ಬೆಂಗಳೂರು ಕರಗ ಉತ್ಸವಕ್ಕೆ ಸಾವಿರಾರು ಭಕ್ತರ ಸಾಕ್ಷಿ

ಬೆಂಗಳೂರು: ನಗರದ ಹೃದಯ ಭಾಗವಾದ ಕೆ.ಅರ್.ಮಾರುಕಟ್ಟೆ, ಅವಿನ್ಯೂ ರಸ್ತೆ, ಕಬ್ಬನ್‌ಪಾರ್ಕ್‌ ಸುತ್ತಮುತ್ತ ಶುಕ್ರವಾರ...
ಬೆಂಗಳೂರು ಕರಗ ಉತ್ಸವಕ್ಕೆ ಸಾವಿರಾರು ಭಕ್ತರ ಸಾಕ್ಷಿ
ಬೆಂಗಳೂರು: ಬೆಂಗಳೂರು: ನಗರದ ಹೃದಯ ಭಾಗವಾದ ಕೆ.ಅರ್.ಮಾರುಕಟ್ಟೆ, ಅವಿನ್ಯೂ ರಸ್ತೆ, ಕಬ್ಬನ್‌ಪಾರ್ಕ್‌ ಸುತ್ತಮುತ್ತ ಶುಕ್ರವಾರ ಮಧ್ಯರಾತ್ರಿ ಜನವೋ ಜನ.. ಗೋವಿಂದಾ...ಗೋವಿಂದಾ... ನಾಮಸ್ಮರಣೆ. ರಾತ್ರಿಯ ತಂಪಿನಲ್ಲಿ ಮಲ್ಲಿಗೆಯ ಕಂಪು ನೆರೆದಿದ್ದ ಸಾವಿರಾರು ಜನರನ್ನು ಅಧ್ಯಾತ್ಮದತ್ತ ಕರೆದೊಯ್ಯುವಂತಿತ್ತು. ಇದು ವಿಶ್ವ ವಿಖ್ಯಾತ ಬೆಂಗಳೂರು ಕರಗ ಉತ್ಸವದ ದೃಶ್ಯ.
 ಹುಣ್ಣಿಮೆ ದಿನ ರಾತ್ರಿ ನಡೆಯುವ ಪ್ರಸಿದ್ಧ ಹೂವಿನ ಕರಗ ಮಹೋತ್ಸವಕ್ಕೆ ಲಕ್ಷಾಂತರ ಮಂದಿ ಸಾಕ್ಷಿಯಾದರು. ಕರಗ ಉತ್ಸವದಲ್ಲಿ ಭಾಗಿಯಾಗಿದ್ದ ಸಾವಿರಾರು ಮಂದಿ ಭಕ್ತಿ ಪರವಶರಾಗಿ ಕೈ ಮುಗಿಯುವುದರ ಮೂಲಕ ಧನ್ಯತೆ ಮೆರೆದರು. ಬೆಂಗಳೂರು ಧರ್ಮರಾಯನ ಕರಗವೆಂದೇ ಪ್ರಖ್ಯಾತಿ ಪಡೆದಿರುವ ಹೂವಿನ ಕರಗ ಸುಂದರ ಲೋಕವನ್ನೇ ಸೃಷ್ಟಿ ಮಾಡಿತ್ತು.
ಮಧ್ಯರಾತ್ರಿಯ ಬೆಳದಿಂಗಳಲ್ಲಿ ಆರಂಭವಾದ ಕರಗವನ್ನು ಸರ್ವಾಲಂಕಾರ ಭೂಷಿತರಾಗಿದ್ದ ಅರ್ಚಕ ಲಕ್ಷ್ಮೀಶ ಹೊತ್ತು ಧರ್ಮರಾಯಸ್ವಾಮಿ ದೇವಾಲಯದ ಗರ್ಭಗುಡಿಯಿಂದ ಹೊರಕ್ಕೆ ಬರುತ್ತಿದ್ದಂತೆ ತಮಟೆ ವಾದನ, ಮಂಗಳ ವಾದ್ಯಗಳು ಮೊಳಗಿದವು. ವೀರಕುಮಾರರು "ಗೋವಿಂದಾ ಗೋವಿಂದಾ' ನಾಮಸ್ಮರಣೆ ಮಾಡುತ್ತ ಖಡ್ಗಗಳನ್ನು ಹಿಡಿದು ಕರಗದದೊಂದಿಗೆ ಹೆಜ್ಜೆ ಹಾಕಿದರು.
ಪ್ರಮುಖ ಸ್ಥಳಗಳಾದ ಅಕ್ಕಿಪೇಟೆ, ಅರಳೇಪೇಟೆ, ಕುಂಬಾರ ಪೇಟೆ, ಗೊಲ್ಲರ ಪೇಟೆ, ತಿಗಳರಪೇಟೆ ಸೇರಿದಂತೆ ನಗರದ ನಾಲ್ಕು ದಿಕ್ಕುಗಳಲ್ಲಿ ಕರಗ ಸಂಚರಿಸಿತು. ಈ ಸಂದರ್ಭದಲ್ಲಿ ಭಕ್ತರು ಪೂಜೆ ಸಲ್ಲಿಸಿದರು. ಕರದ ಉತ್ಸವದ ಅಂಗವಾಗಿ ಧರ್ಮರಾಯಸ್ವಾಮಿ ದೇವಾಲಯದ ಸುತ್ತ ಮುತ್ತ ಜನ ಜಾತ್ರೆ ನೆರೆದಿತ್ತು. ನಂತರ ಕುಲಪುರೋಹಿತರ ಮನೆಯಲ್ಲಿ ಪೂಜೆ ಸ್ವೀಕರಿಸಿ ಸೂರ್ಯೋದಯದ ವೇಳೆಗೆ ಧರ್ಮರಾಯಸ್ವಾಮಿ ದೇವಸ್ಥಾನ ಸೇರಿತು. 
ದ್ರೌಪದಿ ದೇವಿಯ (ಕರಗಕರ್ತರ) ಈ ನಗರ ಪ್ರದಕ್ಷಿಣೆ ನೋಡಲೆಂದೇ ರಾಜ್ಯದ ಮೂಲೆ ಮೂಲೆಯಿಂದ ಜನ ಬಂದು ಸೇರಿದ್ದರು. ಸ್ಥಳೀಯರು ತಮ್ಮ ಮನೆ ಮಹಡಿಗಳನ್ನೇರಿ ಕರಗದ ದರ್ಶನ ಪಡೆದರು.
ಕರಗ ವೀಕ್ಷಿಸಲು ಆಗಮಿಸಿದ್ದ ಜನರ ಕುತೂಹಲ ಸಂಭ್ರಮ ಕರಗದಷ್ಟೇ ವಿಶೇಷವಾಗಿತ್ತು. ಉದ್ದನೆ ಕತ್ತಿ ಹಿಡಿದ ವೀರಕುಮಾರರು ಆಕರ್ಷಣೆಯ ಕೇಂದ್ರವಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com