೆನ್ಸ್ ಮಾಡಬೇಕು ಎಂಬ ವಿಶೇಷ ಅವಶ್ಯಕತೆ ಏನೂ ಬರೋದಿಲ್ಲ.

6.    ಮತ್ತೆ ಪುಸ್ತಕಕ್ಕೆ ಬರೋಣ.. ಬಹುಶಃ ಮುದ್ರಣದ ಪ್ರಾರಂಭದಿಂದ ಹಿಡಿದು ಇಂದಿನವರೆಗಿನ ಪುಸ್ತಕಗಳೂ ನಿಮ್ಮ ಸಂಗ್ರಹದಲ್ಲಿವೆ. ಹಿಂದಿನ ದಿನಗಳಿಗೆ ಹೋಲಿಸಿದಾಗ, ಪುಸ್ತಕಗಳ ಪ್ರೊಡಕ್ಶನ್ ಕ್ವಾಲಿಟಿ ಹೇಗೆ ಬದಲಾಗಿದೆ.

ಇವೊತ್ತು ಒಂದೇ ರಾತ್ರಿಗೆ 1000-5000 ಪುಟಗಳನ್ನು ಮುದ್ರಿಸುವಂತೆ  ಆಗಿಬಿಟ್ಟಿದೆ. ಆ ಪರಿಕರದ್ದೇ ತಪ್ಪೋ, ಅಥವ ಅವರು ಹಾಕುವ ಎಫರ್ಟೇ ತಪ್ಪೋ ಗೊತ್ತಾಗ್ತಿಲ್ಲ. ನನ್ನ ಹತ್ತಿರ ನೂರಿನ್ನೂರು ವರ್ಷ ಹಳೆಯ ಪುಸ್ತಕಗಳಿವೆ. ಅವುಗಳನ್ನು ನೋಡಿದರೆ, ಆ ಮುದ್ರಣ ಆಗಲಿ, ಆ ಪೇಪರ್ ಆಗಲಿ ಆಶ್ಚರ್ಯ ಆಗುತ್ತೆ. ಎಷ್ಟು ಅದ್ಭುತವಾಗಿ ಮಾಡಿದ್ದಾರೆ ಅಂತ! ಇತ್ತೀಚೆಗೆ, ಡಿ ಟಿ ಪಿ ಬಂದಿದೆ, ಆದರೆ, ಮೊಳೆ ಜೋಡಿಸಿ ಮಾಡುತ್ತಿದ್ದ ಪುಸ್ತಕಗಳ ಕ್ವಾಲಿಟಿಯ ಹತ್ತಿರಕ್ಕೂ ಬರೋಲ್ಲ. ಪ್ರೊಡಕ್ಷನ್ ಕ್ವಾಲಿಟಿ ಇತ್ತೀಚೆಗೆ ಕಳಪೆ ಆಗಿದೆ. ಓದುವವರಿಗೆ ಪುಸ್ತಕದ ಮೇಲೆ ಜಿಗುಪ್ಸೆ ಬಂದುಬಿಟ್ಟರೆ ಇದೂ ಒಂದು ಕಾರಣ. ಎಂಥವರಿಗೂ 1966 ರಲ್ಲಿ ಶಾ ಬಾಲೂರಾಯರು ತಂದ “ಶೇಕ್ಸಪಿಯರನಿಗೆ ನಮಸ್ಕಾರ” ಪುಸ್ತಕ ತೋರಿಸಿಬಿಟ್ಟರೆ, ತಲೆ ಮೇಲೆ ಇಟ್ಕೊಂಟುಬಿಡ್ತಾರೆ. ಅದು ಡೆಡಿಕೇಶನ್ ತೋರಿಸುತ್ತೆ. ಅದೂ ಮೊಳೆ ಜೋಡಿಸಿ ಪ್ರಿಂಟ್ ಮಾಡುತ್ತಿದ್ದ ಕಾಲದಲ್ಲಿ.

ದಕ್ಷಿಣ ಕನ್ನಡದ ಬ್ಯಾಸೆಲ್ ಮಿಷನ್, ಮೈಸೂರಿನ ವೆಸ್ಲಿ ಪ್ರೆಸ್, ನಂತರ ಮೈಸೂರು ಪ್ರಿಂಟಿಂಗ್ ಪ್ರೆಸ್ ಅಂತ ಏನೋ ಬಂತು, ಕೃಷ್ಣಮೂರ್ತಿ ಅವರದ್ದು, ರಾಮರಾಯರದ್ದು, ಮಣಿಪಾಲದ ಪವರ್ ಪ್ರೆಸ್ ಎಷ್ಟು ಚೆನ್ನಾಗಿ ಪ್ರಿಂಟಿಂಗ್ ಕೆಲಸ ಮಾಡ್ತಾ ಇದ್ರು ಅಂದ್ರೆ ಈ ಶಬ್ದ ಬಳಸೋದು ಸರಿ ಇಲ್ಲ, ಇನ್ವರ್ಟೆಡ್ ಕಾಮಾದಲ್ಲಿ ಬಳಸೋಣ.. “ದೇವರ ಕೆಲಸ” ಅನ್ನೋ ಹಾಗೆ ಮಾಡ್ತಾ ಇದ್ರು. ಒಬ್ಬ ಮುಗ್ಧ ಹೋಗಿ ಕೇಳಿದರೂ ಅದ್ಭುತವಾಗಿ ಪ್ರಿಂಟ್ ಮಾಡಿ ಕೊಡ್ತಾ ಇದ್ರು. ಇನ್ನೊಂದು ವಿಷಯ ಅಂದರೆ ಒಂದೂ ತಪ್ಪಿಲ್ಲದೆ ಪ್ರಿಂಟ್ ಮಾಡ್ತಾ ಇದ್ರು. ತಪ್ಪು ಇದ್ದರೂ ಕೊನೆ ಪುಟದಲ್ಲಿ, ತಪ್ಪೊಪ್ಪು ಅಂತ ಪಟ್ಟಿ ಕೊಡ್ತಾ ಇದ್ರು. ಈಗ ಅದು ಯಾವುದೂ ಇಲ್ಲ.

7.    ಕನ್ನಡ ಸಾಹಿತ್ಯದಲ್ಲಿ ಚಳವಳಿಗಳ ಪರಂಪರೆಯೇ ಇದೆ. ಆಯಾ ಚಳವಳಿಗಳಂತೆ, ವಿಭಿನ್ನ ಮನೋಧರ್ಮದ ಸಾಹಿತ್ಯ ರೂಪುಗೊಂಡಿದೆ. ಇಂದು ಆ ತರಹದ ಯಾವುದೇ ಚಳವಳಿ ಇಲ್ಲವೇ? ಸಾಹಿತ್ಯದ ಗುಣಮಟ್ಟ ಕಳಪೆಯಾಗಿದೆ ಎಂಬ ಮಾತು ನಿಜವೇ? ಇವೆರಡರ ನಡುವೆ ಏನಾದರೂ ಸಂಬಂಧವಿದೆಯೇ?

ಭಾಷೆ, ತನ್ನ ಭಾಷೆಯನ್ನ, ಭಾಷೆಯ ಜೊತೆಗೆ ತನ್ನ ಅಭಿಪ್ರಾಯಗಳನ್ನ, ಭಾವನೆಗಳನ್ನ ಗಟ್ಟಿಯಾಗಿ ಹೇಳೋದು, ಉಳಿಸಿಕೊಳ್ಳೋದು ಒಂದು. ಇದು ಬೆಳೀತಾ ಬೆಳೀತ, ನನ್ನ ಅಭಿಪ್ರಾಯವನ್ನು ಗಟ್ಟಿಯಾಗಿ ಹೇಳ್ತೀನಿ ಅನ್ನೋದು ಇನ್ನೊಂದು. ನಂತರ ನಾಲ್ಕು ಜನರ ಅಭಿಪ್ರಾಯ ತಿಳಿದು, ಅವರ ಅಭಿಪ್ರಾಯಗಳನ್ನು ನನ್ನವುಗಳಿಂದ ತಿದ್ತೀನಿ ಅನ್ನೋದು ಮತ್ತೊಂದು. ಇದು ದ್ವೈತ ಅದ್ವೈತ, ವಿಶಿಷ್ಟಾದ್ವೈತ ಅಂತ ವೇದಗಳ ಕಾಲದಿಂದಲೂ ಇದೆ. ವೇದ ಅನ್ನೋದನ್ನ ನಮ್ಮ ಭಾರತೀಯ ಅನ್ನೋ ಅರ್ಥದಲ್ಲಿ ಹೇಳ್ತಾ ಇಲ್ಲ. ಮೌಖಿಕವೆಲ್ಲವೂ ವೇದವೇ. ಅಂದರೆ ಈಗ, ಯಾವ ಕೆಲಸವನ್ನು ಕೂಡ ಗಟ್ಟಿಯಾಗಿ ಮಾಡಿದರೆ ಅದು ಚಳವಳಿಯೇ. ನಾಲ್ಕು ಜನ ಸೇರಿ ನೀನು ಒಂದು ಕಾದಂಬರಿ ಬರಿ, ನಾನು ಒಂದು ಕವಿತೆ ಬರೀತೀನಿ, ಕೂತ್ಕೊಂಡು ಓದೋಣ ಅನ್ನೋದಲ್ಲ ಚಳವಳಿ.

ಚಳವಳಿ ಹುಟ್ಟೋದು ಸಮಾಜದ ಒತ್ತಡದಿಂದ; ಉದಾಹರಣೆಗೆ, ಸಂಗೀತದಲ್ಲಿ, ಪರ ರಾಜ್ಯದವರೇ ಹೆಚ್ಚು ಹಾಡ್ತಾ ಇದಾರೆ ಅಂತ ಆದ್ರೆ, ಹೋರಾಟದ ಮೂಲಕ ಅದನ್ನು ತಡೆಗಟ್ಟೋದು ಒಂದು ಚಳವಳಿ. ಆದರೆ, ಚೌಡಯ್ಯನವರು, ಯಾವುದೇ ಚಳವಳಿ ಮಾಡದೆ, ತನ್ನ ಪಿಟೀಲು ಕಂಕಳಲ್ಲಿ ಇಟ್ಕೊಂಡು ದೇಶಾದ್ಯಂತ ಹೋಗಿ ಗೆದ್ದು ಬಂದದಕ್ಕೆ ಏನು ಹೇಳಬೇಕು? ಪರರಿಂದ ಅವರಷ್ಟು ಲೇವಡಿಗೆ ಒಳಗಾದ ವ್ಯಕ್ತಿ ಇನ್ನೊಬ್ಬ ಇಲ್ಲ. ಎಲ್ಲರನ್ನೂ ಬಗ್ಗು ಬಡೆದು, ಚೌಡಯ್ಯ ಇಲ್ಲದೇ ಇದ್ದರೆ ಕಛೇರಿಯೇ ಇಲ್ಲ ಅನ್ನೋ ಮಟ್ಟಿಗೆ ಮೆರೆದರೆಲ್ಲ, ಅದೂ ಚಳವಳಿಯೇ. ಅಂದರೆ ಅದು ಅವರವರ ಅಂತಃಸತ್ವದ ಮೇಲೆ ಹೋಗುತ್ತೆ.

ವಿವೇಕಾನಂದ ಏನಾದ್ರು ಚಳವಳಿ ಮಾಡಿದ್ರ? ಕುವೆಂಪು ಯಾವುದೇ ಚಳವಳಿ ಮಾಡಲಿಲ್ಲ. ಆದ್ರೆ ಅವರ ಜಾತಿ ವಿರೋಧಿ ಬರವಣಿಗೆ, ಮದುವೆಗಳ ಸುಧಾರಣೆ ಬಗ್ಗೆ ಬರದಿದ್ದು ಚಳವಳಿ ರೂಪದಲ್ಲಿ ಬೆಳೀತು. ಅದೊಂದು ಘನ ಉದ್ದೇಶ. ಅವರು ಯಾರ ಮದುವೆಗೂ ಬಂದು ನೀವು ಈರೀತಿ ಮದುವೆ ಮಾಡ್ಬೇಡಿ ಅಂತ ಎಲ್ಲೂ ಹೇಳಿದ್ದಿಲ್ಲ. ಮಂತ್ರ ಮಾಂಗಲ್ಯ, ಸರಳ ಮದುವೆ ಅನ್ನೋದು ಚಳವಳಿ ಮಟ್ಟಕ್ಕೆ ಮುಟ್ಟಿದೆ.

ಹಾಗಾಗಿ ಇನ್ನೊಂದು ಉದಾಹರಣೆ ಅಂದರೆ, ಮಾರ್ಕ್ಸ್ ಬಂಡವಾಳಶಾಹಿ ವಿರುದ್ಧ ಒಂದು ತತ್ತ್ವ- ಸಿದ್ಧಾಂತ ಬಿತ್ತಿದ. ಇವೊತ್ತೂ ಕೂಡ ಅದಕ್ಕೆ ಎಷ್ಟೇ ವಿರೋಧಗಳಿದ್ದರು, ಒಂದು ತತ್ತ್ವ ಸಿದ್ಧಾಂತವಾಗಿ ಬೆಳೆದು ಬಂದಿದೆ. ಅವನು ಎಲ್ಲೂ ಚಳವಳಿ ಮಾಡಲಿಲ್ಲವಲ್ಲ. ಲಂಡನ್ನಿನ ಲೈಬ್ರರಿಯಲ್ಲಿ ಕೂತು ಆ ಪ್ರಣಾಳಿಕೆ ರೂಪಿಸ್ದ. ಅದನ್ನ ಚಳವಳಿ ಹೋರಾಟದ ರೂಪಕ್ಕೆ ಕೊಂಡೊಯ್ದವನು ಲೆನಿನ್ ಅದನ್ನು ಮುಂದುವರೆಸಿದವನು ಮಾವೋ. ನಾನು ಯಾಕೆ ಹೇಳ್ತೀನಿ ಅಂದರೆ, ಚಳವಳಿಯನ್ನು ತನ್ನೊಳಗೇ ಇಟ್ಕೊಂಡು ತನ್ನ ರಂಗವನ್ನು ಬೆಳೆಸುವ ಸಾಧ್ಯತೆ ಇದೆ.

ಇನ್ನೊಂದು ಉದಾಹರಣೆ ಅಂದರೆ ಕಾರಂತರ ಕಾಲದಲ್ಲಿ ಅನಕೃ ಕೂಡ ಬರೀತಾ ಇದ್ರು. ಅನಕೃ ಅವರ ಪುಸ್ತಕಗಳಿಗೂ ಚಳವಳಿಗೂ ಸಂಬಂಧ ಇಲ್ಲ, ಆದರೆ ಅನಕೃ ಅವರ ಬರವಣಿಗೆ ಚಳವಳಿ ಮಟ್ಟಕ್ಕೆ ತಲುಪಿತ್ತು. ಕನ್ನಡ ಓದುವಂತೆ ಮಾಡಿತ್ತು. ಕಾರಂತರು ಯಾರೋ ಓದಲಿ ಅಂತ ಬರೀಲೆ ಇಲ್ಲ. ನನ್ನನ್ನು ಓದಿ ಓದಿ ಅಂತ ಹೇಳಲೂ ಇಲ್ಲ. ಅವರ ಚೋಮನದುಡಿ 300 ಪ್ರತಿ ಖರ್ಚಾಗೋಕ್ಕೆ 10 ವರ್ಷ ಹಿಡೀತು ಅಂತ ಬರ್ಕೋತಾರೆ. ಆದ್ರೆ ಅವರು ಅನಕೃ ಅವರಿಗೆ ಬರೀಬೇಡಿ ಅಂತ ಎಲ್ಲೂ ಹೇಳ್ಲಿಲ್ಲ. ತಮ್ಮ ಪಾಡಿಗೆ ತಾವು ನಿರಂತರವಾಗಿ ಬರೀತಾ ಹೋದ್ರು. ಹೀಗೆ ನಿರಂತರವಾಗಿ ಒಂದು ಕಾರ್ಯ ಮಾಡೋದೆ, ಚಳವಳಿ ಅಂತ ಕರೀತೀನಿ. ಯಾವ ಕ್ಷೇತ್ರಕ್ಕ ಬೇಕಾದ್ರು ಅಪ್ಪ್ಲೈ ಮಾಡಬಹುದು ಇದನ್ನ. ಇವೊತ್ತು ಆ ಕೊರತೆ ಇದೆ. ತನ್ನದೇ ಆದ ಮಾರ್ಗ ಕಂಡುಕೊಂಡು ನಿರಂತರವಾಗಿ ಬರೆಯುವವರ ಕೊರತೆ ಇದೆ, ವರಾತ ಅಂತೀನಿ ನಾನು ಅದನ್ನ. ಹಠ ಹಿಡಿದು ಬರೆಯೋದು ಅದು. ಜೀನಿಯಸ್ ಆಗ್ಬೇಕಿಲ್ಲ ಅದಕ್ಕೆ. ಕೃಷಿ ಮಾಡುವ ಸಿದ್ಧತೆ ಬೇಕು ಅಷ್ಟೆ.

8.    ಜನರಿಗೆ ಸಾಹಿತ್ಯದಲ್ಲಿ, ಓದುವ ಅಭಿರುಚಿ ಕಡಿಮೆ ಆಗಿರುವದಕ್ಕೂ, ಸಾಹಿತ್ಯದ ಗುಣಮಟ್ಟಕ್ಕೂ ಏನಾದರೂ ಸಂಬಂಧ ಇದೆಯೇ? ಹಿಂದೆ ಹೀಗಾಗಿ ಯಾರಾದರೂ ಅದನ್ನು ಅಧ್ಯಯನ ಮಾಡಿ ದಾಖಲಿಸಿದ್ದಾರೆಯೇ?

ಅಲ್ಲ ಅದು ಹಾಗಲ್ಲ. ಪ್ರತಿಯೊಬ್ಬ ಲೇಖಕನೂ, ಎಲ್ಲ ಸಮಯದಲ್ಲೂ ಈ ಪ್ರಶ್ನೆ ಎದುರಿಸ್ತಾ ಇರ್ತಾನೆ. ತನ್ನ ಕೃತಿಗಳನ್ನು ಜನ ಓದ್ತಾರೋ ಇಲ್ವೋ ಅನ್ನೋದನ್ನ ತಿಳಿದುಕೊಳ್ಳೋ ಪ್ರಯತ್ನ ಮಾಡ್ತಾನೇ ಇರ್ತಾನೆ. ರಾ ಶಿ ಅವರ ಹಾಸ್ಯಕ್ಕೂ, ಅನಂತರ ಅವರೇ ಬೆಳೆಸಿದ ಅ ರಾ ಮಿತ್ರ ಆಗಲೀ, ಅ ರಾ ಸೇ ಆಗಲೀ, ಸುನಂದಮ್ಮ  ಆಗಲೀ ಇವರ ಹಾಸ್ಯಕ್ಕೂ ಬಹಳ ವ್ಯತ್ಯಾಸ ಇದೆ. ಸಾಹಿತಿಯೂ ರಿನ್ಯೂಯಲ್ ಆಗ್ತಾ ಇರಬೇಕಾಗತ್ತೆ. ಅದಕ್ಕೆ ಸಣ್ಣ ಉದಾಹರಣೆ ಅಂದರೆ, ಚದುರಂಗ ಮೊದಲಿಗೆ ನವೋದಯದ ರೀತಿಯ ಕಾದಂಬರಿಗಳನ್ನ ಬರೆದರು, ನಂತರ ಪ್ರಗತಿಶೀಲ, ನವ್ಯ, ಬಂಡಾಯದ ತರಹದ ಕಾದಂಬರಿಗಳನ್ನ ಬರೆದರು. ಕೊನೆಗೆ ಅವರಲ್ಲಿದ್ದ ಸೃಜನಶೀಲ ದ್ರವ್ಯ ಅವರನ್ನ ದಲಿತ-ಬಂಡಾಯದ ಪ್ಯಾಟರ್ನ್ ಹಿಡಿದುಕೊಳ್ಳುವಂತೆ ಮಾಡ್ತು. ಅದರಿಂದಲೇ ಅವರು ವೈಶಾಖದಂತ, ಹೆಜ್ಜಾಲದಂತ ಕಾದಂಬರಿ ಬರೆಯೋಕ್ಕೆ ಸಾಧ್ಯವಾದದ್ದು. ಅದು ಲೇಖಕನೇ ಮಾಡಿಕೊಂಡಿದ್ದು. ಅಲ್ಲಿ ಚಳವಳಿಯ ಪ್ರಶ್ನೆಯೇ ಬರೋದಿಲ್ಲ. ಕುವೆಂಪು ಅವರ ಎದುರಿಗೇನೇ ನವೋದಯ, ನವ್ಯ, ಪ್ರಗತಿಶೀಲ, ದಲಿತ, ಬಂಡಾಯ, ಎಲ್ಲ ಚಳವಳಿಗಳೂ ನಡೆದು ಹೋದವು. ಅವರು ಬರೆದ ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನ ನವೋದಯ ಅಂತ ಕರೀಬೇಕಾ? ದಲಿತ- ಬಂಡಾಯ ಅಂತ ಕರೀಬೇಕಾ? ಅವರು ಅದನ್ನು ಹಿರಿತನದಲ್ಲೇ ನಡೆಸ್ತಾ ಹೋದರು. ನಾವು ಕಿರಿಯರು ಕಿರುಚಾಡುತ್ತಲೇ ಇದ್ದೇವೆ.

9.    ಇಂದು ಟಿ ವಿ ಮಾಧ್ಯಮ ಪುಸ್ತಕಕ್ಕೆ  ತ್ರೆಟ್ ಅಂತ ಹೇಳಲಾಗತ್ತೆ. ಪುಸ್ತಕ ಓದನ್ನು, ಟಿ ವಿ ನೋಡುವುದಕ್ಕೆ ಪರ್ಯಾಯವಾಗಿ ಬೆಳೆಸಬಹುದಾದ ಸಾಧ್ಯತೆ ಇದೆಯೇ?

ಈಗ, ಟಿ ವಿ ಮಾಧ್ಯಮ ಪುಸ್ತಕಕ್ಕೆ ತ್ರೆಟ್ ಅಲ್ಲ, ಅದು ಪುಸ್ತಕ ಲೋಕವನ್ನು ಒಳಗೊಳ್ಳೋಲ್ಲ ಅಂದರೆ ಅದು ಟಿ ವಿ ಮಾಧ್ಯಮದ ದೌರ್ಬಲ್ಯ. ಜಗತ್ತಿನ ಎಲ್ಲ ವಿಷಯಗಳನ್ನೂ ಅದು ಒಳಗೆ ತಗೊಳುತ್ತೆ ಅಂದ್ರೆ ಪುಸ್ತಕ ಪ್ರಪಂಚವನ್ನೂ ಅದು ತಕೋಬಹುದು. ಒಂದು ಆತ್ಮಕತೆ ಬಿಡುಗಡೆ ಆದಾಗ, ಅದನ್ನು ತೋರಿಸಿ ಆವ್ಯಕ್ತಿ ಬಗ್ಗೆ ಚರ್ಚೆ ಮಾಡಬಹುದು. ಹಾಗೆ ಆ ಮಾಧ್ಯಮ ಮಾಡ್ತಾ ಇಲ್ಲ ಅಂದರೆ ಅದು ಆ ಮಾಧ್ಯಮದ ಇತಿ-ಮಿತಿ ತೋರಿಸುತ್ತೆ. ಬಹುಶಃ ಮಾಧ್ಯಮದಲ್ಲಿ ದುಡಿಯುತ್ತಿರುವವರಿಗೆ ಬದುಕಿನ ವಿವಿಧ ಮಜಲುಗಳು ಗೊತ್ತಿಲ್ಲದೆ ಇರುವುದು ಕಾರಣ ಇರಬಹುದು. ಒಬ್ಬ ಪ್ರಯೋಗಶೀಲ ವ್ಯಕ್ತಿ ಟಿ ವಿ ಮಾಧ್ಯಮವನ್ನು ಮುನ್ನಡೆಸಲು ಬಂದಾಗ ಇದು ಸರಿ ಹೋಗಬಹುದು.
ಇದಕ್ಕೆ ಇನ್ನೊಂದು ರೀತಿಯಲ್ಲಿ ಉದಾಹರಣೆ ಕೊಟ್ಟು ಹೇಳೋದಾದ್ರೆ, ಗುಬ್ಬಿ ವೀರಣ್ಣನಂತ ದೈತ್ಯ ರಂಗ ಪ್ರತಿಭೆ, ಸಿನೆಮಾ ಮಾಧ್ಯಮವನ್ನು ದಿಟ್ಟತನದಿಂದ ಎದುರಿಸಿದ ಉದಾಹರಣೆ ಇದೆ. ಸಿನೆಮಾ ಅನ್ನೋದು ಬಂದಾಗ, ಸಿನೇಮಾ ಅಂದ್ರೆ ಏನೂ ಅಂತ ಗೊತ್ತಿಲ್ಲದವರು ಕೂಡ ಸಿನೆಮಾ ನೋಡಲು ಶುರು ಮಾಡಿದಾಗ, ಗುಬ್ಬಿ ವೀರಣ್ಣನವರು, ಆ ಸಿನೆಮಾ ಥಿಯೇಟರ್‍ಗಳಲ್ಲೇ ನಾಟಕ ಆಡಿದ್ರು. ಅವರು ಏನು ಮಾಡಿದ್ರು, ನಿಜವಾದ ಪ್ರಾಣಿ-ಪಕ್ಷಿಗಳನ್ನೆಲ್ಲಾ ನಾಟಕದಲ್ಲಿ ತಂದರು. ಆ ಪ್ರಯೋಗಶೀಲತೆ ಸಿನೆಮಾ ಮಾಧ್ಯಮವನ್ನು ಮೆಟ್ಟಿ ನಿಲ್ಲುವಂತೆ ಮಾಡ್ತು.

10.    ಮತ್ತೆ ಸಂಗ್ರಹಕ್ಕೆ ಬಂದರೆ, ಅಪರೂಪದ/ರೇರ್ ಪುಸ್ತಕ ಅಂದರೆ ಯಾವುದು? ನಿಮ್ಮ ಸಂಗ್ರಹದಲ್ಲಿರುವ ಅಂತಹ ರೇರೆಸ್ಟ್ ಪುಸ್ತಕ ಯಾವುದು?

ಹಿಂದೆ ಕೇಳಿದ ಪ್ರಶ್ನೆ ಹಾಗೆ First Edition ಪುಸ್ತಕವೇ ರೇರ್ ಅಲ್ಲ. ಅವುಗಳು ಸಾವಿರಾರು ಪ್ರಿಂಟ್ ಆಗಿರುತ್ತವೆ. ಅಥವಾ Signed Edition ಕೂಡ ಹಾಗೇನೆ, ರೇರ್ ಅನ್ನೋಕ್ಕೆ ಆಗೋಲ್ಲ. ಪುಸ್ತಕ ಲೋಕದಲ್ಲಿ ಗ್ರಂಥ ಮೌಲ್ಯಮಾಪನಕ್ಕೆ ಬಹಳ ಮಹತ್ತ್ವ ಇದೆ. ಕಿಟೆಲ್ ಸಂಪಾದಿಸಿದ ಕನ್ನಡ ನಿಘಂಟಿಗೆ ಕನ್ನಡ ಭಾಷೆ, ಸಾಹಿತ್ಯ, ಸಾಂಸ್ಕೃತಿಕ ಲೋಕದಲ್ಲಿ ಒಂದು ದೊಡ್ಡ ಸ್ಥಾನ ಇದೆ. ಅದರ First Edition ಪುಸ್ತಕವನ್ನು ರೇರ್ ಅನ್ನಬಹುದೇನೋ. ಮತ್ತೆ ಅದನ್ನ ನೋಡಬೇಕು ಅಂತ ಹೊರಟರೆ ಅದು ಸಿಗೋದೆ ಕಷ್ಟ. ಯಾರೋ ಒಬ್ಬನ ಹತ್ತಿರ ಇರಬಹುದು. ಅದು ನನ್ನಲ್ಲಿದೆ.

ಹೇಗೆ, ಒಂದು ರಾಗ ಒಬ್ಬ ಸಂಗೀತಕಾರನ ಸ್ವತ್ತಾಗಿಬಿಟ್ಟು ಆ ರಾಗವನ್ನ ಕೇಳಿದರೆ ಆ ಸಂಗೀತಗಾರ ಹಾಡೋದು ಕೇಳ್ಬೇಕ್ರಿ ಅಂತಾರೋ, ಹಾಗೆ ಪುಸ್ತಕ ಕೂಡ ಒಬ್ಬನ ಸ್ವಾಮ್ಯದಲ್ಲಿ ರೇರ್ ಆಗಿಬಿಡುತ್ತೆ. ಅದು ಸಾಮಾನ್ಯವಾಗಿ ಇನ್ನೊಬ್ಬನ ಹತ್ರಾನು ಸಿಗುತ್ತೆ ಅಂದರೆ ಅದರ ರೇರ್ ಕ್ವಾಲಿಟಿ ಹೊರಟುಹೋಗುತ್ತೆ.

11.    “ಪುಸ್ತಕ ಮನೆ” ಪತ್ರಿಕೆ ಮತ್ತೆ ಹೊರಡಿಸುವ ಯೋಜನೆ?

ಪುಸ್ತಕ ಸಂಗ್ರಹ-ಪುಸ್ತಕ ಪ್ರದರ್ಶನ-ಪುಸ್ತಕ ಮನೆ ಇವು ಯಾವುವೂ ನನ್ನಿಂದ ದೂರ ಆಗಿಲ್ಲ. ಇವುಗಳನ್ನ ಬೇರೆ ಬೇರೆ ಘಟ್ಟಗಳಲ್ಲಿ ಮಾಡ್ತಾನೆ ಬಂದಿದ್ದೀನಿ. ಆದರೆ ಸದ್ಯಕ್ಕೆ ನನ್ನ ಪುಸ್ತಕಗಳನ್ನು ಇನ್ನೂ ವ್ಯವಸ್ಥಿತವಾಗಿ ಕಾಪಾಡಿಕೊಳ್ಳೋಕ್ಕೆ ಎಕರೆಯಷ್ಟು ದೊಡ್ಡ ಜಾಗ ಬೇಕಾಗಿದೆ. ಆದರೆ ಅದಕ್ಕಾಗಿ, ಸರ್ಕಾರವನ್ನೋ, ಮತ್ತ್ಯಾರೋ ಸಾಹುಕಾರನನ್ನೋ ಕೇಳೋಕ್ಕೆ ನನಗೆ ಸಾಧ್ಯ ಆಗೊಲ್ಲ. ಆದರೆ ಮುಂದೊಂದು ದಿನ ನನ್ನ ಆಸೆ ಕೈಗೂಡತ್ತೆ ಅನ್ನೋದು ನನ್ನ ನಂಬಿಕೆ. ಆಗ ಮತ್ತೆ ಎಲ್ಲವನ್ನೂ ಹಿಂದಿನಂತೆ ಮಾಡ್ಕೋತಾ ಹೋಗ್ತೀನಿ. ಏನೇನೋ ಕನಸಿದೆ. ಪುಸ್ತಕ ಅಧ್ಯಯನ ಕೇಂದ್ರ ಮಾಡುವ ದೊಡ್ಡ ಆಶಯವಿದೆ.

12.    ಇವೊತ್ತು ಸಾಹಿತ್ಯ ಕಳಪೆ ಆಗಿರುವುದಕ್ಕೆ, ಆ ಸಾಹಿತ್ಯ ಜಗಳಗಳು-ವಾಗ್ವಾದಗಳು ಇಲ್ಲದಿರುವುದೂ ಒಂದು ಕಾರಣ ಅಂತ ಹೇಳ್ತಾರೆ. ಹಿಂದೆ ಲಂಕೇಶ್ ಅಂತ ಪತ್ರಕರ್ತ ಸಾಹಿತಿಗಳು ಅತಿ ಸಿಟ್ಟಿನಿಂದ ಬಹಳಷ್ಟು ಲೇಖಕರನ್ನು ಜರೀತಿದ್ರು.. ಲಂಕೇಶ್ ನಂತರ ಆ ಪರಂಪರೆ ಇಲ್ಲವಾಗಿದೆ. ಈ ಕಂದಕ ಸರಿಪಡಿಸಬಹುದೇ?

ಲಂಕೇಶ ಯಾವುದೇ ಸಾಂಸ್ಕೃತಿಕ ವಾಗ್ವಾದವನ್ನು ಹುಟ್ಟು ಹಾಕಿಲ್ಲ. ಲಂಕೇಶ ಪತ್ರಿಕೆ ಆ ಕಾಲದ ಕುದಿಯುವ ಮನಸ್ಥಿತಿಯ ಮುಖವಾಣಿಯಾಗಿತ್ತೆ ಹೊರತು ಸಾಹಿತ್ಯ-ಸಾಂಸ್ಕೃತಿಕ ಪತ್ರಿಕೆ ಆಗಿರಲಿಲ್ಲ. ಲಂಕೇಶ ಸ್ವತಃ ಒಬ್ಬ ಪ್ರತಿಭಾವಂತ ಲೇಖಕ ಆಗಿದ್ದರಿಂದ ಆ ಪತ್ರಿಕೆಯಲ್ಲಿ ಆ ಸಿಟ್ಟು-ಆ ಛಾಪು ಇತ್ತೇ ಹೊರತು, ಪ್ರಬುದ್ಧ ಕರ್ನಾಟಕ, ಜೀವನ, ಜಯಕರ್ನಾಟಕ ಈ ತರಹದ ಸಾಹಿತ್ಯದ ಮೋಟೀವ್ ಇದ್ದ ಪತ್ರಿಕೆ ಅಲ್ಲ ಲಂಕೇಶ ಪತ್ರಿಕೆ. ಲಂಕೇಶ್ ಅವರಿಗೆ ಆ ಉದ್ದೇಶವೂ ಇದ್ದಿದ್ದಿಲ್ಲ.

ಆದರೆ ವಾಗ್ವಾದಗಳು ಹಿಂದೆ ಇತ್ತು. ಕುವೆಂಪು ಮಾಸ್ತಿ ಅವರದ್ದು, ಆರ್ ನರಸಿಂಹಾಚಾರ್ ಮತ್ತು ಎ ವೆಂಕಟಸುಬ್ಬಯ್ಯ ಮಾಡಿದ್ದು, ಪಾವೆಂ ಆಚಾರ್ಯ, ತೇಜಸ್ವಿ, ಅನಂತಮೂರ್ತಿ ಅಂತಹವರು ಹುಟ್ಟು ಹಾಕಿದ ವಾಗ್ವಾದಗಳು ನಮ್ಮಲ್ಲಿವೆ. ಲಂಕೇಶ್ ನನಗೆ ತಿಳಿದ ಮಟ್ಟದಲ್ಲಿ ಯಾವ ವಾಗ್ವಾದವನ್ನೂ ಹುಟ್ಟು ಹಾಕಿಲ್ಲ. ಆದರೆ ಅವರು ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ತೋರಿಸುತ್ತಿದ್ದ ಸಿಟ್ಟು-ಧೈರ್ಯ ಕೂಡ ಮೆಚ್ಚಬೇಕಾದ್ದೆ. ಇಲ್ಲಿ ವಾಗ್ವಾದಗಳನ್ನು ಮಾಡಿದವರು ಶ್ರೇಷ್ಠ-ಕನಿಷ್ಠ ಅಂತಲ್ಲ. ವಾಗ್ವಾದಗಳೇ ಶ್ರೇಷ್ಠ.

ಆಮೇಲೆ ವಾಗ್ವಾದ ಇಲ್ಲದೆ ಇರೋದು ಕಾರಣ ಅಂತ ಅಲ್ಲ. ವಾಗ್ವಾದ ಮಾಡಲು ಅದಕ್ಕೆ ತಕ್ಕಂತೆ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತೆ. ಮೌನವಾಗಿ ಕೂಡ ವಾಗ್ವಾದ ಮಾಡಬಹುದು. ಸೇಡಿಯಾಪು ಅಂತ ವಿದ್ವಾಂಸರು “ನೆತ್ತಮನಾಡಿ ಭಾನುಮತಿ ಸೋಲ್ತೊಡೆ” ಬರೆದಂತ ಸಂದರ್ಭಗಳಲಿ, ಬೇರೆ ಬೇರೆ ವಿದ್ವಾಂಸರುಗಳು ಬರೆದದ್ದನ್ನೆಲ್ಲಾ ಮುಂದಿಟ್ಟುಕೊಂಡು ಕೊಟ್ಟ ಉತ್ತರ ಇದೆಯೆಲ್ಲ, ಅಂತಹ ವಾಗ್ವಾದಗಳು ಆಗಬೇಕು. ಇವೊತ್ತೂ ಇದಾರೆ, ಆದರೆ ಅವರು ವಾಗ್ವಾದಗಳಿಗೆ ಇಳೀತಿಲ್ಲ, ಅದಕ್ಕೆ ಲಂಕೇಶ ಅಂತಹವರು ಇಲ್ಲದಿರುವುದು ಕಾರಣ ಅಲ್ಲ, ಸಾಂಸ್ಕೃತಿಕ ರಾಜಕೀಯ ಕಾರಣ. ಸಾಂಸ್ಕೃತಿಕ ರಾಜಕಾರಣಕ್ಕೆ ಬೇರೆ ಬೇರೆ ಚೌಕಟ್ಟುಗಳಿವೆ, ಜಾತಿ-ಕುಲ-ಅಧಿಕಾರ ಇವೆಲ್ಲಾ ಸೇರಿಕೊಂಡು ವಾಗ್ವಾದಕ್ಕೆ ಇಳಿಯಲಾರದ ಪರಿಸ್ಥಿತಿ ಇದೆ. ಈಗ ವೀರಶೈವರ ಬಗ್ಗೆ ವೀರಶೈವನಲ್ಲದವನೋ, ಕುವೆಂಪು ಬಗ್ಗೆ ಒಕ್ಕಲಿಗನಲ್ಲದವನೋ ಮಾತಾಡಲಾಗದ ಪರಿಸ್ಥಿತಿ ಬಂದಿದೆ. ಉದಾಹರಣೆಗೆ ಈಗ ಶಂಕರಾಚಾರ್ಯರ ಬಗ್ಗೆ ಒಂದು ವಿಚಾರ ಸಂಕೀರ್ಣ ಮಾಡಿದ್ರೆ ಬರೀ ಅದ್ವೈತಿಗಳನ್ನು ಮಾತ್ರ ಕರೀತಾರೆ, ಆದ್ರೆ ಅಲ್ಲಿ ದ್ವೈತಿಗಳನ್ನೂ ಕರೀಬೇಕು, ದಲಿತರನ್ನೂ ಕರೀಬೇಕು. ಆದರೆ ಇತ್ತೀಚೆಗೆ ಎಲ್ಲರೂ ಒಂದು ತರಾ ಸೇಫ್ ಆಗಿ ಯಾರನ್ನೂ ಎದುರು ಹಾಕೊಳ್ಳೋದು ಬೇಡ ಅಂತ ಸುಮ್ನೆ ಆಗ್ಬಿಟ್ಟಿದ್ದಾರೆ.

13.    ಪಕ್ಕದ ರಾಜ್ಯ ಆಂಧ್ರದಲ್ಲಿ, ಪುಸ್ತಕಗಳಿಗೆ ತಮ್ಮ ವಿರೋಧಿಗಳಿಂದ ಮುನ್ನುಡಿ-ಹಿನ್ನುಡಿ-ಬೆನ್ನುಡಿ ಬರೆಸುವ ಪರಂಪರೆ ಇದೆ ಅಂತ ನೀವೊಮ್ಮೆ ಹೇಳಿದ ನೆನಪು. ಅದರ ಬಗ್ಗೆ ಸ್ವಲ್ಪ..

ಹೇಳ್ತೀನಿ. ಅದು ಆಂಧ್ರದಲ್ಲಿ ಇವೊತ್ತಿಗೂ ಇದೆ. ಕನ್ನಡದಲ್ಲಿ ಇರಲಿಲ್ಲ ಅಂತ ಅಲ್ಲ. ಉದಾಹರಣೆಗೆ, ಹರ್ಡೇಕರ್ ಮಂಜಪ್ಪ ಅವರು ಬರೆದ ಪುಸ್ತಕಕ್ಕೆ ಅಲೂರು ವೆಂಕಟರಾಯರು ಮುನ್ನುಡಿ ಬರೆದಿದ್ದಾರೆ. ಬಿ ಪಿ ರಾಧಾಕೃಷ್ಣ ಅವರು ಒಕ್ಕಲಿಗ ಜನಾಂಗಕ್ಕೆ ಸೇರಿದವರು. ಅವರು ‘ನನ್ನ ತಂದೆ’ ಅಂತ ಪುಸ್ತಕ ಬರೆದಿದ್ದಾರೆ ತಮ್ಮ ತಂದೆಯವರ ಬಗ್ಗೆ. ಅದಕ್ಕೆ ಮುನ್ನುಡಿ ಬರೆದಿರುವವರು ಡಿ ವಿ ಜಿ, ಬ್ರಾಹ್ಮಣರು. ಏನಿದು ಬ್ರಾಹ್ಮಣರು ಬರೀಬಾರ್ದಾ ಅಂತಲ್ಲ. ಆ ಪುಸ್ತಕದ ಒಳಗಡೆ ಇರೋದು ಒಕ್ಕಲಿಗ ಜನಾಂಗದ ಏಳಿಗೆಗಾಗಿ ಶ್ರಮಿಸಿದ ಮುಖಗಳು ಮತ್ತು ಪುಟ್ಟಯ್ಯನವರ ಬಗ್ಗೆ ಅಲ್ಲಿದೆಯಲ್ಲ, ಅದನ್ನ ಒಬ್ಬ ಸಮಕಾಲೀನ ಬ್ರಾಹ್ಮಣ ಓದಿ ಬರಿಯೋದು ಇದೆಯೆಲ್ಲ ಅದಕ್ಕೆ ಎದೆಗಾರಿಕೆ ಬೇಕು. ಇದು ಇತ್ತು ನಮ್ಮಲ್ಲಿ. ಆದರೆ ಏನಾಯ್ತು, ನವೋದಯದ ನಂತರ ಶುರು ಆಯ್ತಲ್ಲ ಗುಂಪುಗಾರಿಕೆ,. ಅವಾಗ ಇನ್ನೊಬ್ಬರ ಕೃತಿಗಳ ದೋಷಗಳನ್ನು ಅದರ ಬಗ್ಗೆ ಬರೆಯುವಾಗ ಹೇಳುತ್ತಿರಲಿಲ್ಲ, ಆಮೇಲೆ ಖಾಸಗಿಯಾಗಿ ಮಾತಾಡಿಕೊಳ್ತಿದ್ರು. ಆಂಧ್ರದಲ್ಲಿ ಹಾಗಲ್ಲ. ಐತಿಹಾಸಿಕ ಕಾವ್ಯ ಇಷ್ಟ ಆಗದ ವ್ಯಕ್ತಿ ಇರ್ತಾನೆ, ಅವನ ಕೈಲಿ ಅದನ್ನೇ ಓದುಸ್ತಾ ಇದ್ರು. ಅವನು ತನ್ನ ಅಭಿಪ್ರಾಯವನ್ನು ಸಮರ್ಥಿಸಿಕೊಳ್ತಾ ಇದ್ದ; ಇಲ್ಲ ಕೃತಿನೇ ಡಿಸ್ಮಿಸ್ ಮಾಡ್ತಾ ಇದ್ದ. ಅವೆಲ್ಲವೂ ದಾಖಲೆ ಆಗಿವೆ. ಅಂದ್ರೆ ಅವರು ಅಲ್ಲೆ ಉತ್ತರ ಕೊಡ್ತಾ ಇದ್ರು. ರಾಳ್ಲಪಲ್ಲಿ ಅನಂತ ಕೃಷ್ಣ ಶರ್ಮ ಅವರು ಹೊಸಕಾಲದಲ್ಲಿ ಮಹಾಕಾವ್ಯವೇ ಹೋಗಿಬಿಡ್ತು ಅಂದವರು. ಆಗ ‘ಶಿವಭಾರತಮುಕಾವ್ಯ’ ಅಂತ ಗಡಿಯಾರಂ ವೆಂಕಟ ಶೇಷಶಾಸ್ತ್ರಿ ಅವರು ಬರೆದು, ಮುನ್ನುಡಿಗೆ ರಾಳ್ಲಪಲ್ಲಿ ಅವರಿಗೇ ಕೊಟ್ರು. ಅದಕ್ಕೆ ಮುನ್ನುಡಿ ಬರೀತಾ ರಾಳ್ಲಪಲ್ಲಿ ಅವರು, ನನ್ನ ಅಭಿಪ್ರಾಯವನ್ನ ವಾಪಸ್ ತಗೋತೀನಿ ಅಂತ ಬರೆದಿದ್ದಾರೆ. ರಾಳ್ಲಪಲ್ಲಿ ಅಲ್ಲದೇನೆ ತನಗೆ ಬೇಕಾದವರ ಕೈಲಿ ಮುನ್ನುಡಿ ಬರೆಸಿ, ಓ ರಾಳ್ಲಪಲ್ಲಿ ಅವರು ಹೀಗೆ ಅಂದ್ಬಿಟ್ರು-ಅವರು ನನ್ನ ಕಾವ್ಯ ಓದಬೇಕು-ಇತ್ಯಾದಿ ಇತ್ಯಾದಿ ಅಂತ ಮುಸುಕಿನ ಗುದ್ದು ಕೊಡೋದು ಇದೆಯೆಲ್ಲ ಅದು ಆಂಧ್ರದಲ್ಲಿ ಇಲ್ಲ. ಮಹಾರಾಷ್ಟ್ರದಲ್ಲೂ ಇನ್ನೂ ಆ ವಾಗ್ವಾದಗಳು ಇವೆ. ವಿದ್ವಾಂಸರು ಅಲ್ಲಿ ಇನ್ನೂ ಜೀವಂತವಾಗಿದ್ದಾರೆ.

14.    ಜನರಿಗೆ ಕವಿತೆಗಳ ಓದಿನಲ್ಲಿ ಆಸಕ್ತಿ ಕ್ಷೀಣವಾಗುತ್ತಲೇ ಇದೆ. ಇದಕ್ಕೇನಾದರೂ ಮಾಂತ್ರಿಕ ಪರಿಹಾರ ಇದೆಯೇ?

ಇಲ್ಲ ಅದು ತಪ್ಪು ಅಭಿಪ್ರಾಯ. ಇತ್ತೀಚೆಗೆ ಒಳ್ಳೆ ಕವಿತೆಗಳು ಯಾರಾದರೂ ಬರೀತಾ ಇದಾರ? ಹಿಂದೆ ಕಾವ್ಯ ಬಹಳ ಕೇಳ್ತಾ ಇದ್ದರು. ಪಂಪನ ಕಾಲದಿಂದ ಕೂಡ ಕವಿ, ಗಮಕಿ, ವಾಗ್ಮಿ, ವಾದಿ ಅಂತ ಇದಾರೆ. ಬರೆಯುವವನೊಬ್ಬ ಓದಿ ಹೇಳುತ್ತಿದ್ದವನೊಬ್ಬ. ಹೊಸ ಹೊಸ ಕಾವ್ಯಗಳನ್ನು ಓದುವವರೇ ಇದ್ದರು. ನಮ್ಮ ಓ ಎಲ್ ನಾಗಭೂಷಣಸ್ವಾಮಿ ಅವರ ಮನೆಗೆ “ಓದುವ” ಅಂತಾನೆ ಹೆಸರು. ಹಾಗೆ ಓದುವವರೆ ಇದ್ದರು. ಭಾರತಿ ಅಂತ ಕರೀತಿದ್ದರು ಅವರನ್ನ. ಬಹಳಷ್ಟು ಜನಕ್ಕೆ ಅಕ್ಷರ ಓದೋಕ್ಕೆ ಬರ್ತಾ ಇದ್ದಿರದ ನಮ್ಮಂತ ದೇಶದಲ್ಲಿ, ಒಬ್ಬರಿಂದ ಒಬ್ಬರಿಗೆ ಮೌಖಿಕವಾಗಿ ಕಾವ್ಯ ಓದೋ ಹಾಗೆ ಇತ್ತು. ಕುವೆಂಪು-ಬೇಂದ್ರೆ ಕೂಡ ಕಾವ್ಯ ಓದ್ತಾ ಇದ್ದಾಗ 2-3 ಘಂಟೆ ಕೂತು ಕೇಳ್ತಾ ಇದ್ರು. ಇವೊತ್ತು ಕಾವ್ಯ-ಕಾವ್ಯ ಸಂಕಲನಕ್ಕೆ  ಮಾರಾಟದ ದೃಷ್ಟಿಯಿಂದ ನೋಡಿದ್ರೆ ಅದಕ್ಕೆ ಸಂಭ್ರಮದ ವಾತಾವರಣದ ಅವಶ್ಯಕತೆ ಇದೆ. ಪುಸ್ತಕ ಸಂಸೃತಿಯೇ ನಮ್ಮಲ್ಲಿ ಇನ್ನೂ ಹುಟ್ಟಿಲ್ಲ.

ಇದು ಜಾತಿ ದೃಷ್ಟಿ ಇಂದ ಹೇಳ್ತಾ ಇಲ್ಲ. ಹೊಂಬೇಗೌಡರು ಅಂತ ಜಸ್ಟೀಸ್ ಇದ್ರು. ಅವರು ಎಲ್ಲೇ ಹೋದ್ರು, ಕುವೆಂಪು ಅವರ ಶ್ರೀರಾಮಾಯಣದರ್ಶನಂ ಮೊದಲು ಓದಬೇಕಾಗಿತ್ತು. ಅವರು ಕುವೆಂಪು ಗೆಳೆಯರೇನಲ್ಲ. ಅವರು ರಿಸ್ಕ್ ತೆಗೆದುಕೊಂಡದಕ್ಕೆ ಹೀಗೆ ಶ್ರೀರಾಮಾಯಣದರ್ಶನಂ ಕೂಡ ಪ್ರಚಾರ ಆಯ್ತು. ಪುಸ್ತಕೋದ್ಯಮಿಗಳು ಕಾವ್ಯಕ್ಕೆ ಆ ಸಂಭ್ರಮದ ವಾತಾವರಣ ಸೃಷ್ಟಿ ಮಾಡಬೇಕು. ಇವೊತ್ತೂ ಕೂಡ ನಿಜದ ಓದುಗರು ಕವಿತೆಗಳನ್ನ ಓದ್ಕೋತಾ ಇದಾರೆ. ಉದಾಹರಣೆಗೆ ಇಂದಿಗೂ ಆಂಧ್ರದ ಜಮೀನ್ದಾರಿ ಪದ್ಧತಿಯಲ್ಲಿ, ಕವನ ಓದುವವರನ್ನ ಕರೆಯಿಸಿ ಓದುಸ್ತಾರೆ. ಅವರು ಗಮಕಿಗಳಲ್ಲ. ಕವನ ಓದುವವರೇ. ತಮ್ಮ ಅಥವ ಬೇರೆಯವರ ಕವಿತೆ, ಕಾವ್ಯವನ್ನು ಓದುವವರು-ಓದಿಸುವವರು ನಮ್ಮಲ್ಲಿ ಇಲ್ಲವೇ ಇಲ್ಲ.

15.    ನೀವು ಬರೆದಿರುವ ಬಹಳಷ್ಟು ಪುಸ್ತಕಗಳು ರೀಪ್ರಿಂಟ್ ಆಗಿಲ್ಲ..

ನನ್ನ ಪುಸ್ತಕಗಳು ಸಾಕಷ್ಟು ಮರುಮುದ್ರಣ ಕಂಡಿವೆ. ಆದರೆ ಇಂದಿನ ಗ್ರಂಥಾಲಯ ವ್ಯವಸ್ಥೆಯಲ್ಲಿ ಎರಡನೇ-ಮೂರನೇ ಮುದ್ರಣದ ಪುಸ್ತಕಗಳನ್ನು ಕೊಂಡುಕೊಳ್ತಾಇಲ್ಲ. ಸರ್ಕಾರ ಈ ಗ್ರಂಥಾಲಯ ವ್ಯವಸ್ಥೆಯನ್ನು ಕೆಟ್ಟ ರೀತಿಯಲ್ಲಿ ರೂಪಿಸ್ತಾ ಇದೆ. ಅದು ಒಂದು ಬದಿ. ನಾನು ಈವರೆಗೂ ಯಾವುದೇ ಸ್ಥಾನಮಾನಗಳನ್ನು ಏರಿ ಕುಂತಿಲ್ಲ. ಮತ್ತು ನನ್ನನ್ನ ಜಗಳಗಂಟ ಅಂತಲೋ ಇನ್ನೇನೋ ಕರೆದರೂ ಅದು ನನ್ನ ಬರಹದ ದೃಷ್ಟಿಯಿಂದಲ್ಲ. ನನ್ನ ಪುಸ್ತಗಳನ್ನು ಓದುತ್ತಿಲ್ಲವೇ ಅಂದರೆ ತುಂಬಾ ಜನ ಓದ್ತಾ ಇದಾರೆ, ಅದರ ಬಗ್ಗೆ ದಾಖಲು ಕೂಡ ಮಾಡಿದ್ದಾರೆ. ಕುವೆಂಪು, ಜಿ ಎಸ್ ಎಸ್, ಬರಗೂರು, ಎಚ್ ಎಸ್ ಆರ್, ಶಿವಾನಂದ್, ಇವರೆಲ್ಲ ದಾಖಲು ಮಾಡಿದ್ದಾರೆ. ಆದರೆ ನನ್ನ ಯಾವ ಪುಸ್ತಕವೂ ಟೆಕ್ಸ್ಟ್ ಬುಕ್ ಆಗಿಲ್ಲ. ಇದಕ್ಕೆ ಸಾಕಷ್ಟು ರಾಜಕೀಯ ಕಾರಣಗಳಿವೆ. ಅಕ್ಯಾಡೆಮಿಕ್ ಹುನ್ನಾರ ಅಂತಲೂ ಅದನ್ನ ಕರೀಬೋದು. ಮರು ಮುದ್ರಣ ಹೆಚ್ಚಾಗೋದೇ ಆವಾಗ, ಅಥವಾ ಪಾಪ್ಯುಲರ್ ನಾವೆಲ್ಸ್ ಬರೀಬೇಕು. ಇವೆಲ್ಲ ಏನೇ ಇದ್ದರೂ ಜನ ಬಯಸಿದಾಗ ನನ್ನ ಪುಸ್ತಗಳು ರೀಪ್ರಿಂಟ್ ಆಗುತ್ತಲೇ ಬಂದಿವೆ. ನನ್ನ ಅನುಮಾನ ಏನೆಂದರೆ ನನ್ನ ಪುಸ್ತಗಳನ್ನು ಕದ್ದು ಮುಚ್ಚಿ ಓದ್ತಾರೇನೋ ಅಂತ!
                
16.    ನಾನು ಗಮನಿಸಿದ ಹಾಗೆ ನೀವು ಓದಿದ ಪುಸ್ತಗಳಲ್ಲಿ (ಸಾಮಾನ್ಯವಾಗಿ ಸೃಜನೇತರ-ಎಡಿಟೆಡ್) ಸಮಗ್ರತೆಯಲ್ಲಿ ಲೋಪ ಕಂಡುಬಂದರೆ, ಹಿಂದೆ ನಡೆದ ಹಿರಿಯರ ಪ್ರಯತ್ನಗಳನ್ನು ದಾಖಲಿಸದೇ ಹೋಗಿದ್ದರೆ, ನೀವು ಪ್ರತಿಭಟಿಸಿದ್ದೀರಿ. ಇಗ್ನೋರೆನ್ಸ್ ಅನ್ನೋದು ದೊಡ್ಡ ತಪ್ಪಾ? ನೀವು ಪ್ರತಿಭಟಿಸಿದಾಗ ನಿಮಗೆ ಸಾಮಾನ್ಯವಾಗಿ ಅಥವಾ ಯಾವುದಾದರೂ ಪ್ರತ್ಯೇಕ ಘಟನೆಯಲ್ಲಿ ಯಾವ ರೀತಿಯ ಉತ್ತರ ದೊರಕಿದೆ?

ಹೌದು. ಅದು ಜಗತ್ತು ಒಪ್ಪಿರೋ ಸಿದ್ಧಾಂತ. ಯಾವುದೆ ವಿಷಯದಲ್ಲಿ ಏನಾದರೂ ಬರೆಯಬೇಕು ಅಂದರೆ ಇದುವರೆಗೂ ಆ ವಿಷಯದಲ್ಲಿ ಏನೆಲ್ಲಾ ಕೆಲಸ ಆಗಿದೆ ಅಂತ ಗಮನಿಸೋದು ಕ್ರಮ. ಸಂಗೀತದಲ್ಲೂ ಹಾಗೆ, ಯಾವುದೇ ರಾಗದಲ್ಲಿ ಪಳಗಬೇಕು ಅಂದರೆ, ಅದನ್ನು ಬಹಳ ಕೇಳಿರಬೇಕು. ಸುಬ್ಬಣ್ಣ ಅಂತಹವರು ಕೂಡ- ಅಂದರೆ ಅವರೇನೂ ಅಕ್ಯಾಡೆಮಿಕ್ ಸಾಹಿತಿ ಅಲ್ಲ, ಕವಿರಾಜಮಾರ್ಗದ ಬಗ್ಗೆ ಬರೆಯುವಾಗ, ಹಿಂದೆ ಮಾಡಿದ ಕೆಲಸವನ್ನೆಲ್ಲ ಸಮಗ್ರವಾಗಿ ಅಧ್ಯಯನ ಮಾಡಿ ಬರೆದಾಗ ಅದಕ್ಕೆ ತೂಕ ಬಂತು, ಹಾಗೆ ಬರೆದಿದ್ದಾರೆ ಅವರು. ಹಾಗೇ ನಾವು ಸುಮ್ಮನೆ ಹೇಳೋದಲ್ಲ. ನಾವು ಓದಿಕೊಂಡಿರ್ತೀವಿ. ಅದಕ್ಕೆ ಹೇಳ್ತೀವಿ. ನನ್ನದೆ ಉದಾಹರಣೆ ಅಂದ್ರೆ ಕೆ. ಸತ್ಯನಾರಾಯಣ ಅವರು ಬಿ ಪುಟ್ಟಯ್ಯನವರ ಬಗ್ಗೆ  ಬರೆದ ಪುಸ್ತಕ, ಬಿ ಪಿ ರಾಧಾಕೃಷ್ಣ ಬರದದ್ದು, ಅದರ ಬಗ್ಗೆ ಬರೀತಾ, ಇಂತಹ ಪುಸ್ತಕದ ಬಗ್ಗೆ ಬೇರೇ ಯಾರೂ ಬರೆಯದೆ ಇದ್ದದ್ದು ದುರದೃಷ್ಟ ಅಲ್ಲವೇ ಅನ್ನೋ ರೀತಿಯಲ್ಲಿ ಬರೀತಾರೆ. ಅದರ ಬಗ್ಗೆ ನಾನೇ ಬರೆದಿದ್ದೆ. ಅವರಿಗೆ ಫೋನ್ ಮಾಡಿ ತಿಳಿಸಿದೆ, ನಾನು 82ನೇ ಇಸವಿಯಲ್ಲಿ ಬರೆದ ಲೇಖನದ ಬಗ್ಗೆ ಹೇಳಿದೆ. ಅವರಿಗೆ ನಂತರ ಅದರ ಬಗ್ಗೆ ಜಿ ಎನ್ ರಂಗನಾಥ್ ರಾವ್ ಅವರಿಂದ ತಿಳಿದು ಆ ಲೇಖನದ ಬಗ್ಗೆ ಉಲ್ಲೇಖಿಸಿದ್ದಾರೆ ಮತ್ತು ಹರಿಹರಪ್ರಿಯ ಹೇಳುವ ಕ್ರಮವನ್ನು ಇಷ್ಟಪಡ್ತೀನಿ ಅಂತ ಬರೆದಿದ್ದಾರೆ.

ಶ್ರೀರಂಗರು ಅವರ ಆತ್ಮಕತೆ “ಬರಹಗಾರನ ಬದುಕು” ನಲ್ಲಿ ಒಂದು ಕಡೆ ಹೇಳ್ತಾರೆ, ನೆಗೆಯುವವನು ಎಷ್ಟು ಹಿಂದೆ ಇಂದ ಓಡಿ ಬರ್ತಾನೋ ಅಷ್ಟೂ ಮುಂದಕ್ಕೆ ಜಿಗಿತಾನೆ ಅಂತ. ವ್ಯುತ್ಪತ್ತಿ ಅಂತೀವಿ ಅದನ್ನ. ಹಾಗೆ ಇದರಲ್ಲೂ ಕೂಡ ನಾವು ಎಷ್ಟು ಓದಿ, ಸಿದ್ಧತೆ ಮಾಡಿ ಬರಿತೀವೋ ಅಷ್ಟೇ ಚೆನ್ನಾಗಿ ಇರುತ್ತೆ. ಆದುದರಿಂದ ಇಂತಹ ವಿಷಯದಲ್ಲಿ ನಾನು ಕ್ಷಮಿಸೋದಿಲ್ಲ , ನಾನು ತಪ್ಪು ಮಾಡಿದಾಗ ನನ್ನನೂ ಕ್ಷಮಿಸೋದು ಬೇಡ.

17.    ನಿಮ್ಮನ್ನು ಕ್ರಿಟಿಸೈಸ್ ಮಾಡ್ದೋರು ಯಾರು? ಅವರನ್ನು ಮತ್ತು ಅಂತಹ ಕ್ರಿಟಿಸಿಸಂ ಅನ್ನು ಯಾವ ರೀತಿ ಸ್ವೀಕರಿಸುತ್ತೀರ?

ನಾನು ನನ್ನ ನಲವತ್ತು ಪುಸ್ತಕಗಳಿಗೆ ಬರೆಸಿರುವ ಮುನ್ನುಡಿಗಳಲ್ಲಿ, ಬರೆದವರು ಯಾರೂ ಕೂಡ ನನ್ನ ಸರ್ಕಲ್‍ನವರಲ್ಲ. ನಾನು ಕುವೆಂಪು ಭಕ್ತನಾದರೂ, ಶಂಕರ ಮೊಕಾಶಿ ಪುಣೇಕರ ಅವರ ಕೈಲಿ ಮುನ್ನುಡಿ ಬರೆಸಿದ್ದೆ, ಒಂದು ಪುಸ್ತಕಕ್ಕೆ. ಅವರು ಬೇಂದ್ರೆ ಭಕ್ತರು. ಹಾಗೇ ಎಷ್ಟೋ ಜನ ನನ್ನ ಕೃತಿಗಳನ್ನ ಟೀಕೆ ಮಾಡಿದ್ದಾರೆ, ಆದರೆ ಅದಕ್ಕೆ ಉತ್ತರ ಕೊಡುವ ಗೋಜಿಗೆ ಹೋಗಿಲ್ಲ. ಯಾಕೆ ಅಂದ್ರೆ ನನ್ನ ಟೆಕ್ಸ್ಟೂ ಇದೆ, ಅವರ ಟೀಕೆಯೂ ಇದೆ. ಯಾವುದು ಉಳಿಯುತ್ತೋ ಉಳಿಯಲಿ ಎಂಬುದು ನನ್ನ ಧೃಢ ನಂಬಿಕೆ. ನನ್ನನ್ನು ಹಿಂದೆ ಟೀಕೆ ಮಾಡಿದವರು 40-45 ವರ್ಷ ಆದಮೇಲೆ ಮೆಚ್ಚಿರುವವರು ಇದ್ದಾರೆ. ಮೆಚ್ಚಿಸೋದು ಮುಖ್ಯ ಅಂತಲ್ಲ. ನಾನು ಕೂಡ ಬೆಳೆದಿದ್ದೀನಿ ಅನ್ಸುತ್ತೆ. ಎಲ್ ಎಸ್ ಶೇಷಗಿರಿ ರಾಯರು ನನ್ನ ಒಂದು ಪುಸ್ತಕಕ್ಕೆ ಮುನ್ನುಡಿ ಬರೀತಾ, ಕಡೆಂಗೋಡ್ಲು ಶಂಕರ ಭಟ್ಟರ ಬಗ್ಗೆ ನಾನು ಹೇಳಿರೋದನ್ನ ಕೌಂಟರ್ ಮಾಡಿದ್ದಾರೆ. ಆ ವಿಷಯವನ್ನು ಅವರು ಒಪ್ಪಿಲ್ಲ. ಆದರೆ ನನಗೆ ನಾನು ಬರೆದಿರುವುದರ ಬಗ್ಗೆ ನಂಬಿಕೆ ಇದೆ. ಅದಕ್ಕೆ ಬಿಟ್ಬಿಡ್ತೀನಿ. ಅವರ ಜೊತೆಗು ಇವತ್ತಿಗೂ ಒಳ್ಳೆ ಸಂಬಂಧ ಇದೆ.

18.    ನಿಮ್ಮ ವಿಚಾರಧಾರೆಯನ್ನು ಪ್ರಭಾವಿಸಿದ ಪುಸ್ತಕಗಳು ಯಾವ್ಯಾವು?

ನಾನು ಅನುವಾದಿಸಿದ ಪುಸ್ತಕಗಳೆಲ್ಲ ನನ್ನ ಮೇಲೆ ಪ್ರಭಾವ ಬೀರಿರುವಂತವೇ. ಸಂಜೀವ್ ದೇವ ಆಗಲಿ, ನಾರ್ಲಾ ಆಗಲಿ. ಕುವೆಂಪು ಬಗ್ಗೆ ಕೆಲಸ ಮಾಡ್ತಾನೇ ಇದೀನಿ. ನನ್ನ ಎಲ್ಲ ಸಾಹಿತ್ಯದ ಉಳುಮೆಗೆ ಕುವೆಂಪು ಅವರ ಬದುಕು ಬರಹ ನನಗೆ ಹೊನ್ನ ನೆಲದಂತಿದೆ. ವಿಶ್ವದ ಸಾಹಿತ್ಯದ ಆಲೋಚನೆ ಮಾಡ್ತಾ ಹೋದಾಗ ನನಗೆ ಹೆಚ್ಚು ಪ್ರಭಾವ ಬೀರಿದ್ದು ವಿಕ್ಟರ್ ಹ್ಯೂಗೋ, ಫ್ರೆಂಚ್ ಲೇಖಕ. ಅವನು ಬದುಕನ್ನು ಕಂಡ ರೀತಿ ಬಹುಶಃ, ನಾನು ಕಂಡ ಬದುಕಿಗೆ ಹತ್ತಿರ ಇರೋದರಿಂದ ಅವನು ಬಹು ದೊಡ್ಡ ಲೇಖಕನಾಗಿ ಕಾಣಿಸ್ತಾನೆ. ಅವರ “ಲೇ ಮಿಸರೆಬಲ್ಸ್” ಬಹಳ ಪ್ರಭಾವ ಬೀರಿದೆ. ನನ್ನ ಮಗನಿಗೆ “ಜೀನ್ ವಾಲ್ ಜೀನ್” ಅಂತ ಹೆಸರು ಇಡಬೇಕು ಅಂತ ಬಹಳ ಆಸೆ ಇತ್ತು. ಆಂಧ್ರದಲ್ಲಿ, ಕಾವ್ಯದಲ್ಲಿ ನನಗೆ ಹೆಚ್ಚು ಇನ್‍ಫ್ಲುಯೆನ್ಸ್ ಮಾಡಿರೋದು ಶ್ರೀ ಶ್ರೀ,. ಕಾವ್ಯವನ್ನೇ ಅವರು ಅಸ್ತ್ರವಾಗಿ ಬಳಸಿದ್ದಾರೆ. ಕುವೆಂಪು ಅವರು ಆ ತರ ಮಾಡ್ಲಿಲ್ಲ. ಕುವೆಂಪು ಅವರು ಬದುಕನ್ನು ಕಟ್ಟಿಕೊಟ್ಟಿದ್ದೇ ಬೇರೆ ರೀತಿ. ಅವರ ಕಥೆ, ಕಾದಂಬರಿ, ನಾಟಕ, ವಿಮರ್ಶೆಗಳಲ್ಲಿ ಅವರು ಪೌರಾಣಿಕ- ಸಾಮಾಜಿಕ- ರಾಜಕೀಯ- ಅಸಮತೋಲನವನ್ನು ಮುರಿದು ಕಟ್ಟಿರೋದ್ರಲ್ಲೆ ಅವರ ಶಕ್ತಿ. ಬ್ರಾಹ್ಮಣ ಮಾಡಿದ್ರೆ ತಪಸ್ಸು ಶೂದ್ರ ಮಾಡಿದ್ರೆ ಅಲ್ಲ ಅನ್ನೋ ನಂಬಿಕೆಯನ್ನೇ ಮುರಿದು ಕಟ್ತಿದ್ರು ಅವರು. ಶ್ರೀ ಶ್ರೀ ಅವರು ತಪಸ್ಸನ್ನೇ ಇಟ್ಟುಕೊಂಡು ವಿಶ್ವದ ದೃಷ್ಟಿಯಲ್ಲಿ ,ಮಾನವ ಪ್ರಪಂಚದ ದೃಷ್ಟಿಯಲ್ಲಿ ಹೋರಾಟಕ್ಕೇ ಇಳಿದಿಬಿಡ್ತಿದ್ರು.
ಅವರು ಮುವತ್ತ ನಾಲ್ಕನೇ ಇಸವಿಯಲ್ಲಿ ಈ ರೀತಿ ಕರೆ ಕೊಟ್ಟಿದ್ದಾರೆ.

“ಮರೋ ಪ್ರಪಂಚಂ
ಮರೋ ಪ್ರಪಂಚಂ
ಮರೋ ಪ್ರಪಂಚಂ ಪಿಲಿಚಿಂದಿ!
ಪದಂಡಿ ಮುಂದುಕು,
ಪಡಂಡಿ ತ್ರೋಸುಕು,
ಪೋದಾಂ, ಪೋದಾಮ ಪೈಪೈಕಿ!”
ಇಂತ ಕರೆಗಳನ್ನು ಕುವೆಂಪು ಕೊಡೋಕ್ಕೇ ಆಗ್ತಾ ಇರಲಿಲ್ಲ. ಆ ಭಾಷೆ ರಾಜ್ಯದ ವಸ್ತುಸ್ಥಿತಿಯಿಂದ ಶ್ರೀ ಶ್ರೀ ಅವರಿಗೆ ಹಾಗೆ ಬರೆಯೋಕ್ಕೆ ಸಾಧ್ಯ ಆಯ್ತು.

19.    ಕುವೆಂಪು ಮತ್ತು ಶ್ರೀ ಶ್ರೀ ಅವರನ್ನು ಪಕ್ಕ ಪಕ್ಕದಲ್ಲಿಟ್ಟು ಮಾತಾಡಿದ್ರಿ, ನಿಮ್ಮನ್ನು ಹೆಚ್ಚು ಆವರಿಸಿಕೊಂಡ ಕುವೆಂಪು, ನಾರ್ಲಾ, ಇವರ ವ್ಯಕ್ತಿತ್ವಗಳನ್ನು juxtapose ಮಾಡಿ ನೋಡಿದರೆ?

ನಾರ್ಲಾ ಅವರು ಒಂದು ದೃಷ್ಟಿಕೋನದಲ್ಲಿ ಮುಂದೆ ಬಂದಿರೋದು. ವೈಚಾರಿಕತೆಯಲ್ಲಿ.  ನಮಗೆ ವೈಚಾರಿಕತೆ ಎಷ್ಟು ದಿಕ್ಕು ತಪ್ಪಿಸಿದೆ, ಎಂಬುದನ್ನು ಅವರು ಎಲ್ಲ ಕೃತಿಗಳಲ್ಲಿ ಹೇಳ್ತ ಹೋಗ್ತಾರೆ. ಅವರು ಪತ್ರಕರ್ತರಾಗಿದ್ದರಿಂದ ಜನತೆಯ ನಾಡಿ ಬಲ್ಲವರಾಗಿದ್ದರಿಂದ ನಾವು ಬೌದ್ಧಿಕವಾಗಿ ಹೆಚ್ಚು ಶಕ್ತಿವಂತರಾಗಬೇಕು ಎಂದು, ಆ ದಿಟ್ಟಿನಲ್ಲಿ ಯೋಚಿಸುತ್ತಾ ಬಂದವರು. ಕುವೆಂಪು ಬರೀ ವೈಚಾರಿಕವಾಗಿ ಅಲ್ಲ, ಸ್ವತಃ ಕ್ರಿಯೇಟಿವ್ ಬರಹಗಾರರು. ನಾರ್ಲಾ ಅವರಲ್ಲಿ ಅದು ಕಡಿಮೆ. ಅವರು ಮಹಾನ್ ಬೌದ್ಧಿಕ ಸಿದ್ಧತೆ ಇಟ್ಕೊಂಡವರು. ತುಂಬಾ ಓದಿಕೊಂಡವರು. ಕ್ರಿಯೇಟಿವ್ ಬರಹಗಾರರು ಅವರ ಬರವಣಿಗೆಗೆ ಹೆಚ್ಚು ಓದಿಕೊಂಡಿರಬೇಕಾದ ಅವಶ್ಯಕತೆ ಇಲ್ಲ. ಕುವೆಂಪು, ಶ್ರೀ ಶ್ರೀ ಎಷ್ಟು ಓದ್ಕೊಂಡಿದಾರೆ ಎನ್ನೋದ್ರ ಮೇಲೆ ಅವರ ಬರವಣಿಗೆ ನಿಂತಿರಲ್ಲ. ವಿಮರ್ಶಕರಿಗೆ ಇರಬೇಕಾದ ಸಿದ್ಧತೆ ಅದು. ಆ ಸಿದ್ಧತೆ ನಾರ್ಲಾ ಅವರಿಗೆ ಇತ್ತು. ರಾಮಾಯಣವನ್ನ, ಅಥವಾ ಮಹಾಭಾರತವನ್ನ ಅಥವಾ ಯಾವುದೇ ಮಹಾಕಾವ್ಯವನ್ನ ವಿಮರ್ಶೆ ಮಾಡಬೇಕಾದರೆ, ಅಥವಾ ಒಂದು ವಿಷಯವನ್ನು ಚರ್ಚಿಸಬೇಕಾದರೆ, ಉದಾಹರಣೆಗೆ ಸೆಕ್ಯುಲರಿಸಂ ಅನ್ನುವುದನ್ನ ಚರ್ಚಿಸಬೇಕಾದರೆ ನಾರ್ಲಾ ಅವರಿಗೆ ಆ ಸಿದ್ಧತೆ ಇತ್ತು. ಕುವೆಂಪು ಸೃಜನಶೀಲ ಲೇಖಕನಾಗಿ “ಬೆರಳ್‍ಗೆ ಕೊರಳ್” ನಾಟಕವನ್ನೋ, ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನೋ ಕೊಡಬೇಕಾದರೆ ಅದು ಅವರ ಬದುಕಿನ ಶ್ರೀಮಂತಿಕೆಯನ್ನು ತೋರಿಸ್ತದೆ. ಆ “ಬೆರಳ್‍ಗೆ ಕೊರಳ್” ಎಂಬ ಕ್ರಿಯೇಟಿವ್ ವರ್ಕ್ ಇದೆಯೆಲ್ಲ ಅದೇ ಸಾಕು. ಹಾಗೆ ಶ್ರೀ ಶ್ರೀ ಅವರಿಗೆ, ಜನ, ಈ ಕಾಲ, ಈ ಮಾನವ ಕುಲ ಎತ್ತ ಹೋಗಬೇಕು ಅನ್ನುವ ಕಲ್ಪನೆ ಇತ್ತು. ಅದಕ್ಕೆ ಬೇಕಾದ ಕಾವ್ಯ ಅವರು ಓದ್ಕೊಂಡಿದ್ರು. ಮತ್ತು ಬರೀತಿದ್ರು.

20.    ಪುಸ್ತಕ ಸಂಗ್ರಹಕಾರ, ಸಾಹಿತಿ, ಕವಿ, ವಿಮರ್ಶಕ, ಭಾಷಣಕಾರ – ಇವುಗಳಲ್ಲಿ ನಿಮ್ಮ ವ್ಯಕ್ತಿತ್ವವನ್ನು ಬಹಳ ನಿಕಟವಾಗಿ ಸೂಚಿಸುವ, ಅಥವಾ ನಿಮಗೆ ಬಹಳ ಒಪ್ಪುವ ಒಂದನ್ನು ಮಾತ್ರ ಆರಿಸಿ ಎಂದರೆ?

ಇದಕ್ಕಾಗಿ ಅದು, ಅದಕ್ಕಾಗಿ ಇನ್ನೊಂದು. ಬೇರ್ಪಡಿಸೋದು ಹೇಗೆ? ಬರೆಯುವವನಿಗೆ ಮಾತಾಡು ಬಾ ಅಂತ ಕರೀತಾರೆ. ಮಾತಾಡುವವನ್ನ ಇನ್ನೊಂದು ಕೆಲಸಕ್ಕೆ ಹಚ್ತಾರೆ. ಇವೆಲ್ಲ ದೇಹದ ಅಂಗಾಂಗಳಿದ್ದ ಹಾಗೆ. ಇವುಗಳಲ್ಲಿ ಒಂದನ್ನು ಬಿಟ್ಟು ಇನ್ನೊಂದಿಲ್ಲ. ಇಷ್ಟಾಗಿಯೂ ಕೂಡ ನನ್ನನ್ನ ನಾನೇ ಆಯ್ಕೆ ಮಾಡ್ಕೋಬೇಕು ಅಂದರೆ, ಒಬ್ಬ ಸಾಮಾಜಿಕ-ಸಾಂಸ್ಕೃತಿಕ ಬರಹಗಾರ ಅಂತ ಕರೆದುಕೊಳ್ಳೋಕೆ ಇಷ್ಟ ಪಡ್ತೀನಿ.

ಸಂದರ್ಶನ
- ಗುರುಪ್ರಸಾದ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com