ಮಹಿಳೆಗೆ ಆಪತ್ತು ತಂದ ವಿಎಲ್ ಸಿಸಿ ಪ್ಯಾಕೇಜ್: ಮರುಪಾವತಿಗೆ ಗ್ರಾಹಕ ನ್ಯಾಯಾಲಯ ಆದೇಶ

ದೇಹ ಸೌಂದರ್ಯ ಮತ್ತು ತೂಕ ಇಳಿಕೆಯ ಹೆಲ್ತ್ ಪ್ಯಾಕೇಜನ್ನು ಪಡೆದು ಮೋಸ ಹೋದ ಮಹಿಳೆಗೆ ಹಣ ಮರುಪಾವತಿ ಮಾಡುವಂತೆ ವಿಎಲ್ ಸಿಸಿ ಕಂಪೆನಿಗೆ...
ವಿಎಲ್ ಸಿಸಿ ಕಂಪೆನಿಯ ಚಿತ್ರ
ವಿಎಲ್ ಸಿಸಿ ಕಂಪೆನಿಯ ಚಿತ್ರ

ಬೆಂಗಳೂರು: ದೇಹ ಸೌಂದರ್ಯ ಮತ್ತು ತೂಕ ಇಳಿಕೆಯ ಹೆಲ್ತ್ ಪ್ಯಾಕೇಜನ್ನು ಪಡೆದು ಮೋಸ ಹೋದ ಮಹಿಳೆಗೆ ಹಣ ಮರುಪಾವತಿ ಮಾಡುವಂತೆ ವಿಎಲ್ ಸಿಸಿ ಕಂಪೆನಿಗೆ ಗ್ರಾಹಕ ನ್ಯಾಯಾಲಯ ಆದೇಶ ನೀಡಿದೆ. ಅಲ್ಲದೆ ದಾವೆ ವೆಚ್ಚ ಹಾಗೂ ಪರಿಹಾರ ನೀಡುವಂತೆ ಬೆಂಗಳೂರು ಗ್ರಾಹಕ ಕುಂದುಕೊರತೆ ನಿವಾರಣಾ ವೇದಿಕೆ ವಿಎಲ್ ಸಿಸಿ ಹೆಲ್ತ್ ಕೇರ್ ಲಿ.ಗೆ ಸೂಚನೆ ನೀಡಿದೆ.

ಬೆಂಗಳೂರಿನ ಪಾಂಡುರಂಗನಗರದ ನಿವಾಸಿಯಾದ ಅಶ್ವಿನಿ ಅಂಜನಪ್ಪ ಅವರು ವಿಎಲ್ ಸಿಸಿಗೆ ನೀಡಿದ್ದ ಹಣ ವಾಪಾಸು ಸಿಗದಿದ್ದಾಗ ಕೋರ್ಟ್ ಗೆ ಹೋಗಿದ್ದರು. ನ್ಯಾಯಮೂರ್ತಿ ಪಿ.ವಿ.ಸಿಂಗ್ರಿ ಮತ್ತು ಸದಸ್ಯರಾದ ಯಶೋಧಮ್ಮ ಹಾಗೂ ಪಿ.ಕೆ. ಶಾಂತ ಅವರನ್ನೊಳಗೊಂಡ ವೇದಿಕೆ, ಇನ್ನು 6 ವಾರಗಳೊಳಗೆ ಅಶ್ವಿನಿಯವರ 63 ಸಾವಿರ ರೂಪಾಯಿಗಳನ್ನು ಹಿಂತಿರುಗಿಸುವಂತೆ ಮತ್ತು 5 ಸಾವಿರ ರೂಪಾಯಿ ಪರಿಹಾರ ಹಾಗೂ ಇನ್ನು 5 ಸಾವಿರ ರೂಪಾಯಿ ದಾವೆ ವೆಚ್ಚವನ್ನು ಭರಿಸುವಂತೆ ಆದೇಶ ನೀಡಿದೆ.

ಹಿನ್ನಲೆ: 2013, ಜೂನ್ 29ರಂದು ಅಶ್ವಿನಿಯವರು ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಆರೋಗ್ಯ ಮತ್ತು ಸೌಂದರ್ಯ ಚಿಕಿತ್ಸೆ ಸೇವೆ ಒದಗಿಸುವ ವಿಎಲ್ ಸಿಸಿ ಕಂಪೆನಿಗೆ ಭೇಟಿ ನೀಡಿದ್ದರು. ಕಂಪೆನಿಯವರು ಅವರನ್ನು ಫಿಸಿಯೋಥೆರಪಿಸ್ಟ್, ಡಯಟಿಷಿಯನ್ ಹತ್ತಿರ ಕರೆದುಕೊಂಡು ಹೋಗಿದ್ದರು. ಆಗ ಅವರು ಚಿಕಿತ್ಸೆಯ ಪ್ಯಾಕೇಜ್ ನೀಡಿದ್ದರು. 5 ಕೆ.ಜಿ ದೇಹ ತೂಕ ಕಳೆದುಕೊಳ್ಳಲು ಮತ್ತು ದೇಹವನ್ನು ಆಕರ್ಷಕಗೊಳಿಸಲು ಅಶ್ವಿನಿಯವರಿಗೆ 66 ಸಾವಿರದ 264 ರೂಪಾಯಿ 31 ಪೈಸೆಯ ಪ್ಯಾಕೇಜ್ ನೀಡಲಾಗಿತ್ತು. ಸಂಪೂರ್ಣ ಮೊತ್ತ ಕಟ್ಟಿ ಪ್ಯಾಕೇಜ್ ನ್ನು ಪಡೆದಿದ್ದರು. 90 ದಿನಗಳ ಚಿಕಿತ್ಸೆ ಅದಾಗಿತ್ತು. ಅದು ದೇಹದ ತೂಕವನ್ನು ಕಡಿಮೆ ಮಾಡಿ ಆಕರ್ಷಕಗೊಳಿಸುವುದಾಗಿತ್ತು.

ಸರಿ, ಚಿಕಿತ್ಸೆ ಆರಂಭವಾಯಿತು. ಮುಖಕ್ಕೆ ಒಂದು ಗಂಟೆಯ ವಿಟ್ರಾನ್-ಸಿಟಿಸಿ ಸೆಷನ್ ಮಾಡಲಾಯಿತು. ಚರ್ಮವನ್ನು ಬಿಗಿಗೊಳಿಸಿ ದೇಹದ ಕಾಂತಿಯನ್ನು ಹೆಚ್ಚಿಸಿ ತೂಕವನ್ನು ಕಳೆದುಕೊಳ್ಳಲಿರುವ ಚಿಕಿತ್ಸೆ ಇದು ಎಂದು ಕಂಪೆನಿ ಹೇಳಿತ್ತು. ಅಶ್ವಿನಿಯವರು ಚಿಕಿತ್ಸೆ ತೆಗೆದುಕೊಂಡು ಮನೆಗೆ ಬಂದ ನಂತರ ರಾತ್ರಿ ತಲೆ ಸುತ್ತುವುದು, ವಾಕರಿಕೆ ಬರುವುದು, ಮುಖದಲ್ಲಿ ತುರಿಕೆ ಉಂಟಾಯಿತು. ಪ್ಯಾಕೇಜ್ ತಮಗೆ ಹೊಂದಿಕೆಯಾಗುವುದಿಲ್ಲವೆಂದು ಮನವರಿಕೆಯಾಯಿತು.

ಹಣ ಕೊಟ್ಟ ಮೂರನೇ ದಿನ ಹೆಲ್ತ್ ಕೇರ್ ಗೆ ಹೋದ ಅಶ್ವಿನಿ ತಮ್ಮ ಸಮಸ್ಯೆ ಹೇಳಿಕೊಂಡು ತಮ್ಮ ದೇಹಕ್ಕೆ ಚಿಕಿತ್ಸೆ ಹೊಂದಿಕೆಯಾಗುವುದಿಲ್ಲ, ಹಣ ವಾಪಸ್ಸು ನೀಡಿ ಎಂದು ಕೇಳಿದ್ದಾರೆ. ಕಂಪೆನಿ ಹಣ ನೀಡಲು ಒಪ್ಪಲಿಲ್ಲ. ಬದಲಾಗಿ ಬೇರೆ ಸೌಂದರ್ಯವರ್ಧಕ ಬಳಸುವಂತೆ ಸಲಹೆ ನೀಡಿತು. ಆಗ ಅಶ್ವಿನಿ ತಮ್ಮ ಹಣ ವಾಪಸ್ಸು ಪಡೆಯಲು ಗ್ರಾಹಕ ನ್ಯಾಯಾಲಯಕ್ಕೆ ಮೊರೆ ಹೋದರು. ಅಲ್ಲಿ ಅವರಿಗೆ ನ್ಯಾಯ ಸಿಕ್ಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com