ಬೆಳೆದು ನಿಂತ ಮಕ್ಕಳು ತಮ್ಮ ಕಣ್ಣೆದುರೇ ಅಗಲಿ ಹೋಗುವ ಸ್ಥಿತಿ ಯಾವ ತಂದೆ-ತಾಯಿಗೂ ಬಾರದಿರಲಿ-ಸಿಎಂ ನೋವಿನ ನುಡಿ

ಸಿಎಂ ಸಿದ್ದರಾಮಯ್ಯ ಅವರ ಪ್ರೀತಿಯ ಪುತ್ರ ರಾಕೇಶ್‌ ಈಗ ನೆನಪು ಮಾತ್ರ. ಅವರ ಅಗಲಿಕೆ ಬಳಿಕ ತಮಗಾದ ನೋವು ಹಂಚಿಕೊಂಡಿರುವ ಸಿಎಂ, ಕಷ್ಟ
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಪ್ರೀತಿಯ ಪುತ್ರ ರಾಕೇಶ್‌ ಈಗ ನೆನಪು ಮಾತ್ರ. ಅವರ ಅಗಲಿಕೆ ಬಳಿಕ ತಮಗಾದ ನೋವು ಹಂಚಿಕೊಂಡಿರುವ ಸಿಎಂ, ಕಷ್ಟ ಕಾಲದಲ್ಲಿ ಜನತೆ ತೋರಿದ ಪ್ರೀತಿಗೆ ಮಾಧ್ಯಮ ಪ್ರಕಟಣೆ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.

ನನ್ನ ಹಿರಿಮಗ ರಾಕೇಶ್ ಬೆಲ್ಜಿಯಂ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಹಠಾತ್ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಫಲಕಾಣದೇ ತೀರಿಕೊಂಡದ್ದು ನನಗೆ ಮತ್ತು ನನ್ನ ಕುಟುಂಬವರ್ಗಕ್ಕೆ ಅಪಾರ ದುಃಖವನ್ನುಂಟು ಮಾಡಿದೆ. ರಾಕೇಶ್ ತನ್ನ ಪತ್ನಿ, ಇಬ್ಬರು ಮಕ್ಕಳು ಕುಟುಂಬಸ್ಥರನ್ನು ಮಾತ್ರವಲ್ಲ ಅವನನ್ನು ಪ್ರೀತಿಸುತ್ತಿದ್ದ ಲಕ್ಷಾಂತರ ಹಿತೈಷಿಗಳನ್ನು ಅಗಲಿಹೋಗಿದ್ದಾನೆ. ನಮ್ಮ ಕುಟುಂಬಕ್ಕೆ ಈ ಆಘಾತದಿಂದ ಹೊರಬರಲು ಬಹಳ ಕಾಲವೇ ಬೇಕಾಗಬಹುದು. ವೈಯಕ್ತಿಕವಾಗಿ ನನಗೆ ನನ್ನ ಮಗ ರಾಕೇಶನ ಅಗಲಿಕೆಯನ್ನು ಸಹಿಸಿಕೊಳ್ಳಲು ಅತ್ಯಂತ ಕಷ್ಟವಾಗಿದೆ.

ರಾಕೇಶ‍‍ ನನ್ನು ದೂರದ ಬೆಲ್ಜಿಯಂ ದೇಶದ ಬ್ರಸೆಲ್ಸ್ ನ ಯೂನಿವರ್ಟಿಸಿ ಹಾಸ್ಪಿಟಲ್ ನಲ್ಲಿ ತೀವ್ರನಿಘಾ ಘಟಕದಲ್ಲಿ ನಾವು ಆರೈಕೆ ಮಾಡುತ್ತಿದ್ದಾಗ  ರಾಜ್ಯದ ಜನತೆ ಜಾತಿ,ಧರ್ಮ,ಪಕ್ಷ, ಪಂಥ ಎಂಬ ಭೇದ ಮಾಡದೆ ಒಳ್ಳೆಯದಾಗಲಿ ಎಂದು ಮನದುಂಬಿ ಹಾರೈಸಿದ್ದಾರೆ. ನಮ್ಮ ಕುಟುಂಬ ಕಡುದು:ಖದಲ್ಲಿರುವಾಗ ನಾಡಿನ ಜನತೆ ತೋರಿದ ಪ್ರೀತಿ, ಕಾಳಜಿ ಮತ್ತು ನೀಡಿದ ಮಾನಸಿಕ ಸ್ಥೈರ್ಯ ನನ್ನನ್ನು ಮೂಕನನ್ನಾಗಿ ಮಾಡಿದೆ . ಹಲವಾರು ಹಿತೈಷಿಗಳು ಮಂದಿರ,ಮಸೀದಿ, ಚರ್ಚುಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿರುವುದು ನನ್ನ ಗಮನಕ್ಕೆ ಬಂದಿದೆ. ಇಡೀ ಕರ್ನಾಟಕದ ಜನತೆಯನ್ನು ನನ್ನ ಕುಟುಂಬವೆಂದು ಬಗೆದಿರುವ ನನ್ನನ್ನು ಮತ್ತು ನನ್ನ ಕುಟುಂಬವನ್ನು ತಮ್ಮ ಕುಟುಂಬದ ಭಾಗವೆಂಬಂತೆ ಕಾಳಜಿ ತೋರಿದ ರಾಜ್ಯದ ಸಹೃದಯಿಗಳ ಈ ಪ್ರೀತಿಯನ್ನು ನಾನೆಂದೂ ಮರೆಯಲಾರೆ.

ಕರ್ನಾಟಕದ ಮುಖ್ಯಮಂತ್ರಿಯೊಬ್ಬರು ಹೀಗೆ ಆಸ್ಪತ್ರೆಯಲ್ಲಿ ತಮ್ಮ ಮಗನ ಆರೈಕೆಯಲ್ಲಿದ್ದಾರೆ ಎಂಬ ಸುದ್ದಿ ತಿಳಿದೊಡನೆಯೇ ವಿಜೇಂದ್ರ ಎಂಬ ಬೆಂಗಳೂರು ಮೂಲದ ಬೆಲ್ಜಿಯಂ ನಿವಾಸಿ ಯುವಕ ಮತ್ತು ಅವರ ಪತ್ನಿ ತಾವಾಗಿ ಬಂದು ನಮಗೆ ನೀಡಿದ ನೆರವನ್ನು ನಾನು ಮರೆಯಲಾರೆ. ಅವರು ತಮ್ಮ ಮನೆಯಿಂದ ಅಡುಗೆಯನ್ನು ಸಹ ಮಾಡಿಕೊಂಡು ಬಂದು ನಮಗೆ ನೀಡುತ್ತಿದ್ದುದು ನನಗೆ ಹೃದಯ ತುಂಬಿ ಬಂದ ಕ್ಷಣವಾಗಿತ್ತು. ವಿಜೇಂದ್ರ ಅವರ ಈ ಅಭಿಮಾನ - ಪ್ರೀತಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ.

ಬೆಳೆದು ನಿಂತ ಮಕ್ಕಳು ತಮ್ಮ ಕಣ್ಣೆದುರೇ ಅಗಲಿ ಹೋಗುವ ಸ್ಥಿತಿ ಯಾವ ತಂದೆ-ತಾಯಿಗೂ ಬಾರದಿರಲಿ ಎನ್ನುವುದಷ್ಟೇ ನನ್ನ ಪ್ರಾರ್ಥನೆ ಎಂದು ಸಿಎಂ ಸಿದ್ದರಾಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com