ಇಲಾಖೆ ವಿರುದ್ಧ ಸಿಡಿದೆದ್ದ ಮಹಿಳಾ ಪಿಎಸ್ಐ: ವೈರಲ್ ಆಯ್ತು ಫೇಸ್ಬುಕ್ ಪೋಸ್ಟ್

ಇತ್ತೀಚೆಗಷ್ಟೇ ಕರ್ನಾಟಕ ಪೊಲೀಸ್ ಇಲಾಖೆ ವಿರುದ್ಧ ಸಿಡಿದೆದ್ದಿದ್ದ ಡಿವೈಎಸ್ಪಿ ಅನುಪಮಾ ಶೆಣೈ ಪ್ರಕರಣ ಸಾಕಷ್ಟು ಸುದ್ದಿಯನ್ನು ಮಾಡಿತ್ತು. ಈ ಪ್ರಕರಣ ಮಾಸುವ ಮುನ್ನವೇ ಮತ್ತೊಬ್ಬ...
ಮಹಿಳಾ ಪಿಎಸ್ಐ ಗಾಯತ್ರಿ ಫರ್ಹಾನ್
ಮಹಿಳಾ ಪಿಎಸ್ಐ ಗಾಯತ್ರಿ ಫರ್ಹಾನ್

ಬಳ್ಳಾರಿ: ಇತ್ತೀಚೆಗಷ್ಟೇ ಕರ್ನಾಟಕ ಪೊಲೀಸ್ ಇಲಾಖೆ ವಿರುದ್ಧ ಸಿಡಿದೆದ್ದಿದ್ದ ಡಿವೈಎಸ್ಪಿ ಅನುಪಮಾ ಶೆಣೈ ಪ್ರಕರಣ ಸಾಕಷ್ಟು ಸುದ್ದಿಯನ್ನು ಮಾಡಿತ್ತು. ಈ ಪ್ರಕರಣ ಮಾಸುವ ಮುನ್ನವೇ ಮತ್ತೊಬ್ಬ ಮಹಿಳಾ ಅಧಿಕಾರಿಯೊಬ್ಬರು ಇಲಾಖೆ ವಿರುದ್ಧ ಸಿಡಿದೆದ್ದಿದ್ದಾರೆ.

ಬಳ್ಳಾರಿ ಜಿಲ್ಲೆಯ ಬ್ರೂಸ್ಪೇಟೆ ಠಾಣೆಯಲ್ಲಿ ಪಿಎಸ್ಐ ಆಗಿ ಕಾರ್ಯನಿರ್ವಹಿಸುತ್ತಿರುವ ಗಾಯತ್ರಿ ಫರ್ಹಾನ್ ಅವರು ಇಲಾಖೆ ವಿರುದ್ಧ ಸಿಡಿದೆದ್ದಿದ್ದು, ಇಲಾಖೆಯಲ್ಲಿ ತಾವು ಅನುಭವಿಸುತ್ತಿರುವ ನೋವನ್ನು ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಗಾಯತ್ರಿ ಫರ್ಹಾನ್ ಅವರ ಈ ಪೋಸ್ಟ್ ಗೆ ಅನುಪಮಾ ಶೆಣೈ ಅವರೂ ಕೂಡ ಲೈಕ್ ನೀಡಿದ್ದಾರೆ.

ಇನ್ನು ಈ ಪೋಸ್ಟ್ ಕುರಿತಂತೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಗಾಯತ್ರಿಯವರು ತಮ್ಮ ಪೋಸ್ಟ್ ನನ್ನು ತೆಗೆದುಹಾಕಿದ್ದು, ಮತ್ತೊಂದು ಸ್ಟೇಟಸ್ ಅನ್ನು ಹಾಕಿದ್ದಾರೆ.

ನಾನು ಸಾಮಾನ್ಯ ಜನರಂತೆ ಸ್ಟೇಟಸ್ ನ್ನು ಹಾಕಿದ್ದು, ನನ್ನ ಸ್ಟೇಟಸ್ ಬಣ್ಣ ನೀಡುವ ಪ್ರಯತ್ನಗಳನ್ನು ಮಾಡಬೇಡಿ ಎಂದು ಹೇಳಿಕೊಂಡಿದ್ದಾರೆ.



ಇಷ್ಟಕ್ಕೂ ಗಾಯತ್ರಿ ಫರ್ಹಾನ್ ಈ ಹಿಂದೆ ಫೇಸ್ಬುಕ್ ನಲ್ಲಿ ಬರೆದಿದ್ದಾದರೂ ಏನು?

ಗಾಯತ್ರಿ ಫರ್ಹಾನ್ ಅವರು ಈ ಹಿಂದೆ ಹಾಕಿದ್ದ ಸ್ಟೇಟಸ್ ವೊಂದರಲ್ಲಿ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.


ಜನರು ಮಹಿಳಾ ಅಧಿಕಾರಿಗಳನ್ನು ಒಪ್ಪಿಕೊಳ್ಳುವುದು ಬಹಳ ಕಷ್ಟ. ನನ್ನ ವೃತ್ತಿ ಜೀವನವನ್ನು ಆರಂಭ ಮಾಡಿದಾಗಿನಿಂದಲೂ ಈ ರೀತಿಯ ಸಂದರ್ಭಗಳನ್ನು ನಾನು ಎದುರಿಸುತ್ತಿದ್ದೇನೆ. ಇಲಾಖೆಯಲ್ಲಿ ಪುರಷರಿಗಿಂತಲೂ ಮಹಿಳೆಯರು ಹೆಚ್ಚು ಶ್ರಮ ಪಡುತ್ತಾರೆ. ಆದರೆ, ಈ ಪರಿಶ್ರಮವನ್ನು ಯಾರೂ ಗುರ್ತಿಸುವುದಿಲ್ಲ.

ಇಲಾಖೆಯಲ್ಲಿ 24/7 ಕೆಲಸ ಮಾಡಿದರೂ ವ್ಯರ್ಥ. ಇಲಾಖೆಯೊಂದಿಗೆ ಹೊಂದಿಕೊಳ್ಳಲು ನಾನು ಕಳೆದ 7 ವರ್ಷಗಳಿಂದಲೂ ಪ್ರಯತ್ನಿಸುತ್ತಲೇ ಇದ್ದೇನೆ. ಇಲಾಖೆಯಲ್ಲಿ ನಡೆಯುವ ಕೆಲ ಘಟನೆಗಳು ಕಣ್ಣಲ್ಲಿ ನೀರು ತರಿಸುತ್ತವೆ. ಆದರೆ, ಆ ಕಣ್ಣೀರು ಎಲ್ಲಿ ನಮ್ಮನ್ನು ಕುಗ್ಗಿಸುತ್ತದೆಯೋ...ಎಲ್ಲಿ ನಮ್ಮ ಆತ್ಮವಿಶ್ವಾಸವನ್ನು ನಾಶಪಡಿಸುತ್ತದೆಯೇ ಎಂದು ಬೇರೊಬ್ಬರ ಮುಂದೆ ತೋರಿಸಿಕೊಳ್ಳುವುದಿಲ್ಲ.

ಇಲಾಖೆಯಲ್ಲಿ ದಿನಗಳನ್ನು ಸಾಗಿಸುವುದು ಬಹಳ ಕಷ್ವವಾಗುತ್ತಿದೆ. ದಕ್ಷತೆಯ ಬಗ್ಗೆ ನನ್ನಲ್ಲಿಯೇ ಪ್ರಶ್ನೆಗಳು ಏಳುತ್ತಿವೆ. ಉದ್ಯೋಗದಲ್ಲಿ ತೃಪ್ತಿಯಿಲ್ಲ. ನನ್ನೊಂದಿಗೆ ಇಲಾಖೆಗೆ ಸೇರಿದ್ದ ಸಾಕಷ್ಟು ಮಂದಿ ಕೆಲಸ ಬಿಟ್ಟಿದ್ದಾರೆ. ಸಮಾಜದಲ್ಲಿ ಹಾಗೂ ವೃತ್ತಿಪರ ಜೀವನದಲ್ಲಿ ಮಹಿಳೆಯರು ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸುವುದು ಕಷ್ಟಕರವಾಗಿದೆ. ಇದೊಂದು ಒನ್ ಮ್ಯಾನ್ ಆರ್ಮಿಯಂತಿದೆ. ಮಾಡು ಇಲ್ಲವೇ ಮಡಿ ಎಂಬ ತತ್ವದ ಬಗ್ಗೆ ನಂಬಿದ್ದೇನೆಂದು ಹೇಳಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com