ಪ್ರಶ್ನೆ ಪತ್ರಿಕೆ ತಯಾರಕರನ್ನು ಅಜ್ಞಾತ ಸ್ಥಳಕ್ಕೆ ಕಳುಹಿಸಿದ ಪಿಯು ಶಿಕ್ಷಣ ಇಲಾಖೆ

ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಎರಡು ಬಾರಿ ಸೋರಿಕೆಯಾದ ನಂತರ ಪಿಯು ಮಂಡಳಿ ಈ ಬಾರಿ...
ಪದವಿ ಪೂರ್ವ ಶಿಕ್ಷಣ ಇಲಾಖೆ
ಪದವಿ ಪೂರ್ವ ಶಿಕ್ಷಣ ಇಲಾಖೆ

ಬೆಂಗಳೂರು: ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಎರಡು ಬಾರಿ ಸೋರಿಕೆಯಾದ ನಂತರ ಪಿಯು ಮಂಡಳಿ ಈ ಬಾರಿ ಅತ್ಯಂತ ಎಚ್ಚರಿಕೆ ವಹಿಸಲು ತೀರ್ಮಾನಿಸಿದೆ. ಏಪ್ರಿಲ್ 12ರಂದು ನಡೆಯಲಿರುವ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ಎಲ್ಲಾ ಕ್ರಮ ಕೈಗೊಂಡಿದೆ.

ಅದರ ಮೊದಲ ಭಾಗವಾಗಿ ಪ್ರಶ್ನೆಪತ್ರಿಕೆ ತಯಾರಿಸಿದ ವಿಷಯ ತಜ್ಞರನ್ನು ಯಾರಿಗೂ ಬಹಿರಂಗಪಡಿಸದೆ ಅಜ್ಞಾತ ಸ್ಥಳಕ್ಕೆ ಕಳುಹಿಸಲಾಗಿದೆ. ಅವರು ಅಲ್ಲಿ ಪರೀಕ್ಷೆ ಮುಗಿಯುವ ದಿನದವರೆಗೆ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ಸಂಪರ್ಕಕ್ಕೆ ಲಭ್ಯವಾಗದ ರೀತಿಯಲ್ಲಿ ಇರುತ್ತಾರೆ. ಯುಗಾದಿ ಹಬ್ಬದ ದಿನವನ್ನು ಕೂಡ ಅವರು ಏಕಾಂತವಾಗಿ ಕಳೆಯಲಿದ್ದಾರೆ.
 
ಪ್ರಶ್ನೆ ಪತ್ರಿಕೆಗಳು ಸೆಟ್ಟಿಂಗ್ ಮಾಡುವ ಸಂದರ್ಭದಲ್ಲಿ ಸೋರಿಕೆಯಾಗಿರುವ ಸಾಧ್ಯತೆಯಿದೆ ಎಂಬ ಆರೋಪಗಳು ಕೇಳಿಬಂದಿರುವುದರಿಂದ ಇಲಾಖೆ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡಿದೆ. ಪ್ರಶ್ನೆ ಪತ್ರಿಕೆ ತಯಾರಿಕೆ ಮಾಡುವವರ ವಿರುದ್ಧ ಕೂಡ ಆರೋಪಗಳು ಕೇಳಿಬಂದಿರುವುದರಿಂದ ನಮಗೆ ಬೇರೆ ಮಾರ್ಗವಿರಲಿಲ್ಲ. ನಾವು ಪ್ರಶ್ನೆ ಪತ್ರಿಕೆ ತಯಾರಕರನ್ನು ಬಲವಂತವಾಗಿ ಕೂಡಿ ಹಾಕಿಲ್ಲ. ಪರೀಕ್ಷೆ ಮುಗಿಯುವವರೆಗೂ ಅಜ್ಞಾತ ಸ್ಥಳದಲ್ಲಿ ಉಳಿಯುವಂತೆ ನಾವು ಮನವರಿಕೆ ಮಾಡಿದ್ದೇವೆ. ಅವರಿಗೆ 24 ಗಂಟೆ ಭದ್ರತೆಯನ್ನು ಕೂಡ ಒದಗಿಸಿದ್ದೇವೆ. ಏಪ್ರಿಲ್ 12ರಂದು ಬೆಳಗ್ಗೆ 9 ಗಂಟೆಯವರೆಗೆ ಆ ಸ್ಥಳವನ್ನು ಬಿಟ್ಟು ಹೋಗಬಾರದು ಎಂದು ಅವರಲ್ಲಿ ಕೋರಿಕೊಂಡಿದ್ದೇವೆ ಎಂದು ಖಚಿತ ಮೂಲಗಳು ದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿವೆ.

ತಜ್ಞರು ತಮ್ಮ ಕುಟುಂಬದವರು ಮತ್ತು ಸ್ನೇಹಿತರ ಜೊತೆ ಕೂಡ ಮಾತನಾಡುವಂತಿಲ್ಲ. ಅವರ ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಏನಾದರೂ ತುರ್ತು ವಿಷಯಗಳನ್ನು ತಿಳಿಸಬೇಕೆಂದಿದ್ದರೆ ಪಿಯು ಇಲಾಖೆಯ ಅಧಿಕಾರಿಗಳು ಕುಟುಂಬದವರಿಗೆ ತಿಳಿಸುತ್ತಾರೆ. ಪ್ರಶ್ನೆ ಪತ್ರಿಕೆ ತಯಾರಿಕೆಯಲ್ಲಿ ಎಷ್ಟು ಮಂದಿ ಪಾಲ್ಗೊಂಡಿದ್ದಾರೆ ಎಂಬ ಬಗ್ಗೆ ಅಧಿಕಾರಿಗಳು ವಿವರ ಬಿಟ್ಟುಕೊಡಲಿಲ್ಲ.

ಯುಗಾದಿಯ ದಿನ ಕೂಡ ಅವರನ್ನು ಮನೆಗೆ ಕಳುಹಿಸುವುದಿಲ್ಲ. ಮುಂದಿನ ದಿನಗಳಲ್ಲಿ ಆರೋಪ, ತನಿಖೆ ಎದುರಿಸಬೇಕಾಗಬಹುದು ಎಂಬ ಸಂದೇಹಗಳಿಂದ ತಜ್ಞರು ಕೂಡ ನಮ್ಮ ನಿಯಮಕ್ಕೆ ಒಪ್ಪಿಕೊಂಡಿದ್ದಾರೆ ಎಂದರು.

ಬೆಂಗಳೂರಿಗೆ ಪ್ರಶ್ನೆಪತ್ರಿಕೆ: ಹಿರಿಯ ಐಎಎಸ್ ಅಧಿಕಾರಿಗಳ ನೇತೃತ್ವದ ತಂಡ ಪ್ರಶ್ನೆ ಪತ್ರಿಕೆಯನ್ನು ಮುದ್ರಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಮುದ್ರಣಗೊಂಡ ಪ್ರಶ್ನೆ ಪತ್ರಿಕೆಯನ್ನು ತರಲು ಹಿರಿಯ ಐಎಎಸ್ ಅಧಿಕಾರಿಯ ಜೊತೆ ಇನ್ನು ಕೆಲವು ಅಧಿಕಾರಿಗಳನ್ನು ಕಳುಹಿಸಲಾಗಿದೆ. ಅವರು ಪ್ರಶ್ನೆಪತ್ರಿಕೆ ಮುದ್ರಣವಾಗುವವರೆಗೆ ಅಲ್ಲಿ ನಿಂತು ನಂತರ ವಿಮಾನದಲ್ಲಿ ಬೆಂಗಳೂರಿಗೆ ತರುತ್ತಾರೆ ಎಂದು ಮಾಹಿತಿ ಸಿಕ್ಕಿದೆ.

ಪ್ರಶ್ನೆಪತ್ರಿಕೆಗಳನ್ನು ನೇರವಾಗಿ ಜಿಲ್ಲೆ ಅಥವಾ ತಾಲ್ಲೂಕು ಖಜಾನೆಗಳಿಗೆ ಕಳುಹಿಸಲಾಗುವುದಿಲ್ಲ. ಅವುಗಳನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಪೊಲೀಸರ ಭದ್ರತೆಯೊಂದಿಗೆ ಇರಿಸಲಾಗುತ್ತದೆ. ಪರೀಕ್ಷೆಗೆ ಎರಡು ದಿನಗಳ ಮುಂಚೆ ಪ್ರತಿ ಜಿಲ್ಲೆಗಳ ಉಪ ಆಯುಕ್ತರಿಗೆ ಕಳುಹಿಸಿಕೊಡಲಾಗುತ್ತದೆ. ಅಲ್ಲಿಂದ ಪರೀಕ್ಷೆ ನಡೆಯುವ ಪ್ರತಿ ಕೇಂದ್ರಗಳಿಗೆ ಜಾಗ್ರತೆಯಿಂದ ಪ್ರಶ್ನೆ ಪತ್ರಿಕೆಗಳನ್ನು ಕಳುಹಿಸಿಕೊಡುವುದು ಅವರ ಜವಾಬ್ದಾರಿ. ಅಲ್ಲಿ ಏನಾದರೂ ಸೋರಿಕೆ ಅಥವಾ ಅಕ್ರಮ ನಡೆದರೆ ಉಪ ಆಯುಕ್ತರನ್ನು ನೇಮಕ ಮಾಡಲಾಗುವುದು.

ಪ್ರಯೋಗ ಮಾದರಿಯಲ್ಲಿ ಪ್ರಶ್ನೆ ಪತ್ರಿಕೆ: ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಸಿಐಡಿ ಅಧಿಕಾರಿಗಳು ಈಗಾಗಲೇ ಬಂಧಿಸಿರುವ ಮಂಜುನಾಥ್, ಓಬಳರಾಜು ಮತ್ತು ರುದ್ರಪ್ಪ ಎಂಬ ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸಲಾಯಿತು. ಆಗ ಅವರು ಹಲವು ಸಂಗತಿಗಳನ್ನು ಬಾಯ್ಬಿಟ್ಟಿದ್ದಾರೆ. ಅವರು ಮೊದಲು ವಿದ್ಯಾರ್ಥಿಗಳ ನಂಬುಗೆಯನ್ನು ಪಡೆದುಕೊಳ್ಳಲು ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಾಗುವ ಮೊದಲು ಎರಡು ವಿಷಯಗಳ ಪ್ರಶ್ನೆ ಪತ್ರಿಕೆಯನ್ನು ಹಲವು ವಿದ್ಯಾರ್ಥಿಗಳಿಗೆ ಹಂಚಿದ್ದರು. ಪರೀಕ್ಷೆ ಬರೆದು ಬಂದ ನಂತರ ಪರೀಕ್ಷೆಯಲ್ಲಿ ಬಂದ ಪ್ರಶ್ನೆಗಳಿಗೂ ತಮಗೆ ಸಿಕ್ಕಿದ ಪ್ರಶ್ನೆ ಪತ್ರಿಕೆಗೂ ಹೋಲಿಕೆಯಿದ್ದಾಗ ಅವರು ಆರೋಪಿಗಳನ್ನು ಸಂಪರ್ಕಿಸಿದ್ದರು. ವಿಷಯಗಳ ಆಧಾರದ ಮೇಲೆ ಆರೋಪಿಗಳು ವಿದ್ಯಾರ್ಥಿಗಳಿಂದ ಹಣದ ಬೇಡಿಕೆಯಿಟ್ಟು ಪ್ರಶ್ನೆ ಪತ್ರಿಕೆಯನ್ನು ಮಾರಾಟ ಮಾಡಲು ಆರಂಭಿಸಿದರು ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ ನಿನ್ನೆ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಸಿಐಡಿ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com