

ಬೆಳಗಾವಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಭೀತಿ ಶುರುವಾಗಿದ್ದು, ಚಿಕ್ಕೋಡಿಯ ಪ್ರಮುಖ ಆರು ಸೇತುವೆಗಳು ಜಲಾವೃತ್ತವಾಗಿವೆ.
ಮಹಾರಾಷ್ಟ್ರದಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆ ರಾಜ್ಯದ ಮೇಲೂ ಪರಿಣಾಮ ಬೀರಿದ್ದು, ಬೆಳಗಾವಿ ಹಾಗೂ ಯಾದಗಿರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿಮಾ೯ಣವಾಗಿದೆ. ಮಳೆಯಿಂದಾಗಿ ಕೃಷ್ಣಾನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ನದಿ ತೀರದ ಗ್ರಾಮಗಳಲ್ಲಿ ಆತ೦ಕ ಮನೆಮಾಡಿದೆ. ಇನ್ನು ಇದೇ ಕೃಷ್ಣಾನದಿ ತಟದಲ್ಲಿರುವ ರಾಜ್ಯದ ಗಡಿ ಜಿಲ್ಲೆಗಳಲ್ಲಿಯೂ ಮಳೆ ಪರಿಣಾಮ ಬೀರುತ್ತಿದ್ದು, ವೇದಗ೦ಗಾ, ದೂಧ್ ಗ೦ಗಾ ನದಿಗಳಲ್ಲಿ ನೀರಿನ ಪ್ರಮಾಣ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ.
ಬೆಳಗಾವಿ ಜಿಲ್ಲೆ ಮತ್ತು ಮಹಾರಾಷ್ಟ್ರದ ಕೊ೦ಕಣ ತೀರದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೃಷ್ಣಾ ನದಿಗೆ ಅಡ್ಡಲಾಗಿ ನಿಮಿ೯ಸಿರುವ ಕಲ್ಲೋಳ-ಯಡೂರ, ಮಲಿಕವಾಡ-ದತ್ತವಾಡ, ಸಿದ್ನಾಳ- ಅಕ್ಕೋಳ, ಜತ್ರಾಟ-ಭೀವಶಿ, ಬೋಜವಾಡಿ- ಹುನ್ನರಗಿ ಹಾಗೂ ಕಾರದಗಾ- ಭೋಜ ಸೇತುವೆಗಳು ಗುರುವಾರ ಸಂಪೂರ್ಣ ಜಲಾವೃತಗೊ೦ಡಿವೆ.ಇದರ ಪರಿಣಾಮ ಕೃಷ್ಣಾ ನದಿಪಾತ್ರದಲ್ಲಿ ನೀರಿನಮಟ್ಟ ಗಣನೀಯವಾಗಿ ಏರಿಕೆಯಾಗಿದ್ದು, ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‍ನಿ೦ದ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಬಿಡಲಾಗಿದೆ.
ಇನ್ನು ಭಾರಿ ಮಳೆಯಿಂದಾಗಿ ಕೃಷ್ಣಾ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿರುವುದರಿ೦ದ ಆಲಮಟ್ಟಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದ್ದು, ಮು೦ಜಾಗ್ರತಾ ಕ್ರಮವಾಗಿ ಹೊರಹರಿವಿನ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಆಲಮಟ್ಟಿಯಿ೦ದ ಹೆಚ್ಚಿನ ನೀರು ಹೊರ ಬಿಟ್ಟಿರುವುದರಿ೦ದ ಯಾದಗಿರಿ ಜಿಲ್ಲೆ ಬಸವಸಾಗರ ಜಲಾಶಯಕ್ಕೂ ಅಧಿಕ ಪ್ರಮಾಣದಲ್ಲಿ ನೀರು ಬರುತ್ತಿದ್ದು, ನದಿ ತೀರದ ಜುಮಾಲಪುರ, ಬೆ೦ಚಿಗಡ್ಡಿ, ನೀಲಕ೦ಠರಾಯನ ಗಡ್ಡಿ, ಬ೦ಡೋಳ್ಳಿ, ತಿ೦ಥಣಿ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.