ಅಕ್ರಮಗಳನ್ನು ಮುಚ್ಚಿಹಾಕಲು ಐಎಎಸ್ ಅಧಿಕಾರಿಯ ವರ್ಗಾವಣೆ: ಜಗದೀಶ್ ಶೆಟ್ಟರ್

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪರ್ಯಾಯ ಸೈಟ್ ಗಳ ಹಂಚಿಕೆಯಲ್ಲಿ ಆಗಿರುವ ಅಕ್ರಮಗಳನ್ನು ಮುಚ್ಚಿಹಾಕಲು...
ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್
ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪರ್ಯಾಯ ಸೈಟ್ ಗಳ ಹಂಚಿಕೆಯಲ್ಲಿ ಆಗಿರುವ ಅಕ್ರಮಗಳನ್ನು ಮುಚ್ಚಿಹಾಕಲು ಹಿರಿಯ ಐಎಎಸ್ ಅಧಿಕಾರಿ ಟಿ.ಎಂ.ವಿಜಯ್ ಭಾಸ್ಕರ್ ಅವರನ್ನು ನಗರಾಭಿವೃದ್ಧಿ ಇಲಾಖೆಯಿಂದ ವರ್ಗಾಯಿಸಲಾಗಿದೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯ್ ಭಾಸ್ಕರ್ ಅವರು ನೇರ ನಡೆ-ನುಡಿ ಮತ್ತು ಪ್ರಾಮಾಣಿಕ ಅಧಿಕಾರಿಯಾಗಿದ್ದು, ಅವರು ನಗರಾಭಿವೃದ್ಧಿ ಇಲಾಖೆಯಲ್ಲೇ ಇರುತ್ತಿದ್ದರೆ ಅನೇಕ ಹಗರಣಗಳು ಮತ್ತು ಭ್ರಷ್ಟ ಅಧಿಕಾರಿಗಳ ವ್ಯವಹಾರಗಳು ಹೊರಗೆ ಬರುತ್ತಿದ್ದವು. ಅದಕ್ಕಾಗಿಯೇ ಅವರನ್ನು ಅಚಾನಕ್ಕಾಗಿ ವರ್ಗಾಯಿಸಲಾಗಿದೆ. ಕಳೆದ ವಾರ ಪರ್ಯಾಯ ಸೈಟ್ ಗಳ ಹಂಚಿಕೆ ವಿಷಯವನ್ನು ನಾನು ಪ್ರಸ್ತಾಪಿಸಿದಾಗ ವಿಜಯ್ ಭಾಸ್ಕರ್ ಅವರು ಅಂತಹ ಸೈಟ್ ಗಳನ್ನು ಹಂಚಿಕೆ ಮಾಡುವುದನ್ನು ರದ್ದುಪಡಿಸುವಂತೆ ಬಿಡಿಎ ಆಯುಕ್ತ ಶ್ಯಾಮ್ ಭಟ್ ಅವರಿಗೆ ಪತ್ರ ಬರೆದಿದ್ದರು ಎಂದರು.

ಅಷ್ಟಲ್ಲದೆ ವಿಜಯ್ ಭಾಸ್ಕರ್,  ನಿವೃತ್ತ ಐಎಎಸ್ ಅಧಿಕಾರಿ ಶಶಿಧರ್ ವರದಿಯನ್ನು ಜಾರಿಗೆ ತರುವಂತೆಯೂ ಕೇಳಿಕೊಂಡಿದ್ದರು. ಇವೆಲ್ಲವುಗಳಿಂದ ಸರ್ಕಾರಕ್ಕೆ ತೊಂದರೆಯಾಗಬಹುದೆಂದು ಮುಖ್ಯಮಂತ್ರಿ ವಿಜಯ್ ಭಾಸ್ಕರ್ ಅವರನ್ನು ವರ್ಗಾಯಿಸಿದ್ದಾರೆ ಎಂದು ಶೆಟ್ಟರ್ ಆರೋಪಿಸಿದ್ದಾರೆ.

ಮುಖ್ಯಮಂತ್ರಿಯವರ ಬರಗಾಲ ಪ್ರವಾಸ ಪ್ರಚಾರ ಗಿಮಿಕ್ ಎಂದು ದೂಷಿಸಿದ ಶೆಟ್ಟರ್, ಸಿಎಂ ಬರಗಾಲಪೀಡಿತ ಜಿಲ್ಲೆಗಳಿಗೆ ದಿಢೀರನೆ ಭೇಟಿ ನೀಡಿ ಅಲ್ಲಿಂದ ಹೋಗುವುದರಿಂದ ಜನರ ಸಮಸ್ಯೆ ಬಗೆಹರಿಯುವುದಿಲ್ಲ. ಬರಗಾಲ ಪರಿಹಾರ ಕೆಲಸಗಳನ್ನು ಕೈಗೊಳ್ಳುವಲ್ಲಿ ಅಧಿಕಾರಿಗಳು ಮತ್ತು ಸಚಿವರು ತೀವ್ರ ಆಸಕ್ತಿ ಹೊಂದಿಲ್ಲ ಎಂದು ದೂರಿದರು. ಅಲ್ಲದೆ ಈಶಾನ್ಯ ರಸ್ತೆ ಸಾರಿಗೆ ನಿಗಮ ಉತ್ತರ ಕರ್ನಾಟಕದಿಂದ ಮತ್ತು ಹೈದರಾಬಾದ್ ಕರ್ನಾಟಕ ಭಾಗಗಳಿಂದ ಗುಳೆ ಹೊರಟವರಿಗೆ ಟಿಕೆಟ್ ದರದಲ್ಲಿ ವಿನಾಯಿತಿ ನೀಡಿರುವುದನ್ನು ಟೀಕಿಸಿದರು. ವಲಸೆ ಹೋಗುವ ಜನರಿಗೆ ಅವರ ಊರಿನಲ್ಲಿಯೇ ಪರ್ಯಾಯ ಉದ್ಯೋಗ ಕಲ್ಪಿಸುವ ಬದಲು ಬೇರೆ ಊರುಗಳಿಗೆ ವಲಸೆ ಹೋಗಲು ಪ್ರೋತ್ಸಾಹಿಸುವುದು ಒಳ್ಳೆಯದಲ್ಲ ಎಂದು ಟೀಕಿಸಿದರು.

ಬರಗಾಲ ಪೀಡಿತ ಜಿಲ್ಲೆಗಳ ಪುನರ್ವಸತಿ ಕಾರ್ಯಕ್ಕೆ ತಲಾ 10 ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆಯೂ ಜಗದೀಶ್ ಶೆಟ್ಟರ್ ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com