
ಪುಟಾಣಿ ಶಕ್ತಿವೇಲು ಬಗ್ಗೆ ನನ್ನ ಸಹೋದ್ಯೋಗಿ ಹೇಳಿದ್ದನ್ನು ಕೇಳಿ ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಈ ರೀತಿಯ ಪ್ರತಿಭೆ ಇರುವುದು ಸಹಜವಾಗಿಬಿಟ್ಟಿದೆ, ಶಾಲೆಗೆ ಹೋದರೆ ಶಿಕ್ಷಕರು ಹೇಳಿ ಕೊಟ್ಟಿದ್ದನ್ನು ಮಕ್ಕಳು ಕಂಠಪಾಠ ಮಾಡಿ ಹೇಳುತ್ತಾರೆ, ಇದರಲ್ಲಿ ಹೊಸದೇನು ಇಲ್ಲ ಎಂದು ಕೊಂಡಿದ್ದೆ. ನಂತರ ಒಮ್ಮೆ ಬಾಲಕನೊಂದಿಗೆ ಮಾತನಾಡಿ ನೋಡೋಣ ಎಂದು ಕೊಂಡು ಬಾಲಕನ ಪೋಷಕರನ್ನು ಸಂಪರ್ಕಿಸಿ ತಮ್ಮ ಮಗನ ಸಂದರ್ಶನ ಮಾಡಬೇಕೆಂದು ಹೇಳಿದಾಗ ಒಪ್ಪಿಕೊಂಡರು.
ಸಂದರ್ಶನದ ವೇಳೆ ಬಾಲಕನಿಗೆ ದೇಶ-ವಿದೇಶದ ರಾಜಧಾನಿ, ಹಣ್ಣು, ಪ್ರಾಣಿಗಳ ಹೆಸರು ಹಾಗೂ ಸ್ಪೆಲ್ಲಿಗ್ಸ್ ಸೇರಿದಂತೆ ಇನ್ನು ಹಲವು ಪ್ರಶ್ನೆಗಳನ್ನು ಕೇಳಲಾಯಿತು. ಬಾಲಕನ ಮಾತುಗಳು ಹಾಗೂ ಪ್ರತಿಭೆಯನ್ನು ನೋಡಿದಾಗ ಆಶ್ಚರ್ಯವಾಯ್ತು. ಪ್ರತಿಭೆಗೆ ವಯಸ್ಸಿನ ಅವಶ್ಯಕತೆ ಇಲ್ಲ. ಆದರೆ ಪ್ರತಿಭೆಯನ್ನು ತೋರಿಸಲು ಸೂಕ್ತರೀತಿಯ ವೇದಿಕೆ ಹಾಗೂ ತರಬೇತಿ ಅಗತ್ಯವಿದೆ ಎಂಬುದನ್ನು ಬಾಲಕ ತೋರಿಸಿಕೊಟ್ಟ.
ಬಾಲಕನ ಹೆಸರು ಶಕ್ತಿವೇಲು. 5 ವರ್ಷದ ಹರೆಯ. ಯಾವುದೇ ದೇಶದ ರಾಜಧಾನಿ ಕೇಳಿದರೂ ಡೆಲ್ಲಿಯಿಂದ ನ್ಯೂಯಾರ್ಕ್ ವರೆಗೂ ಚಾಕಲೇಟ್ ತಿಂದಷ್ಟು ಸುಲಭವಾಗಿ ಹೇಳಬಲ್ಲ. ಇರುವ 180 ದೇಶ ರಾಜಧಾನಿಯನ್ನು ಕೇವಲ 2 ನಿಮಿಷದಲ್ಲೇ ಹೇಳ್ತಾನೆ. ಒಂದು ಸಾರಿ ಹೇಳಲು ಶುರುಮಾಡಿದರೆ ಪುಸ್ತಕ ನೋಡಿ ಪರೀಕ್ಷಿಸುವವರೇ ತಬ್ಬಿಬ್ಬಾಗುವಂತೆ ಮಾಡುತ್ತಾನೆ. ವಿವಿಧ ರಾಷ್ಟ್ರಗಳ ಪ್ರಾಣಿ, ಹಣ್ಣು, ಹೂವು ಹಾಗೂ ಮರ, ಗಿಡ ಅಥವಾ ಯಾವುದೇ ಸ್ಪೆಲ್ಲಿಂಗ್ ಕೇಳಿದರು ಹೇಳಬಲ್ಲ.
ಈ ಪುಟಾಣಿಯಲ್ಲಿ ಮತ್ತೊಂದು ವಿಶಿಷ್ಟ ಪ್ರತಿಭೆ ಇದೆ ಅದೇನೆಂದರೆ, ತಾನು ಯಾವುದೇ ದೃಶ್ಯವನ್ನು ನೋಡಿದರು ಕಣ್ಣಿಗೆ ಕಟ್ಟಿದ್ದಂತೆ ಚಿತ್ರವನ್ನು ಬಿಡಿಸುತ್ತಾನೆ. ಇನ್ನೂ ಶಾಲೆಗೆ ಹೋಗದಿರುವ ಈ ಬಾಲಕ ತನ್ನ ತೊದಲು ನುಡಿಯ ಮೂಲಕ ಮನೆಯಲ್ಲಿ ಅಮ್ಮನೊಂದಿಗೆ ಆಟವಾಡುತ್ತಲೇ, ಅಮ್ಮ ಹೇಳಿಕೊಟ್ಟಿದ್ದನ್ನು ಕಲಿತು ಶಾಲೆಗೆ ಹೋಗುವ ಮಕ್ಕಳೂ ಆಶ್ಚರ್ಯ ಪಡುವಂತೆ ಮಾಡುತ್ತಿದ್ದಾನೆ.
ಈ ಚೋಟಾ ಚಾಂಪಿಯನ್ ಶಕ್ತಿವೇಲುವಿನ ಕುಟುಂಬ ಕನ್ನಡಪ್ರಭ.ಕಾಂ ನೊಂದಿಗೆ ಮಾತನಾಡಿದ್ದು ಹೀಗೆ...
ಶಕ್ತಿ ವೇಲುಗೆ ಅಪರಿಮಿತ ಜ್ಞಾಪಕ ಶಕ್ತಿಯನ್ನು ಹೇಗೆ ಗುರುತಿಸಿದಿರಿ?
ಶಕ್ತಿವೇಲು ಹುಟ್ಟಿನಿಂದಲೇ ಹೆಚ್ಚು ಲವಲವಿಕೆಯಿಂದ ಇದ್ದ. ಏನನ್ನು ಕಂಡರು ಅದು ಏನು ಇದು ಏನು ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದ. ದಿನಕಳೆದಂತೆ ನಾವು ಹೇಳಿದನ್ನು ತಾನಾಗಿಯೇ ಉಚ್ಚರಿಸುತ್ತಿದ್ದ. ಅದನ್ನು ಬೇಗನೆ ಗುರುತಿಸಲಾಯಿತು. ಆತನಲ್ಲಿ ವಯಸ್ಸಿಗೂ ಮೀರಿದ ಚಾಣಾಕ್ಷತೆಯಿದೆ.
ಆಧುನಿಕ ಶಿಕ್ಷಣ ಪದ್ಧತಿ ಬಗ್ಗೆ ಪೋಷಕರ ಅಸಮಾಧಾನ?
ಆಧುನಿಕ ಶಿಕ್ಷಣ ಪದ್ಧತಿಯು ವ್ಯರ್ಥವಾಗಿ ಪರಿಣಮಿಸಿದೆ. ಈಗಿನ ಶಿಕ್ಷಣ ಪದ್ಧತಿಯಿಂದ ಯಾವುದೇ ರೀತಿಯ ಉಪಯೋಗವಾಗುತ್ತಿಲ್ಲ. ಹಳೇ ಕಾಲದ ಶಿಕ್ಷಣ ಪದ್ಧತಿಯನ್ನೇ ಮುಂದುವರೆಸಿಕೊಂಡು ಹೋಗಲಾಗುತ್ತಿದೆ. ಇಲ್ಲಿ ಪ್ರತಿಭೆಯನ್ನು ಗುರ್ತಿಸುವುದು ಬೆರಳೆಣಿಕೆಯ ಸಂಖ್ಯೆಯಷ್ಟು ಅಷ್ಟೆ.
ಶಾಲೆಗೆ ಸೇರಿಸದೆ ಆನ್ ಲೈನ್ ಶಿಕ್ಷಣಕ್ಕೆ ಏಕೆ ಮಹತ್ವ ಕೊಟ್ಟಿರಿ?
ಮಕ್ಕಳ ಪ್ರತಿಭೆಗೆ ಸರಿಯಾದ ರೀತಿಯ ಪ್ರೋತ್ಸಾಹಸಿ ಗುತ್ತಿಲ್ಲ. ಹಾಗಾಗಿ ನಮ್ಮ ಮಗನಿಗೆ ಆನ್ ಲೈನ್ ಶಿಕ್ಷಣವನ್ನು ನೀಡಲು ಬಯಸುತ್ತೇವೆ. ಆನ್ ಲೈನ್ ಶಿಕ್ಷಣದಲ್ಲಿ ಮಗುವಿಗೆ 12 ವರ್ಷವಾದ ನಂತರವಷ್ಟೇ ತರಬೇತಿ ನೀಡಲಾಗುತ್ತದೆ ಎಂಬ ಕೆಲವು ನಿಯಮಗಳಿವೆ. ಆದ್ದರಿಂದ ಮಗುವನ್ನು ಶಾಲೆಗೆ ಸೇರಿಸಲಿಲ್ಲ. ಈಗಾಗಲೇ ಮಗುವಿಗೆ ನನ್ನ ಹೆಂಡತಿ ಮನೆಯಲ್ಲೇ ಆನ್ ಲೈನ್ ಮೂಲಕ ಮಾಹಿತಿ ಪಡೆದು ಮನೆಯಲ್ಲೇ ಶಿಕ್ಷಣ ನೀಡುತ್ತಿದ್ದು, ಶಾಲೆಯಲ್ಲಿ ಕಲೆಯುವುದಕ್ಕಿಂತ ಮನೆಯಲ್ಲಿ ತಾಯಿಯೊಂದಿಗೆಯೇ ಒತ್ತಡವಿಲ್ಲದೆ ಹೆಚ್ಚು ಕಲಿಯುತ್ತಿದ್ದಾನೆ.
ಶಾಲಾ ಶಿಕ್ಷಣ ಮಕ್ಕಳ ಬೌದ್ಧಿಕ ಮಟ್ಟವನ್ನು ಹೆಚ್ಚುವುದಿಲ್ಲವೇ?
ನಾನು ಶಾಲೆಗೆ ಹೋಗುವ ಸಂದರ್ಭದಲ್ಲಿ ಸಾಕಷ್ಟು ಒತ್ತಡಗಳಿದ್ದವು. ಹಾಗಾಗಿ ನನ್ನ ಆಸೆಯಂತೆ ಏನನ್ನು ಮಾಡಲು ಸಾಧ್ಯವಾಗಲಿಲ್ಲ. ನನಗೆ ಬಂದಂತಹ ಒತ್ತಡ ನನ್ನ ಮಕ್ಕಳಿಗೆ ಬರಬಾರದು ಎಂಬುದೇ ನಮ್ಮ ಆಶಯ. ಮಗುವಿಗೆ ಹೀಗೆ ಆಗಬೇಕೆಂಬ ಒತ್ತಡಗಳನ್ನು ಯಾವುದೇ ಕಾರಣಕ್ಕೂ ಹೇರುವುದಿಲ್ಲ. ಭವಿಷ್ಯದಲ್ಲಿ ಅವನು ಏನಾಗಬೇಕು ಎಂದಿರುತ್ತದೆಯೋ ಹಾಗೆ ಆಗಲಿ ಅವನ ಆಸೆಯಂತೆಯೇ ಮುಂದಿನ ಹೆಜ್ಜೆ ಇಡುತ್ತೇವೆ.
ಮನೆಯೇ ಮೊದಲ ಪಾಠ ಶಾಲೆ ಎಂಬುದರಲ್ಲಿ ನಿಮಗೆ ನಂಬಿಕೆ ಇದೆಯೇ?
ಹೌದು. ಮನೆಯೇ ಮೊದಲ ಪಾಠ ಶಾಲೆ ತಾಯಿಯೇ ಮೊದಲ ಗುರು ಎಂಬುದಕ್ಕೆಶಕ್ತಿವೇಲ್ ತಾಯಿ ಉತ್ತಮ ಉದಾಹರಣೆ. ಈ ಪುಟಾಣಿಯ ತಾಯಿ ಹೆಸರು ಕಾಂಚನ, ಗೃಹ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ ಶಕ್ತಿವೇಲ್ ಹಾಗೂ ರಾಜ್ವೇಲ್ ಇಬ್ಬರು ಮಕ್ಕಳಿದ್ದು, ಮನೆಯಲ್ಲಿಯೇ ಇಬ್ಬರಿಗೂ ಶಿಕ್ಷಣವನ್ನು ನೀಡುತ್ತಾರೆ. ಇವರು ತಾವು ಕಲಿತ ವಿದ್ಯೆಯನ್ನೇ ತಮ್ಮ ಮಕ್ಕಳಿಗೂ ಹೇಳಿ ಕೊಡುತ್ತಿದ್ದಾರೆ. ಇವರ ಇಬ್ಬರ ಮಕ್ಕಳಿಗೂ ವಿಶಿಷ್ಟ ಪ್ರತಿಭೆಯಿದೆ. ಶಕ್ತಿವೇಲ್ ಅಣ್ಣ ರಾಜ್ ವೇಲ್ ಸಂಗೀತದಲ್ಲಿ ಪರಿಣಿತಿ ಹೊಂದಿದ್ದಾನೆ.
ಆನ್ ಲೈನ್ ನಲ್ಲಿಯೇ ಶಿಕ್ಷಣಕ್ಕೆ ಬೇಕಾದ ಒಳ್ಳೆ ಅಂಶ ಹಾಗೂ ಉತ್ತಮ ಸೌಲಭ್ಯಗಳು ಸಿಗುವಾಗ, ಶಾಲೆಗೆ ಹೋಗಿ ಕಲಿಯುವ ಅಗತ್ಯವೇನಿದೆ ಎಂಬುದು ಪೋಷಕರ ಅಭಿಪ್ರಾಯವಾಗಿದೆ.
-ನಿರೂಪಣೆ: ಮಂಜುಳ ವಿ.ಎನ್
ಶಕ್ತಿವೇಲು ಕುರಿತ ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
Advertisement