
ಬೆಂಗಳೂರು: ಶುಕ್ರವಾರದಿಂದ ಆರಂಭವಾಗಲಿರುವ ಶ್ರೀ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ಬೆಂಗಳೂರು ಕರಗ ಉತ್ಸವ ಹಿನ್ನೆಲೆಯಲ್ಲಿ ದೇವಸ್ಥಾನದ ಸುತ್ತಮುತ್ತಲ ರಸ್ತೆಗಳಲ್ಲಿ ಸಂಚಾರ ಮಾರ್ಗವನ್ನು ತಾತ್ಕಾಲಿಕವಾಗಿ ಬದಲಿಸಲಾಗಿದೆ.
ನಗರದ ತಿಗಳರ ಪೇಟೆಯಲ್ಲಿನ ಇತಿಹೀಸ ಪ್ರಸಿದ್ಧ ಶ್ರೀ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ಬೆಂಗಳೂರು ಕರಗ ಮಹೋತ್ಸವ ಇಂದು ಆರಂಭವಾಗಲಿದ್ದು, ರಾತ್ರಿ 12 ಗಂಟೆಗೆ ಕರಗ ಮೆರವಣಿಗೆ ಹೊರಟು ಶನಿವಾರ ಬೆಳಗ್ಗೆ 6ರರವರೆಗೆ ನಗರದ ವಿವಿಧೆಡೆ ಸಂಚರಿಸಲಿದೆ. ಹೀಗಾಗಿ ಕರಸ ಸಾಗುವ ರಸ್ತೆಯಲ್ಲಿ ವಾಹನ ಸಂಚಾರ ಮಾರ್ಗವನ್ನು ತಾತ್ಕಾಲಿಕವಾಗಿ ಮಾರ್ಪಾಡು ಮಾಡಲಾಗಿದೆ.
ಸಿಟಿ ಮಾರುಕಟ್ಟೆಯಿಂದ ಅವೆನ್ಯೂ ರಸ್ತೆ ಮೂಲಕ ಮೈಸೂರು ಬ್ಯಾಂಕ್ ವೃತ್ತವರೆಗೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ಬದಲಿ ಸಂಚಾರಕ್ಕೆ ಎಸ್.ಜೆ.ಪಿ. ರಸ್ತೆ-ಟೌನ್ ಹಾಲ್-ಕೆಂಪೇಗೌಡ ರಸ್ತೆ ಮಾರ್ಗವಾಗಿ ಹೋಗಬಹುದಾಗಿದೆ.
ಅವೆನ್ಯೂ ರಸ್ತೆಯ ಎ.ಎಸ್.ಚಾರ್ ರಸ್ತೆಯಿಂದ ಸಿಟಿ ಮಾರುಕಟ್ಟೆ ವೃತ್ತದ ಕಡೆ ಸಾಗುವ ವಾಹನಗಳು ಮೈಸೂರು ರಸ್ತೆ ಎ.ಎಸ್.ಚಾರ್ ರಸ್ತೆಯಲ್ಲಿ ಬಲ ತಿರುವು ಪಡೆದು ಬ್ರಿಯಾಂಡ್ ವೃತ್ತ-ರಾಯನ್ ವೃತ್ತದ ಮುಖಾಂತರ ಸಂಚರಿಸಬಹುದಾಗಿದೆ. ಮೈಸೂರು ರಸ್ತೆ ಕಡೆಯಿಂದ ಬರುವ ವಾಹನಗಳು ಬ್ರಿಯಾಂಡ್ ವೃತ್ತದಲ್ಲಿ ಬಲ ತಿರುವು ಪಡೆದು ರಾಯನ್ ವೃತ್ತ ಮೆಡಿಕಲ್ ಕಾಲೇಜು ವೃತ್ತದ ಮೂಲಕ ಸಾಗಬಹುದು.
ಇನ್ನು ಬಿವಿಕೆ ಅಯ್ಯಂಗಾರ್ ರಸ್ತೆ ಮೂಲಕ ಮೈಸೂರು ರಸ್ತೆ ಕಡೆಗೆ ಸಂಚರಿಸುವ ವಾಹನಗಳಿಗೆ ಚಿಕ್ಕಪೇಟೆ ವೃತ್ತದಲ್ಲಿ ನಿರ್ಬಂಧಿಸಿದೆ. ಇದರ ಬದಲಿಗೆ ಎ.ಎಸ್.ಚಾರ್ ಸ್ಟ್ರೀಟ್ ನಲ್ಲಿ ಸಂಚಾರ ಅವಕಾಶ ಕಲ್ಪಿಸಲಾಗಿದೆ.
ಕಾಟನ್ ಪೇಟೆ ಮುಖ್ಯರಸ್ತೆಯಲ್ಲಿ ಸಂಚರಿಸುವ ವಾಹನಗಳು ಶಾಂತಲಾ ವೃತ್ತದಲ್ಲಿ ದಿಕ್ಕು ಬದಲಾಯಿಸಿ. ಖೋಡೆ ವೃತ್ತ-ವಾಟಾಳ್ ನಾಗರಾಜ್ ರಸ್ತೆ-ಮೈಸೂರು ಡೀವಿಯೇಷನ್ ರಸ್ತೆ-ಬಿನ್ನಿಮಿಲ್ ರಸ್ತೆ-ಮೈಸೂರು ರಸ್ತೆ ತಲುಪಬಹುದು.
ಕರಗ ಹಿನ್ನೆಲೆ ಪಾರ್ಕಿಂಗ್ ವ್ಯವಸ್ಥೆ
ಬೆಂಗಳೂರು ಕರಗ ಉತ್ಸವ ಹಿನ್ನೆಲೆಯಲ್ಲಿ ಜನತೆಗೆ ಸಹಾಯಕವಾಗುವ ಸಲುವಾಗಿ ಬಿಬಿಎಂಪಿ ಪಾರ್ಕಿಂಗ್ ಗೆ ವ್ಯವಸ್ಥೆಯನ್ನು ಕಲ್ಪಿಸಿದ್ದು, ಬಿಬಿಎಂಪಿ ಪಾರ್ಕಿಂಗ್ ಜೆಸಿ ರಸ್ತೆ, ಕೆಂಪೇಗೌಡ ಮಹಾರಾಜ ಪಾರ್ಕಿಂಗ್ ಕಾಂಪ್ಲೆಕ್ಸ್ - ಕೆ.ಜಿ. ರಸ್ತೆ, ಕೆಂಪೇಗೌಡ ಪಾರ್ಕಿಂಗ್ ಕಾಂಪ್ಲೆಕ್ಸ್- ಮಾಮುಲ್ ಪೇಟೆ ಮುಖ್ಯರಸ್ತೆ ಮತ್ತು ಕೆಂಪೇಗೌಡ ಬಸ್ ನಿಲ್ದಾಣ ಪಾರ್ಕಿಂಗ್ ನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನು ಕರಗ ಹಿನ್ನೆಲೆಯಲ್ಲಿ ಮೆರವಣಿಗೆ ಮಾರ್ಗಗಳನ್ನು ಬಳಸದೆ ಸಾರ್ವಜನಿಕರು ಪರ್ಯಾಯ ರಸ್ತೆಗಳನ್ನು ಬಳಸಿಕೊಳ್ಳುವಂತೆ ಅಧಿಕಾರಿಗಳಿ ಮನವಿ ಮಾಡಿಕೊಂಡಿದ್ದಾರೆ.
Advertisement