

ಧಾರವಾಡ: ಕರ್ನಾಟಕದಲ್ಲಿ ಉಷ್ಣಾಂಶ ಹೆಚ್ಚಳದಿಂದಾಗಿ ಕುಡಿಯಲು ನೀರು ಸಿಗದಂತಹ ಪರಿಸ್ಥಿತಿಯಲ್ಲಿ ಧಾರವಾಡದಲ್ಲಿ ರೈತನೊಬ್ಬ ತನ್ನ ಸ್ವಂತ ಖರ್ಚಿನಲ್ಲಿ ಕೆರೆ ನೀರು ತುಂಬಿಸಿ ಹೃದಯ ವೈಶಾಲ್ಯ ಮೆರೆದಿದ್ದಾನೆ.
ಧಾರವಾಡದ ನರೇಂದ್ರ ಗ್ರಾಮದ ನಿಂಗಪ್ಪ ಬಸಪ್ಪ ದೊಡ್ಡವಾಡ್ ಬತ್ತಿ ಹೋಗಿದ್ದ ತಮ್ಮ ಊರಿನ ಕ್ಯಾಮಟ್ಟೊ ಕೆರೆಯನ್ನು ತುಂಬಿಸಿದ್ದು, ಇದೀಗ ಸ್ಥಳೀಯರು ತಮ್ಮ ಅವಶ್ಯಕತೆಗಳಿಗೆ ನೀರನ್ನು ಬಳಸುತ್ತಿದ್ದಾರೆ.
ಸಣ್ಣ ರೈತನಾಗಿರುವ ನಿಂಗಪ್ಪ ಕಳೆದ 10 ವರ್ಷಗಳಿಂದ ಆರು ಎಕರೆ ಜಮೀನಿನಲ್ಲಿ ಸಾಗುವಳಿ ಮಾಡುತ್ತಾ ಬಂದಿದ್ದಾರೆ. ಉಷ್ಣಾಂಶ ಹೆಚ್ಚಳಕ್ಕೂ ಮುನ್ನ ತಮ್ಮ ಜಮೀನಿನಲ್ಲಿ ಬೋರ್ ವೆಲ್ ವೊಂದನ್ನು ಕೊರೆಸಿದ್ದರು. ಚೆನ್ನಾಗಿ ನೀರು ಸಿಕ್ಕಿದ್ದರಿಂದ ನಿಂಗಪ್ಪ ಕೆರೆ ನೀರು ತುಂಬಿಸಿದ್ದಾರೆ. ಇದಕ್ಕೆ ಗ್ರಾಮ ಪಂಚಾಯತ್ ಸಹ ಕೈಜೋಡಿಸಿದ್ದು, ನಿಂಗಪ್ಪನ ನಿಸ್ವಾರ್ಥ ಕೆಲಸಕ್ಕೆ ಗ್ರಾಮಸ್ಥರು ಸಂಭ್ರಮಿಸಿದ್ದಾರೆ.
ನರೇಂದ್ರ ಗ್ರಾಮದಲ್ಲಿ ಸುಮಾರು 15 ಸಾವಿರ ಜನಸಂಖ್ಯೆ ಇದ್ದು, ಸುಮಾರು 17 ಬೋರ್ ವೆಲ್ ಗಳು ಕೆಲಸ ಮಾಡುತ್ತಿದ್ದು, ಎಲ್ಲರಿಗೂ ನೀರು ಹೊಂದಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ್ ತಿರ್ಲಾಪುರ್ ತಿಳಿಸಿದ್ದಾರೆ.
ನೀರಿಲ್ಲದೆ ಕೆರೆ ಒಣಗಿದ್ದರಿಂದ ಹಳ್ಳಿಯ ಜನರು ಹಾಗೂ ದನಕರುಗಳು ನೀರಿಲ್ಲದೆ ಓದ್ದಾಡುತ್ತಿರುವುದನ್ನು ಕಂಡು ವಿಚಲಿತನಾದೆ. ಹೀಗಾಗಿ ಕೆರೆಗೆ ನೀರು ತುಂಬಿಸುವ ಸಂಬಂಧ ಸ್ಥಳೀಯ ರೈತರ ಜತೆ ಚರ್ಚಿಸಿ ಈ ತೀರ್ಮಾನ ಕೈಗೊಂಡೆ ನನ್ನ ಕೆಲಸಕ್ಕೆ ಗ್ರಾಮ ಪಂಚಾಯತ್ ಸಹ ಕೈ ಜೋಡಿಸಿತು ಎಂದು ನಿಂಗಪ್ಪ ಹೇಳಿದ್ದಾರೆ.