ಮುಗ್ಗರಿಸಿದ ಮುಖಂಡರು: ಶೆಟರ್ ತೆರೆಯದ ಶೆಟ್ಟರ್; ಶಕ್ತಿ ಸೌಧಕ್ಕೆ ಹೋಗದ 'ಗಣಿತ' ಮಾಸ್ಟರ್- ಸೋತು ಸುಣ್ಣವಾದ ಮಾಜಿ, ಹಾಲಿ ಸ್ಪೀಕರ್
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಕೈಹಿಡಿದ್ದಾರೆ. ಕಾಂಗ್ರೆಸ್ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೇರಲು ಸಜ್ಜಾಗಿದೆ. ಕಾಂಗ್ರೆಸ್ ನಾಯಕರು ಭಾರಿ ಅಂತರದ ಗೆಲುವು ದಾಖಲಿಸಿದ್ದಾರೆ.
ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಭಾರೀ ಮತಗಳ ಅಂತರದಿಂದ ಸೋತಿದ್ದಾರೆ. ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ 35 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ದಿನದಿಂದಲೂ ಶೆಟ್ಟರ್ ಈ ಬಾರಿ ವಿಧಾನಸಭೆ ಚುನಾವಣೆಯ ಕೇಂದ್ರ ಬಿಂದುವಾಗಿದ್ದರು.
ಶಿರಸಿ ಸಿದ್ದಾಪುರ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರರಾಗಿದ್ದ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆ ಚುನಾವಣೆಯಯ ಕಾಂಗ್ರೆಸ್ ನ ಭೀಮಣ್ಣ ನಾಯ್ಕ ಎದುರು ಸೋಲು ಅನುಭವಿಸಿದ್ದಾರೆ. ಕೊನೆಯವರೆಗೂ ತೀವ್ರ ಪೈಪೋಟಿ ನೀಡಿದ ಕಾಂಗ್ರೆಸ್ ಕೊನೆಯ 2 ಸುತ್ತುಗಳಲ್ಲಿ ಮುನ್ನಡೆ ಸಾಧಿಸಿತು. ಅಂತಿಮವಾಗಿ 5800 ಮತಗಳ ಅಂತರದಿಂದ ಕಾಂಗ್ರೆಸ್ ನ ಭೀಮಣ್ಣ ನಾಯ್ಕ ಅವರು ಗೆಲುವಿನ ನಗೆ ಬೀರಿದರು
ಕೋಲಾರದ ಶ್ರೀನಿವಾಸಪುರ ಕ್ಷೇತ್ರದ ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ಸೋಲು ಕಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ವೆಂಕಟಶಿವಾರೆಡ್ಡಿ ವಿರುದ್ಧ ರಮೇಶ್ ಕುಮಾರ್ ಮುಗ್ಗರಿಸಿದ್ದಾರೆ. ಸದ್ಯ ರಮೇಶ್ ಕುಮಾರ್ 51817 ಮತಗಳನ್ನು ಪಡೆದಿದ್ದರೆ, ಜೆಡಿಎಸ್‌ನ ಜಿಕೆ ವೆಂಕಟಶಿವಾ ರೆಡ್ಡಿ 56841 ಮತಗಳನ್ನು ಪಡೆದು ಮುನ್ನಡೆ ಪಡೆದಿದ್ದಾರೆ. ಅಂಚೆ ಮತಗಳ ಎಣಿಕೆ ಬಾಕಿ ಇದ್ದು, ಬಹುತೇಕ ವೆಂಕಟಶಿವಾ ರೆಡ್ಡಿ ಗೆಲುವು ಸಾಧಿಸುವುದು ಖಚಿತವಾಗುತ್ತಿದೆ.
ಇನ್ನೂ ಕಡೂರಿನಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವೈ ಎಸ್ ವಿ ದತ್ತಾ ಕಾಂಗ್ರೆಸ ಅಭ್ಯರ್ಥಿ ಆನಂದ್ ವಿರುದ್ಧ ಸೋಲನುಭವಿಸಿದ್ದಾರೆ. ಜೆಡಿಎಸ್ ವಿರುದ್ಧ ಬೇಸರ ಗೊಂಡು ದತ್ತ ಕಾಂಗ್ರೆಸ್ ಸೇರಿದ್ದರು. ಆದರೆ ಕಾಂಗ್ರೆಸ್ ನಲ್ಲಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಮತ್ತೆ ಜೆಡಿಎಸ್ ಗೆ ವಾಪಸಾಗಿ ಸ್ಪರ್ಧಿಸಿದ್ದರು, ಆದರೆ ಮತದಾರ ಅವರ ಕೈ ಹಿಡಿದಿಲ್ಲ.

