ವಿಕಲಚೇತನರ ಬಗ್ಗೆ ಸಮಾಜದ ಧೋರಣೆ ಬದಲಾಗಬೇಕು

ಸಾಧಿಸುವ ಛಲ ಮತ್ತು ದೃಢ ಸಂಕಲ್ಪ ಜೊತೆಗಿದ್ದರೆ ಸಾಧನೆಯ ಹಾದಿ ಕಷ್ಟಕರವಲ್ಲ. ಅಂತಹ ಸಾಧನೆಗೈದ ಅದೆಷ್ಟೋ ಉದಾಹರಣೆಗಳು ಇಂದು ನಮ್ಮ ಮುಂದಿವೆ...
ಹೋರಾಟಗಾರ್ತಿ ಮಲಾಲ ಅವರೊಂದಿಗೆ ಅಶ್ವಿನಿ ಅಂಗಡಿ
ಹೋರಾಟಗಾರ್ತಿ ಮಲಾಲ ಅವರೊಂದಿಗೆ ಅಶ್ವಿನಿ ಅಂಗಡಿ

ಸಾಧಿಸುವ ಛಲ ಮತ್ತು ದೃಢ ಸಂಕಲ್ಪ ಜೊತೆಗಿದ್ದರೆ ಸಾಧನೆಯ ಹಾದಿ ಕಷ್ಟಕರವಲ್ಲ. ಅಂತಹ ಸಾಧನೆಗೈದ ಅದೆಷ್ಟೋ ಉದಾಹರಣೆಗಳು ಇಂದು ನಮ್ಮ ಮುಂದಿವೆ. ಬೀದಿ ದೀಪದಲ್ಲಿ ಕುಳಿತು ಓದಿದರೂ ಮತ್ತೊಬ್ಬರ ಮನೆಯನ್ನು ಬೆಳಗಬೇಕು ಎನ್ನುವ ಕನಸನ್ನು ಕಂಡ ಸರ್.ಎಂ.ವಿಶ್ವೇಶ್ವರಯ್ಯನವರಿಂದ ಪ್ರಾರಂಭಿಸಿ ಬಡ ಕುಟುಂಬದಲ್ಲಿ ಜನಿಸಿದರೂ ತಮ್ಮ ಅವಿರತ ಪರಿಶ್ರಮದಿಂದ ರಾಷ್ಟ್ರಪತಿಯಂತಹ ದೇಶದ ಅತ್ಯುನ್ನತ ಹುದ್ದೆಯನ್ನೇರಿದ ಡಾ.ಎ.ಪಿ.ಜೆ. ಅಬ್ದುಲ್ ಕಲಾಂರಂತಹ ಸಾಧಕರೇ ಇಂದಿಗೂ ಪ್ರತಿಯೊಬ್ಬರಿಗೂ ಸ್ಫೂರ್ತಿ. ಕಷ್ಟಗಳನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಸಾಧನೆಯ ಶಿಖರವನ್ನು ತಲುಪಿದ ಇಂತಹ ಸಾಧಕರ ಸಾಹಸಕ್ಕೆ ಇಂದಿಗೂ ಕೊನೆ ಇಲ್ಲ. ಅಂತಹ ಸಾಧಕರ ಸಾಲಿನಲ್ಲಿ ಗುರುತಿಸಿಕೊಂಡವರೇ ಅಶ್ವಿನಿ ಅಂಗಡಿ.
ತನ್ನ ಕಣ್ಣುಗಳು ಕಾಣದಿದ್ದರೂ ಮತ್ತೊಬ್ಬರ ಬಾಳಿನಲ್ಲಿ ಬೆಳಕು ತರಬೇಕು ಎನ್ನುವ ಇವರ ಪ್ರಯತ್ನಕ್ಕೆ ಅಂತರಾಷ್ಟ್ರೀಯ ಮನ್ನಣೆ ದೊರೆತಿದೆ. ಪ್ರತಿಷ್ಠಿತ ಕ್ವೀನ್ಸ್ ಯಂಗ್ ಲೀಡರ್ಸ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮಹಿಳೆ ಎನ್ನುವ ಖ್ಯಾತಿಗೆ ಇವರು ಭಾಜನರಾಗಿದ್ದಾರೆ. ಬೆಳಕು ಎನ್ನುವ ಶಾಲೆಯನ್ನು ಸ್ಥಾಪಿಸುವ ಮೂಲಕ ಮತ್ತೊಬ್ಬರ ಬಾಳಿನ ದೀಪ ಬೆಳಗಲು ಅಣಿಯಾಗಿರುವ ಅಶ್ವಿನಿ ಅಂಗಡಿಯವರೊಂದಿನ ಮಾತುಕತೆ ಹೀಗಿದೆ...

1.    ಕ್ವೀನ್ಸ್ ಯಂಗ್ ಲೀಡರ್ಸ್ ಪ್ರಶಸ್ತಿ ಪಡೆದ ಅನುಭವ ಹೇಗಿದೆ?
ಕ್ವೀನ್ಸ್ ಯಂಗ್ ಲೀಡರ್ಸ್ ಪ್ರಶಸ್ತಿ ಪಡೆದ ಅನುಭವ ಮತ್ತಷ್ಟು ಜವಾಬ್ದಾರಿಯನ್ನು ಹೆಚ್ಚಿಸಿದೆ. ಮತ್ತಷ್ಟು ಕೆಲಸ ಮಾಡಬೇಕು, ಮಾಡುವ ಕೆಲಸವನ್ನು ಯಾರೋ ಗುರುತಿಸುತ್ತಿದ್ದಾರೆ ಎನ್ನುವ ಸಮಾಧಾನ ತಂದಿದೆ. ನಾನು ಹೋಗುತ್ತಿರುವ ದಾರಿಯನ್ನು ಪ್ರಶಸ್ತಿ ಮತ್ತಷ್ಟು ಸ್ಪಷ್ಟಗೊಳಿಸಿದೆ. ನಾನು ಸಲ್ಲಿಸುತ್ತಿರುವ ಸೇವೆಗೆ ಬೆಲೆ ಸಿಕ್ಕಂತಾಗಿದೆ.

2.    ಅಂತರಾಷ್ಟ್ರೀಯ ಪ್ರಶಸ್ತಿಗಳು ನಿಮ್ಮ ಸಾಧನೆಯ ಬಗೆಗಿನ ಜವಾಬ್ದಾರಿಯನ್ನು ಹೆಚ್ಚಿಸಿವೆಯೇ?
ಖಂಡಿತವಾಗಿ. ನನ್ನನ್ನು ಸಮಾಜ ಗುರುತಿಸಿದ ಮೇಲೆ ನಾನು ಹೋಗುತ್ತಿರುವ ದಾರಿ ಸರಿಯಾಗಿದೆ ಎಂದರ್ಥ. ಗುರುತಿಸುವ ಜನರು ಹೆಚ್ಚಾದಂತೆ ನನ್ನ ಜವಾಬ್ದಾರಿಗಳು ಹೆಚ್ಚಾಗುತ್ತಿವೆ. ಅನೇಕ ಸಂಸ್ಥೆಗಳು ನನಗೆ ಸಲಹೆಗಳನ್ನು ನೀಡುತ್ತಿವೆ. ಅಂತಹ ಸಲಹೆಗಳನ್ನು ಪಡೆದುಕೊಂಡು ಮುಂದುವರಿಯಲು ಪ್ರಯತ್ನಿಸುತ್ತಿದ್ದೇನೆ.

3.    ನಿಮ್ಮ ಈ ಸಾಧನೆಗೆ ಸ್ಫೂರ್ತಿ ಯಾರು?
ನನ್ನ ತಂದೆ ತಾಯಿಯೇ ನನ್ನ ಈ ಸಾಧನೆಗೆ ಸ್ಫೂರ್ತಿ. ಪ್ರತಿಯೊಂದು ಹಂತದಲ್ಲಿಯೂ ಅವರು ನನ್ನನ್ನು ಪ್ರೋತ್ಸಾಹಿಸಿದ್ದಾರೆ. ಸಾಮಾನ್ಯವಾಗಿ ಹೆಣ್ಣು ಮಕ್ಕಳು ಎಂದರೆ ಪೋಷಕರು ಹೆಚ್ಚು ಸ್ವಾತಂತ್ರ್ಯ ನೀಡುವುದಿಲ್ಲ. ಆದರೆ, ನನ್ನ ಪೋಷಕರು ನನ್ನ ಮೇಲೆ ನಂಬಿಕೆಯನ್ನಿಟ್ಟು ಪ್ರತಿಯೊಂದು ಹೆಜ್ಜೆಯಲ್ಲಿಯೂ ಜೊತೆಗಿದ್ದಾರೆ. ನನ್ನ ಜೀವನದ ಅನುಭವಗಳು ಕೂಡ ನನಗೆ ಸ್ಫೂರ್ತಿಯಾಗಿವೆ. EXPERIENCE IS NOT A EXPERIENCE UNITILL WE MAKE A MEANING OUT OF IT ಎನ್ನುವ ಮಾತಿನಲ್ಲಿ ನನಗೆ ನಂಬಿಕೆ ಇದೆ. ಸ್ವಾಮಿ ವಿವೇಕಾನಂದ ಮತ್ತು ಡಾ. ಅಬ್ದುಲ್ ಕಲಾಂ ಸೇರಿದಂತೆ ಅನೇಕ ಸಾಧಕರು ನನ್ನ ಜೀವನದ ಸ್ಫೂರ್ತಿ.

4.    ವಿಕಲಚೇತನರ ಬಗ್ಗೆ ಸಮಾಜ ಹೊಂದಬೇಕಾದ ಧೋರಣೆ ಬಗ್ಗೆ ನಿಮ್ಮ ಅಭಿಪ್ರಾಯ?
ವಿಕಲಚೇತನರ ಬಗ್ಗೆ ಸಮಾಜ ಹೊಂದಿರುವ ಧೋರಣೆ ಬದಲಾಗಬೇಕಿದೆ. ವಿಕಲಚೇತನರು ಎಂದರೆ ಅವರು ಒಳ್ಳೆಯವರಾಗಿರಲೇಬೇಕು ಎನ್ನುವ ಕಟ್ಟುಪಾಡು ವಿಧಿಸಲಾಗಿದೆ. ಅದು ಕೂಡ ಅವರ ಭಾವನೆಗಳಿಗೆ ಬೆಲೆ ಇಲ್ಲ ಎನ್ನುವಂತೆ ನಿರೀಕ್ಷೆ ಹೊಂದಲಾಗಿದೆ. ವಿಕಲಚೇತನರು ಕೂಡ ಸಾಮಾನ್ಯ ಮನುಷ್ಯರು ಎಂದು ಕಾಣುವ ಮನೋಭಾವನೆ ಬೆಳೆಯಬೇಕು. ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೇ ಅವರಿಗೆ ಸಹಾಯ ಮಾಡುವಂತಾಗಬೇಕು. ಅವರಲ್ಲಿಯೂ ಒಳ್ಳೆಯವರು ಮತ್ತು ಕೆಟ್ಟವರು ಎನ್ನುವವರು ಇರುತ್ತಾರೆ. ಆದರೆ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ಹಾಕಿ ತೂಗುವುದು ಸರಿಯಲ್ಲ.

5.    ವಿಕಲಚೇತನರ ಬಾಳಿನಲ್ಲಿ ಆಶಾಕಿರಣವನ್ನು ಮೂಡಿಸಲು ನೀವು ಹಾಕಿಕೊಂಡಿರುವ ಭವಿಷ್ಯದ ಯೋಜನೆಗಳೇನು?
ವಿಕಲಚೇತನರಿಗೆ ನಿರಂತರವಾಗಿ ಹಸಿವು ನೀಗುವಂತಾಗಬೇಕು. ಆ ನಿಟ್ಟಿನಲ್ಲಿ ಶಿಕ್ಷಣವೇ ಅದಕ್ಕೆ ಸರಿಯಾದ ದಾರಿ. ಹಾಗಾಗಿ ವಿಕಲಚೇತನರಿಗೆ ಶಿಕ್ಷಣ ಕೊಡಿಸಿ ಅವರ ಅನ್ನವನ್ನು ಅವರೇ ದುಡಿದುಕೊಳ್ಳುವಂತಹ ಸಾಮರ್ಥ್ಯ ತುಂಬುವುದು ನನ್ನ ಮುಖ್ಯ ಉದ್ದೇಶ. ಅವರಿಗೆ ಜೀವನ ಪರ್ಯಂತ ಮತ್ತೊಬ್ಬರ ಮೇಲೆ ಅವಲಂಬಿತರಾಗುವುದನ್ನು ಕಲಿಸದೇ ಸ್ವಾವಲಂಬಿಗಳನ್ನಾಗಿ ಮಾಡಬೇಕಿದೆ. ಮಧ್ಯವಯಸ್ಕ ನಿರಾಶ್ರಿತ ಮಹಿಳೆಯರಿಗೆ ಆಶ್ರಯ ನೀಡಿ ಅವರಿಗೆ ಸ್ವಯಂ ಉದ್ಯೋಗ ಅವಕಾಶ ಒದಗಿಸಿಕೊಡುವುದು. ವಿವಿಧ ರೀತಿಯ ತರಬೇತಿಗಳನ್ನು ನೀಡಿ ಅವರನ್ನು ಸ್ವಯಂ ಉದ್ಯೋಗ ಕಂಡುಕೊಳ್ಳುವಂತೆ ಮಾಡುವುದು ನನ್ನ ಮುಖ್ಯ ಯೋಜನೆಯಾಗಿದೆ.

6.    ವಿಕಲಚೇತನರ ಆಯೋಗ ರಾಜ್ಯದಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದೆಯೇ?
ವಿಕಲಚೇತನರ ಆಯೋಗ ರಾಜ್ಯದಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಆದರೆ, ವಿಕಲಚೇತನರ ಬಗ್ಗೆ ಅರ್ಥ ಮಾಡಿಕೊಳ್ಳದೇ ಇರುವವರೇ ನಿರ್ದೇಶಕರಾಗುತ್ತಿದ್ದಾರೆ. ಆರು ತಿಂಗಳಿಗೆ ಅಥವಾ ವರ್ಷಕ್ಕೊಮ್ಮೆ ನಿದೇರ್ಶಕರು ಬದಲಾಗುತ್ತಾರೆ. ಇಂತಹ ನಿರ್ದೇಶಕರಿಗೆ ವಿಕಲಚೇತನರ ಬಗ್ಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಪ್ರತಿ  ಬಾರಿ ಹೊಸದಾಗಿ ಬರುವ ನಿರ್ದೇಶಕರಿಗೆ ನಮ್ಮ ಸಮಸ್ಯೆ ಬಗ್ಗೆ ಹೇಳಿಕೊಳ್ಳುವುದೇ ಆಗಿದೆ ಹೊರತು ಸಮಸ್ಯೆ ಮಾತ್ರ ಬಗೆ ಹರಿಯುತ್ತಿಲ್ಲ. ಆದ್ದರಿಂದ 5 ವರ್ಷಕ್ಕೊಮ್ಮೆ ನಿರ್ದೇಶಕರು ಬದಲಾಗುವ ಪ್ರವೃತ್ತಿ ಜಾರಿಗೆ ಬರಬೇಕು. ಆಗ ಆಯೋಗದ ನಿರ್ದೇಶಕರು ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ.

7.    ವಿಕಲಚೇತನರ ಅಭಿವೃದ್ಧಿಯತ್ತ ನಿಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಕಾರಣವೇನು?
ವಿಕಲಚೇತನರು ಹುಟ್ಟಿರುವುದೇ ಕಷ್ಟಗಳನ್ನು ಅನುಭವಿಸಲು ಎನ್ನುವ ಪ್ರತೀತಿ ಇಂದು ಬೆಳೆಯುತ್ತಿದೆ. ವಿಕಲಚೇತನ ಮಕ್ಕಳು ಹುಟ್ಟಿದರೆ ಅವರನ್ನು ಶಾಪಕ್ಕೆ ಹೋಲಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ತಮ್ಮದೇ ಮಕ್ಕಳನ್ನು ಅನಾಥರಂತೆ ಕಾಣುವ ಮನಸ್ಥಿತಿಗೆ ಪೋಷಕರು ತಲುಪುತ್ತಿದ್ದಾರೆ. ಕತ್ತಲೆ ಮನೆಯಲ್ಲಿ ಕೂಡಿ ಹಾಕುವುದು, ಸಮಾರಂಭಗಳಲ್ಲಿ ಸಂಬಂಧಿಕರಿಗೆ ಮಕ್ಕಳನ್ನು ಪರಿಚಯಿಸಲು ಹಿಂದೇಟು ಹಾಕುವ ಮನೋಭಾವ ಹೆಚ್ಚಾಗುತ್ತಿದೆ. ದೆಹಲಿ, ಭೋಪಾಲ್, ರಾಂಚಿ, ಮುಂಬೈ ಮತ್ತಿತರೆ ರಾಜ್ಯಗಳಲ್ಲಿ ಇಂತಹ ಅನೇಕ ಕಣ್ಣೀರಿನ ಕಥೆಗಳನ್ನು ನಾನು ವಿಕಲಚೇತನರಿಂದ ಕೇಳಿ ತಿಳಿದಿದ್ದೇನೆ. ಇದು ನನ್ನನ್ನು ವಿಕಲಚೇತನರ ಅಭಿವೃದ್ಧಿಯತ್ತ ತೊಡಗಿಸಿಕೊಳ್ಳಲು ಪ್ರೇರಣೆಯಾಯಿತು.

8.    ಮಹಿಳೆಯಾಗಿ ಸಾಧನೆಯ ಹಾದಿಯಲ್ಲಿ ನೀವು ಕಂಡುಕೊಂಡ ಸತ್ಯವೇನು?
ಪ್ರತಿಯೊಂದು ವಿಷಯಕ್ಕೂ ಗಂಡು ಮಕ್ಕಳನ್ನು ಅವಲಂಭಿಸುವ ಪ್ರವೃತ್ತಿ ನಮ್ಮಲ್ಲಿ ಇಂದಿಗೂ ಇದೆ. ಚಿಕ್ಕಂದಿನಲ್ಲಿ ಮನೆಯಲ್ಲಿ ಗಂಡು ಮಕ್ಕಳು ಇದ್ದಿದ್ದರೆ ಚೆನ್ನಾಗಿರುತ್ತಿತ್ತು, ನಾವು ಅಸಮರ್ಥರು ಎನ್ನುವ ಭಾವನೆ ಕಾಡಿದ್ದು ನಿಜ. ಆದರೆ, ಗಂಡು ಮಕ್ಕಳು ಮಾಡುವ ಎಲ್ಲ ಕೆಲಸಗಳನ್ನು ಮಹಿಳೆಯೂ ಮಾಡಬಲ್ಲಳು ಎನ್ನುವ ಭಾವನೆ ಈಗ ಮೂಡಿದೆ. ಗಂಡು ಇಲ್ಲದೇ ಹೆಣ್ಣು ಬದುಕಬಲ್ಲಳು ಎಂದು ಜೀವನದ ಹಾದಿ ಇಂದು ತಿಳಿ ಹೇಳಿದೆ. ನಾನು ನನ್ನ ಸಾಧನೆಯತ್ತ ಮುಖ ಮಾಡಿದಾಗ, ಹೆಣ್ಣಿನ ಸಾಮರ್ಥ್ಯವನ್ನು ಕಂಡುಕೊಂಡಿದ್ದೇನೆ. ಈಗ ಗಂಡಿನ ಮೇಲೆ ಅವಲಂಬಿತಳಾಗದೇ ನಾನೇ ನನ್ನ ಕೆಲಸವನ್ನು ಮಾಡಿಕೊಳ್ಳಬಲ್ಲೇ ಎನ್ನುವ ಸತ್ಯವನ್ನು ನಾನು ಕಂಡುಕೊಂಡಿದ್ದೇನೆ.

9.    ಮಲಾಲ ಅವರೊಂದಿಗಿನ ನಿಮ್ಮ ಭೇಟಿಯ ಅನುಭವ ಹೇಗಿತ್ತು?
ಮಲಾಲ ಅವರ ಭೇಟಿ ಖುಷಿ ತಂದುಕೊಟ್ಟಿತು. ಒಂದು ಹೆಣ್ಣು ಮಗುವಾಗಿ ಗುಂಡೇಟು ತಿಂದರೂ ಎದೆ ಗುಂದದೇ ಅವರು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೋರಾಡುತ್ತಿದ್ದಾರೆ. ನನಗಿಂತ ಚಿಕ್ಕವರಾದರೂ ಅನೇಕ ವಿಷಯಗಳನ್ನು ಆಕೆಯಿಂದ ನಾನು ತಿಳಿದುಕೊಂಡೆ. ಆಕೆಯ ಪಕ್ಕದಲ್ಲಿ ಕುಳಿತುಕೊಳ್ಳುವುದೇ ನನಗೆ ಹೆಮ್ಮೆ ಎಂದೆನಿಸಿತು. ಏಕೆಂದರೆ, ಪ್ರಾಣ ಭಯದಿಂದ ಅನೇಕರು ತಾವು ಇಟ್ಟ ಹೆಜ್ಜೆಯಿಂದ ಹಿಂದೆ ಸರಿಯುತ್ತಾರೆ. ಆದರೆ, ಮಲಾಲ ತನ್ನ ಹಠ ಬಿಡದೇ ಗುರಿಯತ್ತ ಮುನ್ನುಗಿದ್ದಾಳೆ. ಅಂತಹವರನ್ನು ಭೇಟಿಯಾಗಿರುವುದೇ ಖುಷಿಯ ಸಂಗತಿ.

10.    ಸಾಧನೆಯ ಹಾದಿಯಲ್ಲಿರುವ ಮಹಿಳೆಯರಿಗೆ ನಿಮ್ಮ ಸಂದೇಶ?
ಗಂಡಿನ ಆಶ್ರಯ ಬೇಕು ಎಂದು ಕಾದು ಕುಳಿತುಕೊಳ್ಳದೇ ಮುನ್ನುಗ್ಗಿ. ಸುಃಖ ದುಃಖ ಎರಡನ್ನು ಸಮರ್ಪಕವಾಗಿ ಎದುರಿಸಿ. ಕಷ್ಟಗಳು ಸಾವಿರ ಬಂದರೂ ಎದೆಗುಂದದಿರಿ. ನಿಮ್ಮನ್ನು ನೀವು ವಿಶ್ಲೇಷಿಸಿಕೊಳ್ಳಿ. ಹೆಣ್ಣಿಗೆ ಅದ್ಭುತ ಶಕ್ತಿ ಇದೆ. ಆಕೆ ದುಃಖವಾದರೆ ಜೋರಾಗಿ ಅಳುತ್ತಾಳೆ. ಸಂತೋಷವಾದರೆ ನಗುತ್ತಾಳೆ. ತನಗೆ ಆದಂತಹ ಭಾವುಕತೆಯನ್ನು ತೋರಿಸುತ್ತಾಳೆ. ಹೆಣ್ಣು ಸುರಿಸುವ ಕಣ್ಣೀರಿನಲ್ಲಿ ರೋಷ ತುಂಬಿರುತ್ತದೆ. ಭಾವುಕತೆಯನ್ನು ನಕಾರಾತ್ಮಕವಾಗಿ ತೆಗೆದುಕೊಳ್ಳದೇ ಧೈರ್ಯದ ಸಂಕೇತವಾಗಿ ಪರಿಗಣಿಸಿ. ಇದು ನಿಮ್ಮ ಸಾಧನೆಯ ದಾರಿಯಾಗಲಿ.   

-ಮೈನಾಶ್ರೀ. ಸಿ


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com