81ನೇ ಅಕ್ಷರ ಜಾತ್ರೆ ನಾಲ್ವಡಿ ಕೃಷ್ಣಾರಾಜರಿಗೆ ಸಮರ್ಪಣೆ

81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಾಹಿತ್ಯ ಪರಿಷತ್...
ಪುಂಡಲೀಕ ಹಾಲಂಬಿ
ಪುಂಡಲೀಕ ಹಾಲಂಬಿ

ಕನ್ನಡ ಸಾರಸ್ವತ ಲೋಕದ ಧೀಮಂತ ಸಂಸ್ಥೆ ಮತ್ತು ಕೋಟ್ಯಾಂತರ ಕನ್ನಡಿಗರ ಆಶಾಕಿರಣವಾದ ಕನ್ನಡ ಸಾಹಿತ್ಯ ಪರಿಷತ್ ಗೆ ಇದೀಗ ಶತಮಾನದ ಸಾಹಿತ್ಯ ಸಂಭ್ರಮ. ಹೌದು, ಕನ್ನಡ ಸಾಹಿತ್ಯ ಪರಿಷತ್ ತನ್ನ ಶತಮಾನದ ಸಡಗರದಲ್ಲಿ 81ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಕ್ಷರಶಃ ಮದುವಣಗಿತ್ತಿಯಂತೆ ಸಜ್ಜಾಗುತ್ತಿದೆ. ವಿರಕ್ತ ಯೋಗಿ ಬಾಹುಬಲಿಯ ನಾಡು ಶ್ರವಣಬೆಳಗೊಳದಲ್ಲಿ ಅಕ್ಷರ ಜಾತ್ರೆಗೆ ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಸ್ಥಳ ನಿಗದಿ ಮತ್ತು ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಈ ಭಾರಿಯ ಸಮ್ಮೇಳನ ಬಹಳ ಸದ್ದು ಮಾಡಿದ್ದು ಈಗ ಇತಿಹಾಸ. ಆ ಕುರಿತು ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿಯವರ ಮಾತುಗಳು ಇಂತಿವೆ....

1. 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆ ಹೇಗಿದೆ?


ಸಾಹಿತ್ಯ ಸಮ್ಮೇಳನದ ಸಿದ್ಧತೆಗಳು ಭರದಿಂದ ಜರುಗುತ್ತಿವೆ. ಬಹಳ ಕಡಿಮೆ ಅವಧಿಯಲ್ಲಿ ಬೃಹತ್ ಸಮ್ಮೇಳನ ಸಂಘಟಿಸುವಂತಹ ಜವಾಬ್ದಾರಿ ಸಾಹಿತ್ಯ ಪರಿಷತ್ ಮೇಲಿದೆ. ಈಗಾಗಲೇ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಸ್ವಾಗತ ಸಮಿತಿಯ ರಚನೆಯಾಗಿದೆ, ವಿವಿಧ ಸಮಿತಿಗಳನ್ನು ರಚನೆ ಮಾಡಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಭಾಂಗಣ ನಿರ್ಮಾಣ ಹಾಗೂ ಊಟದ ವ್ಯವಸ್ಥೆ  ವಸತಿ ನಿರ್ಮಾಣಕ್ಕೆ ಬಹಳಷ್ಟು ಕ್ರಿಯಾ ಕೆಲಸ ಮಾಡುತ್ತಿದ್ದೇವೆ. ಸ್ವಾಗತ ಸಮಿತಿಯ ರಚನೆಯಾಗಿದೆ. ವಿವಿಧ ಸಮಿತಿಗಳನ್ನು ರಚನೆ ಮಾಡಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜೊತೆಯಲ್ಲಿ ಸಮ್ಮೇಳನದ ಆಹ್ವಾನ ಪತ್ರಿಕೆ -ಗೋಷ್ಠಿಗಳು, ಇತ್ಯಾದಿ ಕುರಿತು ಈಗಾಗಲೇ ಅದರ ಪೂರ್ವಭಾವಿ ಸಭೆ ನಡೆದಿದೆ. ನಾವು ಗೋಷ್ಠಿಗಳಿಗೆ, ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳಿಗೆ ಅತಿಥಿಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಈ ಎಲ್ಲಾ ಕಾರ್ಯಕ್ರಮಗಳು ಬಹಳ ಬಿರುಸುನಿಂದ ಜರುಗುತ್ತಲಿವೆ.

2. ಈ ಬಾರಿ ಸಾಹಿತ್ಯ ಸಮ್ಮೇಳನದ ಸ್ಥಳ ನಿಗದಿ ಸಂಬಂಧ ಉಂಟಾದ ಗೊಂದಲಗಳಿಗೆ ಕಾರಣ?

ಈಗಾಗಲೇ ಆ ವಿಷಯ ಮುಗಿದು ಹೋದ ಅಧ್ಯಾಯ. 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಕಾರ್ಯಕಾರಿ ಸಮಿತಿಯಲ್ಲಿ ಅವರು ಕೇಳಿದಂತಂಹ ಆಹ್ವಾನವನ್ನು ಹಾವೇರಿ ಜಿಲ್ಲೆಗೆ ನಾವು ಕೊಟ್ಟಿದ್ದೆವು. ಅಲ್ಲಿ ಎರಡು ತಾಲೂಕುಗಳ ನಡುವಿನ ಪ್ರತಿಷ್ಠೆ ಉಂಟಾಗಿ, ತಮ್ಮ ಜಾಗದಲ್ಲೇ ಆಗಬೇಕು ಎನ್ನುವ ಪ್ರತಿಷ್ಠೆಗೆ ಬಿದ್ದು ಅದನ್ನು ಬಗೆಹರಿಸಲಾಗದ ಕಾರಣಕ್ಕಾಗಿ ನಾವು ಆಹ್ವಾನವನ್ನು ಹಿಂಪಡೆದು ಶ್ರವಣ ಬೆಳಗೊಳವನ್ನು ಆಯ್ಕೆ ಮಾಡಿಕೊಂಡೆವು.


3. ಶ್ರವಣಬೆಳಗೊಳವನ್ನೇ ಸಮ್ಮೇಳನದ ಸ್ಥಳವನ್ನಾಗಿ ಆಯ್ಕೆ ಮಾಡಿಕೊಳ್ಳಲು ಕಾರಣವೇನು?


ಶ್ರವಣಬೆಳಗೊಳವನ್ನೇ ಸಮ್ಮೇಳನದ ಸ್ಥಳವನ್ನಾಗಿ ಆಯ್ಕೆ ಮಾಡಿಕೊಳ್ಳಲು ಅನೇಕ ಕಾರಣಗಳಿವೆ. 8, 9 ತಿಂಗಳ ಕಾಲ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕುರಿತಂತೆ ಯಾವುದೇ ಕೆಲಸವಾಗಿಲ್ಲ. ಸ್ಥಳಕ್ಕೆ ಸಂಬಂಧಿಸಿದಂತೆ ವಿವಾದವಾಯಿತೇ ಹೊರತು, ಸಿದ್ಥತೆಗಳಾಗಿರಲಿಲ್ಲ. ಇನ್ನೂ ಕಡಿಮೆ ಅವಧಿಯೊಳಗೆ ಅಂದರೆ ಫೆಬ್ರವರಿಯೊಳಗೆ ನಾವು ಸಮ್ಮೇಳನ ಮಾಡಬೇಕು. ಆ ಅವಧಿಯೊಳಗೆ ಮಾಡುವಂತಹ ಶಕ್ತಿ ಇದ್ದಿದ್ದು ನನ್ನ ದೃಷ್ಟಿಯಿಂದ ಶ್ರವಣಬೆಳಗೊಳ. ಶ್ರವಣಬೆಳಗೊಳದಲ್ಲಿ ಆ ಶಕ್ತಿ ಇದೆ. ಏಕೆಂದಂರೆ 12 ವರ್ಷಗಳಿಗೊಮ್ಮೆ ಮಹಾಮಸ್ತಕದ ಅಭಿಷೇಕದಂತಹ ಬೃಹತ್ ಕಾರ್ಯವನ್ನು ಮಾಡಿದಂತವಹವರು. ಎರಡನೇದು ಅಲ್ಲಿಯ ಜೈನ ಮಠದ ಶ್ರೀ ಶ್ರೀ ಶ್ರೀ ಚಾರುಕೀರ್ತಿಭಟ್ಟಾರಕರು. ಸಾಹಿತ್ಯ ಸಮ್ಮೇಳನದ ಸ್ಥಳಕ್ಕೆ ಸಂಬಂಧಿಸಿದಂತೆ ಈ ಗೊಂದಲಗುಳ ಆಗುತ್ತಿದ್ದಾಗ, ಹಾವೇರಿ ಜಿಲ್ಲೆಯಲ್ಲಿ ನೀವು ಮಾಡಲಿಕ್ಕೆ ಆಗದೇ ಇದ್ದರೆ ನಿವು ನಮಗೆ ಕೊಡಿ ಎನ್ನುವಂತಹ ಮಾತನ್ನು ಅವರು ಹೇಳಿದರು.

ಇನ್ನೊಂದು ಮುಖ್ಯ ಅಂಶವೆಂದರೆ ಜೈನ ಧರ್ಮಿಯರ ಪವಿತ್ರ ಸ್ಥಳ. 1967ರಲ್ಲಿ ಒಂದು ಆನೆ ಉಪಾಧ್ಯರ ಅಧ್ಯಕ್ಷತೆಯಲ್ಲಿ ಸಮ್ಮೇಳನವಾಗಿತ್ತು. ವಸತಿ ಊಟದ ವಿಚಾರದಲ್ಲಿ ಅವರದ್ದೇ ಆದಂತಹ ಎಲ್ಲಾ ಸಿದ್ಧತೆಗಳಿವೆ. ಹೀಗಾಗಿ ಶ್ರವಣಬೆಳಗೊಳವನ್ನೇ ಸಾಹಿತ್ಯ ಸಮ್ಮೇಳನದ ಸ್ಥಳವನ್ನಾಗಿ ಆಯ್ಕೆ ಮಾಡಿಕೊಳ್ಳಲಾಯಿತು.


4. ಈ ಬಾರಿ ಸಾಹಿತ್ಯ ಸಮ್ಮೇಳನಕ್ಕೆ ಎಷ್ಟು ಜನ ಆಗಮಿಸುವ ನಿರೀಕ್ಷೆ ಇದೆ?


ಕಳೆದ ಬಾರಿ ಬಿಜಾಪುರದಲ್ಲಿ ಪ್ರತಿ ದಿನ ಸುಮಾರು 1.50 ಲಕ್ಷಕ್ಕೂ ಹೆಚ್ಚು ಜನ ಸೇರುತ್ತಿದ್ದರು. ಅದೇ ಪ್ರಮಾಣದಲ್ಲಿ ಇಲ್ಲಿಯೂ ಜನರು ಸೇರುವ ನಿರೀಕ್ಷೆ ಇದೆ. ಕಾರಣ,  ಶ್ರವಣಬೆಳಗೊಳ ಒಂದು ಪ್ರವಾಸಿ ಕೇಂದ್ರ, ಅಲ್ಲದೆ ಪಕ್ಕದಲ್ಲೇ  ಬೇಲೂರು, ಹಳೇಬೀಡು, ಸೋಮನಾಥಪುರ ಹತ್ತಿರವಿದ್ದು, ಕರ್ನಾಟಕದ ಎಲ್ಲಾ ಮೂಲೆಗಳಿಂದ ಜನರು ಬರಬಹುದು. 1 ಲಕ್ಷಕ್ಕೂ ಅಧಿಕ ಜನ ಪ್ರತಿದಿನ ಸಮ್ಮೇಳನದಲ್ಲಿ ಭಾಗವಹಿಸಬಹುದು ಎಂಬ ನಿರೀಕ್ಷೆ ಇದೆ.


5. ಸಮ್ಮೇಳನಕ್ಕೆ ಆಗಮಿಸುವವರಿಗಾಗಿ ಊಟ ಮತ್ತು ವಸತಿ ಸೌಕರ್ಯವನ್ನು ಹೇಗೆ ಕಲ್ಪಿಸಲು ನಿರ್ಧರಿಸಲಾಗಿದೆ?

26 ಎಕರೆ ವಿಸ್ತೀರ್ಣ ಹೊಂದಿರುವ ಪ್ರದೇಶದಲ್ಲಿ ಎಲ್ಲಾ ಸಿದ್ಧತೆಗಳಾಗುತ್ತಿವೆ. ಸಭಾಂಗಣ ರಚನೆ, ಊಟದ ವ್ಯವಸ್ಥೆ, ಪುಸ್ತಕ ಪ್ರದರ್ಶನ, ಸಾಹಿತ್ಯ ಗೋಷ್ಠಿಗಳಿಗೆ ಸಂಬಂಧಿಸಿದಂತೆ ಸ್ಥಳ ಸಿದ್ಧತೆ ನಡೆಯುತ್ತಿದೆ.

ವಸತಿಗೆ ಸಂಬಂಧಿಸಿದಂತೆ ಅವರದ್ದೇ ಆದಂತಹ ವಸತಿಗಳಿವೆ. ಚನ್ನರಾಯಪಟ್ಟಣ ತಾಲೂಕನ್ನ ಬಳಸಿಕೊಳ್ಳುವ ಸಾಧ್ಯತೆ ಇದೆ. ಶಾಲಾ ಕಾಲೇಜುಗಳು ಇತ್ಯಾದಿಗಳು. ಜೈನ ಮಠದ ಸ್ವಾಮೀಜಿಯವರು ಅದರ ಸಂಪೂರ್ಣ ಜವಾಬ್ದಾರಿಗಳನ್ನು ತೆಗೆದುಕೊಂಡಿದ್ದಾರೆ.

6. 81ನೇ ಸಾಹಿತ್ಯ ಸಮ್ಮೇಳನದ ಮುಖ್ಯ ಆಕರ್ಷಣೆ ಏನು?

81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಾಹಿತ್ಯ ಪರಿಷತ್ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಪರಿಷತ್ ಅರ್ಪಿಸುತ್ತಿದೆ. ಕಾರಣ ಇದು ಶತಮಾನೋತ್ಸವ ಸಂದರ್ಭದ ವಿಶೇಷ ಕಾಲ ಘಟ್ಟದ ಸಮ್ಮೇಳನವಿದು. ಪರಿಷತ್ತಿಗೆ 100 ವರ್ಷಗಳಾಗುತ್ತಿವೆ. ಪರಿಷತ್ ಸಂಸ್ಥಾಪಕರಾದ್ದಂತಹ ನಾಲ್ವಡಿ ಕೃಷ್ಣರಾಜ ಒಡೆಯವರಿಗೆ ಅರ್ಪಿಸುತ್ತಿರುವುದು ಇದಕ್ಕೆ ಸೂಕ್ತವಾಗಿದೆ. ಎರಡನೇಯದು ಭಾಷಾ ಮಾಧ್ಯಮವಾಗಿ ಕನ್ನಡ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಕಡ್ಡಾಯವಾಗುವುದಕ್ಕೆ ಪೂರಕವಾದಂತಹ ಕೆಲಸವನ್ನು ಈ ಸಮ್ಮೇಳನ ಮಾಡಬೇಕು ಎಂಬುದೇ ಈ ಸಮ್ಮೇಳನದ ಬಹು ದೊಡ್ಡ ಆಶಯ. ಅದಕ್ಕಾಗಿ ನಾವು ಒಂದು ಗೋಷ್ಠಿಯನ್ನು ಸಂವಿಧಾನ ಮತ್ತು ಶಿಕ್ಷಣ ಮಾಧ್ಯಮದ ಕುರಿತೇ ಇಟ್ಟಿದ್ದೇವೆ.
ನಾಲ್ವಡಿ ಅವರು ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿದವರು. ಅವರ ಆಶಯವನ್ನು ಕನ್ನಡ ಸಾಹಿತ್ಯ ಪರಿಷತ್ ತನ್ನ 100ರ ಶತಮಾನೋತ್ಸವದಲ್ಲಿ ಸಂದರ್ಭದಲ್ಲಿ ಪೂರೈಸುತ್ತಿದೆ. ಅತ್ಯುತ್ತಮ ಸಾಹಿತಿ ಆಗಿದ್ದರೂ ಕೂಡ ಕೆಳ ವರ್ಗದಿಂದ ಬಂದ ಒಬ್ಬ ವ್ಯಕ್ತಿಯನ್ನು ನಾವು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿ, 80 ಸಮ್ಮೇಳನದಲ್ಲಿ ಆಗದೇ ಇರುವ ಒಂದು ವಿಶೇಷವಾದ ಕೆಲಸ ಈ ಬಾರಿ ಆಗಿದೆ. ಅವರನ್ನು ಆಯ್ಕೆ ಮಾಡುವುದರ ಮೂಲಕ ಈ ಸಮ್ಮೇಳನಕ್ಕೆ ವಿಶೇಷವಾದ ಮೆರಗು ಕೊಟ್ಟಿದ್ದೇವೆ. ದಲಿತ ವರ್ಗಕ್ಕೆ ಸೇರಿದ ಡಾ. ಸಿದ್ದಲಿಂಗಯ್ಯ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಅವರನ್ನು ಕೇವಲ ದಲಿತನೆಂದು ಆಯ್ಕೆ ಮಾಡಿಲ್ಲ, ಅವರು ದಲಿತ ವರ್ಗಕ್ಕೆ ಸೇರಿದಂತೂ ನಿಜ. ಆವರನ್ನು ಆಯ್ಕೆ ಮಾಡುವುದರ ಮೂಲಕ ಈ ಸಮ್ಮೇಳನಕ್ಕೆ ವಿಶೇಷವಾದ ಮೆರಗು ಕೊಟ್ಟಿದ್ದೇವೆ.


7. ಹಿಂದಿನ ಸಮ್ಮೇಳನಕ್ಕೂ ಈ ಸಮ್ಮೇಳನಕ್ಕೂ ಏನು ಭಿನ್ನ?

ಮೊದಲ ಬಾರಿಗೆ ದಲಿತರು ಸಮ್ಮೇಳನಾಧ್ಯಕ್ಷರಾಗುತ್ತಿರುವುದು. ಶಿಕ್ಷಣ ಮಾಧ್ಯಮ ಕುರಿತು ವಿಶೇಷವಾದ ಚರ್ಚೆ, ನಾಲ್ವಡಿ ಅವರಿಗೆ ಅರ್ಪಣೆ, ಕೇವಲ ಸಾಹಿತ್ಯ ಸಂಬಂಧಪಟ್ಟ ಗೋಷ್ಠಿಗಳನ್ನೇ ಮಾಡದೇ ಮುಖ್ಯ ವೇದಿಕೆಯಲ್ಲಿ ಕರ್ನಾಟಕ ಮತ್ತು ಕನ್ನಡ ಭಾಷೆಗಳಿಗೆ ಸಂಬಂಧಪಟ್ಟ ವರದಿಗಳ ಬಗ್ಗೆ ಚರ್ಚೆ, ಮೂಢನಂಬಿಕೆ ಮತ್ತು ಮೌಢ್ಯದ ಕುರಿತು ಗೋಷ್ಠಿ, ಮಹಿಳೆಯರ ಶೋಷಣೆ ಮತ್ತು ಇತ್ಯಾದಿಗಳ ಕುರಿತು ಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ಕನ್ನಡಿಗರ ಬದುಕು ಮತ್ತು ಕನ್ನಡಿಗರ ಸಮಸ್ಯೆಗಳ ಬಗ್ಗೆ ಬೆಳಕನ್ನು ಬೀರುವ ಕುರಿತಾದ ಚರ್ಚಾಗೋಷ್ಠಿ. ಈ ಹಿಂದೆ ಇದ್ದ
ಕವಿ ಕಾವ್ಯ ಗಾಯನ ಕಾರ್ಯಕ್ರಮದ ಬದಲು ಸಮ್ಮೇಳನಾಧ್ಯಕ್ಷರ ಕಾವ್ಯದ ಗಾಯನ ಇದೆ. ಸಿದ್ದಲಿಂಗಯ್ಯ 70ರ ದಶಕದಲ್ಲಿ ಬರದಂತಹ ಅನೇಕ ಕ್ರಾಂತಿಕಾರಿ ಗೀತೆಗಳನ್ನು ಇಲ್ಲಿ ಹಾಡಲಿದ್ದಾರೆ. ಒಂದು ಕಾಲದಲ್ಲಿ ದಲಿತ ಚಳುವಳಿಗೆ ಪೂರಕವಾಗಿ ಈ ಗೀತೆಗಳು ಕೆಲಸ ಮಾಡಿದ್ದವು.

8. ಈ ಬಾರಿ ಸಮ್ಮೇಳನದ ಅಧ್ಯಕ್ಷ ಸ್ಥಾನದ ಬಗ್ಗೆ ಉಂಟಾದ ಗೊಂದಲಗಳಿಗೆ ಕಾರಣವೇನು?

ದೇವನೂರು ಮಹಾದೇವ ಅವರನ್ನು ಕೇಳಿದೆವು. ಆದರೆ ಅವರು ಒಪ್ಪಿಕೊಳ್ಳಲಿಲ್ಲ. ಅಧ್ಯಕ್ಷರ ಆಯ್ಕೆಯಲ್ಲಿ ಗೊಂದಲ ಉಂಟಾಗಿಲ್ಲ. ಆಯ್ಕೆ ಬಗ್ಗೆ ಚರ್ಚೆಯಾಗಿದೆ. ಆದರೆ ಅವರು ಸಮ್ಮೇಳನ ನಡೆಸುವುದೇ ಬೇಡ ಎನ್ನುವುದನ್ನು ನಾವು ಒಪ್ಪುವುದಿಲ್ಲ. ಏಕೆಂದರೆ ಸಮ್ಮೇಳನ ಅನ್ನುವುದು ಕನ್ನಡಿಗರ ಹಬ್ಬ. ಕನ್ನಡ ಭಾಷೆಯ ನುಡಿ ಹಬ್ಬ. ಹಬ್ಬ ಬೇಡವೆಂದರೆ ನಾವು ಒಪ್ಪುವುದಿಲ್ಲ.

9. ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದ ಆಯ್ಕೆಗೆ ಸಂಬಂಧಿಸಿದಂತೆ ಈ ಬಾರಿ ದೇವನೂರು ಮಹಾದೇವ ಅವರ ಮಾತುಗಳಲ್ಲಿ ಸತ್ಯವಿದೆ ಎನಿಸುವುದಿಲ್ಲವೇ? ಪ್ರತಿ ಭಾರಿ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯಗಳು ವೇದಿಕೆಯ ಭಾಷಣಗಳಿಗೆ ಸೀಮಿತಗೊಳ್ಳುತ್ತಿವೆಯಲ್ಲವೇ?


ನಿರ್ಣಯಗಳನ್ನು ಜಾರಿಗೆ ತರುವ ಸಂವಿಧಾನಾತ್ಮಕ ಹಕ್ಕು ಪರಿಷತ್ಗೆ ಇಲ್ಲ. ಕನ್ನಡಿಗರ ಬಗ್ಗೆ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಬೆಳಕನ್ನು ಚೆಲ್ಲುವ ಕಾರ್ಯಕ್ರಮ ಇದು. ಅದನ್ನು ಪ್ರಭುತ್ವಕ್ಕೆ ಮುಟ್ಟಿಸುತ್ತೇವೆ. ಪ್ರಭುತ್ವ ಅದನ್ನು ಗಮನಿಸಬೇಕು. ಕಾಲ ಕಾಲದಲ್ಲಿ ಆಗಬೇಕಾದಂತ ಕೆಲವೊಂದು ಕೆಲಸಗಳು ಆಗಿವೆ.

10. ಶಿಕ್ಷಣ ಮಾಧ್ಯಮ ಕನ್ನಡವನ್ನಾಗಿ ಕಡ್ಡಾಯಗೊಳಿಸಲು ಸರ್ಕಾರ ಹಿಂದೇಟು ಹಾಕುತ್ತಿದೆಯೇ?

ಶಿಕ್ಷಣದ ಮಾಧ್ಯಮ ಕನ್ನಡವನ್ನಾಗಿ ಕಡ್ಡಾಯಗೊಳಿಸುವ ಅಧಿಕಾರ ಸರ್ಕಾರದ ಕೈಯಲ್ಲಿ ಇಲ್ಲ. ಉಚ್ಛ ನ್ಯಾಯಾಲಯದ ತೀರ್ಪಿನಂತೆ ಮೂಲಭೂತ ಹಕ್ಕುಗಳ ಅಡಿಯಲ್ಲಿ ಪೋಷಕ ಮತ್ತು ವಿದ್ಯಾರ್ಥಿಗಳೇ ಶಿಕ್ಷಣ ಮಾಧ್ಯಮದ ನಿರ್ಧಾರ ಮಾಡಬೇಕು ಎಂಬುದಾಗಿದೆ. ಮೂಲಭೂತ ಹಕ್ಕುಗಳಡಿಯಲ್ಲಿ ಯಾವುದು ಬರುತ್ತದೇ ಎಂದು ಗಮನಿಸಿ ಸಂವಿಧಾನ ತಿದ್ದುಪಡಿ ಮಾಡಬೇಕು. ಸಂವಿಧಾನ ತಿದ್ದುಪಡಿ ಮಾಡಿ ಹಕ್ಕನ್ನು ಪಡೆದ ಮೇಲೆ ರಾಜ್ಯ ಸರ್ಕಾರ ಮಾಡಿಲ್ಲವೆಂದರೆ, ರಾಜ್ಯ ಸರ್ಕಾರದ ವಿರುದ್ಧ ಹೋಗುತ್ತೇವೆ.

11. ಸಾಹಿತ್ಯ ಪರಿಷತ್ ಕೇವಲ ಸಾಹಿತ್ಯ ಸಮ್ಮೇಳನಗಳಿಗೆ ಸೀಮಿತಗೊಳ್ಳುತ್ತಿದೆ ಎನ್ನುವ ಅಪವಾದ ಕೇಳಿ ಬರುತ್ತಿದೆಯಲ್ಲವೇ?

ಪರಿಷತ್ನ ಚಟುವಟಿಕೆಗಳಲ್ಲಿ ಸಮ್ಮೇಳನವು ಒಂದು. ನಾವು 1250ಕ್ಕೂ ಹೆಚ್ಚು ಪ್ರಕಟಣೆ ಹೊರ ತಂದಿದ್ದೇವೆ. ಮೂರು ತಿಂಗಳಿಗೊಮ್ಮೆ ಕನ್ನಡ ನುಡಿ ಎನ್ನುವ ಸುದ್ದಿ ಪತ್ರಿಕೆಯನ್ನು ಪ್ರಕಟಿಸುತ್ತೇವೆ. ಇಲ್ಲಿ ಗ್ರಂಥ ಭಂಡಾರ ಇದೆ, ಸಂಶೋಧನೆ ನಡೆಯುತ್ತವೆ. ಆಮೇಲೆ ಶಾಸನಗಳು, ಜಾನಪದದ ಬಗ್ಗೆ ತರಬೇತಿ ಶಾಲೆಗಳಿವೆ. ಅನೇಕ ವಿಚಾರ ಸಂಕೀರ್ಣವನ್ನು ನಡೆಸುತ್ತಾ ಇದ್ದೇವೆ. ಪರಿಷತ್ ಪತ್ರಿಕೆ ಎನ್ನುವ ಮೂರು ತಿಂಗಳ ಸಂಶೋಧನ ಪ್ರತಿ ಬರುತ್ತಿದೆ. ವಾರ್ಷಿಕ ಸಾಹಿತ್ಯ ಎನ್ನುವ ಒಂದು ವರ್ಷದಲ್ಲಿ ಬಂದ ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳ ಕುರಿತ ಮಾಹಿತಿ ಕೋಶವನ್ನಾ ಬಿಡುಗಡೆ ಮಾಡುತ್ತೇವೆ. ಪರಿಷತ್ತಿನ ಸಾಕ್ಷ್ಯ ಚಿತ್ರಗಳನ್ನು ಮಾಡಿದ್ದೇವೆ.
13 ಕಂತುಗಳಲ್ಲಿ ರಾಜ್ಯದ ಉದ್ದಗಲಕ್ಕೂ 1350ಕ್ಕೂ ಹೆಚ್ಚು ದತ್ತಿ ಕಾರ್ಯಕ್ರಮ ನಡೆಯುತ್ತವೆ. ಕಾವ, ಜಾಣ, ರತ್ನ ಎನ್ನುವ ವಾರ್ಷಿಕ ಪರೀಕ್ಷೆಗಳನ್ನಾ ಪರಿಷತ್ ನಡೆಸುತ್ತದೆ. ಒಂದು ವಿಶ್ವವಿದ್ಯಾಲಯ ಮಾಡುವ ಕೆಲಸವನ್ನಾ ಪರಿಷತ್ ನಡೆಸುತ್ತದೆ. ಜಿಲ್ಲಾ ಸಮ್ಮೇಳನ, ತಾಲೂಕು ಸಮ್ಮೇಳನ, ಹೋಬಳಿ ಸಮ್ಮೇಳನ ನಡೆಯುತ್ತವೆ. 175 ತಾಲೂಕುಗಳಲ್ಲಿ, 30 ಜಿಲ್ಲೆಗಳಲ್ಲಿ ನಾಲ್ಕು ಹೊರನಾಡುಗಳಲ್ಲಿ ಪರಿಷತ್ನ ಘಟಕಗಳಿವೆ.
ನನ್ನ ಕಾಲಾವಧಿಯಲ್ಲಿ ಎರಡು ರಾಜ್ಯೋತ್ಸವಗಳನ್ನಾ ವಿಶಿಷ್ಟವಾಗಿ ಆಚರಿಸಿದ್ದೇವೆ. ಪ್ರತಿ ಜಿಲ್ಲೆಯಲ್ಲಿ ಪ್ರಾಚೀನ ಕವಿಗಳ ಕವಿ ಕಾವ್ಯ ಪರಿಚಯ ಉಪನ್ಯಾಸ, ಜೊತೆಯಲ್ಲಿ ಆ ಕವಿಯ ಕಾವ್ಯದ ಗಮಕ ವಾಚನ ಇದು ಮೂವತ್ತು ಜಿಲ್ಲೆಗಳಲ್ಲಿ ನವೆಂಬರ್ 1 ರಿಂದ 30ರವರೆಗೆ ಮಾಡಿದ್ದೇವೆ. ರಾಷ್ಟ್ರಕವಿಗಳ ಬದುಕು ಬರಹ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಬದುಕು ಬರಹ, ನೃಪತುಂಗ ಪ್ರಶಸ್ತಿ ಪುರಸ್ಕೃತರ ಬದುಕು ಬರಹ ಈ ವಿಚಾರ ಸಂಕೀರ್ಣ ಬೆಂಗಳೂರಿನಲ್ಲಿ ನಡೆದಿದೆ. ಈಗ ಶತಮಾನೋತ್ಸವದ ಸಂದರ್ಭದೊಳಗಡೆ ಎಲ್ಲಾ ಗಡಿ ಭಾಗಗಳಲ್ಲಿ ವಿಚಾರ ಸಂಕೀರ್ಣ ನಡೆಸುತ್ತಿದ್ದೇವೆ ಚಾಮರಾಜನಗರದಲ್ಲಿ ದಲಿತ ಸಾಹಿತ್ಯ ಸಮಾವೇಶ, ಹಲ್ಮಿಡಿ ಉತ್ಸವ ಬೇಲೂರಿನಲ್ಲಿ, ಕೋಲಾರದಲ್ಲಿ ಗಡಿ ಸಮಾವೇಶ, ಬೀದರ್ನಲ್ಲಿ ವಚನ ಸಾಹಿತ್ಯ ಸಮಾವೇಶ ಮುಗಿದಿವೆ. ಇನ್ನೂ ಮುಂದೆ ಮುರುಡೇಶ್ವರದಲ್ಲಿ ಕರಾವಳಿ ಕನ್ನಡಿಗರ ಸಮಾವೇಶ. ಬೆಳಗಾವಿಯಲ್ಲಿ ಮಹಿಳಾ ಸಾಹಿತ್ಯ ಸಮಾವೇಶ, ರಾಯಚೂರಿನಲ್ಲಿ ಹೈದ್ರಾಬಾದ್ ಕರ್ನಾಟಕ ಕನ್ನಡಿಗರ ಸಮಾವೇಶ ಹೀಗೆ ಎಲ್ಲಾ ಜಿಲ್ಲೆಗಳಲ್ಲಿ ಒಂದೊಂದು ಸಮಾವೇಶ ಮಾಡುತ್ತಾ ಬರುತ್ತೇವೆ. ಅದರ ಜೊತೆಯಲ್ಲಿ 100 ಜನ ಅನೇಕ ಕ್ಷೇತ್ರಗಳಲ್ಲಿ ಸಾಧನೆಗೈದ 100 ಹಿರಿಯರನ್ನಾ ಶತಮಾನೋತ್ಸವದ ಗೌರವವನ್ನಾ ಕೊಟ್ಟು ಗೌರವಿಸುತ್ತಿದ್ದೇವೆ. ಈಗಾಗಲೇ 47 ಜನರಿಗೆ ಗೌರವ ಸಂದಾಯವಾಗಿದೆ. 100 ವರ್ಷಗಳಲ್ಲಿ ಬಂದ ಕನ್ನಡದ ಶ್ರೇಷ್ಠ ಸಾಹಿತಿಗಳ ಕೃತಿಗಳ ಪುನರ್ ಮುದ್ರಣ ತೆಗೆದುಕೊಂಡಿದ್ದೇವೆ. ಕುವೆಂಪು, ಬೇಂದ್ರೆ, ಕಾರಂತ ಸೇರಿದಂತೆ ಎಲ್ಲರದೂ. 52 ಪುಸ್ತಕಗಳನ್ನು ಬಿಡುಗಡೆ ಮಾಡಿದ್ದೇವೆ. ವಿಶೇಷವಾಗಿ ಕವಿ ಮುದ್ದಣ್ಣ ರಿಂದ ಹಿಡಿದು ಕವಿ ಕುವೆಂಪು ರವರೆಗೆ ಬಂದ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯ 500 ಪುಟಗಳನ್ನು ಹೊಂದಿದ 17 ಸಂಪುಟಗಳನ್ನಾ ಶತಮಾನೋತ್ಸವದ ಸಂದರ್ಭದಲ್ಲಿ ಪ್ರಕಟಿಸುತ್ತಿದ್ದೇವೆ. ಈಗಾಗಲೇ 3 ಸಂಪುಟಗಳು ಮುದ್ರಣಗೊಳ್ಳುತ್ತಿವೆ. ಬಹಳ ಅತ್ಯುತ್ತಮವಾದ ಸಂಪಾದಕರನ್ನು ನೇಮಿಸಿ ಬರೆಸುತ್ತಾ ಇದ್ದೇವೆ.


ಪರಿಷತ್ತು ಮಾಡುವ ಸಮ್ಮೇಳನ ಯಾಕೆ ವಿಶಿಷ್ಟವೆಂದರೆ, ಜನತೆ ಸ್ವಯಂ ಪ್ರೇರಣೆಯಿಂದ ಬರುವ ಏಕೋರ್ವ ಕನ್ನಡದ ಕಾರ್ಯಕ್ರಮ ಪರಿಷತ್ ನಡೆಸುವ ಸಮ್ಮೇಳನ. ಕರ್ನಾಟಕದ ಮೂಲೆ ಮೂಲೆಯಿಂದ ಜನ ಸಾಮಾನ್ಯ ತನ್ನ ಜೇಬಿನಿಂದ ಖರ್ಚು ಹಾಕಿಕೊಂಡು ಬರುತ್ತಾನೆ.

12. ಕಳೆದ ಸರ್ಕಾರ ರಾಜ್ಯದಲ್ಲಿ ಸಾವಿರಾರು ಕನ್ನಡ ಶಾಲೆಗಳನ್ನು ಮುಚ್ಚಿತ್ತು. ಅವುಗಳನ್ನು ತೆರೆಯುವ ಪ್ರಯತ್ನಕ್ಕೆ ಪರಿಷತ್ ಕೈಗೊಂಡ ಕ್ರಮಗಳೇನು?


ಯಾವುದೇ ಶಾಲೆಯಲ್ಲಿ ಕನ್ನಡ ಉಳಿಯದಂತೆ ಹಾಗಿದೆ. ಕನ್ನಡ ಮಾಧ್ಯಮ ಶಾಲೆಗಳಿಗೆ ಕಳುಹಿಸಲು ಪೋಷಕರಿಗೆ ಮನಸಿಲ್ಲ. ಕಾರಣ ಏನೆಂದರೆ, ಯಾವುದೋ ಒಂದು ಭಾಷೆ ಬದುಕನ್ನು ಕೊಡುತ್ತದೆ ಎಂದಾದರೆ ಮಾತ್ರ ಪೋಷಕರು ಆ ಮಾಧ್ಯಮದಲ್ಲಿ ಓದಿಸುತ್ತಾರೆ. ಅವರಿಂದ ಭಾಷೆಯ ಮೇಲೆ ಭಾವೋದ್ವೇಕತೆ, ಅಭಿಮಾನ ಯಾವುದನ್ನು ನಿರೀಕ್ಷಿಸುವುದಕ್ಕೆ ಸಾಧ್ಯವಿಲ್ಲ. ಇದೇ ರೀತಿ ಮುಂದುವರೆದರೇ ಈಗ ಕನ್ನಡ ಮಾಧ್ಯಮ ಶಾಲೆಗಳು ಪೂರ್ತಿ ಮುಚ್ಚುವ ಹಂತಕ ಬಂದಿದೆ. ಅದಕ್ಕಾಗಿಯೇ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಕಡ್ಡಾಯವಾದರೆ ಕನ್ನಡ ಮಾಧ್ಯಮದ ಶಾಲೆಗಳು ಪುನರುಜ್ಜೀವನಗೊಳ್ಳುತ್ತವೆ. ಹಾಗಾಗಿ, ಕನ್ನಡ ಮಾಧ್ಯಮ ಕಡ್ಡಾಯ ಮಾಡಬೇಕು.

13. ಕನ್ನಡ ಭಾಷಾ ವಿಚಾರಕ್ಕೆ ಸಂಬಂಧಿಸಿದಂತೆ ಸಾಹಿತ್ಯ ಪರಿಷತ್ನ ಮುಂದಿನ ನಡೆ ಏನು?

ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಡ್ಡಾಯಗೊಳಿಸುವ ಚಳುವಳಿಯ ನಾಯಕತ್ವವನ್ನು ಪರಿಷತ್ ವಹಿಸುತ್ತದೆ. ಅನೇಕ ಮಾರ್ಗಗಳಿಂದ ಕೇಂದ್ರ ಸರ್ಕಾರದ ಮನವೊಲಿಸುವ ಯತ್ನವನ್ನಾ ರಾಜ್ಯದ ಪ್ರಭುತ್ವದ ಜೊತೆಯಲ್ಲಿ ಕೈಜೋಡಿಸಿ ಮಾಡುತ್ತೇವೆ. ಅಷ್ಟಕ್ಕೂ ಮಾಡದೇ ಇದ್ರೇ ಬೀದಿ ಚಳುವಳಿ ಮೂಲಕ ಕೇಂದ್ರದ ಗಮನವನ್ನು ಸೆಳೆಯುತ್ತೇವೆ.

14. ಸಾಹಿತ್ಯ ಪರಿಷತ್ನೊಂದಿಗಿನ ಒಡನಾಟ ಮತ್ತು ಅಧ್ಯಕ್ಷರಾಗಿ ತಮ್ಮ ಅನುಭವ?

4 ಬಾರಿ ಪದಾಧಿಕಾರಿಯಾಗಿ ಕೆಲಸ ಮಾಡಿದಂತವನು, ಎರಡು ಬಾರಿ ಕಾರ್ಯದರ್ಶಿಯಾಗಿ, ಎರಡು ಬಾರಿ ಕೋಶಾಧ್ಯಕ್ಷನಾಗಿ, ಈಗ ಅಧ್ಯಕ್ಷನಾಗಿ, ಒಟ್ಟು ಹದಿನೇಳುವರೆ ವರ್ಷಗಳ ಕಾಲದ ನನ್ನ ಪರಿಷತ್ತಿನ ಒಡನಾಟ. ಪರಿಷತ್ನ ಬಗ್ಗೆ ನನಗೆ ಅಗಾಧವಾದ ಗೌರವ ಮತ್ತು ಪ್ರೀತಿ ಇದೆ. ಕನ್ನಡದ ಈ ಪ್ರಾತಿನಿಧಿಕ ಸಂಸ್ಥೆಗೆ ನಾನು ಅಧ್ಯಕ್ಷನಾಗಿದ್ದಕ್ಕೆ ನನಗೆ ಅತ್ಯಂತ ಹೆಮ್ಮೆ ಮತ್ತು ಸಂತೋಷ. ಈ ಸಂಸ್ಥೆ ಕನ್ನಡಿಗರ ಬದುಕನ್ನು ಕಟ್ಟಿಕೊಡಲು ಸಮರ್ಥ ಎಂಬ ನಂಬಿಕೆ ಇದೆ. ತನ್ನ 100 ವರ್ಷಗಳ ಕಾಲದ ಬಹುದೊಡ್ಡ ಪ್ರಯಾಣದೊಳಗಡೆ ಈ ಸಂಸ್ಥೆ ಅನೇಕ ಟೀಕೆ, ಅನೇಕ ಗೌರವ ಇತ್ಯಾದಿ ಎಲ್ಲವನ್ನೂ ಪಡೆದಿದೆ.

ಸಾಗರದಂತೆ ಚಲಿಸುವ ಈ ಸಂಸ್ಥೆ ತನ್ನ ಶ್ರೀಮದ್ಗಾಂಭೀರ್ಯವನ್ನಾ ಕನ್ನಡಿಗರ ಮಧ್ಯೆ ಉಳಿಸಿಕೊಂಡಿದೆ. ನಾನು ಅಧ್ಯಕ್ಷನಾಗಿ ಅದ್ಭುತವಾಗಿ ಕೆಲಸ ಮಾಡದಿದ್ದರೂ ಕೂಡ ಈ ಸಂಸ್ಥೆ ಗೌರವವನ್ನಾ ಎತ್ತಿ ಹಿಡಿಯಲು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ನನ್ನ ನಡವಳಿಕೆಯಲ್ಲೂ ಕೂಡ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯನ್ನು ಕಾಯ್ದು ಕೊಂಡಿದ್ದೇನೆ. ಶತಮಾನೋತ್ಸವದ ಸಂದರ್ಭದಲ್ಲಿ ಪರಿಷತನ್ನು ಆರ್ಥಿಕವಾಗಿ ಸದೃಢವನ್ನಾಗಿ ಮಾಡಲು ಶಾಶ್ವತ ನಿಧಿ ಎಂಬ ಯೋಜನೆ ರೂಪಿಸಿದ್ದೇನೆ. ಶಾಶ್ವತ ನಿಧಿಗೆ ಹಣ ಕೊಡಬೇಕೆಂದು ವಿನಂತಿಸುತ್ತೇನೆ. ಪ್ರಭುತ್ವದ ಜೊತೆಯಲ್ಲಿ ಉತ್ತಮ ಬಾಂಧವ್ಯವನ್ನಾ ರೂಪಿಸಿಕೊಂಡಿರುವ ನಾನು ಪರಿಷತ್ತನ್ನು ಪ್ರಭುತ್ವದ ಬಾಲಂಗೋಚಿಯಂತೆ ಮಾಡಿಲ್ಲ. ಪ್ರಭುತ್ವವೂ ಕೂಡ ನಮ್ಮ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯ ವಿಚಾರದಲ್ಲಿ ಕೈ ಹಾಕಿಲ್ಲ. ಇನ್ನೂ ನೂರಾರು ವರ್ಷ ಈ ಪ್ರಾಥಮಿಕ ಸಂಸ್ಥೆ ಕನ್ನಡಿಗರ ಪ್ರೀತಿಯ ಸಂಸ್ಥೆಯಾಗಿ ಬೆಳೆಯಬೇಕು ಎಂಬುದು ನನ್ನ ಆಸೆ.


ಸಮ್ಮೇಳನದ ವಿಶೇಷ ಗೋಷ್ಠಿಗಳು

  • ಸಂವಿಧಾನ ಮತ್ತು ರಾಜ್ಯಭಾಷಾ ನೀತಿ ಗೋಷ್ಠಿ
  • ಕನ್ನಡ ಬದುಕು ಮತ್ತು ಚಳುವಳಿಗಳು
  • ಸಮ್ಮೇಳನಾಧ್ಯಕ್ಷರ ಕಾವ್ಯ ಗಾಯನ
  • ಆಧುನಿಕ ಆತಂಕಗಳು- ಕೃಷಿ, ಕೈಗಾರಿಕೆ ಮತ್ತು ಪರಿಸರ
  • ಸ್ವತಂತ್ರೋತ್ತರ ಕರ್ನಾಟಕ ವರದಿಗಳು ಮತ್ತು ಅನುಷ್ಠಾನ
  • ಮೌಢ್ಯಾಚರಣೆ ವೈಚಾರಿಕತೆ ಗೋಷ್ಠಿ
  • ಕನ್ನಡ ಭಾಷೆ ತಂತ್ರಾಂಶ ಭಾಷೆ,
  • ಸಂಕೀರ್ಣ: ಮಹಿಳೆ, ಸಮಾನತೆ, ಸವಾಲುಗಳು
  • ಸಾಹಿತ್ಯಗೋಷ್ಠಿ
  • ಎರಡು ವಿಶೇಷ ಉಪನ್ಯಾಸಗಳು: ನಾಲ್ವಡಿ ಕೃಷ್ಣರಾಜ ಒಡೆಯರ್ ಬಗ್ಗೆ ಹಾಗೂ ಕನ್ನಡ ಶಾಸ್ತ್ರೀಯ ಭಾಷೆ ಮುಂದಿನ ಹೆಜ್ಜೆಗಳು
  • ಕನ್ನಡ ಚಲನಚಿತ್ರಗಳ ಬಗ್ಗೆ ಗೋಷ್ಠಿ: ಚಿತ್ರ ಸಾಹಿತ್ಯ, ರಿಮೇಕ್ ಡಬ್ಬಿಂಗ್, ಕನ್ನಡ ಚಿತ್ರರಂಗ ಸ್ಥಿತ್ಯಂತರದ ನೆಲೆಯಲ್ಲಿ ಸೇರಿದಂತೆ ವಿಶೇಷ ಗೋಷ್ಠಿಗಳನ್ನು ಏರ್ಪಡಿಸಿದ್ದೇವೆ.
-ಮೈನಾಶ್ರೀ.ಸಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com