ದೇವಾಲಯಗಳಿಗೂ ತಟ್ಟಿದ ಬರದ ಬಿಸಿ: ಕುಕ್ಕೆ ಸುಬ್ರಮಣ್ಯದಲ್ಲಿ ತೀರ್ಥದ ಬಾಟಲ್ ಗಳಿಗೆ ಇಲ್ಲ ನೀರು

ಬೇಸಿಗೆ ರಜೆಯಾದ್ದರಿಂದ ಶಾಲಾ ಕಾಲೇಜುಗಳಿಗೆ ರಜೆ. ಹಾಗಾಗಿ ದೇವಸ್ಥಾನಗಳಲ್ಲಿ ಭಕ್ತಾಧಿಗಳ ಸಂಖ್ಯೆ ಸಹಜವಾಗಿ ಹೆಚ್ಚಿದೆ. ಆದರೆ ಸುಡುವ ಬಿಸಿಲಿನ ತಾಪಕ್ಕೆ ...
ಕುಕ್ಕೆ ಸುಬ್ರಮಣ್ಯ ದೇವಾಲಯ
ಕುಕ್ಕೆ ಸುಬ್ರಮಣ್ಯ ದೇವಾಲಯ

ಮಂಗಳೂರು/ಉಡುಪಿ: ಬೇಸಿಗೆ ರಜೆಯಾದ್ದರಿಂದ ಶಾಲಾ ಕಾಲೇಜುಗಳಿಗೆ ರಜೆ. ಹಾಗಾಗಿ ದೇವಸ್ಥಾನಗಳಲ್ಲಿ ಭಕ್ತಾಧಿಗಳ ಸಂಖ್ಯೆ ಸಹಜವಾಗಿ ಹೆಚ್ಚಿದೆ. ಆದರೆ ಸುಡುವ ಬಿಸಿಲಿನ ತಾಪಕ್ಕೆ ನದಿಗಳು ಹಾಗೂ ಬಾವಿಗಳಲ್ಲಿ ನೀರು ಖಾಲಿಯಾಗಿದೆ.

ಬರದ ಬಿಸಿ ದೇವಾಲಯಗಳಿಗೂ ತಟ್ಟಿದೆ. ರಾಜ್ಯದ ಅತ್ಯಂತ ಶ್ರೀಮಂತ ದೇವರಾದ ಕುಕ್ಕೆ ಕ್ಷೇತ್ರದಲ್ಲಿ ನೀರಿಗೆ ಪರದಾಡುವಂತೆ ಸ್ಥಿತಿ ಎದುರಾಗಿದೆ. ವರ್ಷದ ಹೆಚ್ಚಿನ ಅವಧಿಯಲ್ಲಿ ಮಳೆ ಬೀಳುವ ಖ್ಯಾತಿ ಹೊಂದಿರುವ ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನೀರಿನ ಬರ ಎದುರಾಗಿದೆ. ದೇವಸ್ಥಾನದ ಬಾವಿಯಲ್ಲಿ ನೀರಿನ ಕೊರತೆ ಉಂಟಾಗಿರುವುದರಿಂದ ಬುಧವಾರದಿಂದ ದೇಗುಲದಲ್ಲಿ ಭಕ್ತರಿಗೆ ತೀರ್ಥ ಬಾಟಲಿ ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆ.

ದೇಗುಲದಲ್ಲಿ ದೇವರಿಗೆ ಅಭಿಷೇಕ ಸಲ್ಲಿಸಲು ಹಾಗೂ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲು ದೇವಸ್ಥಾನದ ಬಾವಿಯ ನೀರನ್ನು ಬಳಸಲಾಗುತ್ತದೆ. ಬಾವಿಯ ನೀರು ಹೊರತುಪಡಿಸಿ ಬೇರೆ ಯಾವುದೇ ನೀರನ್ನು ಇದಕ್ಕೆ ಬಳಸುವಂತಿಲ್ಲ. ದೇವಸ್ಥಾನದ ನಿತ್ಯ ಬಳಕೆಯ ಬಾವಿಯು ಬತ್ತಿರುವುದರಿಂದ ನೀರಿನ ಸಮಸ್ಯೆ ಉಂಟಾಗಿದೆ.

ದೇಗುಲದ ಬಾವಿಯಲ್ಲಿ ಈಗ ಲಭ್ಯವಿರುವ ಅಲ್ಪ ಪ್ರಮಾಣದ ನೀರನ್ನು ದೇವರಿಗೆ ಅಭೀಷೇಕ ಮತ್ತು ಕ್ಷೇತ್ರಕ್ಕೆ ಆಗಮಿಸಿದ ಭಕ್ತರಿಗೆ ಕೈಗೆ ತೀರ್ಥವಾಗಿ ನೀಡಲು ಮಾತ್ರ ಬಳಸಲಾಗುತ್ತದೆ. ಬಾಟಲಿಯಲ್ಲಿ ತೀರ್ಥ ಕೊಡುವುದನ್ನು ಸ್ಥಗಿತಗೊಳಿಸಲಾಗಿದೆ. ಕ್ಷೇತ್ರದಲ್ಲಿ ದಿನವೊಂದಕ್ಕೆ ಸುಮಾರು 2000 ತೀರ್ಥದ ಬಾಟಲಿ ವಿತರಣೆಯಾಗುತ್ತದೆ. ಹಬ್ಬದ ದಿನಗಳಲ್ಲಿ 3000 ರಿಂದ 4000 ತನಕವೂ ತೀರ್ಥ ಬಾಟಲಿಗಳು ವಿತರಣೆಯಾಗುತ್ತಿವೆ.

ಇನ್ನು ದೇವಾಲಯಕ್ಕೆ ಬರುವ ಭಕ್ತಾದಿಗಳು ತಂಗುವ ವಸತಿ ಕ್ಷೇತ್ರಗಳಿಗೂ ನೀರಿನ ಅಭಾವ ತಲೆದೋರಿದೆ. ಉಡುಪಿಯ ಶ್ರೀಕೃಷ್ಣ ದೇವಾಲಯ, ಕಟೀಲು ದುರ್ಗಾ ಪರಮೇಶ್ವರಿ ದೇವಾಲಯಗಳಲ್ಲೂ ಸಹ ನೀರಿನ ಸಮಸ್ಯೆ ಬಾಧಿಸತೊಡಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com