ಬೃಹತ್ ಬೆಂಗಳೂರು ಪಾಲಿಕೆಗೆ ಕಸದ್ದೇ ದೊಡ್ಡ ಸಮಸ್ಯೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ನಗರದ ತ್ಯಾಜ್ಯವನ್ನು ಹಾಕಲು ಎಲ್ಲಿಯೂ ಸರಿಯಾದ ಜಾಗ ಸಿಗುತ್ತಿಲ್ಲ. ಹೀಗಾಗಿ ಕಸ ವಿಲೇವಾರಿಯೇ ದೊಡ್ಡ .,..
ಕಸದ ರಾಶಿ
ಕಸದ ರಾಶಿ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ನಗರದ ತ್ಯಾಜ್ಯವನ್ನು ಹಾಕಲು ಎಲ್ಲಿಯೂ ಸರಿಯಾದ ಜಾಗ ಸಿಗುತ್ತಿಲ್ಲ.  ಹೀಗಾಗಿ ಕಸ ವಿಲೇವಾರಿಯೇ ದೊಡ್ಡ ತಲೆನೋವಾಗಿ ಪರಿಣಮಸಿದೆ. ಕಸ ಹಾಕಲು ಅಧಿಕಾರಿಗಳು  ಸ್ಥಳ ಪರಿಶೀಲನೆಗೆ ಗ್ರಾಮಸ್ಥರ ಆಕ್ರೋಶಕ್ಕೆ ಗುರಿಯಾಗಿ ವಾಪಸ್ ಬರುತ್ತಿದ್ದಾರೆ.

ನಗರದ ತ್ಯಾಜ್ಯ ಸುರಿಯಲು  ಕೋಲಾರದ ಕೆಜಿಎಫ್ ನಲ್ಲಿ ಸ್ಥಳ ಗುರುತಿಸಿದ್ದ ಅಧಿಕಾರಿಗಳಿಗೆ ಅಲ್ಲಿಯ ಗ್ರಾಮಸ್ಥರಿಂದ ಮತ್ತದೇ ಪ್ರತಿಕ್ರಿಯೆ ವ್ಯಕ್ತವಾಗಿದೆ. 2012 ರಲ್ಲಿ ಮಾವಳ್ಳಿಪುರ ನಿವಾಸಿಗಳು ತಮ್ಮ ಗ್ರಾಮದಲ್ಲಿ ಕಸ ಹಾಕದಂತೆ ನಡೆಸಿದ ಹೋರಾಟದಿಂದ ಆರಂಭವಾದ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ.

ನಂತರ ಮಾವಳ್ಳಿಪುರ ಬಿಟ್ಟು ಮಂಡೂರಿನಲ್ಲಿ ತ್ಯಾಜ್ಯ ವಿಲೇವಾರಿ ಘಟಕವನ್ನು ಗುರುತಿಸಲಾಯಿತು. ಅಲ್ಲಿನ ನಿವಾಸಿಗಳು ತ್ಯಾಜ್ಯ ಸುರಿಯುವುದನ್ನು ಆಕ್ಷೇಪಿಸಿ ನಡೆಸಿದ ಪ್ರತಿಭಟನೆ ಅತಿರೇಕ ತಲುಪಿದಾಗ ಸಿಎಂ ಸಿದ್ದರಾಮಯ್ಯ 2014 ರಲ್ಲಿ ಮಂಡೂರಿನಲ್ಲಿ ತ್ಯಾಜ್ಯ ಸುರಿಯದಂತೆ ಸೂಚನೆ ನೀಡಿದರು.

2013 ರಲ್ಲಿ  ತುಮಕೂರಿನ ಕೊರಟಗೆರೆ ತಾಲೂಕಿನ ತೊಗರಿಘಟ್ಟ ಎಂಬ ಹಳ್ಳಿಯಲ್ಲಿ ತ್ಯಾಜ್ಯ ವಿಲೇವಾರಿವಾಗಿ ಬಿಬಿಎಂಪಿ ಸುಮಾರು 600 ಎಕರೆ ಜಾಗವನ್ನು ಗುರುತಿಸಿತ್ತು. ಅಲ್ಲಿನ ರೈತರು ನಡೆಸಿದ ನಿರಂತರ ಪ್ರತಿಭಟನೆಯಿಂದ ಅಲ್ಲಿಂದಲೂ ಸಹ ಬಿಬಿಎಂಪಿ ಕಾಲ್ತೆಗೆಯಿತು.

ಮಂಡೂರಿನಲ್ಲಿ ತ್ಯಾಜ್ಯ ವಿಲೇವಾರಿಗೆ ಸ್ಥಳೀಯರು ಅವಕಾಶ ಮಾಡಿಕೊಡದ ಕಾರಣ ರಾಮನಗರ ಜಿಲ್ಲೆಯ ಗೊರೂರಿನಲ್ಲಿ ಕಸ ಹಾಕಲು ಸಿಎಂ ಸಿದ್ದರಾಮಯ್ಯ 2014 ರಲ್ಲಿ ಯೋಜನೆ ರೂಪಿಸಿದರು. ಆದರೆ ಅಲ್ಲಿಯೂ ಅದೇ ಪ್ರತಿಭಟನೆ ಹೋರಾಟ ಪುನಾರಾವರ್ತಿತವಾದ ಹಿನ್ನೆಲೆಯಲ್ಲಿ ಗೊರೂರಿನಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸುವುದನ್ನು ಸರ್ಕಾರ ಕೈ ಬಿಟ್ಟಿತು.

ಇನ್ನೂ ದೊಡ್ಡಾಬಳ್ಳಾಪುರದಲ್ಲಿರುವ ಟೆರ್ರಾ ಫಾರ್ಮ ಘಟಕ ಪ್ರತಿನಿತ್ಯ ಸಾವಿರ ಟನ್ ಗಳಷ್ಟು ತ್ಯಾಜ್ಯವನ್ನು ಹೊರ ಹಾಕುತ್ತಿದೆ ಎಂದು ಆರೋಪಿಸಿ ಅಲ್ಲಿನ ನಿವಾಸಿಗಳು ನಡೆಸಿದ ಪ್ರತಿಭಟನೆಯಿಂದ ಟೆರ್ರಾ ಫಾರ್ಮವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.

ಹೀಗಾಗಿ ಬೆಂಗಳೂರಿನಿಂದ 100 ಕಿಮೀ ದೂರದಲ್ಲಿ ಸುಮಾರು 100 ಎಕರೆ ಜಾಗವನ್ನು ಹುಡುಕುತ್ತಿದ್ದು, ಶೀಘ್ರವೇ ಅಲ್ಲಿ ಕಸ ವಿಲೇವಾರಿ ಘಟಕ ನಿರ್ಮಿಸುವುದಾಗಿ ಬಿಬಿಎಂಪಿ ಆಯುಕ್ತ ಜಿ. ಕುಮಾರ್ ನಾಯಕ್ ಹೇಳಿದ್ದಾರೆ. ನಾವು ಕಸವನ್ನು ಬೇಕಾಬಿಟ್ಟಿ ಹಾಕುವುದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ವೈಜ್ಞಾನಿಕ ವಿಧಾನದಲ್ಲಿಯೇ ತ್ಯಾಜ್ಯ ವಿಲೇವಾರಿ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ.

ಇನ್ನೂ ಕೋಲಾರದ ಕೆಜಿಎಫ್ ನಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸುತ್ತಿರುವದಕ್ಕೆ ಸಂಸದ ಕೆ.ಎಚ್ ಮುನಿಯಪ್ಪ ವಿರೋಧ ವ್ಯಕ್ತ ಪಡಿಸಿದ್ದಾರೆ. ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಅವರನ್ನು ಭೇಟಿಯಾಗಿ ಅಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸದಂತೆ ಮನವಿ ಸಲ್ಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com