

ಬೆಂಗಳೂರು: ಇಂಟಲಿಜೆನ್ಸ್ ಟ್ರಾನ್ಸ್ಪೋರ್ಟ್ ವ್ಯವಸ್ಥೆಯ ಭಾಗವಾಗಿ ಬಿಎಂಟಿಸಿ ತನ್ನ ಎಲ್ಲಾ ಬಸ್ ಗಳ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಲು ತಿಂಗಳಾಂತ್ಯಕ್ಕೆ ಆಪ್ ನ್ನು ಬಿಡುಗಡೆ ಮಾಡಲಿದೆ.
ಬಿಎಂಟಿಸಿ ಬಿಡುಗಡೆ ಮಾಡಲಿರುವ ಆಪ್ ಮೂಲಕ ಪ್ರಯಾಣಿಕರು ತಾವು ಪ್ರಯಾಣಿಸುವ ಮಾರ್ಗದ ಬಸ್ ಗಳಲ್ಲಿನ ರಶ್ ಬಗ್ಗೆಯೂ ಮಾಹಿತಿ ಪಡೆಯಬಹುದಾಗಿದೆ. ಆಪ್ ಬಗ್ಗೆ ಮಾಹಿತಿ ನೀಡಿರುವ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಏಕ್ ರೂಪ್ ಕೌರ್, ಆಪ್ ಮೂಲಕ ಸಾರ್ವಜನಿಕರಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿರುವವರ ಸಂಖ್ಯೆ ಬಗ್ಗೆ ಮಾಹಿತಿ ನೀಡಲಾಗುವುದಿಲ್ಲ. ಆದರೆ ಬಸ್ ಹೆಚ್ಚು ರಶ್ ಆಗಿದೆಯೇ ಅಥವಾ ಖಾಲಿ ಇದೆಯೇ ಎಂಬ ಬಗ್ಗೆ ಮಾತ್ರ ಮಾಹಿತಿ ನೀಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
ಕಲರ್ ಕೋಡ್ ಮೂಲಕ ಬಸ್ ನ ರಶ್ ಬಗ್ಗೆ ಮಾಹಿತಿ ನೀಡಲಾಗುತ್ತದೆ, ಆಪ್ ಮೂಲಕ ಪ್ರಯಾಣಿಕರು ತಾವು ಪ್ರಯಾಣಿಸುವ ಮಾರ್ಗದ ಬಸ್ ಬಸ್ ನಿಲ್ದಾಣಕ್ಕೆ ಬರುವ ನಿಖರ ಸಮಯವನ್ನು ತಿಳಿದುಕೊಳ್ಳಬಹುದಾಗಿದೆ ಎಂದು ಏಕ್ ರೂಪ್ ಕೌರ್ ಮಾಹಿತಿ ನೀಡಿದ್ದಾರೆ.
ಆಪ್ ಮೂಲಕ ಬಸ್ ಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಯೋಜನೆ ಭಾರತದಲ್ಲೇ ಮೊದಲಾಗಿದ್ದು, ಬಿಎಂಟಿಸಿಯ ಎಲ್ಲಾ ಬಸ್ ಗಳ ಬಗ್ಗೆ ಆಪ್ ಮೂಲಕ ಸ್ಪಷ್ಟ ಮಾಹಿತಿ ಪಡೆಯಬಹುದಾಗಿದೆ.