ಮೃತ ಯುವಕ ಶಿಶಿರ್
ಮೃತ ಯುವಕ ಶಿಶಿರ್

ಬೆಳ್ತಂಗಡಿ: ಮೊಸರು ಕುಡಿಕೆ ಸ್ಪರ್ಧೆ ವೇಳೆ ಬಿದ್ದು ಯುವಕ ಸಾವು

ಜನ್ಮಾಷ್ಮಮಿ ಪ್ರಯುಕ್ತ ಮೊಸರು ಕುಡಿಕೆ ಸ್ಫರ್ಧೆ ವೇಳೆ 22 ವರ್ಷದ ಯುವಕನೊಬ್ಬ ಮೃತಪಟ್ಟಿರುವ ಘಟನೆ...
Published on
ಮಂಗಳೂರು: ಜನ್ಮಾಷ್ಮಮಿ ಪ್ರಯುಕ್ತ ಮೊಸರು ಕುಡಿಕೆ ಸ್ಫರ್ಧೆ ವೇಳೆ 22 ವರ್ಷದ ಯುವಕನೊಬ್ಬ ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲಿ ನಡೆದಿದೆ.
ಬೆಳ್ತಂಗಡಿಯ ಪಂಜಾಲಕಟ್ಟೆ ನಿವಾಸಿ ಶಿಶಿರ್ ಕುಮಾರ್ ಮೃತಪಟ್ಟ ಯುವಕ. ಮಾನವ ಪಿರಮಿಡ್ ರಚಿಸಿ ಅದರ ಮೇಲೆ ಹತ್ತಿ ತುತ್ತತುದಿಯಲ್ಲಿ ನಿಂತಿದ್ದ ಶಿಶಿರ್ ಜಾರಿ ಬಿದ್ದು ತಲೆಗೆ ಮತ್ತು ಕುತ್ತಿಗೆಗೆ ತೀವ್ರ ಗಾಯಗೊಂಡು ಅಸುನೀಗಿದ್ದಾರೆ. ನಿನ್ನೆ ಮಧ್ಯಾಹ್ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೊಸರು ಕುಡಿಕೆಯ ಎತ್ತರ 24 ಅಡಿ ಇತ್ತು. ಇತ್ತೀಚೆಗೆ ಸುಪ್ರೀಂ ಕೋರ್ಟ್ ಮೊಸರು ಕುಡಿಕೆಯ ಎತ್ತರವನ್ನು 20 ಅಡಿಗಿಂತ ಹೆಚ್ಚು ಇಡಬಾರದು ಎಂದು ಆದೇಶ ಹೊರಡಿಸಿತ್ತು. ಈ ನಿಯಮವನ್ನು ಉಲ್ಲಂಘಿಸಿ ಇಲ್ಲಿ ಎತ್ತರವನ್ನು ಹೆಚ್ಚಿಸಲಾಗಿತ್ತು.
ಶಿಶಿರ್, ಬೆಂಗಳೂರಿನ ರಾಬರ್ಟ್ ಬಾಸ್ಚ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ರಜೆಯಲ್ಲಿ ಮನೆಗೆ ಬಂದಿದ್ದರು. ತನ್ನ ಊರಿನಲ್ಲಿ ಕೃಷ್ಣಾಷ್ಟಮಿ ಪ್ರಯುಕ್ತ ನಡೆಯುತ್ತಿದ್ದ ಮೊಸರು ಕುಡಿಕೆ ಉತ್ಸವದಲ್ಲಿ ಪ್ರತಿವರ್ಷ ಭಾಗವಹಿಸುತ್ತಿದ್ದರು. ಅತಿ ಎತ್ತರಕ್ಕೆ ಹತ್ತಿ ಮೊಸರು ಕುಡಿಕೆ ಒಡೆಯುವುದರಲ್ಲಿ ಪ್ರಸಿದ್ಧನಾಗಿದ್ದ ಶಿಶಿರ್ ಅಂದು ಅತ್ಯಂತ ಎತ್ತರಕ್ಕೆ ಹತ್ತಲು ಬಯಸಿದ್ದರು.
ಪಿರಮಿಡ್ ಆಕಾರದಲ್ಲಿ ಜನರು ನಿಂತು ಅವರ ಮೇಲೆ ಹತ್ತಿ ಶಿಶಿರ್ ಮೊಸರು ಕುಡಿಕೆ ಒಡೆಯುವುದರಲ್ಲಿದ್ದರು. ಆಗ ಪಿರಮಿಡ್ ಆಕಾರದಲ್ಲಿ ನಿಂತಿದ್ದ ಜನರು ಆಚೀಚೆ ಸರಿದರು. ಮೊಸರು ಕುಡಿಕೆಯ ಬಳ್ಳಿಯನ್ನು ಹಿಡಿದಿದ್ದ ಶಿಶಿರ್ ನ ಕೈ ಜಾರಿ ಕೆಳಗೆ ಮೈದಾನಕ್ಕೆ ಬಿದ್ದುಬಿಟ್ಟರು. ತಲೆ, ಕುತ್ತಿಗೆಗೆ ತೀವ್ರವಾಗಿ ಗಾಯಗೊಂಡ ಶಿಶಿರ್ ನನ್ನು ಕೂಡಲೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟಿದ್ದಾರೆ. 
ಮೊಸರು ಕುಡಿಕೆ ಸಂಘಟಕರು ಯಾವುದೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿರಲಿಲ್ಲ ಎಂದು ಪೊಲೀಸರು ಆರೋಪಿಸುತ್ತಾರೆ. ಶಿಶಿರ್ ಒಬ್ಬ ಪ್ರತಿಭಾವಂತ ಯುವಕನಾಗಿದ್ದು, ಮಿಮಿಕ್ರಿ, ನಾಟಕ, ಸ್ಕಿಟ್ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಎಂದು ಆತನ ತಂದೆ ಮತ್ತು ಸ್ನೇಹಿತರು ನೆನಪಿಸಿಕೊಳ್ಳುತ್ತಾರೆ. ಪದವಿ ನಂತರ ಶಿಶಿರ್ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com