ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ; ಸರ್ಕಾರಕ್ಕೆ ಭದ್ರತೆ ಪರೀಕ್ಷೆ

ಎರಡು ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಮುಂದೂಡಲ್ಪಟ್ಟಿದ್ದ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಮರು ಪರೀಕ್ಷೆ ಮಂಗಳವಾರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಎರಡು ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಮುಂದೂಡಲ್ಪಟ್ಟಿದ್ದ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಮರು ಪರೀಕ್ಷೆ ಮಂಗಳವಾರ ರಾಜ್ಯಾದ್ಯಂತ ಆರಂಭಗೊಂಡಿದೆ.
ಮರು ಪರೀಕ್ಷೆ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ಸೃಷ್ಟಿಸಿದ್ದರೆ ರಾಜ್ಯ ಸರ್ಕಾರಕ್ಕೆ ಇದು ಅಗ್ನಿ ಪರೀಕ್ಷೆಯಾಗಿದೆ. ಈ ಬಾರಿ ಯಾವುದೇ ಅಕ್ರಮ ನಡೆಯದಂತೆ ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಸರ್ವ ರೀತಿಯಲ್ಲಿ ಸಜ್ಜುಗೊಂಡಿದೆ.

ಮಾ.21ರಂದು ನಡೆದ ಮುಖ್ಯ ಪರೀಕ್ಷೆ, ಮಾ.31ರಂದು ನಡೆಯಬೇಕಿದ್ದ ಮರುಪರೀಕ್ಷೆಯ ಎರಡೂ ಪತ್ರಿಕೆಗಳು ಸೋರಿಕೆಯಾಗುವ ಮೂಲಕ ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆಯ ಕಾರ್ಯ ವೈಖರಿ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಸರ್ಕಾರ ಹಾಗೂ ಸಚಿವ ಕಿಮ್ಮನೆ ರತ್ನಾಕರ್‌ ಮುಖಭಂಗ ಅನುಭವಿಸಿದರೆ, ವಿದ್ಯಾರ್ಥಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದರು.ಮೂರನೇ ಸಲವೂ ಪ್ರಶ್ನೆಪತ್ರಿಕೆ ಸೋರಿಕೆಯಾದರೆ ತಾವು ರಾಜೀನಾಮೆ ನೀಡುವುದಾಗಿ ಕಿಮ್ಮನೆ ರತ್ನಾಕರ್‌ ಘೋಷಿಸಿದ್ದಾರೆ. ಹೀಗಾಗಿ ಸೋರಿಕೆಯಾಗದಂತೆ ತಡೆಯುವುದನ್ನು ಇಲಾಖೆ ಸವಾಲಾಗಿ ಸ್ವೀಕರಿಸಿ ಹಲವು ಕ್ರಮ ಕೈಗೊಂಡಿದೆ.

ಏನು ಮುಂಜಾಗ್ರತೆ?: ಯಾವುದೇ ರೀತಿಯಲ್ಲೂ ಸೋರಿಕೆಗೆ ಅವಕಾಶ ನೀಡದೆ, ಒಂದು ವೇಳೆ ಸೋರಿಕೆಯಾದರೂ ಪರೀಕ್ಷೆ ಮುಂದೂಡದಂತೆ ಎಚ್ಚರವಹಿಸಲು ಮೊದಲ ಬಾರಿಗೆ ಆರು ಮಾದರಿಯ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಲಾಗಿದೆ. ಈ ಆರೂ ಮಾದರಿಯ ಪ್ರಶ್ನೆಪತ್ರಿಕೆಗಳನ್ನು ಜಿಲ್ಲಾ ಖಜಾನೆಗಳಿಗೆ ರವಾನಿಸಲಾಗುತ್ತದೆ.ಅಂತಿಮ ಕ್ಷಣದಲ್ಲಿ ಪರೀಕ್ಷೆ ಉಸ್ತುವಾರಿ ಹೊತ್ತಿರುವ ಮೂರು ಮಂದಿ ಐಎಎಸ್‌ ಅಧಿಕಾರಿಗಳ ತಂಡವು ಯಾವ ಪತ್ರಿಕೆಯನ್ನು ಪರೀಕ್ಷಾ ಕೇಂದ್ರಗಳಿಗೆ ರವಾನಿಸಬೇಕು ಎಂಬ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸಂದೇಶ ರವಾನಿಸುತ್ತದೆ. ಆ ಪ್ರಕಾರ ಪ್ರಶ್ನೆಪತ್ರಿಕೆ ನೀಡಲಾಗುತ್ತದೆ.

ಇಂದು ನಡೆಯುತ್ತಿರುವ ಮರು ಪರೀಕ್ಷೆಯಲ್ಲಿ ರಾಜ್ಯಾದ್ಯಂತ 1.74 ಲಕ್ಷ ಮಂದಿ ವಿದ್ಯಾರ್ಥಿಗಳು ಮರು ಪರೀಕ್ಷೆ ಬರೆಯುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com